ಬೆಂಗಳೂರು: ಗೃಹಿಣಿಯೊಬ್ಬರು 4ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಕೊತ್ತನೂರು ದಿಣ್ಣೆಯ ನಿವಾಸಿ ಸೋನು ಪೂಜಾರಿ (33) ಮೃತ ಮಹಿಳೆ. ಪುಟ್ಟೇನಹಳ್ಳಿಯ ಕೊತ್ತನೂರು ದಿಣ್ಣೆಯ 4 ಅಂತಸ್ತಿನ ಮನೆಯಲ್ಲಿ ನಿರಂಜನ್ ಪೂಜಾರಿ ಹಾಗೂ ಸೋನು ಪೂಜಾರಿ ದಂಪತಿ ವಾಸಿಸುತ್ತಿದ್ದರು. ಕೆಲಸದ ಹಿನ್ನೆಲೆಯಲ್ಲಿ ನಿರಂಜನ್ ಮುಂಬೈಗೆ ತೆರಳಿದ್ದರು. ಮನೆಯಲ್ಲಿ ಒಬ್ಬರೇ ಇದ್ದಾಗ ಮಂಗಳವಾರ ಮುಂಜಾನೆ 5 ಗಂಟೆಗೆ ಮನೆಯ ಮಹಡಿಗೆ ತೆರಳಿ 4ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ. ಇದು ಆಕಸ್ಮಿಕವಾಗಿ ಸಂಭವಿಸಿದೆಯೋ ಅಥವಾ ಆತ್ಮಹತ್ಯೆಯೋ ಎಂಬುದು ತಿಳಿದುಬಂದಿಲ್ಲ.
ಸ್ಥಳೀಯರು ಕೊಟ್ಟ ಮಾಹಿತಿ ಆಧರಿಸಿ ಸ್ಥಳಕ್ಕೆ ಧಾವಿಸಿದ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ನಿರಂಜನ್ ಪೂಜಾರಿ ಅವರಿಗೆ ವಿಷಯ ತಿಳಿಸಿದ್ದಾರೆ. ಇವರ ಸಾವಿಗೆ ಸದ್ಯಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೋನು ಸೋಮವಾರ ತಡರಾತ್ರಿ 1 ಗಂಟೆ ಸುಮಾರಿಗೆ ಯಾರೊಂದಿಗೋ ಮೊಬೈಲ್‌ನಲ್ಲಿ ಮಾತನಾಡುತ್ತಾ ಜಗಳ ಮಾಡುತ್ತಿದ್ದರು ಎಂದು ನೆರೆ-ಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರು ಎಲ್ಲ ಆಯಮಗಳಲ್ಲೂ ತನಿಖೆ ನಡೆಸುತ್ತಿದ್ದು, ಆತ್ಮಹತ್ಯೆ ಮಾಡಲು ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.