Advertisement
ಇದಕ್ಕೆ ಕಾರಣ ಸರಕಾರದ ಆಡಳಿತಾತ್ಮಕ ದೋಷ. ನಾಲ್ಕೈದು ಹಿಂದೆ ತಾಲೂಕು ಕೇಂದ್ರದಲ್ಲಿ ತಾ.ಪಂ. ಸುಪರ್ದಿಯಲ್ಲಿ ಇದರ ನಿರ್ವಹಣೆ ನಡೆಯುತ್ತಿತ್ತು. ಈಗ ಕೊಳವೆಬಾವಿಗಳ ನಿರ್ವಹಣಾ ಜವಾಬ್ದಾರಿಯನ್ನು ಗ್ರಾ.ಪಂ.ಗೆ ವಹಿಸಿಕೊಡಲಾಗಿದೆ. ಹಿಂದೆ ಕೈಪಂಪು ತುಂಡಾಗಿದ್ದರೆ, ಪಂಪು ಕೆಟ್ಟು ಹೋಗಿದ್ದರೆ ಹೀಗೆ ಎಲ್ಲೆಲ್ಲಿ ಸಮಸ್ಯೆ ಇದೆ ಎಂದು ತಿಳಿದುಬಂದ ಕೂಡಲೇ ಅಲ್ಲಿಗೆ ನಿರ್ವಹಣಾ ವ್ಯಕ್ತಿಗಳು ಹೋಗಿ ದುರಸ್ತಿ ಮಾಡುತ್ತಿದ್ದರು.
ಗ್ರಾ.ಪಂ. ಮಟ್ಟದಲ್ಲಿ ಕೊಳವೆಬಾವಿ ದುರಸ್ತಿ ಮಾಡುವ ವ್ಯಕ್ತಿಗಳ ಕೊರತೆ ಇದೆ. ಹಿಂದೆ ತಾಲೂಕು ಮಟ್ಟದಲ್ಲಿ ಒಂದಿಬ್ಬರು ಮಾನವ ಸಂಪನ್ಮೂಲ ವ್ಯಕ್ತಿಯನ್ನು ಗುರುತಿಸಿ ಇಡುತ್ತಿದ್ದರು. ಅವರಿಗೆ ತಿಳಿಸಿದಾಗ ಬಂದು ಮಾಡಿ ಹೋಗುತ್ತಿದ್ದರು. ಈಗ ಕೊಳವೆಬಾವಿಗಳ ಸಂಖ್ಯೆ ಹೆಚ್ಚಿದೆ. ಇನ್ನೊಂದೆಡೆ ಕೊಳವೆಬಾವಿ ದುರಸ್ತಿ ಮಾಡುವ ವ್ಯಕ್ತಿಗಳು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಕೆಟ್ಟು ಹೋದ ಕೊಳವೆಬಾವಿಯನ್ನು ಮುಟ್ಟುವವರು ಇಲ್ಲವಾಗಿದೆ. ಒಟ್ಟಾರೆ ಲಕ್ಷಾಂತರ ರೂ. ವೆಚ್ಚ ಮಾಡಿ ಕೊರೆಸಿದ ಕೊಳವೆಬಾವಿಗಳು ಪಾಳುಬಿದ್ದಿವೆ.
Related Articles
ಕೊಳವೆಬಾವಿಗಳು ಬಳಸುತ್ತಿದ್ದರೆ ಮಾತ್ರ ಅದರಿಂದ ಬರುವ ನೀರನ್ನು ಉಪಯೋಗಿಸುವುದು ಸಾಧ್ಯ. ಬಳಸದೆ ಇದ್ದರೆ ಕಬ್ಬಿಣದ ಕೊಳವೆಯಿಂದ ಕಬ್ಬಿಣದ ಅಂಶ ಸೇರಿ ನೀರು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಕೆಲವು ಬಾರಿ ಕೆಸರು ಸೇರಿಕೊಂಡು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇಂತಹ ನೀರನ್ನು ಹೊರಗೆ ಹಾಕಿದರೆ ಮಾತ್ರ ಕುಡಿಯಲು ಯೋಗ್ಯವಾಗಿರುತ್ತದೆ. ಇಂತಹ ಕೆಲಸ ನಡೆಯುತ್ತಿಲ್ಲವಾದ ಕಾರಣ ಕೊಳವೆಬಾವಿಗಳು ನಿರುಪಯುಕ್ತವಾಗಿವೆ. ಒಂದು ಕೊಳವೆಬಾವಿ ಅವಧಿ 10ರಿಂದ 15 ವರ್ಷ. ಹೀಗೆ ನಿರುಪಯುಕ್ತವಾಗಿದ್ದರೆ ಅದನ್ನು ಮರು ಉಪಯೋಗಗೊಳಿಸುವುದೂ ಕಷ್ಟಸಾಧ್ಯ.
Advertisement
ಗ್ರಾ.ಪಂಗೆ ವಹಿಸಿಕೊಡಲಾಗಿದೆ ಯಾರು ಬಳಕೆದಾರರೋ ಅವರೇ ಅದರ ನಿರ್ವಹಣಾ ಜವಾಬ್ದಾರಿ ವಹಿಸಿಕೊಳ್ಳುವುದು ಉತ್ತಮ. ಈ ಕಾರಣಕ್ಕಾಗಿ ಗ್ರಾ.ಪಂ.ಗೆ ವಹಿಸಿಕೊಡಲಾಗಿದೆ. ಎಲ್ಲೆಲ್ಲಿ ಸಮಸ್ಯೆ ಇದೆ ಎಂದು ತಿಳಿದು ಬಗೆಹರಿಸಲು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೂ ಸೂಚನೆ ಕೊಡಲಾಗಿದೆ. ಸಮನ್ವಯದ ದೃಷ್ಟಿಯಿಂದ ಸಮಸ್ಯೆ ಇದ್ದಲ್ಲಿ ಪರಿಹರಿಸಲು ಗಮನಹರಿಸುತ್ತೇವೆ.
– ಸಿಂಧು ಬಿ. ರೂಪೇಶ್, ಉಡುಪಿ ಜಿ.ಪಂ. ಸಿಇಒ. ಸಲಹೆ
ಪ್ರತಿ ತಾಲೂಕಿನಲ್ಲಿ ಕೊಳವೆಬಾವಿ ದುರಸ್ತಿಪಡಿಸುವ ಮಾನವ ಸಂಪನ್ಮೂಲ ಕೋಶ ಸಿದ್ಧಪಡಿಸಿ ಗ್ರಾ.ಪಂ.ಗಳಿಗೆ ಕಳುಹಿಸಿದರೆ ಅವರು ಅಗತ್ಯವಿದ್ದಾಗ ಅವರಿಗೆ ತಿಳಿಸಬಹುದು. ಈಗ ಕೊಳವೆಬಾವಿ ದುರಸ್ತಿಪಡಿಸುವ ಮಾನವ ಸಂಪನ್ಮೂಲದ ಕೊರತೆ ಇದೆ. ಹೀಗಾಗಿ ಪ್ರತಿ ಗ್ರಾ.ಪಂ.ನಲ್ಲಿರುವ ಕುಡಿಯುವ ನೀರಿಗೆ ಸಂಬಂಧಿಸಿದ ಸಿಬಂದಿಗೆ ಜಿಲ್ಲಾ ಅಥವಾ ರಾಜ್ಯ ಮಟ್ಟದಲ್ಲಿ ತರಬೇತಿ ಕೊಡಿಸಿದರೆ ಇವರನ್ನೇ ಕೊಳವೆಬಾವಿ ದುರಸ್ತಿಗೆ ಮಾನವ ಸಂಪನ್ಮೂಲವಾಗಿ ಬಳಸಿಕೊಳ್ಳಬಹುದು. ಸದ್ಯ ಈ ಕೆಲಸ ನಡೆಯುತ್ತಿಲ್ಲ. ಜಿಲ್ಲಾ ಮಟ್ಟದಲ್ಲಿ ಜಿ.ಪಂ. ಆಸಕ್ತಿ ವಹಿಸಿ ತರಬೇತಿ ಕಾರ್ಯಾಗಾರ ನಡೆಸಿದರೆ ಹೆಚ್ಚು ಅನುಕೂಲವಾಗುತ್ತದೆ ಎಂಬ ಅಭಿಪ್ರಾಯವಿದೆ. ಇಲ್ಲವಾದರೆ ನಮ್ಮದೇ ತೆರಿಗೆ ಹಣ ಪೋಲಾಗಿ ಹೋಗುತ್ತದೆ. – ಮಟಪಾಡಿ ಕುಮಾರಸ್ವಾಮಿ