Advertisement
ಕರೆಗಂಟೆಯ ಸದ್ದಾಗಿ, ಯಾರೆಂದು ಬಾಗಿಲು ತೆರೆದು ನೋಡಿದರೆ, ಸ್ಟೈಲಾಗಿ ರೆಡಿಯಾಗಿದ್ದ ಹದಿನೆಂಟು ವರ್ಷದ ಹುಡುಗಿಯೊಬ್ಬಳು ನಿಂತಿದ್ದಳು. ಯಾರಿರಬಹುದು ಇವಳು ಅಂತ ಯೋಚಿಸುತ್ತಿರುವಾಗಲೇ, ಆ ಹುಡುಗಿ, “ಅಕ್ಕ, ನೀನು ಮನೆಕೆಲಸಕ್ಕೆ ಜನ ಬೇಕಂತ ಸೀತಕ್ಕನತ್ರ ಹೇಳಿದ್ಯಂತಲ್ಲ. ಅವಳು ನನಗೆ ಹೇಳಿದಳು. ಏನೇನು ಕೆಲಸ ಮಾಡಬೇಕಂತ ಹೇಳಕ್ಕ. ಮನೆಯಲ್ಲಿ ನೀವು ಎಷ್ಟು ಜನ ಇದ್ದೀರಾ? ಮನೆ ದೊಡ್ಡದಾಗಿ ಕಾಣ್ತಿದೆ. ದೊಡ್ಡ ಮನೇನ ಗುಡಿಸಿ, ಒರೆಸೋಕೆ ಕಷ್ಟವಾಗುತ್ತೆ. ನಾನು ಮನೆ ಕೆಲಸ ಮಾಡುವ ಮನೆಗಳಲ್ಲಿ ಜಾಸ್ತಿ ಪಾತ್ರೆ ತೊಳೆಯೋಕೆ ಹಾಕಬಾರದು. ಸೀದು ಹೋದ ಪಾತ್ರೆಯನ್ನು ನಾನು ತೊಳೆಯೋದೇ ಇಲ್ಲ. ಯಾಕಂದ್ರೆ, ನಾನು ನಾಲ್ಕು ಮನೆ ಕೆಲಸ ಮಾಡೋದ್ರಿಂದ ಕೈನೋವು ಬರುತ್ತೆ. ಬಟ್ಟೆ ಒಗೆಯುವುದಿಲ್ಲ. ಎರಡು ರೂಮಿಗಿಂತ ಜಾಸ್ತಿ ರೂಮುಗಳಿರೋ ಮನೆಗಳಲ್ಲಿ, ವಾರಕ್ಕೆ ಎರಡು ಬಾರಿ ಗುಡಿಸಿ- ಒರೆಸಿ ಮಾಡ್ತೀನಿ ಅಷ್ಟೆ. ನಿಮ್ಮ ಮನೆಯಲ್ಲೂ ನಾನು ಹಾಗೇ ಮಾಡುವುದು. ಕೆಲಸ ಮಾಡುವಾಗ ಅದು ಸರಿಯಿಲ್ಲ, ಇದು ಸರಿಯಲ್ಲ ಅನ್ನಬಾರದು. ಭಾನುವಾರ ಕೆಲಸಕ್ಕೆ ಬರೋದಿಲ್ಲ. ಎÇÉಾ ಮನೆಯವೂ ಭಾನುವಾರ ರಜೆ ಕೊಡುತ್ತಾರೆ. ಒಂದು ಕೆಲಸಕ್ಕೆ ಸಾವಿರ ರೂಪಾಯಿಯಂತೆ ಕೊಡಬೇಕು. ಹಾಗೆ ಕೊಟ್ಟರೆ ನಿಮ್ಮ ಮನೆಯಲ್ಲಿ ಕೆಲಸ ಮಾಡುತ್ತೇನೆ. ಪಾತ್ರೆ ತೊಳೆಯೋದಾದ್ರೆ, ಎಷ್ಟು ಪಾತ್ರೆ ಅಂತ ಲೆಕ್ಕ ಹಾಕಿ ಹೆಚ್ಚಿಗೆ ಸಂಬಳ ಕೇಳುತ್ತೇನೆ. ರಂಗೋಲಿ ಹಾಕಬೇಕೆಂದರೆ 800 ರೂ. ಎಕ್ಸ್‌ಟ್ರಾ. ಒಂದೇ ಸಲ ಎಲ್ಲ ಪಾತ್ರೆ ತೊಳೆಯೋಕೆ ಹಾಕಬೇಕು. ಪದೇ ಪದೆ ಅದೇ ಕೆಲಸ ಮಾಡೋಕೆ ಆಗಲ್ಲ. ಪಾತ್ರೆ ತೊಳೆಯಲು ವಿಮ್ ಸೋಪ್ ಬೇಕು. ಎಲ್ಲರ ಮನೆಯಲ್ಲೂ ಅದನ್ನೇ ಯೂಸ್ ಮಾಡೋದು, ಇಲ್ಲಾಂದ್ರೆ ಅಲರ್ಜಿ ಆಗುತ್ತೆ. ಮನೆ ಗುಡಿಸಲು ಮಂಕಿ ಬ್ರ್ಯಾಂಡ್ ಪೊರಕೆ, ಒರೆಸೋಕೆ ದಪ್ಪ ಬಟ್ಟೆ ಬೇಕು. ಚೆನ್ನಾಗಿರೋ ಮ್ಯಾಪ್ ತನ್ನಿ. ಕುಳಿತು ಪಾತ್ರೆ ತೊಳೆಯೋಕೆ ಗಟ್ಟಿಯಾದ ಚಿಕ್ಕ ಸ್ಟೂಲ್ ತನ್ನಿ. ಎಣ್ಣೆ ಜಿಡ್ಡಿರುವ ಪಾತ್ರೆಗೆ ಬಿಸಿ ನೀರು ಕೊಡಬೇಕು. ದಿನಾ ಒಂದು ತಾಸು ಕೆಲಸ ಮಾಡಲು ತಿಂಗಳಿಗೆ ಐದು ಸಾವಿರ ಸಂಬಳ. ನನ್ನ ಕಂಡಿಷನ್ಸ್ ಇಷ್ಟೇ’ ಎಂದು ಒಂದೇ ಉಸಿರಿನಲ್ಲಿ ಎಲ್ಲ ವಿವರಗಳನ್ನೂ ಹೇಳಿದಳು. ಅವಳ ಮಾತು ಕೇಳಿಯೇ ನಾನು ಸುಸ್ತಾದೆ.
Related Articles
Advertisement
ಅದೊಂದು ದಿನ ನಾನು ಸೀದು ಹೋದ ಪಾತ್ರೆಯನ್ನು ತೊಳೆಯಲು ಹಾಕಿದ್ದಕ್ಕೆ, ನಮ್ಮ ಕೆಲಸದಾಕೆ ಪಾತ್ರೆ ತೊಳೆಯುವುದು ನಿಲ್ಲಿಸಿ, ಮರುದಿನದಿಂದ ಕೆಲಸಕ್ಕೆ ಬರುವುದನ್ನೇ ನಿಲ್ಲಿಸಿಬಿಟ್ಟಳು. ಆಕೆ ಯಾವತ್ತೂ ಜಿಡ್ಡಾದ ಪಾತ್ರೆಗಳನ್ನು ತೊಳೆದವಳೇ ಅಲ್ಲ. ಅವಳ ಕೈಗೆ ನೋವು ಮಾಡದಂಥ ಪಾತ್ರೆಗಳನ್ನಷ್ಟೇ ತೊಳೆಯುತ್ತಿದ್ದಳು. ಗುಡಿಸುವ ವಿಷಯದಲ್ಲೂ ಅಷ್ಟೇ; ನೆಲ ಗುಡಿಸುವುದು ಮಾತ್ರ ಅವಳ ಕೆಲಸ. ಗೋಡೆ ಬದಿಯಲ್ಲಿ ಗುಡಿಸು ಎಂದು ಅಪ್ಪಿತಪ್ಪಿಯೂ ಹೇಳಬಾರದು. ಹೀಗೆ ಸುಲಭದ ಕೆಲಸ ಮಾಡಿಕೊಂಡಿದ್ದಳು ಅವಳು. ಈಗಂತೂ ಕೆಲಸದವರು ಎರಡು ವರ್ಷ, ಒಂದು ಮನೆಯಲ್ಲಿ ಕೆಲಸ ಮಾಡಿದರೆ ಅದೇ ಹೆಚ್ಚು. ಐಟಿ- ಬಿಟಿಯವರು ಕಂಪನಿ ಬದಲಿಸಿದಂತೆ, ಇವರೂ ಮನೆ ಮನೆ ಬದಲಿಸುತ್ತಾರೆ. ಮಕ್ಕಳು ಚಿಕ್ಕವರೆಂದೋ ಅಥವಾ ತಮಗೆ ವಯಸ್ಸಾಯಿತೆಂದೋ ಕೆಲಸದವರನ್ನು ಇಟ್ಟುಕೊಂಡರೆ, ಅವರು ಬಿಟ್ಟು ಹೋಗದಂತೆ ಸಂಭಾಳಿಸುವುದೇ ಬಹುದೊಡ್ಡ ಸವಾಲು.
ವೇದಾವತಿ ಎಚ್.ಎಸ್.