Advertisement

ಗೃಹಿಣಿಯ ಉಳಿತಾಯ ಬಜೆಟ್‌

03:19 PM Jan 31, 2018 | |

ದೇಶದ ಹಣಕಾಸಿನ ಲೆಕ್ಕಾಚಾರ ಹೇಗೆ ಹಣಕಾಸು ಸಚಿವರ ತಲೆಯಲ್ಲಿರುತ್ತದೋ, ಹಾಗೆಯೇ ಒಂದು ಮನೆಯ ಆಯ-ವ್ಯಯದ ಲೆಕ್ಕ ಗೃಹಿಣಿಗೆ ಗೊತ್ತಿರುತ್ತದೆ. ಅದಕ್ಕೇ ಆಕೆಯನ್ನು ಗೃಹಲಕ್ಷ್ಮಿ, ಮನೆಯೊಡತಿ ಎನ್ನುವುದು. ಪ್ರತಿ ತಿಂಗಳು ಎಷ್ಟು ಹಣ ಕೈಗೆ ಬರುತ್ತದೆ, ತಿಂಗಳಾಂತ್ಯದಲ್ಲಿ ಎಷ್ಟು ಉಳಿಯುತ್ತದೆ, ಮುಂಬರುವ ದಿನಗಳಲ್ಲಿ ಯಾವ್ಯಾವ ಖರ್ಚುಗಳು ಹೆಚ್ಚಲಿವೆ, ದುಂದುವೆಚ್ಚವನ್ನು ಹತೋಟಿಗೆ ತರೋದು ಹೇಗೆ….ಇತ್ಯಾದಿಗಳ ಬಗ್ಗೆ ಆಕೆ ಯೋಚಿಸಿದರೆ, ಹಣಕಾಸಿನ ಮುಗ್ಗಟ್ಟಿಲ್ಲದೆ ಸಂಸಾರದ ಬಂಡಿ ಮುಂದಕ್ಕೋಡಬಲ್ಲದು. ಇಡೀ ದೇಶವೇ ಬಜೆಟ್‌ನ್ನು ಎದುರು ನೋಡುತ್ತಿರುವಾಗ, ಮಹಿಳೆಯ ಬಜೆಟ್‌ ಹೇಗಿರಬೇಕು ಎಂಬುದರ ಕಿರುನೋಟ ಇಲ್ಲಿದೆ.

Advertisement

ನಿಮಗೆ ನೆನಪಿದೆಯೇ? ಬಾಲ್ಯದ ಆ ದಿನಗಳು… ನಿಮ್ಮ ಅಜ್ಜಿಯೋ, ಅಮ್ಮನೋ ವರ್ಷಗಟ್ಟಲೆ ಅಡುಗೆ ಮನೆಯ ಪುಟ್ಟ ಡಬ್ಬಿಯಲ್ಲಿ ಪುಡಿಗಾಸು ಹಾಕಿಡುತ್ತಿದ್ದುದು, ಕಾಸಿಗೆ ಕಾಸು ಸೇರಿಸಿ ಮನೆಗೆ ಅಗತ್ಯದ ವಸ್ತು ಗಳನ್ನು ಖರೀದಿಸುತ್ತಿದ್ದುದು, ಇಲ್ಲವೇ ತುರ್ತು ಸಂದರ್ಭಗಳಲ್ಲಿ ಅದೇ ಹಣವನ್ನು ಬಳಸುತ್ತಿದ್ದುದು. ಎಷ್ಟೋ ಸಂದರ್ಭಗಳಲ್ಲಿ ನಿಮ್ಮ ವಿದ್ಯಾಭ್ಯಾಸಕ್ಕೆ, ಸ್ಕೂಲ್‌ ಟೂರ್‌ಗೂ ಅದೇ ಹಣ ನೆರವಾಗುತ್ತಿರಲಿಲ್ಲವೇ?

ಹೌದು. ಅನಾದಿಕಾಲದಿಂದಲೂ ಮಹಿಳೆಗೂ ಉಳಿತಾಯಕ್ಕೂ ಅದೇನೋ ನಂಟು. ಅದು ಅನಿವಾರ್ಯ ಕೂಡ! ಅದ್ಯಾವುದೋ ಕಾರಣದಿಂದ ಪತಿ ಕೆಲಸ ಕಳೆದುಕೊಂಡಾಗಲೋ, ಮನೆಮಂದಿಯಲ್ಲೊಬ್ಬರಿಗೆ ಗಂಭೀರವಾಗಿ ಆರೋಗ್ಯ ಕೈಕೊಟ್ಟಾಗಲೋ, ಮಕ್ಕಳ ಓದು, ಮಗಳ ಮದುವೆ, ಸ್ವಂತ ಮನೆ ಕಟ್ಟುವಾಗ ಜೊತೆಯಾಗುವ ತಾಪತ್ರಯದ ಸಂದರ್ಭದಲ್ಲಿ ನೆರವಿಗೆ ಬರುವುದು ಇಂಥ ಉಳಿತಾಯದ ಹಣವೇ ಅಲ್ಲವೇ?

  ನೀವು ಕೆಲಸಕ್ಕೆ ಹೋಗುವವರಿರಬಹುದು, ಮನೆಯಲ್ಲಿಯೇ ಇರುವ ಗೃಹಿಣಿಯೂ ಆಗಿರಬಹುದು. ನಿಮ್ಮ ಮೇಲೆ ಮನೆಮಂದಿಯ,  ಮನೆಯ ಕಾರ್ಯಭಾರದ ಜವಾಬ್ದಾರಿ ಇದ್ದೇ ಇರುತ್ತದೆ.  ಗೃಹಿಣಿಯಾಗಿದ್ದರೆ, “ನಾನು ಹೇಗೂ ಕೆಲ್ಸಕ್ಕೆ ಹೋಗ್ತಿಲ್ಲವಲ್ಲ. ಬರೀ ಹೋಂ ಮೇಕರ್‌ ನಾನು…’ ಎಂದುಕೊಂಡು ಸುಮ್ಮನಿರಬೇಡಿ. ನಿಮ್ಮಲ್ಲಿಯೂ ಉಳಿತಾಯದ ಮನೋಭಾವ ಇರಲೇಬೇಕು. ಬ್ಯಾಂಕ್‌ ಅಕೌಂಟ್‌, ಕ್ರೆಡಿಟ್‌ ಕಾರ್ಡ್‌ ಮುಂತಾದ ಹಣಕಾಸು ವಿಚಾರಗಳ ಬಗ್ಗೆ ಜ್ಞಾನ ಗಳಿಸಿಕೊಳ್ಳಿ. ಬೇಕೆಂದರೆ ಸಂಗಾತಿಯ ಸಹಾಯ ಪಡೆದುಕೊಳ್ಳಿ. ಆಗ ಮನೆಯ ಬಜೆಟ್‌ ತಯಾರಿಸಲು ಸುಲಭವಾಗುತ್ತದೆ. ಯೋಜನೆಗೆ ಸರಿಯಾದ ರೂಪುರೇಷೆ ಸಿಗುತ್ತದೆ.

  ಹಿರಿಯ ಸಾಹಿತಿ, ಉದ್ಯಮಿ ಸುಧಾ ಮೂರ್ತಿ ಅವರು ಕೂಡ ಮನೆಖರ್ಚಿಗಾಗಿ ತಾವು ಪುಡಿಗಾಸು ಕೂಡಿಡುತ್ತಿದ್ದುದಾಗಿ ಹೇಳಿಕೊಂಡಿದ್ದುಂಟು. ಮನೆಯ ಬಜೆಟ್‌ ಹೇಗಿರಬೇಕು, ಮನೆಯ ಆರ್ಥಿಕ ಪರಿಸ್ಥಿತಿ, ಮಕ್ಕಳ ಭವಿಷ್ಯ ನೋಡಿಕೊಂಡು ಹೇಗೆ ಮತ್ತು ಎಷ್ಟು ಉಳಿತಾಯ ಮಾಡಬೇಕು ಎಂಬುದನ್ನು ಪತಿ-ಪತ್ನಿ ಇಬ್ಬರೂ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬಂದರೆ ಬಹಳ ಒಳ್ಳೆಯದು.

Advertisement

  ಮೊದಲಿಗೆ ಒಂದು ವ್ಯವಸ್ಥಿತ ಹೂಡಿಕೆ ಯೋಜನೆಯನ್ನು ರೂಪಿಸಿಕೊಳ್ಳಿ. ಜೊತೆಗೇ ನಿಮ್ಮ ಗುರಿಗಳನ್ನು ನಿಗದಿಮಾಡಿಕೊಳ್ಳಿ. ಆ ಗುರಿಗಳು ಆದ್ಯತೆಗೆ ಅನುಸಾರವಾಗಿರಲಿ. ಉದಾಹರಣೆಗೆ ಮಕ್ಕಳ ವಿದ್ಯಾಭ್ಯಾಸ, ಸೈಟ್‌ ಖರೀದಿ, ಆಭರಣ ಖರೀದಿ, ಮನೆ ನಿರ್ಮಾಣ ಇತ್ಯಾದಿ. ರಿಕರಿಂಗ್‌ ಸೇವಿಂಗ್‌ ಅಕೌಂಟ್‌ನಲ್ಲಿ ಹಣ ಹೂಡಿಕೆ ಮಾಡಿ. ಹಾಗೆಯೇ ಸಾಮಾನ್ಯ ಸೇವಿಂಗ್‌ ಅಕೌಂಟ್‌ ತೆರೆದರೆ ಇನ್ನೂ ಒಳ್ಳೆಯದು. ರಿಕರಿಂಗ್‌ ಡಿಪಾಸಿಟ್‌ ಅಥವಾ ಆರ್‌ಡಿ ಮೆಚೂರ್‌ ಆದಾಗ ಪುನಃ ಹೂಡಿಕೆ ಮಾಡಬಹುದು. ಮದುವೆಯೋ, ಸಮಾರಂಭವೋ, ತುರ್ತು ಅಗತ್ಯವೋ ಇದ್ದಾಗ ಅದನ್ನು ಉಪಯೋಗಿಸಿಕೊಳ್ಳಲೂಬಹುದು. ತಿಂಗಳು ತಿಂಗಳು ನೀವೇ ಉಳಿಸಿದ ಅಷ್ಟೋ ಇಷ್ಟೋ ಹಣವನ್ನು ಹೀಗೆ ಸದುಪಯೋಗಪಡಿಸಿಕೊಳ್ಳಬಹುದು. ಸಾಮಾನ್ಯ ಬ್ಯಾಂಕ್‌ ಅಕೌಂಟ್‌ ಇರಲಿ, ಆರ್‌ಡಿ ಇರಲಿ, ಹಾಗೆಯೇ ಪೋಸ್ಟ್‌ ಆಫೀಸ್‌, ಇತರ ಯೋಜನೆಗಳೇ ಇರಲಿ- ನಿಮ್ಮದೇ ಆದ ಈ ಉಳಿತಾಯದ ಹಣಕ್ಕೆ ಒಂದಷ್ಟು ಬಡ್ಡಿಯೂ ಸಿಗುತ್ತದೆ. ಹಾಗಾಗಿಯೇ ಸಾಕಷ್ಟು ಮನೆ ಒಡತಿಯರು ಇಂಥ ಉಳಿತಾಯದ ಮಾರ್ಗ ಕಂಡುಕೊಂಡಿದ್ದಾರೆ. ನಿಜ. ಇಂದಿನ ದಿನಗಳಲ್ಲಿ ಹಣದಿಂದಲೇ ಹಣ ಹುಟ್ಟುತ್ತದೆ. ಹಣದಿಂದಲೇ ಹಣ ಗಳಿಕೆ ಸಾಧ್ಯ.

  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒದಗಿಸುವ ಸವಲತ್ತುಗಳನ್ನು, ಯೋಜನೆಗಳ ಲಾಭವನ್ನು ಧಾರಾಳವಾಗಿ ಬಳಸಿಕೊಳ್ಳಿ. ಪ್ರಧಾನಮಂತ್ರಿ ಜನಧನ್‌ ಯೋಜನೆ, ಸುರಕ್ಷಾ ಬಿಮಾ ಯೋಜನೆ, ಗ್ಯಾಸ್‌ ಸಬ್ಸಿಡಿಯ ಪಹಲ್‌ ಯೋಜನೆ, ಜೀವನಜ್ಯೋತಿ ಬಿಮಾ ಯೋಜನೆ, ಮಗಳ ವಿದ್ಯಾಭ್ಯಾಸ, ಮದುವೆ ಇತ್ಯಾದಿಗಳಿಗಿರುವ ಸುಕನ್ಯಾ ಸಮೃದ್ಧಿ ಯೋಜನೆ ಇತ್ಯಾದಿಗಳ ಬಗ್ಗೆ ತಿಳಿದುಕೊಂಡು ಅವುಗಳ ಪ್ರಯೋಜನ ಪಡೆಯಿರಿ. ಹಲವು ಯೋಜನೆಗಳಲ್ಲಿ ಹೂಡಿಕೆ ಹಣದ ಮೇಲೆ ತೆರಿಗೆ ವಿನಾಯತಿಯೂ ಇದೆ ಎಂಬುದನ್ನು ಮರೆಯಬೇಡಿ.

  ಇನ್ನು “ಬೇಟಿ ಬಚಾವೋ, ಬೇಟಿ ಪಢಾವೋ’ದಂಥ ಹಲವಾರು ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿವೆ. ಅವುಗಳ ಬಗ್ಗೆ ತಿಳಿದುಕೊಂಡ ಮಹಿಳೆಯರು ಆ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. ಉಳಿದವರೂ ಇಂಥ ಯೋಜನೆಗಳ ಬಗ್ಗೆ ತಿಳಿದುಕೊಳ್ಳುವುದು ಒಳಿತು. ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಆಭಿವೃದ್ಧಿ ಇಲಾಖೆಯು “ಸ್ತ್ರೀ ಶಕ್ತಿ’ ತಂಡಗಳ ರಚನೆಗೆ ಅನುವು ಮಾಡಿಕೊಟ್ಟಿದೆ. ಅವುಗಳಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದೆ. ಗ್ರಾಮಾಂತರ ಪ್ರದೇಶಗಳಲ್ಲಿರುವ ಬಹಳಷ್ಟು ಸ್ತ್ರೀಯರು ಅದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. 

  ತಿಂಗಳಿಗೆ ಕೇವಲ ಐನೂರು ರುಪಾಯಿ ತೊಡಗಿಸಿ ಗೋಲ್ಡ್‌ ಮ್ಯೂಚುವಲ್‌ ಫ‌ಂಡ್‌ನ‌ಲ್ಲಿ ಹೂಡಿಕೆ ಮಾಡಿದರೂ ಸಾಕು, ಎಲೆಕ್ಟ್ರಾನಿಕ್‌ ರೂಪದ ಚಿನ್ನವನ್ನು ಹೂಡಿದರೂ ಸಾಕು, ಅದರ ಲಾಭವನ್ನು ಪಡೆದೇ ಪಡೆಯುತ್ತೀರಿ. ನಗರಗಳಲ್ಲಿರುವ ಎಷ್ಟೋ ಮಹಿಳೆಯರು ಈ ಗುಟ್ಟನ್ನು ಅರಿತುಕೊಂಡಿದ್ದಾರೆ. ಹಾಗಾಗಿ ಇಂಥ ಗೋಲ್ಡ್‌ಫ‌ಂಡ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಕೂಡ. ಇದಲ್ಲದೆ ಆರೋಗ್ಯ ವಿಮೆ ಯೋಜನೆ, ಮ್ಯೂಚುವಲ್‌ ಫ‌ಂಡ್‌ ಇನ್ವೆಸ್ಟ್‌ಮೆಂಟ್‌, ಡೆಟ್‌ ಮ್ಯೂಚುವಲ್‌ ಫ‌ಂಡ್‌ಗಳಲ್ಲಿ ಹಣ ಹೂಡಿಕೆ ಮಾಡುವವರಿಗೇನೂ ಕಮ್ಮಿ ಇಲ್ಲ.  ಆದರೆ, ನಾಯಿಕೊಡೆಗಳಂತೆ ಹುಟ್ಟುತ್ತಿರುವ ಚಿಟ್‌ಫ‌ಂಡ್‌ಗಳಲ್ಲಿ ಹಣ ಹೂಡಿಕೆ ಮಾಡುವಾಗ ಬಹಳ ಎಚ್ಚರ ಅತ್ಯಗತ್ಯ. ವಿಶ್ವಾಸಾರ್ಹರು ಎಂದು ಸರಿಯಾಗಿ ತಿಳಿದುಕೊಂಡ ಮೇಲಷ್ಟೇ ಚಿಟ್‌ಫ‌ಂಡಲ್ಲಿ ಹಣ ತೊಡಗಿಸಬೇಕು. ಇಲ್ಲದಿದ್ದರೆ ಟೋಪಿ ಖಚಿತ!

ಖರ್ಚಿಗೆ ಹಾಕಿ ಕಡಿವಾಣ: ಜಾಣ ಗೃಹಿಣಿಯರಿಗೆ ಖರ್ಚಿನ ಮೇಲೆ ಹಿಡಿತ ಸಾಧಿಸುವುದೂ ಗೊತ್ತು; ಎಲ್ಲೆಲ್ಲ ಹಣ ವೇಸ್ಟ್‌ ಆಗ್ತಿದೆಯೋ ಅಲ್ಲೆಲ್ಲ ಕಡಿವಾಣ ಹಾಕುವುದೂ ಗೊತ್ತು. ದಿನಾಲೂ ವಾಶಿಂಗ್‌ಮೆಶಿನ್‌ಗೆ ಬಟ್ಟೆ ಹಾಕುವ ಬದಲು, ವಾರಕ್ಕೆ ಒಂದೋ ಎರಡು ಬಾರಿಯೋ ಒಟ್ಟಿಗೇ ಹಾಕಿದರೆ ಒಳ್ಳೆಯದಲ್ಲವೇ? ಪ್ರತಿ ವಾರ ಹೋಟೆಲ್‌, ಮಾಲ್‌, ಶಾಪಿಂಗ್‌, ಸಿನಿಮಾ ಅಂತ ಸುತ್ತುವುದರ ಬದಲು ತಿಂಗಳಿಗೊಮ್ಮೆ ಹೋದರೆ ಸಾಕಲ್ಲವೇ? ಅನಗತ್ಯ ಕಿಟ್ಟಿà ಪಾರ್ಟಿಗಳು ಬೇಕೇ? ಇದನ್ನೆಲ್ಲ ಬಹುತೇಕ ಗೃಹಿಣಿಯರು ಯೋಚಿಸುತ್ತಾರೆ. ಮನೆಯ ಇಂಥದೇ ಹತ್ತುಹಲವು ಆಗುಹೋಗುಗಳಲ್ಲಿ ಅವರು ಹಿಡಿತ ಸಾಧಿಸುತ್ತಾರೆ.
  
ಕೌಶಲದಿಂದ ಹಣ: ಗ್ರಾಫಿಕ್‌ ಡಿಸೈನಿಂಗ್‌, ಪೇಂಟಿಂಗ್‌, ಭಾಷಾಂತರ ಮುಂತಾದ ವಿಶೇಷ ಕೌಶಲಗಳನ್ನೇ ಬಳಸಿಕೊಂಡು ಹೋಂ ಜಾಬ್‌ ಮಾಡಿ ಮನೆಯಲ್ಲಿಯೇ ಹಣ ಗಳಿಸುವವರೂ ಸಾಕಷ್ಟು ಮಂದಿ. ಇನ್ನು ಕಂಪ್ಯೂಟರ್‌, ಇಂಟರ್‌ನೆಟ್‌ ಕೌಶಲ್ಯ ಇದ್ದರೆ ಆನ್‌ಲೈನ್‌ ತರಬೇತಿ ಕೂಡ ನೀಡುವವರಿದ್ದಾರೆ.

 ಹಣ ಉಳಿತಾಯಕ್ಕೆ ಇನ್ನೊಂದು ಮಾರ್ಗ- ಒಂದೇ ಬಾರಿಗೆ ವಸ್ತುಗಳ ಖರೀದಿ. ದೊಡ್ಡ ದೊಡ್ಡ ಸಾಧನಗಳನ್ನು ಖರೀದಿಸುವಾಗ ಜಾಗರೂಕರಾಗಿರಬೇಕು. ಜಾಣ ಮಹಿಳೆಯರು ತಾವು  ಹಾಕಿದ ಯೋಜನೆಗಳ ಪ್ರಕಾರವೇ ವಸ್ತುಗಳನ್ನು ಖರೀದಿಸುತ್ತಾರೆ. ನಾಜೂಕಾಗಿ ಉಳಿತಾಯ ಮಾಡಿ ಯಶಸ್ವಿಯಾಗಿ ಸಂಸಾರ ನಡೆಸುತ್ತಾರೆ.

 ಇಷ್ಟರಲ್ಲೇ ಕೇಂದ್ರ ಮತ್ತು ರಾಜ್ಯ ಬಜೆಟ್‌ಗಳು ಮಂಡನೆಯಾಗಲಿವೆ. ಪುರುಷರಂತೆ ಮಹಿಳೆಯರ ದೃಷ್ಟಿಯೂ ಈಗ ಅತ್ತ ನೆಟ್ಟಿದೆ. ಸಂಸಾರವನ್ನು ಸುಸೂತ್ರವಾಗಿ ಸಾಗಿಸಲು, ಉಳಿತಾಯವನ್ನು ಇನ್ನಷ್ಟು ಹೆಚ್ಚಿಸಲು ಬಜೆಟ್‌ ನೆರವಿನ ಹಸ್ತ ಚಾಚಬಹುದೇ? ಮಹಿಳೆಯರ ಸಬಲೀಕರಣಕ್ಕೆ ಪೂರಕವಾಗಿ ನಿಲ್ಲಬಹುದೇ? ಉತ್ತರಕ್ಕಾಗಿ ಮಹಿಳೆಯರು ಶುಭ ಸುದ್ದಿಯ ನಿರೀಕ್ಷೆಯಲ್ಲಿದ್ದಾರೆ.

ಒಂಟಿ ಮಹಿಳೆಯರು ಏನು ಮಾಡಬಹುದು?
  ಇಂದು ನಮ್ಮ ನಡುವೆ ಒಂಟಿ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರಲ್ಲಿ ಅವಿವಾಹಿತೆಯರಿ ರಬಹುದು, ವಿಚ್ಛೇದಿತರೂ ಇರಬಹುದು. ತಮ್ಮ ಭವಿಷ್ಯಕ್ಕಾಗಿ ಅವರು ನ್ಯಾಷನಲ್‌ ಪೆನ್ಶನ್‌ ಸ್ಕೀಮ್‌ (ಎನ್‌ಪಿ ಎಸ್‌) ಅಥವಾ ಪಿಪಿಎಫ್ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬಹುದು. ಪಿಪಿಎಫ್ನಲ್ಲಿ ಶೇ. 7-9ರಷ್ಟು ಬಡ್ಡಿ ಕೂಡ ಲಭ್ಯ. ಇದಲ್ಲದೆ ಹೆಚ್ಚಿನ ಅನುಕೂಲತೆಗಳುಳ್ಳ ಮ್ಯೂಚುವಲ್‌ ಫ‌ಂಡ್‌ ಕೂಡ ಇವೆ. ಇವುಗಳಿಗೆಲ್ಲ ತೆರಿಗೆ ರಿಯಾಯತಿಯೂ ಲಭ್ಯ. ಇವು ಸುರಕ್ಷಿತವೂ ಹೌದು. ಅದಲ್ಲವಾದಲ್ಲಿ ಸುರಕ್ಷಿತವಾದ ಕಡಿಮೆ ಮೊತ್ತದ ಹೂಡಿಕೆ ಕೂಡ ಮಾಡಬಹುದು. ಅಗತ್ಯವಿದ್ದರೆ ಆರ್ಥಿಕ ಸಲಹೆಗಾರರ ನೆರವು ಪಡೆದುಕೊಳ್ಳಬಹುದು. ಟರ್ಮ್ ಇನ್ಸೂರೆನ್ಸ್‌ನೂ° ಮಾಡಿಸಿಕೊಳ್ಳಬಹುದು. ಆದರೆ ಪ್ರತಿ ತಿಂಗಳು ಹಣ ಹೂಡಿಕೆ, ಉಳಿತಾಯವನ್ನು ಪುನರ್‌ಪರಿಶೀಲಿಸುವುದನ್ನು ಮರೆಯಬಾರದು.

ಖರ್ಚಿಗೂ ಒಂದು ಮಿತಿ ಇರಲಿ
ಹೊರಗೆ ದುಡಿವ ಮಹಿಳೆ. ಕೈ ತುಂಬಾ ಸಂಬಳ ಬರಿ¤ದೆ ಅಂತ ಸಿಕ್ಕಸಿಕ್ಕಂತೆ ಖರ್ಚು ಮಾಡ್ತಾ ಹೋದ್ರೆ ತಿಂಗಳ ಕೊನೆಯಲ್ಲಿ ದುಡ್ಡು ಎಲ್ಲಿ ಹೋಯ್ತು ಅಂತ ಲೆಕ್ಕಕ್ಕೇ ಸಿಗುವುದಿಲ್ಲ. ಹೂಡಿಕೆ, ಪ್ಲಾನಿಂಗ್‌ಗೆ ವೇಳೆ ಇಲ್ಲವೆಂದಾದರೆ ನುರಿತ ಆರ್ಥಿಕ ಸಲಹೆಗಾರರನ್ನು ಭೇಟಿ ಆಗುವುದು ಒಳಿತು. ನಿಮ್ಮ ವಯಸ್ಸು, ಮಕ್ಕಳು, ಕೆಲಸದ ಪರಿಸ್ಥಿತಿ ನೋಡಿಕೊಂಡು ವಾರ್ಷಿಕ ಗುರಿಯನ್ನು ಹಾಕಿಕೊಳ್ಳಬೇಕು. ನಿವೃತ್ತಿಯ ನಂತರದ ಬದುಕಿಗೆ ಪಿಪಿಎಫ್, ಎನ್‌ಪಿಎಸ್‌ ಯೋಜನೆಯಲ್ಲಿ ಹೂಡಿಕೆ ಮಾಡಿಕೊಂಡರೆ ಒಳ್ಳೆಯದು. ಇವುಗಳಿಗೆ ವಿನಾಯತಿಯೂ ಲಭ್ಯ. ಮಕ್ಕಳ ವಿದ್ಯಾಭ್ಯಾಸ, ಮದುವೆಗಾಗಿ ವಿವಿಧ ಬಗೆಯ ಉಳಿತಾಯ, ಆಭರಣ ಖರೀದಿ ಮುಂತಾದ ಯೋಜನೆಗಳನ್ನು ಹಾಕಿಕೊಳ್ಳುವುದು ಒಳ್ಳೆಯದು. ಇನ್ನೂ ಅವಿವಾಹಿತೆಯರಾಗಿದ್ರೆ ಸಂಬಳ ಬರುತ್ತೆ, ಜವಾಬ್ದಾರಿ ಕಡಿಮೆ ಅಂದುಕೊಳ್ಳಬೇಡಿ. ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ, ಮದುವೆ, ಮನೆ ಖರೀದಿಗೆ ದುಡ್ಡು ಬೇಕಾಗಿ ಬರಬಹುದು. ಆರೋಗ್ಯ ಸಮಸ್ಯೆಯೂ ಎದುರಾಗಬಹುದು. ಬ್ಯಾಂಕ್‌ ಫಿಕ್ಸೆಡ್‌ ಡಿಪಾಸಿಟ್‌, ಪೋಸ್ಟ್‌ ಆಫೀಸ್‌ ಠೇವಣಿಗಳು,  ಮ್ಯೂಚುವಲ್‌ ಫ‌ಂಡ್‌ ಮುಂತಾದ ಅಲ್ಪಾವಧಿಯ ಹೂಡಿಕೆಗಳತ್ತ ಗಮನ ಹರಿಸಬಹುದು.

ಕಾರು ಕೊಳ್ಳಲೋ ಅಥವಾ ಮನೆ ಫ್ಲಾಟ್‌ ಖರೀದಿಸಲೋ ದೀರ್ಘಾವಧಿಯ ಗುರಿಗಳನ್ನು ಹಾಕಿಕೊಳ್ಳಿ. ಒಳ್ಳೆಯ ಈಕ್ವಿಟಿ ಮ್ಯೂಚುವಲ್‌ ಫ‌ಂಡ್‌, ಡೆಟ್‌ ಮ್ಯೂಚುವಲ್‌ ಫ‌ಂಡ್‌ನ‌ಲ್ಲಿ ಹಣ ತೊಡಗಿಸಿಕೊಳ್ಳಬಹುದು.

 ರಾಜೇಶ್ವರಿ ಜಯಕೃಷ್ಣ

Advertisement

Udayavani is now on Telegram. Click here to join our channel and stay updated with the latest news.

Next