Advertisement

ಮನೆಯೊಡತಿಯ ನಿತ್ಯೋತ್ಸವ

01:38 AM Sep 06, 2019 | mahesh |

ಒಮ್ಮೆ ಮಾರ್ಕೆಟ್‌ಗೆ ವರಮಹಾಲಕ್ಷ್ಮಿ ಹಬ್ಬದ ಹೂವುಹಣ್ಣು ತರಲು ಹೋಗಿದ್ದೆ. ಸ್ವಲ್ಪ ಹೆಚ್ಚೇ ಹೂವು ಬೇಕೆಂದುಕೊಂಡು ಒಂದು ಮಾರು ಹೂವು ಕೇಳಿದ ನನ್ನನ್ನು ವಿಚಿತ್ರವಾಗಿ ನೋಡಿದಳು ಹೂವಿನವಳು. ‘ನೀವು ಹಬ್ಬ ಮಾಡೋಲ್ವಾ ಅಕ್ಕ?’ ಎಂಬ ಅವಳ ಪ್ರಶ್ನೆ ಅರ್ಥವಾಗದೆ ಕಣ್‌ಕಣ್‌ ಬಿಡುತ್ತಿರುವಾಗ, ಕಾರಿನಲ್ಲಿ ಬಂದಿಳಿದ ಒಂದು ಜೋಡಿ ಮೂವತ್ತು ಮಾರು ಹೂವು ಖರೀದಿಸಿ, ಅವಳ ಬಳಿ ಇದ್ದ ತಾವರೆ ಹೂವುಗಳನ್ನೆಲ್ಲ ಕೊಂಡಾಗಲೇ ನನಗೆ ಆ ಪ್ರಶ್ನೆಯ ಮರ್ಮ ಅರಿವಾಗಿದ್ದು.

Advertisement

ಜಿಟಿಪಿಟಿ ಮಳೆ… ಕಿಚಿಪಿಚಿ ಕೆಸರು… ಒಂದು ಕೈಯಲ್ಲಿ ಕೊಂಚ ಎತ್ತಿಹಿಡಿದ ಉದ್ದ ಲಂಗ. ಮತ್ತೂಂದು ಕೈಯಲ್ಲಿ ಅಮ್ಮನ ಕೈತುಂಬಿ ಉಳಿದ ಪೂಜೆಯ ಸಾಮಗ್ರಿ. ಹನಿ ಹನಿ ಬೀಳುವ ಮಳೆಗೆ ಕೊಡೆಯ ಅಡೆತಡೆ ಇಲ್ಲವೇ ಇಲ್ಲ. ಬೆಂಕಿಪೆಟ್ಟಿಗೆ ಒದ್ದೆಯಾಗದಿರಲೆಂದು ಪುಟ್ಟ ಬಟ್ಟೆಯ ಗಂಟಿನೊಳಗೆ ಕರ್ಪೂರ, ಊದಿನ ಕಡ್ಡಿಯನ್ನೂ ಸೇರಿಸಿ ಸೆರಗಿನ ಮರೆಯಲ್ಲಿ ಅಡಗಿಸಿಕೊಂಡು ಬೇಗಬೇಗ ಹೆಜ್ಜೆ ಹಾಕುವ ಅಮ್ಮನ ಹಿಂದೆ ಓಡಲಾಗದೆ ಓಡದಿರಲೂ ಆಗದೆ, ಕೆಸರಲ್ಲಿ ಜಾರದ ಹಾಗೆ ನಾವು ನಡೆಯುತ್ತಿದ್ದರೆ ಅದು ಶ್ರಾವಣ ಮಾಸ. ಅಂದು ನಾಗರ ಪಂಚಮಿ… ನಾವು ಹೋಗುವಾಗ ಎದುರಿಗೆ ಸಿಗುವ ಒಂದೆರಡು ಮನೆಯವರನ್ನು ನೋಡಿ ಅಮ್ಮನಿಗೆ, ಅವರದಾಗಲೇ ಮುಗಿದುಹೋಗಿದೆ ಎಂಬ ಧಾವಂತ. ಮುಗಿಸಿ ಹಿಂತಿರುಗುವಾಗ ಎದುರಿಗೆ ಸಿಕ್ಕವರನ್ನು ನೋಡಿ ತನ್ನದು ಮುಗಿದಿದೆ ಎಂಬ ಬಿಂಕ.

ಸಣ್ಣ ಊರಿನ ಹಬ್ಬಗಳೇ ಹಾಗೆ. ಇಡೀ ಊರೇ ಹಬ್ಬ ಆಚರಿಸುತ್ತಿರುತ್ತದೆ. ಎದುರು ಮನೆಯಲ್ಲಿ ಹರಳೇಕಾಯಿ ಚಿತ್ರಾನ್ನ, ಹಿಂದಿನ ಮನೆಯಲ್ಲಿ ಹುಣಸೆ ಚಿಗುರಿನ ಅನ್ನ, ಪಕ್ಕದ ಮನೆಯಲ್ಲಿ ಬಿಸಿಬೇಳೆ ಬಾತು… ನಮ್ಮ ಮನೆಯಲ್ಲಿ ಸಾದಾ ಚಿತ್ರಾನ್ನ ಮಾಡಬಹುದೇ? ಉಹ್ಞೂಂ, ಎಳ್ಳುಪುಡಿ ಚಿತ್ರಾನ್ನ… ನಾಗರ ಪಂಚಮಿಯಿಂದ ಪೂಜೆ ಮುಗಿಸಿ ಹೊರಟರೆ ಪಕ್ಕದ ಮನೆಯವರ ಪ್ರಶ್ನೆ- ‘ಬೆನ್ನು ತೊಳೆಸಿಕೊಂಡಿದ್ದಕ್ಕೆ ಏನು ಕೊಟ್ಟ ನಿನ್ನ ತಮ್ಮ?’. ಅವರ ಮಗ, ಅವನಕ್ಕ ಬೆನ್ನು ತೊಳೆದಿದ್ದಕ್ಕೆ ಐವತ್ತು ಪೈಸೆ ಕೊಟ್ಟಿದ್ದನಂತೆ. ನನಗೂ ಅಷ್ಟೇ ಸಿಕ್ಕಿತ್ತು. ಅದರ ವಿಲೇವಾರಿಗೇ ಹೊರಟಿರುತ್ತಿದ್ದೆವು.

ಓಂಕಾರಪ್ಪನ ಅಂಗಡಿಯಲ್ಲಿ ಕಂಬರ್ಗಟ್ ತಂದು ಜೋಕಾಲಿ ತೂಗುವಾಗ ತಿನ್ನದಿದ್ದರೆ ಹಬ್ಬ ಸಾರ್ಥಕವಾಗೋದು ಹೇಗೆ? ತಂಬಿಟ್ಟಿನ ಉಂಡೆಯ ಘಮಘಮ ಇಡೀ ಕೇರಿಯ ತುಂಬಾ. ಎಲ್ಲರ ಮನೆಯಲ್ಲೂ ಅದೇ ತಂಬಿಟ್ಟು. ಎಲ್ಲರ ಮನೆಯಲ್ಲೂ ಅದೇ ಕಾಯಿಕಡುಬು… ಬೆಲ್ಲ ಕುದಿಸಿ, ಪಾಕ ಬರಿಸಿ, ಕಾಯಿತುರಿ, ಏಲಕ್ಕಿ ಹಾಕಿ ಮಗುಚಿ ಹೂರಣ ಮಾಡಿಟ್ಟು ,ಅಕ್ಕಿ ನೆನೆಸಿ ರುಬ್ಬಿ , ಮಗುಚಿ ಬಟ್ಟಲಿನ ಆಕಾರ ಮಾಡಿ ಒಳಗಡೆ ಹೂರಣವಿಟ್ಟು, ಬದಿಗಳನ್ನು ಒತ್ತಿ ಹಬೆಯಲ್ಲಿ ಬೇಯಿಸಿ ತುಪ್ಪದೊಡನೆ ತಿನ್ನುವ ಸುಖ, ಎಲ್ಲರಿಗೂ ಎಲ್ಲರ ಮನೆಯಲ್ಲೂ… ಅಥವಾ ಅಕ್ಕಿ ನೆನೆಸಿ ರುಬ್ಬಿ ಮಗುಚಿಕೊಂಡು ಉಂಡೆ ಮಾಡಿ ಹಬೆಯಲ್ಲಿ ಬೇಯಿಸಿ ಬೆಲ್ಲದ ಪಾಕಕ್ಕೆ ಏಲಕ್ಕಿ, ಕಾಯಿತುರಿ ಹಾಕಿ ಕುದಿಸಿದ್ದಕ್ಕೆ ಉಂಡೆಗಳನ್ನು ಹಾಕಿ ಬೇಯಿಸಿ ಮಾಡುವ ಹಾಲು ಉಂಡಲಿಗೆಗೆ ತುಪ್ಪ. ಅಲ್ಲಿ ಸ್ಪರ್ಧೆಯೇ ಇಲ್ಲ. ಸಂಭ್ರಮವಷ್ಟೇ.

ನಿಮ್ಮನೇಲಿ ಏನಿವತ್ತು?

Advertisement

ಮೊದಲ ದಿನ, ಹೆಣ್ಮಕ್ಕಳ ಪೂಜೆ. ಎರಡನೆಯ ದಿನ, ಗಂಡಸರ ಪೂಜೆ. ಮೂರನೆಯ ದಿನ ಮಕ್ಕಳಿಂದ ತನು ಎರೆಯುವಿಕೆ… ಹಬ್ಬಕ್ಕೆ ಬಾಳೆಹಣ್ಣನ್ನು ಕತ್ತರಿಸಿ, ನಾಗನ ಮೇಲಿಟ್ಟು ಅಭಿಷೇಕ ಮಾಡುವ ಸೊಗಸು, ಮಕ್ಕಾಗದ ಬಾಳೆಗೊನೆ ಅರಸುವ ಸಂಭ್ರಮ, ಹಾಲಿನ ಅಭಿಷೇಕ, ನೀರಿನ ಅಭಿಷೇಕ… ಅರಸಿನ ಅಕ್ಕಿಹಿಟ್ಟು ಬೆರೆಸಿ ಗಂಧ ತಯಾರಿಸಿ ನಾಗಪ್ಪನನ್ನು ಸಿಂಗರಿಸುವ ಹುಕಿ, ಮೂರೂ ದಿನದ ಹಬ್ಬ. ಹಬ್ಬವೆಂದರೆ ಹೀಗೇ… ನಮ್ಮನೆಯಲ್ಲಿ ಕಡಲೆಬೇಳೆ ಕೋಸಂಬರಿ, ಅವರ ಮನೆಯಲ್ಲಿ ಹೆಸರುಬೇಳೆಗೆ ಒಂದೆರಡು ಕಡಲೆ ಹಾಕಿದ ಕೋಸಂಬರಿ…

ಸಂತೆಯಲ್ಲಿ ಎಲ್ಲರೂ ಒಟ್ಟಾಗಿ ಹೋಗಿ, ಚೆನ್ನಾಗಿ ಕಂಡ ಒಂದೇ ತರಕಾರಿಯ ಅಡುಗೆ ಎಲ್ಲರ ಮನೆಯಲ್ಲೂ ಮನೆಯಂಗಳದಲ್ಲಿ ಗುಲಾಬಿ, ಡೇರಾ ಬಿಟ್ಟಿದ್ದರೆ ಅದನ್ನು ಎರಡು-ಮೂರು ದಿನ ಕಣ್ಣಲ್ಲಿ ಕಣ್ಣಿಟ್ಟು ಕಾಯುವುದು, ಹಬ್ಬದ ದಿನಕ್ಕೆ ಮುಡಿಪು ಆ ಹೂವು. ಸಂಜೆ ತುಸು ಆರಾಮಾಗಿ ಕುಂಕುಮಕ್ಕೆ ತಾವೂ ಹೋಗುತ್ತಾ, ಅವರಿವರನ್ನು ಕರೆಯುತ್ತಾ, ನಿಮ್ಮನೇಲಿ ಏನಿವತ್ತು? ಎಂದು ಗೊತ್ತಿದ್ದ ವಿಷಯವನ್ನೇ ಮತ್ಮತ್ತೆ ಮಾತನಾಡುತ್ತಾ… ಹೊಸಾ ಚುಕ್ಕಿ ಬಳೆ ತೊಟ್ಟ ಕೈಗಳನ್ನು ತಿರುಗಿಸುತ್ತಾ ಮಾತನಾಡುತ್ತಿದ್ದರೆ ಹಬ್ಬ ಸಾರ್ಥಕ. ಹೊರಗಡೆ ನಿಂತವರು, ‘ಜೋಕಾಲಿ ಅಷ್ಟು ಜೋರಾಗಿ ಜೀಕ್ಬೇಡ್ರೋ’ ಎಂದು ಕೂಗುತ್ತಾ ಮಕ್ಕಳ ಸಂಭ್ರಮ ನೋಡುವರು. ಆ ಮಾತು ಕಿವಿಗೆ ಬೀಳಲೇ ಇಲ್ಲವೆಂಬಂತೆ ಮತ್ತಷ್ಟು ಹುರುಪಿನಿಂದ ಜೀಕುವ ಮಕ್ಕಳು. ಇಡೀ ಪರಿಸರವೇ ಹಬ್ಬದ ಸಂಭ್ರಮಕ್ಕೆ ಉಯ್ನಾಲೆಯಾಡಿದಂತೆ.

ವರಮಹಾಲಕ್ಷ್ಮೀ ಹಬ್ಬದಲ್ಲೂ ಹೆಂಗಳೆಯರ ಸಂಭ್ರಮ. ರೇಷ್ಮೆ ಸೀರೆಯುಟ್ಟವರ ಸರಭರ ಓಡಾಟ. ರೇಷ್ಮೆ ಲಂಗ, ಬಳೆ, ಸರ, ಜಡೆಗೊಂದಿಷ್ಟು ಹೂವು. ಕನ್ನಡಿಯ ಮುಂದೆ ನಿಂತು ಕಾಡಿಗೆ ಹಚ್ಚಿ ಬೆರಳನ್ನು ತಲೆಗೆ ಸವರುತ್ತಾ ಕಣ್ಣಗಲಿಸಿ, ಸರಿಯಿದೆಯಾ ಎಂದು ನೋಡುವ ಪೋರಿಯ ಕಣ್ಣಲ್ಲಿ ಜಗದ ಸಂಭ್ರಮ ಮಡುಗಟ್ಟಿದ ಹಾಗೆ. ಅಂದು ಹಬ್ಬದ ಅಲಂಕಾರ. ಅಪರೂಪಕ್ಕೆ ಹೊಲಿಸಿದ ಲಂಗದಾವಣಿ ತೊಡುವ ಸುವರ್ಣ ಅವಕಾಶ. ಅದೇನೂ ಹೊಸದೇ ಆಗಿರಬೇಕಿಲ್ಲ. ಮನೆಯ ಹಿತ್ತಲಿನಲ್ಲಿ ಹೀರೋಯಿನ್‌ ಪೋಸಿನಲ್ಲಿ ಹೂ ಕೊಯ್ಯುವ ಸಡಗರ. ಕಿವಿಯ ಝುಮಕಿ ಕುಣಿಯಲಿ ಎಂದೇ ಕತ್ತು ಕೊಂಕಿಸುವ ಬಿನ್ನಾಣ. ನೋಡುವವರು ಯಾರು ಎಂಬುದು ಮುಖ್ಯವಲ್ಲವೇ ಅಲ್ಲ. ಮನದೊಳಗಿನ ಸಡಗರ ಅದು. ತಮಗಾಗಿ ತಾವೇ ಪಡುವ ಸಡಗರ. ಹೆಂಗಳೆಯರಿಗೂ ಅಂದು ಎಷ್ಟು ಜನ ಬಂದರೆ ಅಷ್ಟು ಹಬ್ಬ ಚೆಂದಗಂಡ ಹಾಗೆ. ತಿಂಗಳಿಂದ ಕೂತು ಮಾಡಿ ಒಳಗಿಟ್ಟ ಗೆಜ್ಜೆವಸ್ತ್ರ ಅಲಂಕಾರದ ಹಾರಗಳಿಗೆ ಅಂದು ಮೋಕ್ಷ. ಹಬ್ಬ ಮುಗಿದು ಉಸ್ಸೆಂದು ಕಾಲು ಚಾಚಿ ಮಲಗಿದ ಅಮ್ಮನ ಮನದಲ್ಲಿ ದಿನವಿಡೀ ನಡೆದ ಹಬ್ಬ ಚೆಂದವಾಗಿ ಮುಗಿದ ನೆಮ್ಮದಿ. ಮುಂದಿನ ಹಬ್ಬದ ಕನಸು.

ಈಗಿನ ಹಬ್ಬವೇ ಬೇರೆ

ಹೀಗೆಲ್ಲಾ ಬಾಲ್ಯ ಕಳೆದ ನಮಗೆ, ಈಗ ಬರುವ ಪ್ರತಿಹಬ್ಬವನ್ನೂ ಹಳೆಯ ನೆನಪಿನ ಸಂಭ್ರಮವನ್ನು ಮೈಗೆಳೆದುಕೊಂಡೇ ಮಾಡಬೇಕಾದ ಅನಿವಾರ್ಯತೆ. ನಾಗಪ್ಪನಿಗೆ ಮಡಿಮೈಲಿಗೆ ಹೆಚ್ಚು ಎಂಬ ಮಾತನ್ನು ನೆನಪಿಸಿಕೊಳ್ಳುತ್ತಲೇ, ಮನೆಯಲ್ಲಿದ್ದ ಬೆಳ್ಳಿನಾಗಪ್ಪನಿಗೆ ತನುಯೆರೆಸಿ ಸಮಾಧಾನ ಪಟ್ಟುಕೊಳ್ಳುವುದು.

ಒಮ್ಮೆ ಮಡಿವಾಳ ಮಾರ್ಕೆಟ್‌ಗೆ ವರಮಹಾಲಕ್ಷ್ಮಿ ಹಬ್ಬದ ಹೂವುಹಣ್ಣು ತರಲು ಹೋಗಿದ್ದೆ. ಸ್ವಲ್ಪ ಹೆಚ್ಚೇ ಹೂವು ಬೇಕೆಂದುಕೊಂಡು ಒಂದು ಮಾರು ಹೂವು ಕೇಳಿದ ನನ್ನನ್ನು ವಿಚಿತ್ರವಾಗಿ ನೋಡಿದಳು ಹೂವಿನವಳು. ‘ನೀವು ಹಬ್ಬ ಮಾಡೋಲ್ವಾ ಅಕ್ಕ?’ ಎಂಬ ಅವಳ ಪ್ರಶ್ನೆ ಅರ್ಥವಾಗದೆ ಕಣ್‌ಕಣ್‌ ಬಿಡುತ್ತಿರುವಾಗ, ಕಾರಿನಲ್ಲಿ ಬಂದಿಳಿದ ಒಂದು ಜೋಡಿ ಮೂವತ್ತು ಮಾರು ಹೂವು ಖರೀದಿಸಿ, ಅವಳ ಬಳಿ ಇದ್ದ ತಾವರೆ ಹೂವುಗಳನ್ನೆಲ್ಲ ಕೊಂಡು ಕಾರಿನೊಳಗಿಟ್ಟು ಕೊಂಡಾಗಲೇ ನನಗೆ ಆ ಪ್ರಶ್ನೆಯ ಮರ್ಮ ಅರಿವಾಗಿದ್ದು. ಹಬ್ಬದ ಸಡಗರಕ್ಕೆ ಅಷ್ಟೆಲ್ಲಾ ನನಗೆ ಬೇಡ ಎಂದು ಬೇಕಾದಷ್ಟನ್ನೇ ಕೊಂಡೆ. ಅರಸಿನ-ಕುಂಕುಮಕ್ಕೆ ಕರೆದಿದ್ದ ಕೆಲವರ ಮನೆಗೆ ಹೋದಾಗ ನನಗೆ ಗಾಬರಿಯೇ ಆಗಿತ್ತು. ಒಬ್ಬೊಬ್ಬರಿಗೆ ಒಂದೊಂದು ಮೊಳ ಹೂವು, ಒಂದು ಡಬ್ಬಿಯಲ್ಲಿ ಏನೇನೊ ಗಿಫ್ಟ್ , ಪ್ರಸಾದದ ಬಾಕ್ಸ್‌, ವರಮಹಾಲಕ್ಷ್ಮೀಯ ಮುಖವನ್ನೂ ಮುಚ್ಚಿದ್ದ ಹೂವು, ಒಡವೆಗಳು… ಎದುರಿನಲ್ಲಿ ಇಟ್ಟಿದ್ದ ಕರಿಗಡುಬು, ಮೋದಕ, ಹೋಳಿಗೆ, ಚಕ್ಕುಲಿ, ಕೋಡುಬಳೆ, ಪುರಿಉಂಡೆ, ತೆಂಗೊಳಲು, ಮುಚ್ಚೋರೆ, ಕಜ್ಜಾಯ… ಇವೆಲ್ಲವನ್ನೂ ಮಾಡಿದ ಅವರ ಶ್ರಮಕ್ಕೆ ಬೆರಗಾಯಿತು. ಕುಂಕುಮ ಕೊಡಲು ಬಂದಾಗ, ‘ಇವೆಲ್ಲ ನಿನ್ನೆ ಆರ್ಡರ್‌ ಕೊಟ್ಟು ಮಾಡ್ಸಿದ್ದು’ ಎಂದಾಗ ನನ್ನ ಪರಿಸ್ಥಿತಿ ಅಯೋಮಯ. ಹಬ್ಬ ಮಾಡುವುದು ಹೀಗೆಲ್ಲ ಎಂದುಕೊಂಡವಳನ್ನು ‘ಯಾಕೋ ಸುಸ್ತು, ಸಾಕು ಇಷ್ಟೇ’ ಎಂದು ಮನೆಯಲ್ಲಿ ಮಾಡಿಟ್ಟ ಜಾಮೂನು ಅಣಕಿಸಿತು. ಅವತ್ತಿಡೀ ಅದೇ ಗುಂಗು. ಮರುತಿಂಗಳೇ ಅವರ ಮನೆಗೆ ಇನ್‌ಕಮ್‌ ಟ್ಯಾಕ್ಸ್‌ ವಿಭಾಗದವರು ರೇಡ್‌ ಮಾಡಿದ ಸುದ್ದಿ. ಪ್ರತಿ ಬಾಗಿಲಿನ ಸಂದಿಯಲ್ಲೂ ಮಚ್ಚು ಇಟ್ಟು ಮನೆಯ ಸಂಪತ್ತು ಕಾಯುತ್ತಿದ್ದವರು ಅವರು. ನಾಲ್ಕು ಅಧಿಕಾರಿಗಳ ಮುಂದೆ ತಲೆತಗ್ಗಿಸಿ ನಿಂತ ದೃಶ್ಯ ಈಗಲೂ ಮನದಲ್ಲಿ. ಹಾಗಂತ ಮುಂದಿನ ವರ್ಷ ಅವರೇನೂ ಲಕ್ಷ್ಮೀಪೂಜೆಗೆ ಕಡಿಮೆ ಮಾಡಲಿಲ್ಲ. ತಾವು ಸೋತಿಲ್ಲವೆಂದು ತೋರಿಸಿಕೊಳ್ಳಲು ಮತ್ತೂ ಭರ್ಜರಿಯಾಗಿ ಹಬ್ಬ ಮಾಡಿದರು. ಹೋದವರಿಗೆಲ್ಲ ಮತ್ತಷ್ಟು ಉಡುಗೊರೆ. ಯಾವ ದೇವರಿಗೆ ಪ್ರೀತಿ ಇದು? ನಾನು ಗಳಿಸಿದ್ದೆಲ್ಲವೂ ನನ್ನದಲ್ಲ, ನಿನ್ನ ಕೃಪೆ ಎಂದು ಶರಣಾಗತ ಭಾವದಲ್ಲಿ ಅಹಂಕಾರ ತೊರೆದು ಮಾಡುವ ಪೂಜೆ ಹಬ್ಬವಾದೀತಲ್ಲದೆ, ನಾಲ್ಕು ಜನರ ಮುಂದೆ ಮೆರೆಯುವುದು ಹಬ್ಬವಾದೀತೇ? ಹಬ್ಬಗಳು ಅರ್ಥವನ್ನೇ ಕಳೆದುಕೊಳ್ಳುತ್ತಿವೆಯೇ? ಮತ್ತೆ ಮನಸ್ಸಿಗೆ ಹಬ್ಬವಾಗುವ ಹಬ್ಬಗಳು ಬರುವುದು ಯಾವಾಗ? ಹೇಗೆ?

ಕಾಲಾಯಃ ತಸ್ಮೈ ನಮಃ….

ಮಾಲಿನಿ ಗುರುಪ್ರಸನ್ನ

Advertisement

Udayavani is now on Telegram. Click here to join our channel and stay updated with the latest news.

Next