Advertisement

ಮೊದಲ ಸಲ ಮನೆ ಮಾಡೋರಿಗೆ ಇಲ್ಲಿದೆ ಗಿಫ್ಟ್

12:32 AM May 30, 2017 | Karthik A |

ನಗರದಲ್ಲಿ ವಾಸಿಸುವ ಬಡವರಿಗೆ  ಮನೆ ಕಟ್ಟಲು ಸಾಲ ಸಿಗಲಿ ಎನ್ನುವ ಕಾರಣಕ್ಕೇ ಕೇಂದ್ರ ಸರ್ಕಾರ ಇದೇ 2015ರ ಜೂನ್‌ 17 ರಂದು ಪ್ರಧಾನ ಮಂತ್ರಿ ಆವಾಸ್‌ ಯೋಜನಾ ಎನ್ನುವ ಮನೆಸಾಲ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯ ಆಶಯದಂತೆ 2022ರ ಒಳಗೆ ದೇಶಾದ್ಯಂತ 2 ಕೋಟಿ ಮನೆ ನಿರ್ಮಿಸುವ ಕನಸು ಮೋದಿಯವರದು. ಅದಕ್ಕೆಂದೇ ಮೂರು ಹಂತದ ಯೋಜನೆಯೂ ಸಿದ್ಧವಾಗಿದೆ.

Advertisement

ಬದುಕಿನ ದೊಡ್ಡ ಕನಸು, ಸ್ವಂತ ಸೂರು ಮಾಡಿಕೊಳ್ಳಬೇಕು ಎಂಬುದು.  ಇವತ್ತಿನ ಪರಿಸ್ಥಿತಿಯಲ್ಲಿ ಈ ರೀತಿಯ ಕನಸು ಕಾಣುವುದು ಕೂಡ ದುಬಾರಿ. ಭೂಮಿಯ ಬೆಲೆ ಗಗನಮುಖೀಯಾಗಿರುವುದೇ ಇದಕ್ಕೆ ಕಾರಣ. ಬ್ಯಾಂಕುಗಳೇನೋ ಮನೆ ಕಟ್ಟಲು ಸಾಲ ನೀಡುತ್ತಿವೆ. ಹಾಗಂತ, ಹೋದವರಿಗೆಲ್ಲ ಅಲ್ಲಿ ಸಾಲ ಸಿಗುವುದಿಲ್ಲ ಅನ್ನೋದು ಅಷ್ಟೇ ದಿಟ. ಈ ನಿಟ್ಟಿನಲ್ಲಿ ನಗರದಲ್ಲಿ ವಾಸಿಸುವ ಬಡವರಿಗೆ  ಮನೆ ಕಟ್ಟಲು ಸಾಲ ಸಿಗಲಿ ಎನ್ನುವ ಕಾರಣಕ್ಕೇ ಕೇಂದ್ರ ಸರ್ಕಾರ ಇದೇ 2015ರ ಜೂನ್‌ 17 ರಂದು ಪ್ರಧಾನ ಮಂತ್ರಿ ಆವಾಸ್‌ ಯೋಜನಾ ಎನ್ನುವ ಮನೆಸಾಲ ಯೋಜನೆಯನ್ನು ಘೋಷಿಸಿದೆ. 

ಈ ಯೋಜನೆಯ ಆಶಯದಂತೆ 2022ರ ಒಳಗೆ ದೇಶಾದ್ಯಂತ 2 ಕೋಟಿ ಮನೆ ನಿರ್ಮಿಸುವ ಕನಸು ಮೋದಿಯವರದು. ಅದಕ್ಕೆಂದೇ ಮೂರು ಹಂತದ ಯೋಜನೆಯೂ ಸಿದ್ಧವಾಗಿದೆ. ಮೊದಲ ಹಂತದ ಯೋಜನೆ 2015ರಿಂದ 2017ರ ನಡುವೆ ದೇಶದ 100 ಆಯ್ದ ನಗರಗಳಲ್ಲಿ ಮನೆ ನಿರ್ಮಿಸಲು ಸಾಲ ನೀಡುವುದು, ಎರಡನೇ ಹಂತ 2017 ರಿಂದ 2019ರ ಒಳಗೆ ಇನ್ನೂ 200 ನಗರಗಳ ಸೇರ್ಪಡೆ. ಮೂರನೆ ಹಂತ, 2019ರಿಂದ ಆರಂಭವಾಗಿ 2022ರ ಕೊನೆಯ ಹೊತ್ತಿಗೆ ಇನ್ನುಳಿದ ಎಲ್ಲಾ ನಗರಗಳಲ್ಲಿ ಒಟ್ಟು 2 ಕೋಟಿ ಮನೆ ನಿರ್ಮಿಸಲು ಮನೆಸಾಲ ನೀಡುವ ಯೋಜನೆ ಇದು.

ಆರ್ಥಿಕ ವರ್ಗೀಕರಣ
ಈ ಯೋಜನೆಯಲ್ಲಿ ಎರಡು ವರ್ಗವಿದೆ. ವಾರ್ಷಿಕ ಮೂರು ಲಕ್ಷದ ಒಳಗಿನ ಆದಾಯದವರನ್ನು ಎಕನಾಮಿಕಲಿ ವೀಕರ್‌ ಸೆಕ್ಷನ್‌(ಇಡಬ್ಲ್ಯುಎಸ್‌) ಹಾಗೂ ಅದಕ್ಕೂ ಮೇಲ್ಪಟ್ಟು ಆರು ಲಕ್ಷದೊಳಗಿನ ವಾರ್ಷಿಕ ವರಮಾನದವರು ಲೋ ಇನ್‌ಕಂ ಗ್ರೂಪ್‌ (ಎಲ್‌ಇಜಿ). ಮೊದಲನೆ ವರ್ಗದವರು ಗರಿಷ್ಟ 30 ಚ ಮೀ. ಮನೆ ಕಟ್ಟಬಹುದು. ಎರಡನೆ ವರ್ಗದವರು ಗರಿಷ್ಟ 60 ಚ.ಮೀ ಮನೆ ನಿರ್ಮಿಸಲು ಸಾಲ ಸಿಗಲಿದೆ. ಈ ಅಳತೆಯ ಮನೆಯಲ್ಲಿ ಮೂಲಭೌತ ಸೌಲಭ್ಯಗಳು ಇರಲೇಬೇಕು. ಇದಕ್ಕೂ ದೊಡ್ಡದಾದ ಮನೆಯನ್ನು ನಿರ್ಮಿಸಬಹುದು. ಆದರೆ ಹೆಚ್ಚುವರಿ ಜಾಗಕ್ಕೆ ಸಹಾಯಧನ ಸಿಗುವುದಿಲ್ಲ.

ಸಹಾಯಧನ ಹೇಗೆ?
ಮನೆಯ ಸಾಲಕ್ಕೆ ಶೇ 6.5ರಷ್ಟು ಬಡ್ಡಿಯ ಸಹಾಯಧನ. ಅರ್ಥ ವ್ಯವಸ್ಥೆಯಲ್ಲಿ ನೆಟ್‌ ಪ್ರಸೆಂಟ್‌ ವ್ಯಾಲ್ಯೂ (ಎನ್‌ಪಿ) ಎನ್ನುವ ಸೂತ್ರ ಬಳಸಿ ಶೇ.9 ರಷ್ಟು ರಿಯಾಯಿತಿ. ಈ ಸಹಾಯಧನವನ್ನು ಸಾಲ ನೀಡುವ ಸಂಸ್ಥೆಗಳಿಗೆ ಸರ್ಕಾರ ನೀಡುತ್ತದೆ. ಈ ಬಡ್ಡಿ ಸಹಾಯಧನವನ್ನು ಸಾಲ ನೀಡುವ ಸಂಸ್ಥೆಯು ಸಾಲಗಾರನ ಸಾಲದ ಖಾತೆಯ ಅಸಲಿಗೆ ಜಮಾ ಮಾಡಬೇಕು.  ಬ್ಯಾಂಕುಗಳು ಮನೆ ಕಟ್ಟುವಾಗ ಹೇಗೆ ಹಂತಹಂತವಾಗಿ ಸಾಲ ಬಿಡುಗಡೆ ಮಾಡುತ್ತವೆಯೋ,  ಅದೇ ಪ್ರಕಾರ ಗರಿಷ್ಠ ನಾಲ್ಕು ಕಂತುಗಳಲ್ಲಿ ಬ್ಯಾಂಕುಗಳು ನ್ಯಾಷನಲ್‌ ಹೌಸಿಂಗ್‌ ಬ್ಯಾಂಕಿನಿಂದ ಸಹಾಯಧನವನ್ನು ಸಾಲದ ಅಸಲಿಗೆ ಜಮಾಮಾಡುತ್ತವೆ. ಈ ಸಹಾಯಧನವನ್ನು ಕಳೆದು ಉಳಿಯುವ ಮೊತ್ತದ ಬಡ್ಡಿ ಯೊಂದಿಗೆ ಸಾಲಗಾರ ಕಂತನ್ನು ಕಟ್ಟಬೇಕು. ಆರಂಭದಲ್ಲಿ ಈ ಬಡ್ಡಿ ಸಹಾಯಧನವನ್ನು 15 ವರ್ಷಗಳವರೆಗೆ ಕೊಡಲಾಗುತ್ತಿತ್ತು. ಜನವರಿ 2017ರಿಂದ 20ವರ್ಷಗಳ ಕಂತುಗಳಿಗೆ ವಿಸ್ತರಿಸಲಾಗಿದೆ.

Advertisement

ಉದಾಹರಣೆಗೆ ನೀವು 6 ಲಕ್ಷ ಮನೆ ಸಾಲ ಪಡೆದಿದ್ದೀರಿ ಅಂದುಕೊಳ್ಳಿ. ಈಗಿನ ಮನೆ ಸಾಲಗಳಿಗೆ ಸಾಮಾನ್ಯವಾಗಿ ಬ್ಯಾಂಕು ಹಾಕುವ ಬಡ್ಡಿದರ ಶೇ9. ಆ ಪ್ರಕಾರ ನೀವು ಪ್ರತಿ ತಿಂಗಳು 20 ವರ್ಷದ ಅವಧಿಗೆ ಕಟ್ಟಬೇಕಾದ ಕಂತು ರೂ.5398.  ಅಂದರೆ 20 ವರ್ಷ ಅವಧಿಯಲ್ಲಿ ನೀವು ಕಟ್ಟುವ ಬಡ್ಡಿ 6.95 ಲಕ್ಷ. ಆರು ಲಕ್ಷ ಸಾಲಕ್ಕೆ 20 ವರ್ಷ ಅವಧಿಗೆ ಶೇ.6.50 ಬಡ್ಡಿ ಸಹಾಯಧನದ‌ ಪ್ರಕಾರ (ಎನ್‌ಪಿ ಕ್ಯಾಲ್ಯುಕೇಟರ್‌ ಆಧಾರ) ದೊರೆಯುವ ಮೊತ್ತ ರೂ.267000. ಈ ಮೊತ್ತವನ್ನು ನೇರವಾಗಿ ಆರು ಲಕ್ಷ ಅಸಲಿನಲ್ಲಿ ಕಳೆಯಲಾಗುತ್ತದೆ. ಆಗ ಉಳಿಯುವ 3.33 ಲಕ್ಷ ಸಾಲಕ್ಕೆ ಶೇ.9ರಂತೆ ಗ್ರಾಹಕ ಕಟ್ಟಬೇಕಾದ ಕಂತು ರೂ.2996. ಅಂದರೆ 20 ವರ್ಷದಲ್ಲಿ ಒಟ್ಟು ಕಟ್ಟುವ ಬಡ್ಡಿ ಕೇವಲ 3.86 ಲಕ್ಷ.

ಸಾಲ ಎಲ್ಲಿ ಸಿಗುತ್ತದೆ?
ಎಲ್ಲಾ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು, ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕುಗಳು ಸಾಲ ನೀಡಬಹುದು. ಸಾಲದ ಅರ್ಜಿಯನ್ನು ಆನ್‌ಲೈನ್‌ ಮೂಲಕವಾಗಲಿ ಅಥವಾ ಸ್ಥಳೀಯ ಸಂಸ್ಥೆಗಳಾದ ಪುರಸಭೆ, ನಗರಸಭೆಯಲ್ಲಿ ರೂ.250/- ಪಾವತಿಸಿ ಪಡೆಯಬಹುದು. ಸಾಮಾನ್ಯವಾಗಿ ಸರ್ಕಾರಿ ನೌಕರರಾಗಿದ್ದಲ್ಲಿ, ಇತರೆ ಉದ್ಯೋಗಿಗಳು, ವ್ಯಾಪಾರಿಗಳು ಇನ್‌ಕಂಟ್ಯಾಕ್ಸ್‌ ರಿಟರ್ನ್ಸ್ ಹೊಂದಿರುವುದರಿಂದ ವರಮಾನದ ಪುರಾವೆಯಾಗಿ ಅದನ್ನು ನೀಡಬಹುದು. ವ್ಯವಸಾಯಗಾರರು, ಕೂಲಿ ಕಾರ್ಮಿಕರು ಸ್ವಯಂ ದೃಢೀಕೃತ ಅಥವಾ ಅಫಿಡೆವಿಟ್‌ ದೃಢೀಕರಣ ಪತ್ರ ಸಲ್ಲಿಸಬಹುದು. ಅವರು ಘೋಷಿಸಿದ ವರಮಾನ ಇದೆಯೇ ಎಂದು ಖಾತ್ರಿಪಡಿಸಿಕೊಳ್ಳುವ ಜವಾಬ್ದಾರಿ ಬ್ಯಾಂಕಿನದ್ದಾಗಿದೆ.

ಪ್ರೊಸೆಸಿಂಗ್‌ ಫೀ
ಈ ಸಾಲಕ್ಕೆ ಯಾವುದೇ ಪ್ರೊಸೆಸಿಂಗ್‌ ಫೀ ನೀಡುವ ಅಗತ್ಯವಿಲ್ಲ. ಸರ್ಕಾರವೇ 3,000ರೂ. ಪೊ›ಸೆಸಿಂಗ್‌ ಫೀ ನೀಡುತ್ತದೆ. ಆದರೆ ಮನೆಯ ಕಾಗದ ಪತ್ರಗಳನ್ನು ಬ್ಯಾಂಕಿಗೆ ಅಡಮಾನ ಇಡಬೇಕಿರುವುದರಿಂದ ಅದಕ್ಕೆ ರಾಜ್ಯ ಸರ್ಕಾರ ನಿಗದಿಪಡಿಸಿದ ಸ್ಟ್ಯಾಂಪ್‌ ಖರ್ಚನ್ನು ಸಾಲಗಾರನೇ ಭರಿಸಬೇಕು ಅಥವಾ ರಾಜ್ಯ ಸರ್ಕಾರ ಇದಕ್ಕೆ ರಿಯಾಯಿತಿ ಕೊಡಬಹುದಾಗಿದೆ.

ಯಾರಿಗೆ ಸಾಲ?
ನಗರ ಪ್ರದೇಶದಲ್ಲಿ ವಾಸಿಸುವ ಆರ್ಥಿಕವಾಗಿ ಹಿಂದುಳಿದಿರುವ ಅದರಲ್ಲೂ ಸಾಧ್ಯವಾದಷ್ಟು ಪರಿಶಿಷ್ಟ ಜಾತಿ, ಪಂಗಡದ ಕುಟುಂಬವೊಂದರ ಹೆಂಗಸಿನ ಹೆಸರಿನಲ್ಲಿ ಸಾಲ ಪಡೆಯಬಹುದು. ಒಂದು ಕುಟುಂಬವೆಂದರೆ ಗಂಡ, ಹೆಂಡತಿ ಮತ್ತು ಮದುವೆಯಾಗದ ಮಕ್ಕಳು ಎನ್ನುವ ವ್ಯಾಖ್ಯಾನ ಈ ಯೋಜನೆಯದು. ಕುಟುಂಬದಲ್ಲಿ ಹೆಣ್ಣು ಇರದಿದ್ದಲ್ಲಿ ಗಂಡಸು ಸಹಾ ಸಾಲ ಪಡೆಯಲು ಅರ್ಹನಾಗುತ್ತಾನೆ. ಈ ಕುಟುಂಬದ ಯಾವೊಬ್ಬ ಸದಸ್ಯನ ಹೆಸರಿನಲ್ಲಿಯೂ ಎಲ್ಲಿಯೂ ಪಕ್ಕಾ ಖಾತೆಯ ಮನೆ ಇರಬಾರದು. ವರಮಾನವನ್ನು ಕುಟುಂಬದ ಎಲ್ಲಾ ಸದಸ್ಯರ ಗಳಿಕೆಯ ಒಟ್ಟು ಮೊತ್ತದಲ್ಲಿ ಲೆಕ್ಕಹಾಕಲಾಗುವುದು.

– ರಾಮಸ್ವಾಮಿ ಕಳಸವಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next