ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ವಿಪರೀತ ಅನ್ನುವಷ್ಟು ಕುತೂಹಲವಿರುತ್ತದೆ. ಹೆಚ್ಚಿನ ಸಂದರ್ಭದಲ್ಲಿ ಕೆಟ್ಟ ಕುತೂಹಲ ಇರುತ್ತದೆ. ಹುಡುಗು ಬುದ್ಧಿ ಕೆಲವೊಮ್ಮೆ ಅನಾಹುತಗಳಿಗೂ ದಾರಿ ಮಾಡುವುದುಂಟು. ಅಂಥದ್ದೊಂದು ಸಂದರ್ಭದ ವಿವರಣೆ ಇಲ್ಲಿದೆ. ಒಮ್ಮೆ ನಮ್ಮ ಶಿಕ್ಷಕಿ ಮತ್ತು ಶಿಕ್ಷಕ ಇಬ್ಬರೂ ಯಾವುದೋ ಪಾಠದ ಬಗ್ಗೆ ಚರ್ಚಿಸುತ್ತಾ ಇದ್ದರು.
ನಾವು ಅವರನ್ನು ಅನುಮಾನದಿಂದ ನೋಡಿ, ಎಲ್ಲಾ ವಿದ್ಯಾರ್ಥಿಗಳು ಒಟ್ಟುಗೂಡಿ ಅವರಿದ್ದ ಕ್ಲಾಸ್ ರೂಮ್‌ಗೆ ಬೀಗ ಹಾಕಿಬಿಟ್ಟೆವು. ನಂತರ ಊರ ಜನರೆಲ್ಲರನ್ನೂ ಸೇರಿಸಿ ಅವರಿಗೆ ಛೀಮಾರಿ ಹಾಕಿಸಿದೆವು. ಆದರೆ, ಅವರು ನಮ್ಮ ಮೇಲೆ ಯಾವ ರೀತಿಯ ಕೋಪವನ್ನೂ ತೋರಿಸಲಿಲ್ಲ. ಎಂದಿನಂತೆ ತರಗತಿಯ ಪಾಠಗಳನ್ನು ಮಂದುವರಿಸಿದರು. ಆಗ ನಮಗೆ, ನಾವು ಮಾಡಿದ್ದು ತಪ್ಪು ಅನ್ನಿಸಿ, ಪಶ್ಚಾತ್ತಾಪವಾಯಿತು.
ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂದು ಆ ಗುರುಗಳೇ ಹೇಳಿ ಕೊಟ್ಟಿದ್ದರು. ಅದನ್ನು ಈ ಕಿವಿಯಲ್ಲಿ ಕೇಳಿ, ಆ ಕಿವಿಯಲ್ಲಿ ಬಿಟ್ಟು, ಗುರುಗಳಿಗೇ ಅವಮಾನ ಆಗುವಂಥ ಸಂದರ್ಭ ಸೃಷ್ಟಿಸಿದ್ದೆವು. ಆ ಮೂಲಕ ಗುರುಗಳು ನಮ್ಮ ಮೇಲೆ ಇಟ್ಟಿದ್ದ ನಂಬಿಕೆಯನ್ನು ಕಳೆದುಕೊಂಡೆವು. ಸ್ವಲ್ವ ದಿನಗಳ ನಂತರ ಗುರುಗಳು ಬೇರೂಂದು ಊರಿಗೆ ವರ್ಗಾವಣೆ ಮಾಡಿಸಿಕೊಂಡರು.
ಅವರ ಜಾಗಕ್ಕೆ ಬೇರೊಬ್ಬರು ಬಂದರೂ ಸಹ ಅವರು ನಮ್ಮನ್ನು ಮೊದಲಿನವರಂತೆ ಪ್ರೀತಿ-ಆದರಗಳಿಂದ ಕಾಣುತ್ತಿರಲಿಲ್ಲ. ಸರಿಯಾಗಿ ಪಾಠ ಮಾಡುತ್ತಿರಲಿಲ್ಲ. ಪರಿಣಾಮವಾಗಿ ನಾವು ಓದಿನಲ್ಲಿ ಹಿಂದೆ ಬಿದ್ದೆವು. ಆಗ ನಮಗೆ ನಮ್ಮ ತಪ್ಪಿನ ಅರಿವು ಇನ್ನೂ ಚೆನ್ನಾಗಾಯ್ತು. ಈಗಲೂ ನಮ್ಮ ಹಳೆಯ ಶಿಕ್ಷಕರು ಎಲ್ಲಿಯೇ ಸಿಕ್ಕಿದರೂ ತುಂಬಾ ಆತ್ಮೀಯವಾಗಿ, ಪ್ರೀತಿಯಿಂದ ಮಾತನಾಡಿಸುತ್ತಾರೆ.
ಹಳೆಯದನ್ನೆಲ್ಲಾ ಅವರು ಮರೆತುಬಿಟ್ಟಿದ್ದಾರೆ. ಆದರೆ, ಅವರನ್ನು ನೋಡಿದಾಗಲೆಲ್ಲ ನಮ್ಮ ಸಣ್ಣತನದ ನೆನಪಾಗಿ ಪಾಪಪ್ರಜ್ಞೆ ಕಾಡುತ್ತದೆ. ತಾಯಿಯಾದವಳು ಮಕ್ಕಳು ಏನೇ ಮಾಡಿದರೂ ಕ್ಷಮಿಸುತ್ತಾಳೆ. ಹಾಗೆಯೇ ಗುರುಗಳು ನಮ್ಮನ್ನು ಸ್ವಂತ ಮಕ್ಕಳಂತೆ ಕಂಡು ಕ್ಷಮಿಸಿದ್ದಾರೆ. ಆದರೂ ಅವರಲ್ಲಿ ಮತ್ತೂಮ್ಮೆ, ಮಗದೊಮ್ಮೆ, “ನಮ್ಮ ತಪ್ಪನ್ನು ಕ್ಷಮಿಸಿಬಿಡಿ ಗುರುಗಳೇ’ ಎಂದು ಕೇಳಿಕೊಳ್ಳಬೇಕು ಅನಿಸುತ್ತದೆ.
ಅವರನ್ನು ಪ್ರತ್ಯಕ್ಷ ಕಂಡಾಗ ಮಾತುಗಳೇ ಹೊರಡುವುದಿಲ್ಲ. ಅದಕ್ಕೆಂದೇ ಈ ಬರಹದಲ್ಲಿ ನನ್ನ ಭಾವನೆಗಳನ್ನೆಲ್ಲಾ ಹೇಳಿಕೊಂಡಿದ್ದೇನೆ. ನನ್ನ ಗುರುಗಳು ಖಂಡಿತಾ ಇದನ್ನು ಗಮನಿಸುತ್ತಾರೆ ಎಂದು ತಿಳಿದೇ ಕೇಳಿಕೊಳ್ಳುತ್ತಿದ್ದೇನೆ : “ಸಾರ್, ದುಡುಕಿನಿಂದ ನಾವು ತಪ್ಪು ಮಾಡಿಬಿಟ್ವಿ. ದಯವಿಟ್ಟು ಕ್ಷಮಿಸಿ…’
* ನಿರ್ಮಲಾ ಟಿ., ಹೊಸದುರ್ಗ