Advertisement

ಮನೆ ತ್ಯಾಜ್ಯ ವಿಂಗಡಣೆ ನಾಗರಿಕರ ಜವಾಬ್ದಾರಿ

12:40 PM Jul 07, 2019 | Suhan S |

ಮಂಡ್ಯ: ಮನೆಯ ತ್ಯಾಜ್ಯದಲ್ಲಿ ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ನೀಡುವುದು ನಾಗರಿಕರ ಜವಾಬ್ದಾರಿ ಎಂದು ನಗರಸಭಾ ಆಯುಕ್ತ ಎಸ್‌.ಲೋಕೇಶ್‌ ಹೇಳಿದರು.

Advertisement

ಇಲ್ಲಿನ ಅಶೋಕನಗರದಲ್ಲಿರುವ ಜಿಲ್ಲಾ ಬಾಲಭವನದಲ್ಲಿ ನಗರಸಭೆ ಕಾರ್ಯಾಲಯದ ವತಿಯಿಂದ ನಡೆದ ಹಸಿ-ಒಣ ಮತ್ತು ಹಾನಿಕಾರಕ ಕಸ ನಿರ್ವಹಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮನೆಗಳಲ್ಲಿ ದೊರೆಯುವ ತ್ಯಾಜ್ಯ ಮತ್ತು ಹಾನಿಕಾರಕ ಕಸವನ್ನು ಮೂಲದಲ್ಲೇ ಬೇರ್ಪಡಿಸಿ ಕಸ ಸಂಗ್ರಹ ವಾಹನಗಳಿಗೆ ನೀಡುವುದು ಉತ್ತಮ. ಇದರಿಂದ ಉತ್ತಮ ಪರಿಸರ ಮತ್ತು ಆರೋಗ್ಯಕರ ನಗರ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಪ್ಲಾಸ್ಟಿಕ್‌ ನಿಷೇಧಕ್ಕೆ ಕೈಜೋಡಿಸಿ: ಪ್ಲಾಸ್ಟಿಕ್‌ ಮುಕ್ತ ನಗರಕ್ಕೆ ಎಲ್ಲರೂ ಕೈಜೋಡಿಸಬೇಕು. ಪ್ಲಾಸ್ಟಿಕ್‌ನಂತಹ ಹಾನಿಕಾರಕ ವಸ್ತುಗಳನ್ನು ದೂರವಿಟ್ಟು ಕಾಗದ ಅಥವಾ ಕೈಚೀಲಗಳಲ್ಲಿ ತರಕಾರಿ, ಹಣ್ಣು-ಸೊಪ್ಪು ಮತ್ತು ದಿನನಿತ್ಯ ಬಳಕೆ ವಸ್ತುಗಳನ್ನು ತರಲು ಬಳಸುವಂತೆ ಸಲಹೆ ನೀಡಿದರು.

ತ್ಯಾಜ್ಯ ವಿಲೇವಾರಿಯಲ್ಲಿ ಸಹಕರಿಸದ ಸಾರ್ವಜನಿಕರಿಗೆ, ಪ್ಲಾಸ್ಟಿಕ್‌ ಬಳಸುವ ಮತ್ತು ನೀಡುವವವರಿಗೆ ಘನತ್ಯಾಜ್ಯ ನಿರ್ವಹಣೆ ನಿಯಮಗಳು-2016ರಂತೆ 100 ರಿಂದ 5000 ರೂ.ವರಗೆ ದಂಡ ವಿಧಿಸಲಾಗುವುದು ಮತ್ತು ಜೈಲು ಶಿಕ್ಷೆಯೂ ಆಗಬಹುದೆಂದು ಎಚ್ಚರಿಸಿದರು.

Advertisement

ಪರಿಸರ ಕಾಳಜಿ ಇರಲಿ: ನಗರಸಭಾ ಸದಸ್ಯೆ ಮಂಜುಳಾ ಉದಯಶಂಕರ್‌ ಮಾತನಾಡಿ, ಬಡಾವಣೆಗಳಲ್ಲಿ ನೆಲೆಸಿರುವ ನಾಗರಿಕರು ಪರಿಸರ ಕಾಳಜಿ ಬೆಳೆಸಿಕೊಂಡು ಮನೆಯಲ್ಲಿನ ತ್ಯಾಜ್ಯ ವಿಂಗಡಿಸಿಟ್ಟುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ನಸಿಂಗ್‌ ಹೋಂಗಳ ಪ್ಲಾಸ್ಟಿಕ್‌ ತ್ಯಾಜ್ಯವು ಒಳಚರಂಡಿಯಲ್ಲಿ ಕಟ್ಟಿಕೊಂಡು ತೊಂದರೆ ಯಾಗುತ್ತಿದೆ, ವಿದ್ಯಾವಂತ ಸಮುದಾಯವೇ ಹೀಗೆ ಲೋಪ ಎಸಗಿದರೆ ಯಾರಿಗೆ ಬುದ್ಧಿ ಹೇಳುವುದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ನಾಗರೀಕರಿಗೆ ಘನತ್ಯಾಜ್ಯ ಮತ್ತು ಪರಿಸರ ರಕ್ಷಣೆಯ ಜಾಗೃತಿ ಕರಪತ್ರಗಳನ್ನು ಅಧಿಕಾರಿಗಳು ವಿತರಿಸಿದರು.

ನಗರಸಭೆ ಪರಿಸರ ಅಭಿಯಂತರೆ ಮೀನಾಕ್ಷಿ, ಉದ್ಯಾನವನ ನಿರೀಕ್ಷಕ ಕುಳ್ಳೇಗೌಡ, ಆರೋಗ್ಯ ನಿರೀಕ್ಷಕ ಗೋವಿಂದರಾಜು ಮತ್ತು ಸ್ಥಳೀಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next