ಹುಣಸೂರು: ವರದಕ್ಷಿಣೆ ದಾಹಕ್ಕೆ ಗೃಹಿಣಿಯೊಬ್ಬಳು ಬಲಿಯಾಗಿರುವ ಘಟನೆ ಹುಣಸೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನರಸಿಂಹಸ್ವಾಮಿ ತಿಟ್ಟಿನಲ್ಲಿ ನಡೆದಿದೆ.
ನರಸಿಂಹಸ್ವಾಮಿತಿಟ್ಟು ಬಡಾವಣೆಯ ಜಗದೀಶರ ಪತ್ನಿ ರಶ್ಮಿ(26)ಮೃತ ಮಹಿಳೆ. ಮೂರು ವರ್ಷ ಹಾಗೂ ಮೂರು ತಿಂಗಳ ಮಗು ಇದೆ.
ಮೃತ ರಶ್ಮಿಯ ತಂದೆ ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರದ ಮಾರಿಮುತ್ತು ನಗರ ಪೊಲೀಸರಿಗೆ ದೂರು ನೀಡಿರುವ ಪ್ರಕಾರ ಕಳೆದ 5 ವರ್ಷಗಳ ಹಿಂದೆ ಜಗದೀಶನಿಗೆ 1 ಲಕ್ಷರೂ ಹಾಗೂ 100 ಗ್ರಾಂ. ಬಂಗಾರ ಜೊತೆಗೆ ಉಂಗುರ ನೀಡಿ ಅದ್ದೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು.
ಮದುವೆಯಾದ ವರ್ಷದ ನಂತರ ಮಗಳಿಗೆ ಹೆಚ್ಚಿನ ವರದಕ್ಷಿಣೆ ತರುವಂತೆ ಕಿರುಕುಳ ನೀಡಿ ಅನೇಕ ಬಾರಿ ತವರು ಮನೆಗೆ ಕಳುಹಿಸಿದ್ದರು. ಈ ಸಂಬಂಧ ವರ್ಷದ ಹಿಂದೆ ಬೆಟ್ಟದಪುರ ಠಾಣೆಯಲ್ಲಿ ಜಗದೀಶ್ ಹಾಗೂ ತಂದೆ-ತಾಯಿ, ಸಹೋದರಿ ವಿರುದ್ದ ದೂರು ನೀಡಲಾಗಿ ಗ್ರಾಮಸ್ಥರ ಸಮ್ಮುಖದಲ್ಲಿ ರಾಜಿ ತೀರ್ಮಾನ ಮಾಡಿ 50 ಸಾವಿರೂ ನೀಡಿ ತಿಳಿ ಹೇಳಿ ಮಗಳನ್ನು ಕಳುಹಿಸಿಕೊಟ್ಟಿದ್ದೆವು. ಆದರೂ ಅಳಿಯ ಜಗದೀಶ ತನ್ನ ಚಾಳಿ ಮುಂದುವರೆಸಿದ್ದಲ್ಲದೆ, ನಿಮ್ಮ ಮಗಳನ್ನು ಕರೆದೊಯ್ಯಿರಿ ನಾನು ಬೇರೆ ಮದುವೆಯಾಗುತ್ತೇನೆಂದು ಹೇಳಿದ್ದರಿಂದ ಮತ್ತೆ ಸಮಾದಾನಪಡಿಸಿ, ರಶ್ಮಿಯನ್ನು ಗಂಡನ ಮನೆಗೆ ಬಿಟ್ಟು ಬಂದಿದ್ದೆವು.
ವಾರದ ಹಿಂದೆ ಮಗಳು ಕರೆ ಮಾಡಿ ಅಳುತ್ತಾ ನನ್ನನ್ನು ಮನೆಗೆ ಕರೆದೊಯ್ಯಿರಿ, ಇಲ್ಲದಿದ್ದಲ್ಲಿ ಸಾಯಿಸಿ ಬಿಡುತ್ತಾರೆಂದು ದುಗುಡದಿಂದ ಹೇಳಿದ್ದಳು, ಮಗಳನ್ನು ಸಮಾಧಾನಿಸಿದ್ದೆವು. ಈ ನಡುವೆ ಆ.8 ರಂದು ಬಡಾವಣೆ ನಿವಾಸಿಯೊಬ್ಬರು ಕರೆ ಮಾಡಿ ನಿಮ್ಮ ಮಗಳು ಸಾವನ್ನಪ್ಪಿದ್ದಾಳೆಂಬ ಮಾಹಿತಿ ಮೇರೆಗೆ ಬಂದು ನೋಡಲಾಗಿ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರಿಂದ ಸಾವಿಗೀಡಾಗಿದ್ದಾಳೆಂದು ಕಂಡು ಬಂದಿದ್ದು, ರಶ್ಮಿ ಸಾವಿಗೆ ಪತಿ ಜಗದೀಶ, ಮಾವ ನಾಗರಾಜು, ಅತ್ತೆ ಲಕ್ಷ್ಮಮ್ಮ, ನಾದಿನಿ ನೇತ್ರಾ ಕಾರಣರಾಗಿದ್ದು, ಸೂಕ್ತ ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡುವಂತೆ ಪೊಲೀಸರಿಗೆ ದೂರು ನೀಡಿದ್ದ ಮೇರೆಗೆ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.