ಭಾಲ್ಕಿ: ತಾಲೂಕಿನ ಕೋಸಂ, ಹಲಸಿ ತೂಗಾಂವ, ಕೊಂಗಳಿ ಗ್ರಾಮಗಳ ಸೇತುವೆಗಳಿಗೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ನೇತೃತ್ವದ ತಂಡ ಭೇಟಿ ನೀಡಿ ನೀರಿನ ಪ್ರಮಾಣ, ಮಳೆಯಿಂದ ಉಂಟಾದ ಹಾನಿ ಕುರಿತು ಪರಿಶೀಲಿಸಿದರು.
ನಂತರ ಕೋಸಂ ಗ್ರಾಮದಲ್ಲಿ ಮಳೆಗೆ ಮನೆ ಹಾನಿಗೀಡಾದ ಫಲಾನುಭವಿಗಳಾದ ಸರಸ್ವತಿ ವಿಶ್ವನಾಥ, ಕಲ್ಲಪ್ಪ ಮಲ್ಲಿಕಾರ್ಜುನ, ಮಾರುತಿ ದಶರಥಗೆ ಸ್ಥಳದಲ್ಲಿಯೇ ಹತ್ತು ಸಾವಿರ ರೂ.ಗಳ ಪರಿಹಾರದ ಚೆಕ್ ವಿತರಿಸಿದರು.
ನಂತರ ಗ್ರಾಮದ ಸರ್ಕಾರಿ ಶಾಲೆಯ ಕಟ್ಟಡ ಮೇಲ್ಛಾವಣಿ ಪರಿಶೀಲಿಸಿ, ಶಾಲೆಗೆ ಎರಡು ಕೋಣೆಗಳ ಮಂಜೂರು ಮಾಡುವ ಕುರಿತು ಮಾಹಿತಿ ಪಡೆದರು. ಅಲ್ಲಿಂದ ಹಲಸಿ ತೂಗಾಂವ, ಕೋಂಗಳಿ ಸೇತುವೆಗಳಿಗೆ ಭೇಟಿ ನೀಡಿ, ನೀರಿನ ಪ್ರಮಾಣ ಮತ್ತು ಹೊಲಗಳಲ್ಲಿ ನೀರು ನಿಂತು ಬೆಳೆ ಹಾನಿಯಾಗಿರುವುದು ವೀಕ್ಷಿಸಿದರು. ಸೇತುವೆಯ ಎರಡು ಭಾಗದ ಹೊಲಗಳಲ್ಲಿ ನೀರು ನೀತಿರುವ ಕುರಿತು ಅಳಲು ತೋಡಿಕೊಂಡ ರೈತರು ಪರಿಹಾರಕ್ಕೆ ಮೊರೆಯಿಟ್ಟರು.
ಕೊಂಗಳಿಯ ಬಾಜೀರಾವ, ತಾತ್ಯಾರಾವ, ಬಬ್ರುವಾಹನ, ಕೃಷ್ಣಾಜಿಯವರ ಮನೆ ಹಾನಿಯ ಪರಿಹಾರ ವಿತರಿಸಿದರು. ಹಲಸಿ ತುಗಾಂವ ಸೇತುವೆ ಮುಂಭಾಗದ ರಸ್ತೆಯ ಮೇಲೆ ನೀರು ಹರಿಯುತ್ತಿರುವುದರಿಂದ ತಾಲೂಕು ಕೇಂದ್ರ ಸೇರಿದಂತೆ ಇತರೆ ಗ್ರಾಮಗಳ ಸಂಪರ್ಕ ಕಡಿತಗೊಂಡಿರುವ ಕುರಿತು ಸಾರ್ವಜನಿಕರು ತಮ್ಮ ಅಳಲು ತೋಡಿಕೊಂಡರು.
ತಾಲೂಕಿನಲ್ಲಿ ಇದುವರೆಗೆ ಕೋಸಂ, ಕೊಂಗಳಿ ಒಳಗೊಂಡಂತೆ ಇತರೆಡೆಯ ಒಟ್ಟು 10 ಮನೆಗಳು ಬಿದ್ದಿವೆ. ಇಲ್ಲಿಯವರೆಗೆ ಒಟ್ಟು 30 ಮನೆಗಳಿಗೆ ಹಾನಿಯಾಗಿದೆ ಎಂದು ತಹಶೀಲ್ದಾರ್ ಕೀರ್ತಿ ವಾಲಕ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ ಬಾಬು, ಉಪ ವಿಭಾಗಾಧಿಕಾರಿ ರಮೇಶ, ಡಿವೈಎಸ್‌ಪಿ ಪೃಥ್ವಿಕ್ ಶಂಕರ, ತಹಶೀಲ್ದಾರ್ ಕೀರ್ತಿ ಚಾಲಕ ಇದ್ದರು.