ಬೆಂಗಳೂರು: ಮನೆಯಲ್ಲೇ ಮಾದಕ ವಸ್ತು ಕೆಟಾಮಿನ್ ತಯಾರು ಮಾಡಿ ಅಂತಾರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಜಾಲ ಹೊಂದಿದ್ದ ಮೈಸೂರು ಮೂಲದ ಆರೋಪಿ ಸೇರಿದಂತೆ ಇಬ್ಬರು ಮಾದಕ ವಸ್ತು ನಿಯಂತ್ರಣ ಘಟಕದ (ಎನ್‌ಸಿಬಿ) ಅಧಿಕಾರಿಗಳ ಬಲೆಗೆ ಬಿದ್ದಿದ್ದು, ಸುಮಾರು ಮೂರು ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತು ವಶಕ್ಕೆ ಪಡೆದಿದ್ದಾರೆ.
ಏ.30 ಮೆಜೆಸ್ಟಿಕ್‌ನ ಮೂವಿ ಲ್ಯಾಂಡ್ ಟಾಕೀಸ್ ಸಮೀಪದಲ್ಲಿ ಆರೋಪಿ ಶಿವರಾಜ್ ಅರಸ್ ಗೋಣಿಚೀಲವೊಂದರಲ್ಲಿ ಅಕ್ಕಿ ಚೀಲ ಇಟ್ಟು ಅದರೊಳಗಿನ ಪ್ಲಾಸ್ಟಿಕ್ ಕವರ್‌ನಲ್ಲಿ ಮಾದಕ ವಸ್ತು ಕೆಟಾಮಿನ್ ಇಟ್ಟು ಕಣ್ಣನ್‌ಗೆ ಮಾರಾಟ ಮಾಡಲು ಸಿದ್ಧತೆ ನಡೆಸಿದ್ದ. ಈ ಖಚಿತ ಮಾಹಿತಿ ಮೇರೆಗೆ ವಿಶೇಷ ಕಾರ್ಯಾಚರಣೆ ನಡೆಸಿದ ಎನ್‌ಸಿಬಿ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಲು ಮುಂದಾಗಿದ್ದು, ಆರೋಪಿ ಕಣ್ಣನ್‌ನನ್ನು ಸ್ಥಳದಲ್ಲೇ ಬಂಧಿಸಿದ್ದು, ಮತ್ತೂಬ್ಬ ಆರೋಪಿ ಶಿವರಾಜ್ ಅರಸ್ ತಪ್ಪಿಸಿಕೊಂಡಿದ್ದ. ಬಂಧಿತ ನಿಂದ 26 ಕೆ.ಜಿ. 750 ಗ್ರಾಂ ಕೆಟಾಮಿನ್ ವಶಪಡಿಸಿಕೊಳ್ಳಲಾಗಿತ್ತು.
ಅಧಿಕಾರಿಗಳ ಹತ್ಯೆಗೆ ಯತ್ನ: ಮತ್ತೂಬ್ಬ ಆರೋಪಿ ಶಿವರಾಜ್ ಅರಸ್ ಕಾರಿನಲ್ಲಿ ತಪ್ಪಿಸಿಕೊಳ್ಳಲು ಮುಂದಾಗಿದ್ದು, ಅದನ್ನು ತಡೆಯಲು ಮುಂದಾದ ಅಧಿಕಾರಿಗಳ ಮೇಲೆಯೇ ಕಾರನ್ನು ಹತ್ತಿಸಿ ಕೊಲೆಗೈಯಲು ಯತ್ನಿಸಿದ್ದಾನೆ. ಕೊನೆಗೆ ಆರೋಪಿಯ ಹಿನ್ನೆಲೆ ಮಾಹಿತಿ ಕಲೆ ಹಾಕಿದ ಅಧಿಕಾರಿಗಳು ಏ.1ರಂದು ಯಲಹಂಕದಲ್ಲಿ ಬಂಧಿಸಿದ್ದರು. ಈ ವೇಳೆ ತಾನು ಕೆಂಗೇರಿ ಹಾಗೂ ವಿದ್ಯಾನಗರದಲ್ಲಿ ಮನೆಗಳನ್ನು ಹೊಂದಿದ್ದು, ಕೆಂಗೇರಿ ಮನೆಯಲ್ಲೇ ಮಾದಕ ವಸ್ತು ಉತ್ಪಾದನೆ ಮಾಡುತ್ತಿರುವುದಾಗಿ ಹೇಳಿಕೆ ನೀಡಿದ್ದ.
ಮನೆಯಲ್ಲೇ ಕೆಟಾಮಿನ್ ತಯಾರಿ: ಶಿವರಾಜ್ ಅರಸ್‌ನ ಹೇಳಿಕೆಯಿಂದ ಅಚ್ಚರಿಗೊಂಡ ಎನ್‌ಸಿಬಿ ಅಧಿಕಾರಿಗಳು ಮೇ 2ರಂದು ಕೂಡಲೇ ಸ್ಥಳೀಯ ಪೊಲೀಸರು ಹಾಗೂ ಸಿಐಎಸ್‌ಎಫ್ ಸಮ್ಮುಖದಲ್ಲಿ ಆತನ ಮನೆಗೆ ಕರೆದೊಯ್ದಿದ್ದಾರೆ. ನಂತರ ನೆಲಮಳಿಗೆಯಲ್ಲಿ ತೆರೆದಿದ್ದ ರಹಸ್ಯ ಲ್ಯಾಬ್ ಮೇಲೆ ದಾಳಿ ನಡೆಸಿ, ಅಕ್ರಮವಾಗಿ ತಾಯಾರು ಮಾಡಿದ್ದ 24 ಕೆ.ಜಿ. 450 ಗ್ರಾಂ ಕೆಟಾಮಿನ್ ವಶಕ್ಕೆ ಪಡೆಯಲಾಗಿದೆ. ಅಲ್ಲದೆ, ಆರೋಪಿ ಕೆಟಾಮಿನ್ ಹಾಗೂ ಇತರೆ ಮಾದಕ ವಸ್ತುಗಳನ್ನು ತಯಾರು ಮಾಡುತ್ತಿರುವುದು ಕಂಡು ಬಂದಿದ್ದು, ಅವುಗಳನ್ನು ನೆರೆ ರಾಜ್ಯಗಳು ಹಾಗೂ ಅಂತಾರಾಷ್ಟ್ರೀಯ ಮಾದಕವಸ್ತು ಮಾರುಕಟ್ಟೆಗೆ ಸಾಗಾಟ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಆರೋಪಿಯ ಲ್ಯಾಬ್‌ನಲ್ಲಿ ಮಾದಕ ವಸ್ತು ತಯಾರು ಮಾಡಲು ಅಗತ್ಯವಿರುವ ರಾಸಾಯನಿಕ ವಸ್ತುಗಳು, ಬಾಯ್ಲರ್‌ಗಳು ಹಾಗೂ ಹಣ ಎಣಿಸುವ ಯಂತ್ರಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದರು.
Advertisement
ಮೈಸೂರು ಮೂಲದ, ಕೆಂಗೇರಿ ನಿವಾಸಿ ಶಿವರಾಜ್ ಅರಸ್ (36) ಮತ್ತು ಚೆನ್ನೈ ಮೂಲದ ಜೆ.ಕಣ್ಣನ್ (33) ಬಂಧಿತರು. ಆರೋಪಿಗಳಿಂದ 52 ಕೆ.ಜಿ.200 ಗ್ರಾಂ ತೂಕದ ಮಾದಕ ವಸ್ತು ಕೆಟಾಮಿನ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಇದರ ಮೌಲ್ಯ ಭಾರತದಲ್ಲಿ ಮೂರುವರೆ ಕೋಟಿ ರೂ.ಗೂ ಅಧಿಕ, ಅಂತಾರಾಷ್ಟ್ರೀಯ ಮಟ್ಟದಲ್ಲಿ 30-50 ಕೋಟಿ ರೂ. ಇದೆ ಎಂದು ಎಸಿಬಿ ಅಧಿಕಾರಿಗಳು ಅಂದಾಜಿಸಿದ್ದಾರೆ.
Related Articles
Advertisement
ಪ್ರಾಥಮಿಕ ಮಾಹಿತಿ ಪ್ರಕಾರ ಶಿವರಾಜ್ ಅರಸ್, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಕೇರಳ, ಮುಂಬೈ ಹಾಗೂ ಇತರೆ ರಾಜ್ಯಗಳಿಗೆ ಕೆಟಾಮಿನ್ ಸರಬರಾಜು ಮಾಡುತ್ತಿದ್ದು, ಕೆಲ ಅಂತಾರಾಷ್ಟ್ರೀಯ ಮಧ್ಯವರ್ತಿಗಳ ಜತೆ ನಿಕಟ ಸಂಪರ್ಕದಲ್ಲಿರುವುದು ಕಂಡು ಬಂದಿದ್ದು, ಹೆಚ್ಚಿನ ತನಿಖೆಗಾಗಿ ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ವಶಕ್ಕೆ ಪಡೆಯಲಾಗಿದೆ.
ಹೈದ್ರಾಬಾದ್‌ನಲ್ಲಿ ಕಾರ್ಖಾನೆ: ಶಿವರಾಜ್ ಮತ್ತೂಂದು ಸ್ಫೋಟಕ ಮಾಹಿತಿ ನೀಡಿದ್ದು, ತನ್ನೊಡನೆ ಸಂಪರ್ಕದಲ್ಲಿರುವ ಕೆಲ ವ್ಯಕ್ತಿಗಳು ಹೈದ್ರಾಬಾದ್‌ನಲ್ಲಿ ಮಾದಕ ವಸ್ತು ತಯಾರು ಮಾಡುವ ಸಣ್ಣ ಪ್ರಮಾಣದ ಕಾರ್ಖಾನೆಗಳನ್ನು ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾನೆ. ಈ ಸಂಬಂಧ ಹೈದ್ರಾಬಾದ್ ವಿಭಾಗದ ಎನ್‌ಸಿಬಿ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.
ದಕ್ಷಿಣ ಏಷ್ಯಾ ರಾಷ್ಟ್ರಗಳ ಜತೆ ಸಂಪರ್ಕ
ಶಿವರಾಜ್ ಅರಸ್‌ನ ಮಾದಕ ವಸ್ತು ಮಾರಾಟ ಜಾಲವನ್ನು ಭಾರತ ಮಾತ್ರ ವಲ್ಲದೆ, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲೂ ವಿಸ್ತರಿಸಿಕೊಂಡಿದ್ದಾನೆ. ಪ್ರಮುಖವಾಗಿ ಆಸ್ಟ್ರೇಲಿಯಾದ ಮಾದಕ ವಸ್ತು ಮಧ್ಯವರ್ತಿಗಳ ಜತೆ ನಿಕಟ ಸಂಪರ್ಕ ಹೊಂದಿದ್ದಾನೆ. ಅಲ್ಲದೆ, ಹೆಮ್ಮಿಗೆಪುರದಲ್ಲಿ ಬೃಹತ್ ಮನೆಯೊಂದನ್ನು ಹೊಂದಿದ್ದಾನೆ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದರು.