Advertisement

Construction ಕಾರ್ಮಿಕರಿಗೆ ವಸತಿ ಭಾಗ್ಯ: 2 ಲಕ್ಷ ರೂ. ಶೂನ್ಯ ಬಡ್ಡಿ ಸಾಲ!

01:05 AM Aug 08, 2024 | Team Udayavani |

ಬೆಂಗಳೂರು: ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ವಸತಿ ಸೌಲಭ್ಯ ನೀಡಲು ರಾಜ್ಯ ಸರಕಾರ ನಿರ್ಧರಿಸಿದೆ. ಇದಕ್ಕಾಗಿ ಶೂನ್ಯಬಡ್ಡಿದರದಲ್ಲಿ 2 ಲಕ್ಷ ರೂಪಾಯಿವರೆಗೆ ಸಾಲ ನೀಡಲು ಯೋಜಿಸಿದೆ.ಇದಕ್ಕೆ ಪೂರಕವಾಗಿ ಫ‌ಲಾನುಭವಿಗಳಿಗೆ ಸಾಲ ನೀಡಲು ಬ್ಯಾಂಕ್‌ಗಳೂ ಒಪ್ಪಿದ್ದು, ಪ್ರಾಯೋಗಿಕವಾಗಿ ಧಾರವಾಡ ಹಾಗೂ ಬಳ್ಳಾರಿಯಲ್ಲಿ ಅನು ಷ್ಠಾನಕ್ಕೆ ತರಲಾಗುವುದು.

Advertisement

ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅಧ್ಯಕ್ಷತೆಯಲ್ಲಿ ಬುಧವಾರ ಬೆಂಗಳೂರಿನಲ್ಲಿ ನಡೆದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಶೂನ್ಯ ಬಡ್ಡಿ ಸಾಲ
ಆರ್ಥಿಕವಾಗಿ ಹಿಂದುಳಿದ ವರ್ಗದವರಿಗಾಗಿಯೇ ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ವಿವಿಧ ವಸತಿ ಯೋಜನೆಗಳಿದ್ದು, ಅಂತಹ ಯೋಜನೆಗಳನ್ನೇ ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರಿಗೆ ಕೊಡಲಾಗುತ್ತದೆ. ಕಾರ್ಮಿಕ ಮಂಡಳಿ ಯಲ್ಲಿ 8 ಸಾವಿರ ಕೋಟಿ ರೂ.ಗೂ ಹೆಚ್ಚಿನ ಹಣವಿದ್ದು, ಇದನ್ನು ಕಾರ್ಮಿಕರ ವಸತಿ ಯೋಜನೆಗೆ ಬಳಕೆ ಮಾಡಿಕೊಳ್ಳಬಹುದು ಎಂಬ ಸಲಹೆಗಳು ಸಭೆಯಲ್ಲಿ ವ್ಯಕ್ತವಾಗಿವೆ.

ಕೇಂದ್ರ ಸರಕಾರ 2ರಿಂದ 2.50 ಲಕ್ಷ ರೂ. ವರೆಗೆ ಫ‌ಲಾನುಭವಿಗಳಿಗೆ ನೆರವು ನೀಡಲಿದ್ದು, ಮಂಡಳಿ ವತಿಯಿಂದ 2 ಲಕ್ಷ ರೂ. ವರೆಗೆ ಶೂನ್ಯಬಡ್ಡಿದರದಲ್ಲಿ ಸಾಲ ನೀಡಲು ತೀರ್ಮಾನಿಸಿದೆ. ರಾಜ್ಯ ಸರಕಾರದ ಪಾಲಿನ ಜತೆಗೆ ಬಾಕಿ ಮೊತ್ತವನ್ನು ಫ‌ಲಾನುಭವಿ ಪಾವತಿಸಬೇಕಾಗುತ್ತದೆ. ನಿಗದಿತ ಗಡುವಿನೊಳಗೆ ಸಾಲದ ಅಸಲನ್ನು ಫ‌ಲಾನುಭವಿಗಳು ಮಂಡಳಿಗೆ ಹಿಂದಿರುಗಿಸಬೇಕಾಗುತ್ತದೆ. ಈ ಬಗ್ಗೆ ಸ್ಪಷ್ಟ ನಿಯಮಾವಳಿ ರೂಪಿಸುವಂತೆ ಅಧಿಕಾರಿಗಳಿಗೆ ಸಚಿವ ಸಂತೋಷ್‌ ಲಾಡ್‌ ಸೂಚಿಸಿದ್ದಾರೆ.

ಅಂಬೇಡ್ಕರ್‌ ಸೇವಾ ಕೇಂದ್ರ ಬಳಕೆ
ಮಂಡಳಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಯೋಜನೆಗಳಿದ್ದು, ಎಲ್ಲ ಯೋಜನೆಗಳನ್ನು ಸಮಗ್ರಗೊಳಿಸುವ ಪ್ರಸ್ತಾವನೆ ಇದೆಯಲ್ಲದೆ, ಅರ್ಹ ಫ‌ಲಾನುಭವಿಗಳನ್ನು ಗುರುತಿಸುವುದೇ ದೊಡ್ಡ ಸವಾಲಾಗಿದೆ. ಇದುವರೆಗೆ 58 ಲಕ್ಷ ಇದ್ದ ಕಾರ್ಮಿಕ ಕಾರ್ಡ್‌ಗಳನ್ನು 38 ಲಕ್ಷಕ್ಕೆ ಇಳಿಸಿದ್ದು, ಹೊಸದಾಗಿ ಲಕ್ಷಾಂತರ ಅರ್ಜಿಗಳು ಬಂದಿವೆ. ಹೀಗಾಗಿ ಅಂಬೇಡ್ಕರ್‌ ಸೇವಾ ಕೇಂದ್ರಗಳಿಗೆ ಫ‌ಲಾನುಭವಿಗಳನ್ನು ಗುರುತಿಸುವ ಹೊಣೆ ನೀಡಲಾಗಿದೆ. ಇದಲ್ಲದೆ ಇತ್ತೀಚೆಗೆ ಜಾರಿಗೆ ತಂದಿರುವ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸುವ ಕಾನೂನಿಗೆ ಸಭೆಯಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಕಾರ್ಮಿಕ ಕಲ್ಯಾಣದ ಸಲುವಾಗಿ ಟ್ರೇಡ್‌ ಯೂನಿಯನ್‌ಗಳೂ ಅನೇಕ ಸಲಹೆ ನೀಡಿವೆ.

Advertisement

2,000 ಮಂದಿಗೆ ಲಾಭ
ಮಂಡಳಿಯ ನೋಂದಾಯಿತ ಕಾರ್ಮಿಕರಿಗೆ ವಸತಿ ಸೌಕರ್ಯ ಕಲ್ಪಿಸುವ ಯೋಜನೆಯನ್ನು ಧಾರವಾಡ ಹಾಗೂ ಬಳ್ಳಾರಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲು ಚಿಂತನೆ ನಡೆದಿದ್ದು, 1,500ರಿಂದ 2,000 ಕಾರ್ಮಿಕರಿಗೆ ಶೂನ್ಯಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುವ ಯೋಜನೆ ಇದಾಗಿರಲಿದೆ. ಇದರಿಂದ 40 ಕೋಟಿ ರೂ. ಮಂಡಳಿಗೆ ಖರ್ಚು ಬರಲಿದೆ ಎಂದು ಅಂದಾಜಿಸಲಾಗಿದೆ.

ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ವಸತಿ ಯೋಜನೆ ಜಾರಿಗೆ ತರುವ ಬಗ್ಗೆ ಚಿಂತನೆಗಳು ನಡೆದಿದೆ. ಸರಕಾರದಲ್ಲಿ ಈಗಾಗಲೇ ಇರುವ ವಿವಿಧ ವಸತಿ ಯೋಜನೆಗಳಡಿ ಮನೆ ನಿರ್ಮಿಸಿಕೊಳ್ಳುವ ಫ‌ಲಾನುಭವಿಗಳಿಗೆ 2 ಲಕ್ಷ ರೂ. ವರೆಗೆ ಶೂನ್ಯಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುವ ತೀರ್ಮಾನ ಮಾಡಲಾಗಿದೆ.
-ಸಂತೋಷ್‌ ಲಾಡ್‌, ಕಾರ್ಮಿಕ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next