ಶಿರ್ವ: ಚಿಮಿಣಿ ದೀಪದ ಬೆಳಕಿನಲ್ಲಿ ಓದಿ ಸಾಧನೆಗೈದ ಸಾಧಕಿ ಅಕ್ಷಿತಾ ಹೆಗ್ಡೆ ಅವರಿಗೆ ದಾನಿಗಳ ನೆರವಿನಿಂದ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ ಅವರ ನೇತೃತ್ವದಲ್ಲಿ 8.9 ಲಕ್ಷ ರೂ. ವೆಚ್ಚದಲ್ಲಿ ಶಿರ್ವ ಎಂಎಸ್‌ಆರ್‌ಎಸ್‌ಕಾಲೇಜು ಬಳಿ ನೂತನ ಮನೆ ನಿರ್ಮಾಣಗೊಂಡಿದ್ದು, ಗಣ್ಯರ ಉಪಸ್ಥಿತಿಯಲ್ಲಿ ಜ. 14ರಂದು ಗೃಹಪ್ರವೇಶ ಮತ್ತು ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಎಂಎಸ್‌ಆರ್‌ಎಸ್ ಕಾಲೇಜಿನ ಅಲುಮ್ನಿ ಅಸೋಸಿಯೇಶನ್ ಮುಂಬಯಿಯ ಅಧ್ಯಕ್ಷ ಉದಯ ಸುಂದರ್ ಶೆಟ್ಟಿ ಅವರು ಅಕ್ಷಿತಾಗೆ ಜಾಗದ ದಾಖಲೆ ಪತ್ರ ಹಸ್ತಾಂತರಿಸಿದರು. ಉದ್ಯಮಿ ಶಿರ್ವ ನಡಿಬೆಟ್ಟು ನಿತ್ಯಾನಂದ ಹೆಗ್ಡೆ ಮನೆಯ ಕೀಲಿಕೈ ಹಸ್ತಾಂತರಿಸಿದರು.
ಉದಯವಾಣಿ ವರದಿ :
ಚಿಮಿಣಿ ದೀಪದ ಬೆಳಕಿನ ಪ್ರತಿಭೆಯ ಅಸಹಾಯಕ ಪರಿಸ್ಥಿತಿಯ ವರದಿ 2018ರ ಜು. 24ರಂದು ಉದಯವಾಣಿ ಮುಖಪುಟದಲ್ಲಿ ಪ್ರಕಟಿಸಿತ್ತು. ಅಮೆರಿಕದ ಉದ್ಯಮಿ ಪಿಲಾರು ಸಂತೋಷ ಶೆಟ್ಟಿ, ಅಟ್ಟಿಂಜೆ ಪ್ರದೀಪ್ ಶಂಭು ಶೆಟ್ಟಿ, ಶಿರ್ವ ನಡಿಬೆಟ್ಟು ಸಂಗೀತಾ ಹೆಗ್ಡೆ ಮತ್ತು ಎಂಎಸ್‌ಆರ್‌ಎಸ್ ಕಾಲೇಜು ಅಲುಮ್ನಿ ಅಸೋಸಿಯೇಶನ್ ಮುಂಬಯಿ, ಸ್ಥಳೀಯ ಮತ್ತು ದೇಶ-ವಿದೇಶಗಳ ದಾನಿಗಳ ಸಹಕಾರದೊಂದಿಗೆ 12.93 ಲ.ರೂ. ವೆಚ್ಚದಲ್ಲಿ ಜಾಗ ಸಹಿತ ಮನೆ, ಬೋರ್‌ವೆಲ್ ಮತ್ತು ಆವರಣ ಗೋಡೆ ನಿರ್ಮಾಣಗೊಂಡಿದೆ.
ಶಾಸಕ ಲಾಲಾಜಿ ಆರ್. ಮೆಂಡನ್, ಸುರೇಶ್ ಶೆಟ್ಟಿ ಗುರ್ಮೆ, ದಾನಿಗಳಾದ ಅಟ್ಟಿಂಜೆ ಶಂಭು ಶೆಟ್ಟಿ, ಸೈಮನ್ ಡಿ’ಸೋಜಾ, ಜೆಸಿಂತಾ ಪೌಲ್ ಮಚಾದೋ, ಪಿಲಾರು ಗಂಗಾಧರ ಶೆಟ್ಟಿ, ಸಂದೀಪ್ ಶೆೆಟ್ಟಿ ಭೂತಬೆಟ್ಟು ಉಪಸ್ಥಿತರಿದ್ದರು.
ವೇ|ಮೂ| ಕುತ್ಯಾರು ಕೇಂಜ ಶ್ರೀಧರ ತಂತ್ರಿ ಅವರು ಗೃಹಪ್ರವೇಶದ ಪ್ರಾಯೋಜಕತ್ವ ವಹಿಸಿದ್ದು, ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಉದಯವಾಣಿ ವರದಿಯಿಂದಾಗಿ ದಾನಿಗಳು ಮತ್ತು ಎಲ್ಲರ ಸಹಕಾರದೊಂದಿಗೆ ಮನೆ ನಿರ್ಮಾಣಗೊಂಡಿದೆ. ದಾನಿಗಳ ಕಾಳಜಿಗೆ ಆಭಾರಿಯಾಗಿದ್ದೇನೆ. ಕಲಿತು ಉದ್ಯೋಗ ಗಳಿಸಿದ ಬಳಿಕ ನನ್ನಿಂದಾದ ಸಹಾಯವನ್ನು ಸಮಾಜಕ್ಕೆ ನೀಡುವ ಸಂಕಲ್ಪ ತೊಟ್ಟಿದ್ದೇನೆ.
– ಅಕ್ಷಿತಾ ಹೆಗ್ಡೆ