Advertisement
ಒಂದಾದರು ಗ್ರಾಮಸ್ಥರು: ತುಂಬಿ ತುಳುಕುತ್ತಿದ್ದ ನದಿಯಲ್ಲಿ ಈಜಾಡುತ್ತಾ, ಅದರ ದಡದಲ್ಲಿ ಆಡುತ್ತಾ ಬೆಳೆದಿದ್ದ ಗ್ರಾಮಸ್ಥರಿಗೆ ಅದರ ಸ್ಥಿತಿ ನೋಡಲಾಗಲಿಲ್ಲ. ಜತೆಗೆ, ನೀರಿನ ಕೊರತೆಯೂ ತೀವ್ರವಾಗತೊಡಗಿತು. ಇದಕ್ಕೊಂದು ಪರಿಹಾರ ಕಂಡುಕೊಳ್ಳಲೇಬೇಕು ಎಂಬ ದೃಢ ನಿರ್ಧಾರಕ್ಕೆ ಬಂದು, 700ರಷ್ಟು ಗ್ರಾಮಸ್ಥರು ಅದರಲ್ಲೂ ಹೆಚ್ಚಿನವರು ಮಹಿಳೆಯರು ನದಿಗೆ ಇಳಿದೇ ಬಿಟ್ಟರು. ಪ್ರಾಣವನ್ನೇ ಪಣಕ್ಕಿಟ್ಟು, ಕುಟ್ಟೆಂಪೆರೂರ್ ನದಿಯ ಒಡಲಲ್ಲಿ ತುಂಬಿದ್ದ ಅಪಾಯಕಾರಿ ತ್ಯಾಜ್ಯಗಳು, ಪ್ಲಾಸ್ಟಿಕ್‌ಗಳು, ಆಲ್ಗೆಗಳನ್ನು ಹೊರತೆಗೆಯಲಾರಂಭಿಸಿದರು. ಒಂದೆರಡಲ್ಲ, ಬರೋಬ್ಬರಿ 70 ದಿನಗಳ ಕಾಲ ಈ ಕೆಲಸ ನಡೆಯಿತು. ಡೆಂಗ್ಯೂಯಂಥ ರೋಗಗಳು ಜತೆಯಾದರೂ ಅವರು ಎದೆಗುಂದಲಿಲ್ಲ. ಒಂದೆರಡು ದಿನ ವಿರಮಿಸಿ, ಮತ್ತೆ ಕೆಲಸ ಆರಂಭಿಸಿದರು. ಉದ್ಯೋಗ ಖಾತ್ರಿ ಯೋಜನೆಯನ್ನೂ ಇದಕ್ಕಾಗಿ ಬಳಸಿದರು.
45ನೇ ದಿನಕ್ಕೆ ಹರಿವು ಆರಂಭ
45 ದಿನಗಳ ಬಳಿಕ ಇವರ ಸತತ ಪರಿಶ್ರಮದ ಫಲ ಕಾಣಲಾರಂಭಿಸಿತು. ನಿಧಾನವಾಗಿ ನೀರಿನ ಹರಿವು ಹೆಚ್ಚತೊಡಗಿತು. 70 ದಿನ ತುಂಬುತ್ತಿದ್ದಂತೆ ಜೀವಜಲ ಮೊದಲಿನಂತೆ ಉಕ್ಕತೊಡಗಿತು. ಜೀವನಾಡಿಗೆ ಪುನಶ್ಚೇತನ ನೀಡಿದ ಗ್ರಾಮಸ್ಥರು ಕುಣಿದು ಕುಪ್ಪಳಿಸಿದರು. ಈಗ ಕುಟ್ಟೆಂಪೆರೂರ್ ನದಿಗೆ ಮರುಜೀವ ಸಿಕ್ಕಿದೆ.