Advertisement

ಬೋಳಂತೂರಿನಲ್ಲಿ ಮನೆ ದೋಚಿದ ಪ್ರಕರಣ: ಶೀಘ್ರದಲ್ಲೇ ಆರೋಪಿಗಳ ಬಂಧನ?

11:26 PM Jan 06, 2025 | Team Udayavani |

ಬಂಟ್ವಾಳ/ವಿಟ್ಲ: ತಾಲೂಕಿನ ಬೋಳಂತೂರಿನ ನಾರ್ಶದ ಉದ್ಯಮಿಯ ಮನೆಯಿಂದ ಇ.ಡಿ. ಅಧಿಕಾರಿಗಳ ಸೋಗಿನಲ್ಲಿ ಹಣ ದೋಚಿದ ಪ್ರಕರಣದ ಆರೋಪಿಗಳ ಪತ್ತೆಗೆ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಪೊಲೀಸರು ವಿವಿಧ ಮಾರ್ಗಗಳಲ್ಲಿ ನಿರಂತರವಾಗಿ ಸಿಸಿಕೆಮರಾಗಳ ಪರಿಶೀಲನೆ ನಡೆಸುತ್ತಿದ್ದಾರೆ. ಇದುವರೆಗೆ ಯಾವುದೇ ಸುಳಿವು ಪತ್ತೆಯಾಗಿಲ್ಲವಾದರೂ, ಆರೋಪಿಗಳನ್ನು ಶೀಘ್ರ ಪತ್ತೆಹಚ್ಚುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

Advertisement

ಬಂಟ್ವಾಳ ಡಿವೈಎಸ್‌ಪಿ ಎಸ್‌.ವಿಜಯಪ್ರಸಾದ್‌ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ ಹಾಗೂ ಪಿಎಸ್‌ಐಗಳ ತಂಡಗಳು ತನಿಖೆ ಕಾರ್ಯ ನಡೆಸುತ್ತಿದ್ದು, ಒಂದು ತಂಡ ಕಾಸರಗೋಡು ಭಾಗದಲ್ಲಿ ತನಿಖೆ ನಡೆಸುತ್ತಿದೆ. ಆ ತಂಡವೂ ಸಿಸಿಕೆಮರಾಗಳನ್ನೇ ಪರಿಶೀಲಿಸುತ್ತಿದೆ.ಈ ಹಿಂದೆ ಹಲವು ಪ್ರಕರಣಗಳನ್ನು ಭೇದಿಸಿದ ತಂಡದಲ್ಲಿದ್ದ ಪರಿಣಿತರನ್ನೇ ಈ ತಂಡಗಳಿಗೂ ಆಯ್ಕೆ ಮಾಡಲಾಗಿದೆ.

ಕೋಟ್ಯಂತರ ರೂ.ಗಳ ಟಾರ್ಗೆಟ್‌ ಸಾಧ್ಯತೆ
2024ರ ಜೂನ್‌ 21ರಂದು ರಾತ್ರಿ ಮಂಗಳೂರಿನ ಉಳಾಯಿಬೆಟ್ಟು ಪೆರ್ಮಂಕಿಯ ಉದ್ಯಮಿಯ ಮನೆಗೆ ದರೋಡೆಕೋರರು ನುಗ್ಗಿ ಹಣವನ್ನು ದೋಚಿದ್ದು, ಆರೋಪಿಗಳು 100ರಿಂದ 300 ಕೋ.ರೂ. ಸಿಗಬಹುದು ಎಂದು ದರೋಡೆಗೆ ಆಗಮಿಸಿದ್ದರು ಎಂದು ಪೊಲೀಸರು ತಿಳಿಸಿದ್ದರು. ಹೀಗಾಗಿ ಈ ಪ್ರಕರಣದಲ್ಲೂ ಆರೋಪಿಗಳ ತಂಡ ಕೋಟ್ಯಂತರ ರೂ.ಗಳ ಬೇಟೆಗಾಗಿ ಬಂದಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಆದರೆ ಹಿಂದಿನ ಪ್ರಕರಣದಲ್ಲಿ ಚಿನ್ನಾಭರಣಗಳನ್ನೂ ದೋಚಲಾಗಿತ್ತು. ನಾರ್ಶದಲ್ಲಿ ಮಾತ್ರ ಕೇವಲ ನಗದನ್ನು ಮಾತ್ರ ಕೊಂಡೊಯ್ದಿದ್ದಾರೆ.

ಪೆರ್ಮಂಕಿ ಪ್ರಕರಣದಲ್ಲಿ ಉದ್ಯಮಿಯ ಆಪ್ತನೇ ದರೋಡೆಕೋರರಿಗೆ ಮಾಹಿತಿ ನೀಡಿದ್ದು, ಈ ಪ್ರಕರಣದಲ್ಲೂ ದರೋಡೆಯ ತಂಡಕ್ಕೆ ಅದೇ ರೀತಿ ಯಾರಾದರೂ ಮಾಹಿತಿ ನೀಡಿರಬಹುದೇ ಎಂಬ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ.

ಅನಾಥ ಕಾರು ಪತ್ತೆ ವದಂತಿ:
ಪೊಲೀಸರ ನಿರಾಕರಣೆ
ದರೋಡೆ ನಡೆಸಿದ ಪ್ರಕರಣಕ್ಕೆ ಬಳಸಿದ ಕಾರನ್ನು ನಿರ್ಜನ ಪ್ರದೇಶದಲ್ಲಿ ಪತ್ತೆಹಚ್ಚಲಾಗಿದೆ ಎಂಬ ಸುದ್ದಿ ಸೋಮವಾರ ಬೆಳಗ್ಗೆ ಹರಿದಾಡಿತ್ತಾದರೂ ಅದನ್ನು ಪೊಲೀಸರು ನಿರಾಕರಿಸಿದ್ದಾರೆ. ಕಲ್ಲಡ್ಕದಿಂದ ಮಂಗಳೂರು ಕಡೆಗೆ ಹೋದ ಕಾರು ಟೋಲ್‌ ಗೇಟ್‌ ಮೂಲಕ ಸಾಗಿ ಮತ್ತೆ ವಿಟ್ಲ ಕಡೆಗೆ ಆಗಮಿಸಿ ಪೆರ್ಲ ಬದಿಯಡ್ಕ ರಸ್ತೆಯಲ್ಲಿ ವಾಹನವನ್ನು ಬಿಟ್ಟು ಬೇರೆ ವಾಹನ ಬಳಸಿ ಪರಾರಿಯಾಗಿರಬಹುದು ಎಂದು ಸುದ್ದಿ ಹಬ್ಬಿಸಲಾಗಿತ್ತು. ಆದರೆ ಪೊಲೀಸ್‌ ಇಲಾಖೆ ಇದನ್ನು ಸ್ಪಷ್ಟವಾಗಿ ನಿರಾಕರಿಸಿದ್ದು, ಕಾರು ಪತ್ತೆಯಾಗಿಲ್ಲ ಎಂದು ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next