Advertisement

House robbery: ಅರಸೀಕೆರೆಯಿಂದ ರೈಲಿನಲ್ಲಿ ಬಂದು ಮನೆಗಳ್ಳತನ

11:04 AM Jul 31, 2024 | Team Udayavani |

ಬೆಂಗಳೂರು: ಶೋಕಿ ಜೀವನಕ್ಕಾಗಿ ಅರಸೀಕೆರೆಯಿಂದ ಬೆಂಗಳೂರಿಗೆ ಬಂದು ಕದ್ದ ಬೈಕ್‌ ನಲ್ಲಿ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ ರೌಡಿಶೀಟರ್‌ ಸಹಚರ ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಅರಸೀಕೆರೆಯ ಶೋಯಿಬ್‌ ಪಾಷಾ (29) ಬಂಧಿತ. ಆರೋಪಿಯಿಂದ 8 ಲಕ್ಷ ರೂ. ಮೌಲ್ಯದ 110 ಗ್ರಾಂ ಚಿನ್ನಾಭರಣ ಹಾಗೂ 2 ಲ್ಯಾಪ್‌ಟಾಪ್‌, 1 ಬೈಕ್‌ ವಶಕ್ಕೆ ಪಡೆಯಲಾಗಿದೆ.

ಇತ್ತೀಚೆಗೆ ಠಾಣೆ ವ್ಯಾಪ್ತಿಯ ಚಿಕ್ಕಬಾಣವಾರದ ವಿನಾಯಕ ಲೇಔಟ್‌ ನಿವಾಸಿಯೊಬ್ಬರು ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದರು. ಈ ವೇಳೆ ಮನೆಗೆ ನುಗ್ಗಿರುವ ಆರೋಪಿ 50 ಗ್ರಾಂ ಚಿನ್ನಾಭರಣ ಮತ್ತು 1 ಲ್ಯಾಪ್‌ ಟಾಪ್‌ ಕಳವು ಮಾಡಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರೈಲನಲ್ಲಿ ಬಂದು ಕಳ್ಳತನ: ಅರಸೀಕೆರೆಯಿಂದ ರೈಲಿನಲ್ಲಿ ಬರುತ್ತಿದ್ದ ಆರೋಪಿ, ನೆಲಮಂಗಲದ ರೈಲ್ವೆ ನಿಲ್ದಾಣ ಸಮೀಪದ ಪಾರ್ಕಿಂಗ್‌ ಸ್ಥಳದಲ್ಲಿ ನಿಲುಗಡೆ ಮಾಡಿದ್ದ ಕದ್ದ ಬೈಕ್‌ನಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರುತಿಸುತ್ತಿದ್ದ. ನಂತರ ಸಂಜೆ ಅಥವಾ ಮಧ್ಯಾಹ್ನದ ವೇಳೆಗೆ ಆ ಮನೆಯ ಬೀಗ ಮುರಿದು ಕಳ್ಳತನ ಮಾಡಿ, ಬಳಿಕ ಬೈಕ್‌ ಅನ್ನು ಮತ್ತೆ ಅದೇ ಪಾರ್ಕಿಂಗ್‌ ಸ್ಥಳದಲ್ಲಿ ನಿಲುಗಡೆ ಮಾಡಿ ಅರಸೀಕೆರೆಗೆ ರೈಲಿನಲ್ಲೇ ಪರಾರಿಯಾಗುತ್ತಿದ್ದ. ಇತ್ತೀಚೆಗೆ ದಾಖಲಾದ ಪ್ರಕರಣದಲ್ಲಿ ಆರೋಪಿಗಾಗಿ ಶೋಧಿಸುವಾಗ ನೆಲಮಂಗಲದ ಕುಣಿಗಲ್‌ ಬೈಪಾಸ್‌ ಬಳಿ ಓಡಾಡುತ್ತಿದ್ದ ಮಾಹಿತಿ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯ ಬಂಧನದಿಂದ ಸೋಲದೇವನಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದ 5 ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.

ರೌಡಿಶೀಟರ್‌ ಬಾಬು ಶಿಷ್ಯನಾಗಿದ್ದ ಆರೋಪಿ: ರಾಜಗೋಪಾಲನಗರದಲ್ಲಿ 10 ವರ್ಷಗಳ ಹಿಂದೆ ಆರೋಪಿ ಶೋಯಿಬ್‌ ವಾಸವಾಗಿದ್ದು, ಸಣ್ಣ-ಪುಟ್ಟ ಕೆಲಸ ಮಡಿಕೊಂಡು ಜೀವನ ನಡೆಸುತ್ತಿದ್ದ. ಈ ನಡುವೆ ರೌಡಿಶೀಟರ್‌ ಬಾಬು ಎಂಬಾತನ ಸಹಚರನಾಗಿ ಸೇರಿ ಕೊಂಡು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗು ತ್ತಿದ್ದ. ಹೀಗಾಗಿ ಈತನ ವಿರುದ್ಧ ಹತ್ತಾರು ಪ್ರಕರಣಗಳು ದಾಖಲಾಗುತ್ತಿದ್ದಂತೆ ಅರಸೀಕೆ ರೆಗೆ ಪರಾರಿಯಾಗಿ, ಮೊಬೈಲ್‌ ರಿಪೇರಿ ಅಂಗಡಿ ಇಟ್ಟುಕೊಂಡಿದ್ದ. ಇದರೊಂದಿಗೆ ಬೆಂಗಳೂರಿಗೆ ಬಂದು ಮನೆ ಕಳ್ಳತನ ಮಾಡುವುದನ್ನು ಕರಗತ ಮಾಡಿಕೊಂಡಿದ್ದ ಎಂದು ಪೊಲೀಸರು ಹೇಳಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next