ಡೈನಿಂಗ್ ಟೇಬಲ್ಲಿನ ಮುಂದೆ ಮಕ್ಕಳು, ಗಂಡ, ಅತ್ತೆ, ಮಾವ ಎಲ್ಲ ಊಟಕ್ಕೆ ಕುಳಿತಿದ್ದಾರೆ. ಆಕೆ ಎಲ್ಲರಿಗೂ ಬಡಿಸುತ್ತಿದ್ದಾಳೆ. ಮೊಸರು ಹಾಕು, ಪಲ್ಯ ಇನ್ನೊಂದು ಸ್ವಲ್ಪ, ಸಾರು ತೊಗೊಂಡು ಬಾ, ಹೀಗೆ ಒಬ್ಬೊಬ್ಬರದೂ ಒಂದೊಂದು ಆರ್ಡರ್. ಇದೇನು ಪಲ್ಯ ಇಷ್ಟು ಖಾರ ಆಗಿದೆ, ಚಪಾತಿಗೆ ತುಪ್ಪ, ಸಕ್ಕರೆ ಹಚ್ಚಿ ಸುತ್ತಿಕೊಡು, ಅನ್ನ ಇಟ್ಟು ಹೋಗಿಬಿಟ್ಟರೆ ಬರೀ ಅದನ್ನೇ ತಿನ್ನಬೇಕಾ, ಬೇಗ ಸಾರು ತಂದು ಬಡಿಸಲಿಕ್ಕೆ ಆಗುವುದಿಲ್ಲವಾ, ಚಪಾತಿ ಆರಿ ಹೋಗಿದೆ…
ಹೀಗೆ, ಒಬ್ಬೊಬ್ಬರದ್ದು ಒಂದೊಂದು ಮಾತು. ಎಲ್ಲರನ್ನೂ ಸುಧಾರಿಸುವ ಹೊತ್ತಿಗೆ, ಆಕೆ ಸುಸ್ತಾಗಿ ಹೋಗಿರುತ್ತಾಳೆ. ಇದು ಯಾವುದೋ ಕಾಲದ ಮಾತು ಅಂದುಕೊಳ್ಳಬೇಡಿ. ಎಷ್ಟೋ ಕುಟುಂಬಗಳಲ್ಲಿ ಬದಲಾವಣೆ ಬಂದಿದೆ ನಿಜ. ಆದರೆ ಈಗಲೂ ಸಾಕಷ್ಟು ಮನೆಗಳಲ್ಲಿ ಪ್ರತಿನಿತ್ಯ ಈ ದೃಶ್ಯಗಳನ್ನು ಕಾಣಬಹುದು. ಆಯಿತು, ಊಟಕ್ಕೆ ಕುಳಿತಾಗ ಎಂಜಲು ಮುಂಜಲು ಮಾಡುವುದಕ್ಕೆ ಆಗುತ್ತಾ? ಹಾಗಾಗಿ ಒಬ್ಬರು ಬಡಿಸಿದರೆ ಚೆನ್ನ ಎನ್ನುವ ವಾದವೂ ಸರಿಯೇ. ಆದರೆ ಅದ್ಯಾವುದನ್ನೂ ಪಾಲಿಸದ ಮನೆಯಲ್ಲಿಯೂ, ಹೀಗೆ ಆಕೆ ಒಬ್ಬಳೇ ಇಡೀ ಮೈದಾನದಲ್ಲಿ ಓಡಾಡಿ, ಫೀಲ್ಡಿಂಗ್ ಮಾಡುವುದು ತಪ್ಪುವುದಿಲ್ಲ.
ಅನ್ನ ಇಟ್ಟ ಮೇಲೆ ಅಲ್ಲೇ ಟೇಬಲ್ಲಿನ ಮೇಲೆ ಇದ್ದ ಸಾರನ್ನು ಹಾಕಲು ಲೇಟು ಮಾಡಿದರೆ ಅಷ್ಟಕ್ಕೇ ಗುರಾಯಿಸುವ, ಜಗಳ ಮಾಡಿಬಿಡುವ ಗಂಡಸರಿದ್ದಾರೆ. ಕೈ ಒಣಗಿಸಿಕೊಂಡು ಎಷ್ಟು ಹೊತ್ತು ಕೂಡಬೇಕು ಎಂಬ ಕುಹಕದ ನುಡಿ ಬೇರೆ. ಕೈ ತಾಕಿದರೆ ಸಿಗುವ ಫ್ಯಾನನ್ನೂ ಹೆಂಡತಿಯೇ ಬಂದು ಹಾಕಬೇಕೆಂದು ನಿರೀಕ್ಷಿಸುವ ಮಂದಿಗೆ ಬರವಿಲ್ಲ.
ಇನ್ನು, ಮನೆಯ ಹಿರಿಯರಿಗೆ ಬಡಿಸಲು ತಡಮಾಡಿದರೆ, ಅರ್ಧಕ್ಕೆ ಕೈತೊಳೆದು ಎದ್ದು ಹೋಗುವವರಿದ್ದಾರೆ. ಆಗ, ಗಂಡ- ಹೆಂಡತಿಯರ ನಡುವೆ ಯುದ್ಧವಂತೂ ಕಾಯಂ. ಟೀ, ಕಾಫಿ ಮಾಡಿಕೊಂಡು ಹೋಗಿ ಕೊಡುವಷ್ಟರಲ್ಲಿ ಕೆನೆ ಕಟ್ಟಿದ್ದರೆ, ಅದನ್ನೂ ತೆಗೆದುಕೊಡದಿದ್ದರೆ ಮುಖ ಧುಮ್ಮಿಸಿಕೊಳ್ಳುವವರೆಷ್ಟೋ. ಇದು ಹೆಣ್ಣು ಮಕ್ಕಳು ಆಡಲಾಗದ, ಅನುಭವಿಸಲಾಗದ ಸ್ಥಿತಿ. ಆದರೂ ಆಕೆ ಎಂದಿಗೂ ಬೇಸರ ಮಾಡಿಕೊಳ್ಳದೆ, ಪ್ರತಿದಿನ ಮೂರೂ ಹೊತ್ತು ಮಾಡುತ್ತಾಳೆ ಬಿಡಿ. ವಿಷಯ ಅದಲ್ಲ. ಎಲ್ಲರ ಊಟ ಮುಗಿಸಿ, ಟೇಬಲ್ ಎಲ್ಲ ಒರೆಸಿ, ಆಕೆ ಒಬ್ಬಳೇ ಅಡುಗೆ ಮನೆಯಲ್ಲಿ ಊಟಕ್ಕೆ ಕುಳಿತುಕೊಳ್ಳುತ್ತಾಳಲ್ಲ; ಆಗ ಯಾರಾದರೂ ಆಕೆಗೆ ನೀನು ಕುಳಿತುಕೋ, ನಾನು ಬಿಸಿ ಬಿಸಿ ದೋಸೆ ಹಾಕಿಕೊಡುತ್ತೇನೆ, ಚಪಾತಿ ಮಾಡಿಕೊಡುತ್ತೇನೆ ಎಂದು ಪ್ರೀತಿಯಿಂದ ಬಡಿಸುವುದುಂಟಾ?
ಎಲ್ಲರಿಗೂ ಅಡುಗೆ ಮಾಡಿ, ಜೊತೆಗೆ ಬಡಿಸಿ ಸುಸ್ತಾದ ಅವಳಿಗೆ ತಿನ್ನುವ ಕಡೆ ಗಮನವಿರುವುದು ಕಡಿಮೆಯೇ. ಉಪ್ಪು ಬೇಕೆಂದರೂ, ಮೊಸರು ಮರೆತು ಕುಳಿತರೂ ಮುಗಿಯಿತು, ತಂದು ಕೊಡಲೇ ಎಂದು ಕೇಳುವವರು ಇರುವುದಿಲ್ಲ. ಪ್ರತೀಬಾರಿ ಎದ್ದು ಹೋಗಿ ಬಡಿಸಿಕೊಳ್ಳಲು ಬೇಜಾರಾಗಿ, ಎಲ್ಲವನ್ನೂ ಒಮ್ಮೆಗೇ ಬಡಿಸಿಕೊಂಡು, ಏನೋ ಒಂದು ತಿನ್ನುವ ಶಾಸ್ತ್ರ ಮಾಡಿ ಎದ್ದುಬಿಡುವವರೇ ಹೆಚ್ಚು. ಬಿಸಿ ಅಡುಗೆ ಉಣ್ಣುವುದಂತೂ ಸಾಧ್ಯವಿಲ್ಲದ ಮಾತು. ಜೊತೆಗೆ ತಾನೇ ತಯಾರಿಸಿದ ಅಡುಗೆಯನ್ನು ಸವಿಯಲು ಸಹ, ಆಕೆಗೆ ಸಹನೆಯೇ ಇರುವುದಿಲ್ಲ. ಬಾ, ಇವತ್ತು ಎಲ್ಲರೂ ಸೇರಿ ಊಟ ಮಾಡೋಣ. ಎಲ್ಲವನ್ನೂ ಟೇಬಲ್ಲಿಗೆ ತಂದಿಟ್ಟು ಬಿಡು, ಎಲ್ಲರೂ ಬಡಿಸಿಕೊಂಡು ಊಟ ಮಾಡೋಣ ಅಂತ ಒಮ್ಮೆಯಾದರೂ ಪತಿಯಾಗಲೀ, ಅತ್ತೆಯಾಗಲೀ, ಕೊನೇಪಕ್ಷ ಮಕ್ಕಳಾಗಲೀ ಕೇಳಿದರೆ, ಆಕೆ ಅದೆಷ್ಟು ಖುಷಿ ಪಡುವಳ್ಳೋ. ಅದೂ ಆಗದಿದ್ದರೆ, ಒಳಗೆ ಆಕೆ ಒಬ್ಬಳೇ ಊಟ ಮಾಡುವಾಗ ಜೊತೆಯಾಗಿ ಮಾತನಾಡಿಸುತ್ತಾ ಕೂತರೂ ಸಾಕು, ಎಷ್ಟೋ ಸಮಾಧಾನದಿಂದ ಉಣ್ಣುತ್ತಾಳೆ.
ಇದು ಬರೀ ಅನಕ್ಷರಸ್ಥರ ಮನೆಯಲ್ಲಿನ ಕಥೆ ಅಂದುಕೊಳ್ಳಬೇಡಿ. ದೊಡ್ಡ ದೊಡ್ಡ ಹುದ್ದೆಯಲ್ಲಿರುವ ಹೆಣ್ಣಿಗೂ ಈ ಬವಣೆ ತಪ್ಪಿದ್ದಲ್ಲ. ಅದಕ್ಕಾಗಿಯೇ ಇರಬೇಕು; ಆಕೆ ತವರು ಮನೆಗೆ ಹೋಗಲು ಹವಣಿಸುವುದು. ಅಲ್ಲಿ, ಅಮ್ಮ- “ಅಲ್ಲಿ ಮಾಡುವುದು ಇದ್ದೇ ಇದೆ, ಇಲ್ಲಿಯಾದರೂ ಆರಾಮವಾಗಿ ಕುಳಿತು, ಸಮಾಧಾನವಾಗಿ ಊಟ ಮಾಡು’ ಎಂದು ಕಕ್ಕುಲಾತಿಯಿಂದ ಬಡಿಸುತ್ತಾಳೆ. ಆಕೆಯ ಶ್ರಮಕ್ಕೊಂದು ಬೆಲೆ ನೀಡಿ, ನಿಮ್ಮೊಂದಿಗೆ ಸೇರಿಸಿಕೊಂಡು ಅವಳ ಒಂಟಿತನಕ್ಕೊಂದು ವಿರಾಮ ನೀಡಿ. ನಂದಗೋಕುಲ ಮತ್ತಷ್ಟು ಸಂತೋಷದಿಂದ ಕಿಲಕಿಲ ಎನ್ನುತ್ತದೆ.
– ನಳಿನಿ. ಟಿ. ಭೀಮಪ್ಪ