Advertisement

Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ

02:23 PM May 01, 2024 | Suhan S |

ವಿಜಯಪುರ : ಇಬ್ಬರು ಯುವಕರು ಗೃಹಿಣಿಯೊಬ್ಬಳಿಗೆ  ಜೀವ ಬೆದರಿಕೆ ಹಾಕಿ ಅತ್ಯಾಚಾರ ಎಸಗಿದ್ದಾರೆ. ಘಟನೆಯನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಸಂತ್ರಸ್ತೆ ತನ್ನ ಮಗನೊಂದಿಗೆ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.

Advertisement

ಜಿಲ್ಲೆ ಬಸವನಬಾಗೇವಾಡಿ ತಾಲೂಕಿನಲ್ಲಿ ಕಳೆದ ಫೆಬ್ರವರಿ ತಿಂಗಳಲ್ಲೇ ಘಟನೆ ನಡೆದಿದ್ದು, ಇದೀಗ ಪ್ರಕರಣ ಬೆಳಕಿಗೆ ಬಂದಿದೆ.

32 ವರ್ಷದ ಗೃಹಿಣಿಯನ್ನು ಅದೇ ಗ್ರಾಮದ ಇಬ್ಬರು ಆರೋಪಿಗಳಲ್ಲಿ ಒಬ್ಬನ ಮನೆಗೆ ಕರೆದೊಯ್ದು ಜೀವಬೆದರಿಕೆ ಹಾಕಿ ಅತ್ಯಾಚಾರ ಎಸಗಿದ್ದಾಗಿ ದೂರಲಾಗಿದೆ.

ಆಕಾಶ ಹಡಗಲಿ ಹಾಗೂ ಅಭಿಷೇಕ ಸಜ್ಜನ ಎಂಬ ಇಬ್ಬರು ಗೃಹಿಣಿಯನ್ನು ಬೆದರಿಸಿ ಆಕಾಶ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಅಲ್ಲದೇ ಅತ್ಯಾಚಾರ ಘಟನೆಯನ್ನು ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಟ್ಟಿದ್ದಾರೆ.

ಅತ್ಯಾಚಾರ ಹಾಗೂ ವಿಡಿಯೋ ಮಾಡಿರುವುದನ್ನು ಯಾರಿಗಾದರೂ ಹೇಳಿದರೆ ಸಾಮಾಜಿಕ ಜಾಲತಾಣದ ಮೂಲಕ ವಿಡಿಯೋ ಹಂಚುವುದಾಗಿ ಹಾಗೂ ಕೊಲೆ ಮಾಡಿ ಶವವೂ ಸಿಗದಂತೆ ಮಾಡುವುದಾಗಿ ಬೆದರಿಕೆ ಹಾಕಿದ್ದಾಗಿ ಆರೋಪಿಸಲಾಗಿದೆ.

Advertisement

ಸದರಿ ಲೈಂಗಿಕ ದೌರ್ಜನ್ಯದ ವಿಡಿಯೋ ಬೇರೆ ಊರಿನಲ್ಲಿ ನೆಲೆಸಿರುವ ಸಂತ್ರಸ್ತೆಯ ಸಹೋದರನ ಮೊಬೈಲ್ ಗೂ ಹರಿದು ಹೋಗಿದೆ. ಕೂಡಲೇ ಸಂತ್ರಸ್ತೆಯ ಸಹೋದರ ತನ್ನ ತಾಯಿಗೆ ವಿಡಿಯೋ ತೋರಿಸಿದಾಗ ಇಡೀ ಘಟನೆ ಬೆಳಕಿಗೆ ಬಂದಿದೆ.

ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಕೃತ್ಯ ಮನೆಯವರಿಗೆ ಗೊತ್ತಾಗುತ್ತಲೇ ಸಂತ್ರಸ್ತೆ ತನ್ನ  6 ವರ್ಷದ ಮಗನೊಂದಿಗೆ ನಾಪತ್ತೆಯಾಗಿದ್ದಾಳೆ ಎಂದು ಸಂತ್ರಸ್ತೆಯ ತಾಯಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾಳೆ.

ಈ ಕುರಿತು ಏ.27 ರಂದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next