ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿರುವಂತೆ ಇಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿಸಿದೆ.
ಈಶಾನ್ಯ ದೆಹಲಿಯ ಜಾಫರಬಾದ್ ಪ್ರದೇಶದಲ್ಲಿ ಬೈಕಿನಲ್ಲಿ ಆಗಮಿಸಿದ ಇಬ್ಬರು ವ್ಯಕ್ತಿಗಳು ಬಟ್ಟೆ ಅಂಗಡಿಯೊಂದರ ಮೇಲೆ ಎರಡು ಸುತ್ತು ಹಾಗೂ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಇವರಿಬ್ಬರೂ ಹೆಲ್ಮೆಟ್ ಗಳಿಂದ ತಮ್ಮ ಮುಖವನ್ನು ಮುಚ್ಚಿಕೊಂಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಆದರೆ ಈ ಘಟನೆಯ ಹಿಂದೆ ವೈಯಕ್ತಿಕ ದ್ವೇಷದ ಹಿನ್ನಲೆ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ತಾವು ಯಾರಿಗೂ ಹಣ ಕೊಡಲು ಬಾಕಿ ಇಲ್ಲ ಮತ್ತು ಯಾರೊಂದಿಗೂ ನಮಗೆ ದ್ವೇಷ ಇರಲಿಲ್ಲ ಎಂದು ಬಟ್ಟೆ ಅಂಗಡಿ ಮಾಲಿಕರು ಹೇಳಿಕೊಂಡಿದ್ದಾರೆ.
ಜಾಫರಬಾದ್ ನ ಮಾರುಕಟ್ಟೆ ಪ್ರದೇಶದಲ್ಲಿ ಇಬ್ಬರು ಗುಂಡು ಹಾರಿಸಿದ್ದಾರೆ ಎಂಬ ಮಾಹಿತಿ ಇಂದು ಮಧ್ಯಾಹ್ನ 1.30ರ ಸುಮಾರಿಗೆ ಪೊಲೀಸರಿಗೆ ಬರುತ್ತದೆ. ತಕ್ಷಣವೇ ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿದಾಗ ಹೆಲ್ಮೆಟ್ ಧರಿಸಿದ್ದ ಇಬ್ಬರು ಬೈಕಿನಲ್ಲಿ ಬಂದು ಈ ದಾಳಿ ನಡೆಸಿ ಹೋಗಿರುವ ಮಾಹಿತಿ ಲಭಿಸುತ್ತದೆ.
ಘಟನಾ ಸ್ಥಳದಿಂದ ಪೊಲೀಸರು ಖಾಲಿ ಬುಲೆಟ್ ಶೆಲ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಅಪರಾಧ ಮತ್ತು ಬೆರಳಚ್ಚು ತಜ್ಞರು ಸ್ಥಳದ ಪರಿಶೀಲನೆಯನ್ನು ನಡೆಸಿದ್ದಾರೆ. ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿರುವಂತೆ ಆಗಂತುಕ ಬೈಕ್ ಸವಾರರು ಬಟ್ಟೆ ಅಂಗಡಿಯನ್ನೇ ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದಾರೆ. ಹೆಚ್ಚಿನ ಮಾಹಿತಿಗಳು ತನಿಖೆಯ ಬಳಿಕವಷ್ಟೇ ಲಭ್ಯವಾಗಬೇಕಿದೆ.