Advertisement

ವಸತಿ ಯೋಜನೇಲಿ ಕಮಿಷನ್‌ ದಂಧೆ: ಪುಷ್ಪಾ ಆರೋಪ

01:27 PM Sep 23, 2017 | Team Udayavani |

ಕುಂದಗೋಳ: ತಾಲೂಕಿನ ಗ್ರಾಪಂಗಳಲ್ಲಿ ವಸತಿ ಯೋಜನೆ ಫಲಾನುಭವಿ ಆಯ್ಕೆಯಲ್ಲಿ ಸೂಕ್ತ ನಿಯಮಾವಳಿ ಅನುಸರಿಸದೇ ಕಮಿಷನ್‌ ಆಧಾರದ ಮೇಲೆ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದಾರೆ ಎಂದು ಗುಡೇನಕಟ್ಟಿ ತಾಪಂ ಸದಸ್ಯೆ ಪುಷ್ಪಾ ಕಲಿವಾಳ ಗಂಭೀರ ಆರೋಪ ಮಾಡಿದರು. 

Advertisement

ಪಟ್ಟಣದ ತಾಪಂ ಸಭಾಭವನದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ತಾಪಂ ಇಒ ಎಂ.ಎಸ್‌. ಮೇಟಿಯವರನ್ನು ಫಲಾನುಭವಿ ಆಯ್ಕೆ ಕುರಿತು ಪ್ರಶ್ನಿಸಿದಾಗ, ಸರ್ಕಾರಿ ನಿಯಮಾವಳಿ ಪ್ರಕಾರ ಗ್ರಾಮ ಸಭೆಯಲ್ಲಿ ಚಿತ್ರೀಕರಣ ಮಾಡಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದರು.

ಆಗ ಸಿಡಿಮಿಡಿಗೊಂಡ ಪುಷ್ಪಾ ಕಲಿವಾಳ, ಗುಡೇನಕಟ್ಟಿ ಗ್ರಾಪಂ ವ್ಯಾಪ್ತಿಯಲ್ಲಿ ಸರ್ಕಾರಿ ನೌಕರರಿಗೆ ಸೇರಿದಂತೆ ಆರ್ಥಿಕವಾಗಿ ಬಲಿಷ್ಠರಿರುವ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದಾರೆ ಎಂದು ದೂರಿದರು. ಇದಕ್ಕೆ ಗುಡಗೇರಿ ಕ್ಷೇತ್ರದ ಸದಸ್ಯ ಬಸನಗೌಡ ಕರೆಹೊಳಲಪ್ಪಗೌಡ್ರ ದನಿಗೂಡಿಸಿ, ತಾಲೂಕಿನ ಎಲ್ಲಾ  ಗ್ರಾಪಂಗಳಲ್ಲಿ ರಾಜಕೀಯ ಪಕ್ಷಗಳ ಬೆಂಬಲಿಗರನ್ನು ಹಾಗೂ ಹಣ ಪಡೆದು ಫಲಾನುಭವಿಗಳನ್ನು ಆಯ್ಕೆ ಮಾಡುತ್ತಾರೆ.

ಗ್ರಾಮಸಭೆಯ ಚಿತ್ರೀಕರಣವನ್ನು ಎಲ್ಲ ಸದಸ್ಯರಿಗೆ ತೋರಿಸಬೇಕು. ನಾವು ನೋಡಿ ಸಮ್ಮತಿಸುವವರೆಗೂ ಯಾವುದೇ ಫಲಾನುಭವಿಗಳನ್ನು ಆಯ್ಕೆ ಮಾಡಬಾರದೆಂದು ತಾಕೀತು ಮಾಡಿದರು. ಗ್ರಾಮಸಭೆ ವಿಡಿಯೋ ಚಿತ್ರೀಕರಣ ತೋರಿಸದಿದ್ದರೆ ಸದಸ್ಯರೆಲ್ಲರೂ ಪಕ್ಷಬೇಧ ಮರೆತು ರಾಜೀನಾಮೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಒ, ಎಲ್ಲ ಗ್ರಾಮಸಭೆಯ ವಿಡಿಯೋ ಚಿತ್ರೀಕರಣವನ್ನು ಸದಸ್ಯರಿಗೆ ತೋರಿಸುವುದಾಗಿ ಹೇಳಿದರು.

ಜೆರಾಕ್ಸ್‌ಗೂ ಹಣ ಇಲ್ಲ: ತಾಪಂ ಸದಸ್ಯರಿಗೆ ಸಭೆ ಆರಂಭದಲ್ಲಿ ನೀಡಿದ್ದ ಇಲಾಖಾವಾರು ಮಾಹಿತಿ ಪುಸ್ತಕದಲ್ಲಿ ಭೂಸೇನಾ ನಿಗಮದ ಮಾಹಿತಿ ಇರಲಿಲ್ಲ. ನಿಗಮದ ಅಧಿಕಾರಿ ಲಕ್ಷ್ಮಣ ನಾಯಕ್‌ ಇಲಾಖಾ ವರದಿ ಮಂಡಿಸುವ ಸಮದರ್ಭದಲ್ಲಿ ಸದಸ್ಯ ವೆಂಕನಗೌಡ ಕಂಠೇಪ್ಪಗೌಡ್ರ ಇಲಾಖಾ ಮಾಹಿತಿ ಪ್ರತಿ ನೀಡದಿರುವುದನ್ನು ಪ್ರಶ್ನಿಸಿದರು. 

Advertisement

ಪ್ರತಿಕ್ರಿಯಿಸಿದ ನಾಯಕ್‌, ನಮ್ಮ ಇಲಾಖೆಯು ಬಡ ಇಲಾಖೆಯಾಗಿದ್ದು, ಎಲ್ಲ ಸದಸ್ಯರಿಗೆ ಮಾಹಿತಿ ನೀಡಲು ಪ್ರತಿಗಳ ಜೆರಾಕ್ಸ್‌ಗೆ ಹಣದ ಕೊರತೆ ಇದೆ ಎಂದರು. ಆಗ ಎಲ್ಲ ಸದಸ್ಯರು ಏರುಧ್ವನಿಯಲ್ಲಿ ನಾಯಕ್‌ ಅವರಿಗೆ ಛೀಮಾರಿ ಹಾಕಿದರು. ಸಭೆ ಗೊಂದಲಮಯವಾದಾಗ ಇಒ ಮಧ್ಯಪ್ರವೇಶಿಸಿ, ಅಸಡ್ಡೆಯಾಗಿ ಮಾತನಾಡುವುದು ಸರಿಯಲ್ಲ. ಸಮರ್ಪಕ ಮಾಹಿತಿ ನೀಡಿ ಎಂದು ತಾಕೀತು ಮಾಡಿದರು.

ಕೃಷಿ ಇಲಾಖೆ ಅ ಧಿಕಾರಿ ಸಿ.ಜಿ. ಮೈತ್ರಿ ಮಾತನಾಡಿ, ಈಗಾಗಲೇ ತಾಲೂಕಿನಲ್ಲಿ ಹಿಂಗಾರು ಮಳೆ ಉತ್ತಮವಾಗಿದ್ದು, ಬಿತ್ತನೆಗೆ ಅನುಕೂಲವಾಗಿದೆ ಎಂದರು.ನಾಳೆ ಕೃಷಿ ಸಚಿವರು ಬರುವರಿದ್ದಾರೆ ಎಂಬ ಕಾರಣ ನೀಡಿ ತರಾತುರಿಯಲ್ಲಿ ತೆರಳಿದರು. ಅಬಕಾರಿ ಮುಖ್ಯ ಅಧಿಕಾರಿ ಗೈರಾಗಿದ್ದಕ್ಕೆ ಪ್ರತಿಕ್ರಿಯಿಸಿದ ತಾಪಂ ಇಒ, ಸಭೆಗೆ ಹಾಜರಾಗಬೇಕೆಂದು ಅಬಕಾರಿ ಮುಖ್ಯ ಅಧಿಕಾರಿಗೆ ನೋಟಿಸ್‌ ಜಾರಿಗೊಳಿಸಲಾಗಿತ್ತು.

ಅದಕ್ಕೆ ಅವರು ಉತ್ತರಿಸಿ ನಾವು ಎಲ್ಲದಕ್ಕೂ ಬರುವುದಕ್ಕೆ ಆಗುವುದಿಲ್ಲ, ಇರುವ ಸಿಬ್ಬಂದಿ ಬರುತ್ತಾರೆ ಎಂದು ಲಿಖೀತವಾಗಿ ತಿಳಿಸಿದ್ದಾರೆ. ಇದನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು. ತಾಪಂ ಅಧ್ಯಕ್ಷ ರೇಣುಕಾ ಅಂಗಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next