Advertisement

ಜ್ಯುವೆಲ್ಲರಿ ಪಕ್ಕದಲ್ಲಿ ಬಾಡಿಗೆಗೆ ಮನೆ ಪಡೆದು ಗೋಡೆ ಕೊರೆದು 5 ಕೆ.ಜಿ. ಚಿನ್ನ ಕಳ್ಳತನ!

10:09 AM Apr 21, 2022 | Team Udayavani |

ಬೆಂಗಳೂರು: ಜೆ.ಪಿ. ನಗರ 1ನೇ ಹಂತದಲ್ಲಿರುವ ಪ್ರಿಯದರ್ಶಿನಿ ಜ್ಯುವೆಲ್ಲರಿ ಅಂಗಡಿ ಗೋಡೆ ಕೊರೆದ ದುಷ್ಕರ್ಮಿಗಳು ಬರೋಬ್ಬರಿ 2.50 ಕೋಟಿ ರೂ. ಮೌಲ್ಯದ 5 ಕೆ.ಜಿ. ಚಿನ್ನಾಭರಣ ದೋಚಿರುವ ಘಟನೆ ನಡೆದಿದೆ.

Advertisement

ಜೆ.ಪಿ. ನಗರದ ಶಾಕಾಂಬರಿ ನಗರದ ನಿವಾಸಿ ರಾಜು ದೇವಾಡಿಗ ಕೊಟ್ಟ ದೂರಿನ ಆಧಾರದ ಮೇಲೆ ಜೆ.ಪಿ. ನಗರ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ದೆಹಲಿ ಮೂಲದ ಇಬ್ಬರು ಆರೋಪಿಗಳಿಗೆ ಶೋಧ ಕಾರ್ಯ ಆರಂಭಿಸಿದ್ದಾರೆ.

ರಾಜು ದೇವಾಡಿಗ 2010ರಲ್ಲಿ ಶಾಕಾಂಬರಿ ನಗರದಲ್ಲಿ ತಮ್ಮ ಸ್ವಂತ ಕಟ್ಟಡದ 2ನೇ ಮಹಡಿಯಲ್ಲಿ ಪ್ರಿಯದರ್ಶಿನಿ ಜ್ಯುವೆಲ್ಲರಿ ಆರಂಭಿಸಿದ್ದರು. ಪ್ರತಿದಿನ ರಾತ್ರಿ 9 ಗಂಟೆಯವರೆಗೆ ವ್ಯಾಪಾರ ಮಾಡಿಕೊಂಡು ಚಿನ್ನಾಭರಣಗಳನ್ನು ಲಾಕರ್‌ಗಳಲ್ಲಿ ಇಟ್ಟು ಅಂಗಡಿಗೆ ಬೀಗ ಹಾಕಿಕೊಂಡು ಹೋಗುತ್ತಿದ್ದರು. ದೆಹಲಿ ಮೂಲದ ಇಬ್ಬರು ಒಂದು ತಿಂಗಳ ಹಿಂದೆ ಆರೋಪಿಗಳು ಇಲ್ಲಿ ಮನೆ ಬಾಡಿಗೆಗೆ ಪಡೆದಿದ್ದರು. ನಂತರ ಪ್ರಿಯದರ್ಶಿನಿ ಜ್ಯುವೆಲ್ಲರಿಗೆ ಕನ್ನ ಹಾಕಲು ಸಂಚು ರೂಪಿಸಿದ್ದರು. ಅದರಂತೆ ಕಳೆದ 2 ವಾರಗಳಿಂದ ಚಿನ್ನದಂಗಡಿಗೆ ಹೊಂದಿಕೊಂಡಿರುವ ಗೋಡೆಯನ್ನು ಮನೆಯೊಳಗಿನಿಂದ ಕಬ್ಬಿಣದ ಚೂಪಾದ ವಸ್ತು ಹಾಗೂ ಹಾರೆಯಿಂದ ಹಂತ-ಹಂತವಾಗಿ ಕೊರೆಯಲು ಆರಂಭಿಸಿದ್ದರು. ಏ.17ರಂದು ರಾಜು ಜ್ಯುವೆಲ್ಲರ್ಸ್‌ನಲ್ಲಿ ವ್ಯಾಪಾರ ಮುಗಿಸಿ ಚಿನ್ನಾಭರಣಗಳನ್ನು ಕಬ್ಬಿಣದ ಲಾಕರ್‌ನಲ್ಲಿ ಇಟ್ಟು ಹೋಗಿದ್ದರು. ಇತ್ತ ಗೋಡೆ ಕೊರೆದು ಜ್ಯುವೆಲ್ಲರಿಯೊಳಗೆ ನುಗ್ಗಿದ ಆರೋಪಿಗಳು, ಮೊದಲಿಗೆ ಅಲ್ಲಿದ್ದ ಸಿಸಿ ಕ್ಯಾಮೆರಾ ಸಂಪರ್ಕ ಕಡಿತಗೊಳಿಸಿದ್ದರು. ನಂತರ 2.50 ಕೋಟಿ ರೂ. ಮೌಲ್ಯದ 5 ಕೆ.ಜಿ. ಚಿನ್ನಾಭರಣವನ್ನು ದೋಚಿದ್ದಾರೆ ಎಂದು ದೂರು ನೀಡಿದ್ದಾರೆ.

ಇದನ್ನೂ ಓದಿ:ದನದ ಜತೆ ಕೋಳಿ, ನಾಯಿಮರಿ ಕದ್ದೊಯ್ದ ದುರುಳರು!; ಕಾರ್ಕಳದಲ್ಲಿ ನಡೆದ ಘಟನೆ

ಹಿಂದೆಯೂ ವಿಫಲ ಯತ್ನ

Advertisement

2015ರಲ್ಲೂ ಪ್ರಿಯದರ್ಶಿನಿ ಜ್ಯುವೆಲ್ಲರಿ ಅಂಗಡಿಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆದಿತ್ತು. ತಡರಾತ್ರಿ 3 ಗಂಟೆಗೆ ಜ್ಯುವೆಲ್ಲರಿ ಪಕ್ಕದಲ್ಲಿ ಮೋರಿ ಮೂಲಕ ಗೋಡೆ ಕೊರೆದು ಚಿನ್ನದ ಅಂಗಡಿಗೆ ಪ್ರವೇಶಿಸಲು ಕಳ್ಳರು ಯತ್ನಿಸಿದ್ದರು. ಗೋಡೆ ಕೊರೆಯುತ್ತಿದ್ದ ಶಬ್ದ ಕೇಳಿಸಿಕೊಂಡಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದರು. ಜೆ.ಪಿ. ನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಮೂವರನ್ನು ಬಂಧಿಸಿದ್ದರು.

ಮನೆ ಮಾಲೀಕರಿಗೆ ನಕಲಿ ವಿಳಾಸ

ಏ.18ರಂದು ಬೆಳಗ್ಗೆ 10 ಗಂಟೆಗೆ ರಾಜು ಜ್ಯುವೆಲ್ಲರಿ ತೆರೆದಾಗ ಕಳ್ಳತನವಾದ ಸಂಗತಿ ಬೆಳಕಿಗೆ ಬಂದಿದೆ. ಕೂಡಲೇ ರಾಜು ಜೆ.ಪಿ. ನಗರ ಠಾಣೆಗೆ ಈ ಕುರಿತು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬೆರಳಚ್ಚು ಹಾಗೂ ಶ್ವಾನದಳದ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ. ಆರೋಪಿಗಳು ಬಾಡಿಗೆಗೆ ಪಡೆದಿದ್ದ ಮನೆ ಮಾಲೀಕರ ಬಳಿ ಆರೋಪಿಗಳು ಕೊಟ್ಟ ದಾಖಲೆಗಳನ್ನು ಪರಿಶೀಲಿಸಿದಾಗ ನಕಲಿ ದಾಖಲೆ ಕೊಟ್ಟಿರುವುದು ಪತ್ತೆಯಾಗಿದೆ. ಬಾಡಿಗೆಗೆ ಪಡೆದಿದ್ದ ಮನೆಯ ಮಾಲೀಕರಿಗೆ ದೆಹಲಿ ಹಾಗೂ ಉತ್ತರಾಖಂಡ್‌ನ‌ ವಿಳಾಸದ ನಕಲಿ ಆಧಾರ್‌ ಕಾರ್ಡ್‌ ನೀಡಿದ್ದರು. ಒಂದು ತಿಂಗಳಿನಿಂದ ಅಂಗಡಿಯಲ್ಲಿರುವ ಚಿನ್ನಾಭರಣ ಸೇರಿ ಇನ್ನಿತರ ಮಾಹಿತಿಯನ್ನು ಕಲೆ ಹಾಕಿದ್ದರು. ಖದೀಮರ ಬಂಧನಕ್ಕೆ ದಕ್ಷಿಣ ವಿಭಾಗದ ಡಿಸಿಪಿ ಹರೀಶ್‌ ಪಾಂಡೆ ವಿಶೇಷ 3 ತಂಡ ರಚನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next