ಮುದ್ದೇಬಿಹಾಳ: ತಾಲೂಕಿನ ಕೋಳೂರು ಗ್ರಾಮ ಪಂಚಾಯತ್ ವತಿಯಿಂದ ಕೋಳೂರು ತಾಂಡಾದಲ್ಲಿ ನಡೆದಿದೆ ಎನ್ನಲಾದ ವಸತಿ ಯೋಜನೆಗಳ ಹಗರಣ, ಅವ್ಯವಹಾರ ತನಿಖೆಯ ವೇಳೆ ಸತ್ಯ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.
ತನಿಖೆ ಪೂರ್ಣಗೊಂಡ ನಂತರ ತಪ್ಪಿತಸ್ಥರ ಮೇಲೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದರ ಜೊತೆಗೆ ದಂಡವನ್ನೂ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಾಪಂ ಇಒ ಶಶಿಧರ ಶಿವಪುರೆ ತಿಳಿಸಿದ್ದಾರೆ.
ಶುಕ್ರವಾರ ತಾಂಡಾಕ್ಕೆ ಭೇಟಿ ನೀಡಿ, ದೂರುದಾರ ಜಗದೀಶ ಚವ್ಹಾಣ ಅವರೊಂದಿಗೆ ಮನೆ ಹಂಚಿಕೆ ದಾಖಲೆ, ನೈಜತೆ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನದು ತನಿಖೆಯ ಮೊದಲ ದಿನವಾಗಿದೆ. 15-20 ಮನೆಗಳ ಫಲಾನುಭವಿಗಳ ನೈಜತೆ ಪರಿಶೀಲಿಸಲಾಗಿದೆ. ವಿವಿಧ ವಸತಿ ಯೋಜನೆಗಳಡಿ ಒಟ್ಟು 135 ಮನೆಗಳ ಅವ್ಯವಹಾರ ನಡೆದಿದೆ ಎಂದು ದೂರುದಾರರು ದಾಖಲೆ ಸಮೇತ ಮಾಹಿತಿ ನೀಡಿದ್ದಾರೆ. ಇಂದಿನ ಪರಿಶೀಲನೆಯಲ್ಲಿ 4-5 ಮನೆಗಳು ಮಾತ್ರ ನೈಜತೆಯಿಂದ ಕೂಡಿದ್ದು ಉಳಿದೆಲ್ಲವೂ ಭೋಗಸ್ ಎನ್ನುವುದು ಪತ್ತೆ ಆಗಿದೆ ಎಂದರು.
ವಸತಿ ಯೋಜನೆ ಅಡಿ ಹಂಚಿಕೆಯಾದ ಬಹಳಷ್ಟು ಮನೆಗಳ ಜಿಪಿಎಸ್ ಮಾಡಿಲ್ಲ. ಕೆಲವರು ಮನೆ ಕಟ್ಟಿಕೊಂಡು ವಾಸವಾಗಿದ್ದರೂ ಅವರಿಗೆ ಅದು ವಸತಿ ಯೋಜನೆಯಡಿ ಮಂಜೂರಾದ ಮನೆ ಎನ್ನುವುದು ಗೊತ್ತಿಲ್ಲ. ಇನ್ನೂ ಕೆಲವರು ಸ್ವಂತ ಹಣ ಖರ್ಚು ಮಾಡಿಮನೆ ಕಟ್ಟಿಕೊಂಡಿದ್ದರೂ ಸರ್ಕಾರದ ಸಹಾಯಧನ ಅವರ ಹೆಸರಿಗೆ ಬರದೆ ಬೇರೆಯವರ ಹೆಸರಲ್ಲಿ ಖರ್ಚು ಹಾಕಲಾಗಿದೆ. ಮನೆಗಳು ಇಲ್ಲದೇ ಬಿಲ್ ಎತ್ತಿರುವ ಪ್ರಕರಣಗಳೂ ಕಂಡು ಬಂದಿವೆ. ಹೀಗಾಗಿ ಇದೊಂದು ಭಾರೀ ಹಗರಣ ಎನ್ನಿಸಿಕೊಂಡಿದೆ.
ತನಿಖೆ ಸಮಗ್ರ ವರದಿಯನ್ನು ಜಿಪಂ ಸಿಇಒಗೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು. ಕೆಲವು ಸರ್ಕಾರಿ ನೌಕರರಿಗೆ, ಸರ್ಕಾರದ ನಿಯಮಕ್ಕಿಂತಲೂ ಹೆಚ್ಚು ಆಸ್ತಿ ಹೊಂದಿದವರಿಗೆ ಮನೆಗಳು ಹಂಚಿಕೆಯಾಗಿವೆ ಎನ್ನುವುದುಮೇಲ್ನೋಟಕ್ಕೆ ಕಂಡು ಬಂದಿದೆ. ಅರ್ಹತೆ ಇಲ್ಲದಿದ್ದರೂ ಇವರಿಗೆ ಮನೆ ಹಂಚಿಕೆ ಮಾಡಿದ್ದು ಕಾನೂನು ಬಾಹಿರ. ಮನೆ ಹಂಚಿಕೆ ಸಂದರ್ಭ ಕರ್ತವ್ಯದಲ್ಲಿದ್ದ ಪಿಡಿಒ, ಅಧಿಕಾರದಲ್ಲಿದ್ದ ಅಧ್ಯಕ್ಷರು, ಬಿಲ್ ಪಡೆದುಕೊಂಡಿರುವ ಖೊಟ್ಟಿ ಫಲಾನುಭವಿಗಳು ಹೀಗೆ ಹಲವರು ಹಗರಣದಲ್ಲಿ ಶಾಮೀಲಾಗಿರುವ ಶಂಕೆ ಇದ್ದು ಸಂಪೂರ್ಣ ತನಿಖೆಯ ನಂತರ ನಿಖರ ಮಾಹಿತಿ ಬೆಳಕಿಗೆ ಬರಲಿದೆ ಎಂದರು.
ಹೇಳಿಕೆ ದಾಖಲಿಸಿಕೊಂಡ ತಂಡ: ಇದಕ್ಕೂ ಮುನ್ನ ತಾಪಂ ಇಒ ಶಶಿಧರ ಶಿವಪುರೆ ನೇತೃತ್ವದ ತನಿಖಾ ತಂಡದಲ್ಲಿದ್ದ ಅಕ್ಷರ ದಾಸೋಹ ಎಡಿ ಸಂಗಮೇಶಹೊಲ್ದೂರ, ಪಿಡಿಒಗಳಾದ ಪಿ.ಎಸ್. ಕಸನಕ್ಕಿ, ವೀರೇಶ ಹೂಗಾರ, ನಿರ್ಮಲಾ ತೋಟದಅವರು ಫಲಾನುಭವಿಗಳ ಪಟ್ಟಿ ಹಿಡಿದುಕೊಂಡು ಮನೆಮನೆಗೆ ತೆರಳಿ ನೈಜತೆ ಪರಿಶೀಲಿಸಿ,ಹೇಳಿಕೆ ದಾಖಲಿಸಿಕೊಂಡರು. ಮನೆ ಹಂಚಿಕೆಗೆ ಸಂಬಂಧಿಸಿದ ಕಾಗದ ಪತ್ರಗಳ ಪ್ರತಿಗಳನ್ನು ಪಡೆದುಕೊಂಡರು. ವಸತಿಗಾಗಿ ಅರ್ಜಿ ಸಲ್ಲಿಸಿದ್ದರೂ ಸೌಲಭ್ಯವಂಚಿತರಾದವರ ಹೇಳಿಕೆ ದಾಖಲಿಸಿಕೊಂಡರು.
ತಾಪಂ ಸದಸ್ಯ ಪ್ರೇಮಸಿಂಗ್ ಚವ್ಹಾಣ, ದೂರುದಾರ ಜಗದೀಶ ಚವ್ಹಾಣ, ತಾಂಡಾದ ಪ್ರಮುಖರಾದ ತುಳಜಾರಾಮ ಚವ್ಹಾಣ, ವಿಕಾಸ ಚವ್ಹಾಣ, ಯಮನೂರಿ ಚವ್ಹಾಣ, ಭೀಮಸಿಂಗ್ ಚವ್ಹಾಣ, ಅನಿಲ ಜಾಧವ, ಸೋಮಸಿಂಗ ಚವ್ಹಾಣ, ನೇತಾಜಿ ಚವ್ಹಾಣ, ಪ್ರಕಾಶ ಚವ್ಹಾಣ, ದೀಪಕ ಚವ್ಹಾಣ, ಸುಭಾಷ್ ದಿಂಡವಾರ ಮತ್ತಿತರರು ಇದ್ದರು.