Advertisement

ಮನೆಯಿಂದ ಮರೆಯಾಗುತ್ತಿರುವ ಹೌಂದೇ ರಾಯ್ನ ವಾಲ್ಗ

10:57 PM Sep 13, 2019 | Sriram |

ಬಸ್ರೂರು: ನಾವು ಮುಂದುವರಿ ಯುತ್ತಿದ್ದೇವೆ. ಆಧುನಿಕ ಯುಗದಲ್ಲಿ ಸಾಗುತ್ತಿರುವ ನಾವು ಪರಂಪರೆಯಿಂದ ಬಳುವಳಿಯಾಗಿ ಬಂದ ಒಂದೊಂದೇ ಆಚರಣೆಗಳನ್ನು ಮರೆಯುತ್ತಿರುವುದು ದುರಂತವೇ ಸರಿ!

Advertisement

ಇಂಥ ಆಚರಣೆಗಳಲ್ಲಿ ಕುಂದಾಪುರ ಪ್ರದೇಶದ ಹಳ್ಳಿಗಳಲ್ಲಿ ನಮ್ಮ ಜನಪದರು ಆಚರಿಸುತ್ತಿದ್ದ ಹೌಂದೇ ರಾಯ್ನ ವಾಲ್ಗವೂ ಒಂದು.

ಇದನ್ನು ಮನೆ ಮುಂದಿನ ತುಳಸಿಕಟ್ಟೆಯಲ್ಲಿ ಆಚರಿಸುವ ಕ್ರಮವಿತ್ತು. ಈಗಲೂ ಕೆಲವೆಡೆ ಮಾತ್ರ ಉಳಿದಿರಬಹುದು. ಹೌಂದೇ ರಾಯ° ವಾಲ್ಗದ ಮಂತ್ರ, ತಂತ್ರ, ಪೂಜೆ, ಪುರಸ್ಕಾರ, ನಲಿಕೆ, ನಂಬಿಕೆಗಳೆಲ್ಲ ಕುಂದಾಪ್ರ ಕನ್ನಡದ ಶೈಲಿಯಿಂದ ಶ್ರೀಮಂತವಾಗಿದೆ. ಇದರಲ್ಲಿ ಒಟ್ಟು ಎಂಟು ಸಂಧಿಗಳಿವೆ.

ಹೌಂದೇ ರಾಯ್ನ ವಾಲ್ಗದಲ್ಲಿ ಪದ ಹೇಳುವ ಮುಖಂಡನನ್ನು ಕೊಡಂಗಿ ಎಂದು ಕರೆಯುತ್ತಾರೆ. ಆತ ಹೇಳಿದ್ದಕ್ಕೆ ಉಳಿದವರು ಉತ್ತರಿಸುತ್ತಾ ತುಳಸಿ ಕಟ್ಟೆಯ ಸುತ್ತ ಹೋ-ಹೋ ವಾಲ್ಗವೇ ಎಂದು ಶೃತಿಬದ್ಧವಾಗಿ ಕುಣಿಯುತ್ತಾರೆ. ತುಳಸಿ ಕಟ್ಟೆಯಲ್ಲಿ ಹೂ, ಹಣ್ಣು, ಅವಲಕ್ಕಿ, ಪಂಚಕಜ್ಜಾಯ, ಎಳನೀರು ಮುಂತಾದವುಗಳನ್ನು ಇಟ್ಟಿರುತ್ತಾರೆ. ಪದ ಹೇಳಿ ಕುಣಿಯುವವರು ಕಾಲುಗಳಿಗೆ ಗಗ್ಗರ ಹಾಕಿಕೊಂಡು ರೇಷ್ಮೆಯ ಪಂಚೆಯುಟ್ಟು ಹೆಗಲ ಮೇಲೆ ಸಿಂಗಾರ ಹೂ ಇರಿಸಿ ಕುಣಿಯುವುದು ನಿಜಕ್ಕೂ ಅಪೂರ್ವ ಜನಪದ ಶ್ರೀಮಂತಿಕೆಯ ಸಂಕೇತವಾಗಿದೆ.

ಹೌಂದೇ ರಾಯ್ನ ವಾಲ್ಗದಲ್ಲಿ ಮುಖ್ಯವಾಗಿ ವರುಣನ ಆರಾಧನೆಯಾಗಿದೆ. ಹೌಂದೇ ರಾಯ್ನ ವಾಲ್ಗದಲ್ಲಿ ಸಮುದ್ರ ರಾಜನನ್ನು ಓಲೆ„ಸಲಾಗುತ್ತದೆ. ಇದರಲ್ಲಿ ತಿರುಪತಿ ವೆಂಕಟರಮಣನ ಹೊಗಳಿಕೆಯೂ ಇದೆ.

Advertisement

ತಂಡದ ಮುಖಂಡ ಹೋ-ಹೋ ವಾಲ್ಗವೇ ಎಂದಾಗ ಉಳಿದವರೆಲ್ಲಾ ಹೌಂದೇ ರಾಯ್ನ ವಾಲ್ಗವೇ ಎಂದು ದನಿಗೂಡಿಸುತ್ತಾರೆ. ವಾಲಗದ ಸಂಧಿಯಿಂದ ಕುಣಿತ ಆರಂಭಿಸುತ್ತಾರೆ. ನಂತರ ಗೋವಿಂದನ ಸಂಧಿ, ವಾಲಗದ ಸಂಧಿ, ಮನೆ ಯಜಮಾನನ ಹೊಗಳಿಕೆ, ಬ್ಯಾಂಟಿ ಸಂಧಿ, ಶಿವರಾಯ ಸಂಧಿ, ಕೋಲು ಸಂಧಿ, ಕ್ವಾಡಂಗಿ ಸಂಧಿಯ ಅನಂತರ ಹೊಗಳಿಕೆ ಸಂಧಿಯೊಂದಿಗೆ ಹೌಂದೇ ರಾಯ° ವಾಲ್ಗ ಮುಗಿಯುತ್ತದೆ.

ಕಲೆಗಳ ಸಂಗಮ
ಒಂದೊಂದು ಸಂಧಿಯಲ್ಲಿ ಒಂದೊಂದು ವಸ್ತು ವನ್ನು ಹೊಗಳಿ ಹಾಡುವ ಕ್ರಮ ಇಲ್ಲಿನ ವೈಶಿಷ್ಟ್ಯವಾಗಿದೆ. ಇದರಲ್ಲಿ ಕುಣಿತ ವಾಲಗದ ಸಂಧಿಯಿಂದ ಆರಂಭವಾಗುತ್ತದೆ. ಸಂಗೀತ, ಸಾಹಿತ್ಯ ಮತ್ತು ನೃತ್ಯ ಈ ಮೂರು ಕಲೆಗಳು ಇಲ್ಲಿ ಸಂಗಮವಾಗಿದೆ.

ಒಂದೊಂದು ಸಂಧಿಯಲ್ಲೂ ಆ ಸಂಧಿಯ ಹೆಸರಿಗೆ ತಕ್ಕಂತೆ ಹಾಡು ಮತ್ತು ನೃತ್ಯವಿರುವುದು ಇಲ್ಲಿನ ವಿಶೇಷ. ಹಿಂದೆ ತಿರುಪತಿಗೆ ಹೋಗಿ ಬಂದವರು ಈ ಹೌಂದೇ ರಾಯ್ನ ವಾಲ್ಗವನ್ನು ಮನೆ ಮುಂದೆ ಮಾಡುವ ಕ್ರಮವಿತ್ತು. ಆದರೆ ಈಗೀಗ ಮನೆ ಮುಂದೆ ತುಳಸಿ ಕಟ್ಟೆಯೇ ಇಲ್ಲದ ಮನೆಗಳು ಅನೇಕವಿವೆ! ಈ ವಾಲ್ಗದ ಪದ ಹೇಳಲು ಇಂದಿನ ಯುವ ಜನಾಂಗಕ್ಕೆ ಗೊತ್ತಿಲ್ಲ. ಹಳೆ ತಲೆಮಾರಿನವರು ಇದನ್ನು ಉಳಿಸಲೂ ಹೋಗಿಲ್ಲ. ರೈತನಿಗೆ ಉತ್ತಮ ಬೆಳೆ ಬಂದು ಸಮೃದ್ಧ ಫಸಲು ಬರಲಿ-ಬಾಳು ಬಂಗಾರವಾಗಲಿ ಎನ್ನುವುದು ಇಲ್ಲಿಯ ಆಶಯವಾಗಿದೆ.

ಪ್ರಸ್ತುತ ಇಲ್ಲಿ ಬೇರೆ ಕಡೆಯಿಂದ ಬಂದು ಹೌಂದೇ ರಾಯನ ವಾಲ್ಗ ಆಚರಿಸುತ್ತಾರೆ. ಊರಿನಲ್ಲಿ ಒಬ್ಬರು ಇಬ್ಬರು ಇದ್ದರೂ ಅವರು ಈಗ ಮಾಡುವುದಿಲ್ಲ. ಈಗ ಹೌಂದೇ ರಾಯ್ನ ವಾಲ್ಗ ಬಹುತೇಕ ನಮ್ಮ ಮನೆಯಿಂದ ಮಾಯವಾಗಿದೆ. ಹೋ-ಹೋ ವಾಲ್ಗವೇ ಹೌಂದೇ ರಾಯ್ನ ವಾಲ್ಗವೇ ಎನ್ನುವ ವಿಶಿಷ್ಟ ಶೈಲಿಯ ಜನಪದರ ಹಾಡು-ನೃತ್ಯದ ಪ್ರಾಕಾರವನ್ನು ಇಂದು ನಾವು ಉಳಿಸಿಕೊಳ್ಳಬೇಕಾದ ಆವಶ್ಯಕತೆಯಿದೆ.

ಹೌಂದೇ ರಾಯ್ನ ವಾಲ್ಗದ ಪದ
ಶಿವ ಶಿವ ರಾಮ ಶಿವನೇ ರಾಮ
ಶಿವ ಶಿವ ರಾಮ ಸದಾಶಿವ ರಾಮ
ಹಾಗೆಯೇ ಕೋಡಂಗಿ ಸಂಧಿಯಲ್ಲಿ
ಸ್ವಾಮಿಗಿಂದ್‌ ಕೋಡಂಗಿ
ಹೌಂದೇ ರಾಯ್ನ ಕೋಡಂಗಿ
ಬೂಮಿಗಿಂದ್‌ ಕೋಡಂಗಿ
ರಾಮನ ಬಂಟ ಕೋಡಂಗಿ
ಮ್ಯಾಲ್ಗರಿಗೆ ಕೋಡಂಗಿ
ಮಂದರ ಗಿರಿಗೆ ಕೋಡಂಗಿ
ಬಂಗಾರ ಗಿರಿಗೆ ಕೋಡಂಗಿ

ಪರಂಪರೆ ಉಳಿಸಬೇಕಿದೆ
ನಮ್ಮ ಹಿರಿಯರು ಹಾಕಿಕೊಟ್ಟ ಪರಂಪರೆ ಚೌಕಟ್ಟನ್ನು ನಾವು ಉಳಿಸಿಕೊಳ್ಳಬೇಕಾಗಿದೆ. ಹೌಂದೇ ರಾಯ್ನ ವಾಲ್ಗದಲ್ಲಿ ಒಂದೊಂದು ಸಂಧಿಯೂ ಒಂದೊಂದು ಆಶಯವನ್ನು ಹೊಂದಿದೆ. ನಮ್ಮ ಜನಪದರು ತಮ್ಮ ಹಾಡಿನಲ್ಲಿ, ಕುಣಿತದಲ್ಲಿ ಶ್ರೀಮಂತಿಕೆಯನ್ನು ಈ ಮೂಲಕ ತೆರೆದಿಟ್ಟಿದ್ದಾರೆ.
ನಾಗರಾಜ ಪೂಜಾರಿ,
ಕೃಷಿಕ, ಬಳ್ಕೂರು ನಿವಾಸಿ

– ದಯಾನಂದ ಬಳ್ಕೂರು

Advertisement

Udayavani is now on Telegram. Click here to join our channel and stay updated with the latest news.

Next