Advertisement

ಮಕ್ಕಳ ಉಜ್ವಲ ಭವಿಷ್ಯಕ್ಕೆ ಚಿನ್ನದ ಮೇಲಿನ ಹೂಡಿಕೆ ಲಾಭದಾಯಕವೇ ?

04:29 PM Dec 28, 2018 | udayavani editorial |

ಮಕ್ಕಳ ಉಜ್ವಲ ಭವಿಷ್ಯಕ್ಕೆಂದು ಹಣ ಕೂಡಿಟ್ಟು ಅದನ್ನು ಲಾಭದಾಯಕವಾಗಿ ವೃದ್ದಿಸುವಂತೆ ಮಾಡುವ ನಿಟ್ಟಿನಲ್ಲಿ ಯಾವೆಲ್ಲ ಯೋಜನೆಗಳು, ಮಾರ್ಗೋಪಾಯಗಳು ಇವೆ ಎಂಬ ಕಳೆದ ಹಲವು ವಾರಗಳಿಂದ ನಾವು ನಡೆಸಿಕೊಂಡು ಬಂದಿರುವ ಈ ಚರ್ಚೆಯಲ್ಲಿ ನಾವು ಈ ಬಾರಿ ಚಿನ್ನವನ್ನು ಒಂದು ಹೂಡಿಕೆ ಮಾಧ್ಯಮವಾಗಿ ಹೇಗೆ ಎಂಬುದನ್ನು ಚರ್ಚಿಸಬಹುದಾಗಿದೆ. 

Advertisement

ಅನಾದಿ ಕಾಲದಿಂದಲೂ ಚಿನ್ನವನ್ನು ಮನೆತನ, ಕುಟುಂಬದ ಆಪದ್ಧನ ಎಂದೇ ಪರಿಗಣಿಸಲಾಗಿದೆ. ವರ್ಷಂಪ್ರತಿ ಚಿನ್ನವನ್ನು ಸ್ವಲ್ಪ ಸ್ವಲ್ಪವೇ ಖರೀದಿಸಿಡುವ, ವಿಶೇಷವಾಗಿ ಅಕ್ಷಯ ತೃತೀಯ, ವರಮಹಾಲಕ್ಷ್ಮೀ ವ್ರತ ಇವೇ ಮೊದಲಾದ ಧಾರ್ಮಿಕ ಸಂದರ್ಭಗಳಲ್ಲಿ  ಕುಟುಂಬದ ಸುಖ, ಸಮೃದ್ದಿಗೆಂದು ಚಿನ್ನವನ್ನು ಖರೀದಿಸುವ ಪರಿಪಾಠ ಭಾರತೀಯರಲ್ಲಿ ಲಾಗಾಯಿತಿನಿಂದಲೂ ನಡೆದುಕೊಂಡು ಬಂದಿದೆ.

ಆದರೆ ಭಾರತೀಯರ ಚಿನ್ನದ ಮೇಲಿನ ವ್ಯಾಮೋಹ ಕೂಡಿಡುವ ಉದ್ದೇಶದ್ದಾಗಿದೆಯೇ ಹೊರತು ಅದೊಂದು ಲಾಭದಾಯಕ ಹೂಡಿಕೆ ಮಾಧ್ಯಮವಾಗಿ ಎಂದೂ ಪರಿಗಣಿತವಾದುದಿಲ್ಲ. ಹೂಡಿಕೆ ಎಂಬ ಪರಿಕಲ್ಪನೆಯಲ್ಲಿ  ಲಾಭ ನಗದೀಕರಣದ ಉದ್ದೇಶ ಅಂತರ್ಗತವಾಗಿರುತ್ತದೆ ಎಂಬುದನ್ನು ನಾವು ಮರೆಯಬಾರದು. 

ಯಾವುದೇ ಹೂಡಿಕೆ ಗರಿಷ್ಠ ಲಾಭದ ಮಟ್ಟವನ್ನು ತಲುಪಿದಾಗ ಅದರ ಸ್ವಲ್ಪಾಂಶವನ್ನೋ ಅರ್ಧಾಂಶವನ್ನೋ ಮಾರಿ ಮೂಲ ಹೂಡಿಕೆ ಮೊತ್ತವನ್ನು ಮರಳಿ ಪಡೆಯುವ ತಂತ್ರಗಾರಿಕೆಯ ಲಾಭದ ನಗದೀಕರಣದ ದೃಷ್ಟಿಯಿಂದ ಬಹುಮುಖ್ಯವಾಗುತ್ತದೆ.  ಲಾಭ ನಗದೀಕರಣದ ಪ್ರಕ್ರಿಯೆಯು ಶೇರು ಹೂಡಿಕೆಯಲ್ಲಿ ಬಹಳ ಮುಖ್ಯವಾಗುತ್ತದೆ. ಏಕೆಂದರೆ ಶೇರು ಮೌಲ್ಯ ಗಗನಚುಂಬಿಯಾಗುವಷ್ಟೇ ತ್ವರಿತಗತಿಯಲ್ಲಿ ಧರಾಶಾಯಿಯೂ ಆಗುತ್ತದೆ ಎಂಬುದೇ ಇದಕ್ಕೆ ಕಾರಣ. 

Advertisement

ಚಿನ್ನದ ಸಂದರ್ಭದಲ್ಲಿ ಭಾರತೀಯರ ವ್ಯಾಮೋಹವು ಹೂಡಿಕೆ ಪರಿಕಲ್ಪನೆಯನ್ನು ಮೀರಿದ್ದಾಗಿರುತ್ತದೆ. ಏಕೆಂದರೆ ಎಂತಹ ಕಷ್ಟಕರ, ವಿಷಮ ಸಂದರ್ಭದಲ್ಲೂ ಅವರು ಅದನ್ನು ಮಾರುವ ಆಲೋಚನೆ ಮಾಡುವುದಿಲ್ಲ. ಅಂತಹ ತುರ್ತಿದ್ದರೆ ತಮ್ಮಲ್ಲಿನ ಚಿನ್ನವನ್ನು ಅಡವಿಟ್ಟು ಸಾಲ ಪಡೆಯುತ್ತಾರೆಯೇ ಹೊರತು ಚಿನ್ನವನ್ನು ಮಾರುವ ಆಲೋಚನೆ ಮಾಡುವುದಿಲ್ಲ. ಹಾಗಾಗಿ ಲಾಭನಗದೀಕರಣದ ಅವಕಾಶವನ್ನು ಸುಲಭದಲ್ಲಿ ಕೈಚೆಲ್ಲಿ ಸಾಲದ ಶೂಲಕ್ಕೆ ಬೀಳುವುದೇ ಭಾರತೀಯರ ಚಿನ್ನದ ಗುಣಲಕ್ಷಣವಾಗಿದೆ. ಆ ಮಾತು ಹಾಗಿರಲಿ.

ಮಕ್ಕಳ ಭವಿಷ್ಯಕ್ಕೆಂದು ದೀರ್ಘಾವಧಿಗೆ ಚಿನ್ನವನ್ನು ಖರೀದಿಸುವ ಸಂದರ್ಭದಲ್ಲಿ ಅದು ಕೊನೆಯ ತನಕವೂ ಲಾಭದಾಯಕತೆಯನ್ನು ಖಾತರಿ ಪಡಿಸುತ್ತದೆಯೇ ಎಂಬ ಪ್ರಶ್ನೆ ಹೂಡಿಕೆ ದೃಷ್ಟಿಯಿಂದ ಮುಖ್ಯವಾಗುತ್ತದೆ. ವಿಶ್ಲೇಷಕರ ದೃಷ್ಟಿಯಲ್ಲಿ ಚಿನ್ನದ ಮೇಲಿನ ಹೂಡಿಕೆಯು ದೀರ್ಘಾವಧಿಯ ಲಾಭದಾಯಕತೆಯು ಆಕರ್ಷಕವಾಗಿರುವುದಿಲ್ಲ. 

ದೀರ್ಘಾವಧಿ ಹೂಡಿಕೆ ದೃಷ್ಟಿಯಿಂದ ಚಿನ್ನದಲ್ಲಿ ಅನೇಕ ರೀತಿಯ ಹಿನ್ನಡೆಗಳಿವೆ. ಭೌತಿಕ ರೂಪದಲ್ಲಿ ಚಿನ್ನವನ್ನು ದೀರ್ಘಕಾಲ ಸುರಕ್ಷಿತವಾಗಿ, ಭದ್ರವಾಗಿ ಇರಿಸಿಕೊಳ್ಳುವುದು ಕಷ್ಟಕರ. ಒಡವೆಯ ರೂಪದಲ್ಲಿ ಚಿನ್ನವನ್ನು ಹೊಂದಿರುವುದು ಹೂಡಿಕೆ ದೃಷ್ಟಿಯಿಂದ ಲಾಭಕರವಲ್ಲ. ಒಡವೆಯನ್ನು  ನಗದೀಕರಿಸುವಾಗ ನಷ್ಟವಾಗಿ ಹೋಗುವ ತೇಮಾನು ಬಾಬ್ತು ನೈಜ ಲಾಭದ ಪ್ರಮಾಣವನ್ನು ಹೊಡೆದು ಹಾಕುತ್ತದೆ. 

ಭೌತಿಕ ರೂಪದ ಚಿನ್ನವನ್ನು  ಬ್ಯಾಂಕ್ ಲಾಕರ್ ಗಳಲ್ಲಿ ಭದ್ರವಾಗಿ ಇರಿಸೋಣ ಎಂದರೆ ಅದಕ್ಕೆ ವರ್ಷಂಪ್ರತಿ ತಗಲುವ ಶುಲ್ಕ ಇತ್ಯಾದಿಗಳು ಕೂಡ ಕಡಿಮೆ ಇರುವುದಿಲ್ಲ. ಲಾಕರ್ಗಳೇ ಲೂಟಿಗೊಂಡ ಸಂದರ್ಭದಲ್ಲಿ ಲಾಕರ್ ಬಳಕೆದಾರನಿಗೆ ಯಾವುದೇ ವಿಮಾ ಪರಿಹಾರ ಇರುವುದಿಲ್ಲ.

ಎಲ್ಲಕ್ಕಿಂತ ಮಿಗಿಲಾಗಿ ಚಿನ್ನವನ್ನು ನಗದೀಕರಿಸಲು ವ್ಯಾಪಾರಸ್ಥರ ಬಳಿ ಹೋದಾಗ ಅವರು ತಮ್ಮಲ್ಲಿನ ಹೊಸ ವಿನ್ಯಾಸದ ಒಡವೆಗಳನ್ನು ಖರೀದಿ ಮಾಡುವಂತೆ ಒತ್ತಾಯ ಮಾಡುತ್ತಾರೆ. ನಗದೇ ಬೇಕೆಂದು ಹಠ ಹಿಡಿದರೆ ಅಂದಿನ ದಿನದ ಚಿನ್ನದ ಮೌಲ್ಯದಲ್ಲಿ ಕನಿಷ್ಠ ಶೇ.1ನ್ನು ಕಳೆದು ಉಳಿದ ಮೊತ್ತವನ್ನು ಕೊಡುತ್ತಾರೆ !

ಇಂತಹ ಸಂದರ್ಭದಲ್ಲಿ ಗೋಲ್ಡ್ ಬಾಂಡ್ ರೂಪದಲ್ಲಿ ಹಣ ಹೂಡಿಕೆ ಮಾಡುವುದೇ ಹೆಚ್ಚು ಲಾಭದಾಯಕ ಎನ್ನುವುದನ್ನು ನಾವು ಒಪ್ಪಬೇಕಾಗುತ್ತದೆ. 

ಒಡವೆ ರೂಪದ ಚಿನ್ನ ಮತ್ತು ಸಾವರೀನ್ ಗೋಲ್ಡ್ ಬಾಂಡ್ ಹೂಡಿಕೆಯಲ್ಲಿ ನಮಗೆ ಎದುರಾಗುವ ಸವಾಲುಗಳನ್ನು ನಾವು ಈ ಕೆಳಗಿನಂತೆ ಗುರುತಿಸಬಹುದು : 

1. ಮೇಕಿಂಗ್ ಚಾರ್ಜ್ : ಪ್ರತೀ ಗ್ರಾಂ ಚಿನ್ನಕ್ಕೆ ಇಂತಿಷ್ಟೇ ಎಂದು ನಿಗದಿಸಲ್ಪಟ್ಟಿರುವ ಮೇಕಿಂಗ್ ಚಾರ್ಜ್ ಇರುತ್ತದೆ.  ಅಥವಾ ಚಿನ್ನದ ಶೇಕಡಾವಾರು ತೂಕ ದೊಂದಿಗೆ ಜಿಎಸ್ಟಿ ಅನ್ವಯವಾಗುತ್ತದೆ. ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮಿನಲ್ಲಿ  ಇದು ಅನ್ವಯವಾಗುವುದಿಲ್ಲ. 

2. ತೆರಿಗೆ : ಮೂರು ವರ್ಷಗಳ ಬಳಿಕ ನಗದೀಕರಣಕ್ಕೆ ಮುಂದಾಗುವಾಗ ದೀರ್ಘಾವಧಿ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್  ಅನ್ವಯಾಗುತ್ತದೆ. ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮಿನಲ್ಲಿ  ಇದು ಅನ್ವಯವಾಗುವುದಿಲ್ಲ. ಐದು ವರ್ಷಗಳ ಬಳಿಕ ಸಾವರೀನ್ ಬಾಂಡ್ ಮಾರಿದಾಗ ಎಲ್ಟಿಸಿಜಿ ಮತ್ತು ಇಂಡೆಕ್ಸೇಶನ್ ವಿನಾಯಿತಿ ಸಿಗುತ್ತದೆ. 

2. ಶುದ್ಧತೆ : ಚಿನ್ನದ ಶುದ್ಧತೆಗೆ ಯಾವುದೇ ಭರವಸೆ ಇರುವುದಿಲ್ಲ; ಒಡವೆ ರೂಪದ ಚಿನ್ನವು ಇತರ ಲೋಹಾಂಶ ಹೊಂದಿರುತ್ತದೆ. ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮಿನಲ್ಲಿ  ಚಿನ್ನದ ದರವು 0.999 ಶುದ್ಧತೆಯ ಚಿನ್ನದ ದರವನ್ನು ಹೊಂದಿರುತ್ತದೆ. 

3. ಭದ್ರತೆ/ಸುರಕ್ಷತೆ : ಭೌತಿಕ ಚಿನ್ನವನ್ನು ನಾವೇ ಮನೆಯಲ್ಲಿ ಇರಿಸಿಕೊಳ್ಳುವುದು ಅಪಾಯಕರ; ಕಳ್ಳಕಾರರ ಭಯ; ಲೂಟಿ, ದರೋಡೆಯ ಭೀತಿ ಇರುವುದು ಸಹಜ.  ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮಿನಲ್ಲಿ  ಚಿನ್ನ ಡಿಮ್ಯಾಟ್ ರೂಪದಲ್ಲಿ ಇರುತ್ತದೆ – ಎಂದರೆ ಡಿಜಿಟಲ್ ರೂಪದಲ್ಲಿ ಇರುತ್ತದೆ. ಹಾಗಾಗಿ ಕಳ್ಳಕಾರರ, ಲೂಟಿಕೋರರ ಭಯ ಇರುವುದಿಲ್ಲ. 

4. ನಗದೀಕರಣ : ಭೌತಿಕ ರೂಪದ ಚಿನ್ನವನ್ನು ಯಾವಾಗ ಬೇಕಾದರೂ ಮಾರಬಹುದಾಗಿದೆ.  ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮಿನಲ್ಲಿರುವ ಚಿನ್ನವು 8 ವರ್ಷಗಳ ಮಟ್ಟಿಗೆ ಲಾಕ್ ಆಗಿ ಇರುತ್ತದೆ. ಆದರೂ ಹೂಡಿಕೆ ಮಾಡಲ್ಪಟ್ಟ ಐದು ವರ್ಷಗಳ ಬಳಿಕ ಅದನ್ನು ಮಾರುವ ಪ್ರಕ್ರಿಯೆಗೆ ಒಳಪಡಿಸಬಹುದಾಗಿರುತ್ತದೆ. 

5. ಬಡ್ಡಿ ಆದಾಯ: ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮಿನಲ್ಲಿ  ವರ್ಷಂಪ್ರತಿ ಶೇ.2.5ರ ವಾರ್ಷಿಕ ಬಡ್ಡಿ ಆದಾಯ ನಿರಂತರವಾಗಿ ಇರುತ್ತದೆ. ಭೌತಿಕ ಚಿನ್ನಕ್ಕೆ ಅದು ಇರುವುದಿಲ್ಲ. 

6. ಭದ್ರತೆಗೆ ತಗಲುವ ಶುಲ್ಕ: ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮಿನಲ್ಲಿ  ಮೆಚ್ಯುರಿಟಿ ತನಕವೂ ಚಿನ್ನವನ್ನು ಇರಿಸಿಕೊಂಡದರೆ ಯಾವುದೇ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಇರುವುದಿಲ್ಲ; ಮತ್ತು ಭೌತಿಕ ಚಿನ್ನದ ಭದ್ರತೆಗೆ ತಗಲುವ ಶುಲ್ಕದ ವೆಚ್ಚವೂ ಇರುವುದಿಲ್ಲ. 

ಈ ಎಲ್ಲ ಅಂಶಗಳನ್ನು ಸರಿಯಾಗಿ ಮನನಮಾಡಿಕೊಂಡಾಗ ಲಾಭದಾಯಕ ಹೂಡಿಕೆ ದೃಷ್ಟಿಯಿಂದ ಚಿನ್ನವನ್ನು ಭೌತಿಕ ರೂಪದಲ್ಲಿ ಹೊಂದುವುದಕ್ಕಿಂತ ಸಾವರೀನ್ ಗೋಲ್ಡ್ ಬಾಂಡ್ ರೂಪದಲ್ಲೇ ಹೊಂದಿರುವುದೇ ಸೂಕ್ತ ಎಂಬುದು ಖಚಿತವಾಗುತ್ತದೆ.

ಒಟ್ಟಿನಲ್ಲಿ ಚಿನ್ನವೂ ಮಕ್ಕಳ ಭವ್ಯ ಭವಿಷ್ಯವನ್ನು ರೂಪಿಸುವುದಕ್ಕೆ ನೆರವಾಗುವ ಉತ್ತಮ ಹೂಡಿಕೆ ಮಾಧ್ಯಮವೂ ಹೌದು; ಆದರೆ ನಾವು ಗಮನಿಸಬೇಕಾದ ಸಂಗತಿ ಎಂದರೆ ಚಿನ್ನವು ಆಕರ್ಷಕ ಮತ್ತು ಲಾಭದಾಯಕ ಹೂಡಿಕೆ ಆಯ್ಕೆಗಳ  ಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿರುವ ಮಾಧ್ಯಮವಾಗಿದೆ ಎಂಬುದು !
 

Advertisement

Udayavani is now on Telegram. Click here to join our channel and stay updated with the latest news.

Next