Advertisement

ಹೊಟ್ಟೆ ಪಕ್ಷ ,ಏರೋಪ್ಲೇನ್‌ ಚಿಹ್ನೆ..ಅವರೇ ರಂಗಸ್ವಾಮಿ..!”

07:30 AM May 06, 2018 | |

ಹೊಟ್ಟೆ ಪಕ್ಷದ ರಂಗಸ್ವಾಮಿ’ ಈ ಹೆಸರು ರಾಷ್ಟ್ರ ರಾಜಕಾರಣದಲ್ಲೂ ಚಿರಪರಿಚಿತ. ಹಾಗೆಂದು ಇವರು ವಿಧಾನಸಭೆ, ಲೋಕಸಭೆ ಸದಸ್ಯರಾಗಲಿ ಅಥವಾ ಖ್ಯಾತಿವೆತ್ತ ರಾಜಕಾರಣಿ ಅಲ್ಲ. ರಾಜಕಾರಣಿಗಳ ಜತೆ ನಂಟೂ ಇರಲಿಲ್ಲ. ಆದರೂ ಖ್ಯಾತಿ ಹೊಂದಿರುವ ಎಲ್ಲ ರಾಜಕಾರಣಿಗಳಿಗೂ ಇವರು ಗೊತ್ತಿತ್ತು. ಅದೇ ಹೊಟ್ಟೆ ಪಕ್ಷದ ರಂಗಸ್ವಾಮಿ ತಾಕತ್ತು.ಚುನಾವಣೆಗೆ ಸ್ಪರ್ಧಿಸುವುದರಲ್ಲಿ ಗಿನ್ನಿಸ್‌ ರೆಕಾರ್ಡ್‌ ಸೃಷ್ಟಿಸಿದ್ದ ಹೊಟ್ಟೆ ಪಕ್ಷದ ರಂಗಸ್ವಾಮಿ ಹೆಸರೇ ಹೇಳುವಂತೆ ಹೊಟ್ಟೆಪಕ್ಷದ ಸಂಸ್ಥಾಪಕ, ನಾಯಕ, ಕಾರ್ಯಕರ್ತ ಎಲ್ಲರೂ ಅವರೇ ಆಗಿದ್ದರು.

Advertisement

ಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ ಕೋರಿ ರಾಜಕೀಯ ಪಕ್ಷಗಳಿಗೆ ಅರ್ಜಿ ಹಾಕಿ ಹಾಕಿ ಬೇಸರಗೊಂಡು ತಮ್ಮದೇ ಆದ ಪಕ್ಷ ಕಟ್ಟಿದ್ದರು. ಆದರೆ ನೋಂದಣಿ ಮಾಡಿಸಿರಲಿಲ್ಲ. ಆದರೂ ಹೊಟ್ಟೆ ಪಕ್ಷ ಇತರೆ ರಾಜಕೀಯ ಪಕ್ಷಗಳಂತೆ ಜನಪ್ರಿಯವಾಗಿತ್ತು. ಪ್ರಾರಂಭದಲ್ಲಿ ಆನೆ, ನಂತರ ಬಿಲ್ಲುಬಾಣ ಆ ನಂತರ ಏರೋಪ್ಲೇನ್‌ ಚಿಹ್ನೆಯಡಿ ಸತತವಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದರು.

1978ರಲ್ಲಿ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯವರು ಚಿಕ್ಕಮಗಳೂರು ಲೋಕಸಭೆ ಉಪ ಚುನಾವಣೆಗೆ ಸ್ಪರ್ಧಿಸಿದಾಗ ಅವರ ವಿರುದ್ಧವೂ ಸ್ಪರ್ಧಿಸಿದ್ದರು. ಅಷ್ಟೇ ಅಲ್ಲ, ರಾಜೀವ್‌ಗಾಂಧಿ, ಪಿ.ವಿ.ನರಸಿಂಹರಾವ್‌ ವಿರುದ್ಧವೂ ಸ್ಪರ್ಧೆ ಮಾಡಿದ್ದರು. ಒಟ್ಟು 86 ಬಾರಿ ಸ್ಪರ್ಧಿಸಿ ಗಿನ್ನಿಸ್‌ ದಾಖಲೆ ಮಾಡಿದ್ದರು.

ಹಾಗೆಂದು ಇವರೇನು ಕೋಟ್ಯಾಧಿಪತಿಗಳಲ್ಲ. ಇವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ 15 ಲಕ್ಷ ರೂ. ಮೌಲ್ಯದ ಕಟ್ಟಡ ಹೊರತುಪಡಿಸಿದರೆ ಬೇರೇನೂ ಇರಲಿಲ್ಲ. 

ಒಂದೆರಡು ಜತೆ ಬಟ್ಟೆ ಒಳಗೊಂಡ ಬ್ಯಾಗ್‌ ಕೈಯಲ್ಲೊಂದು ತ್ರಿಶೂಲ ಕಾಣಿಸಿತು ಎಂದರೆ ಅದು ಹೊಟ್ಟೆ ಪಕ್ಷದ ರಂಗಸ್ವಾಮಿ ಅಲ್ಲಿದ್ದಾರೆ ಎಂದರ್ಥ.

Advertisement

ತ್ರಿಶೂಲ ಹಿಡಿದು ವಿಧಾನಸೌಧಕ್ಕೆ ಪ್ರವೇಶಿಸಿ ಸಚಿವರು ಹಾಗೂ ಅಧಿಕಾರಿಗಳ ಭೇಟಿ ಮಾಡಿ ಜನರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ ಮನವಿ ಅರ್ಪಿಸುತ್ತಿದ್ದರು. ಸಚಿವರು ಸಹ ಮನವಿ ಸ್ವೀಕರಿಸಿ ಸಾಗ ಹಾಕುತ್ತಿದ್ದರು. 

ಒಮ್ಮೆ ಖುದ್ದು ಇಂದಿರಾಗಾಂಧಿ, ರಾಜೀವ್‌ಗಾಂಧಿ, ಪಿ.ವಿ.ನರಸಿಂಹರಾವ್‌ ಕೇಳಿದ್ದೂ ಉಂಟು. “ಹು ಈಸ್‌ ದಿಸ್‌ ರಂಗಸ್ವಾಮಿ’ ಎಂದು. ಹಸಿದ ಹೊಟ್ಟೆಗೆ ಊಟ ಕೊಡಬೇಕೆಂಬುದೇ ಇವರ ಘೋಷವಾಕ್ಯ. ಚುನಾವಣೆಗೆ ನಿಂತಾಗಲೆಲ್ಲ 1 ರೂ.ಗೆ ಅಕ್ಕಿ ಕೊಟ್ಟು ಗಮನ ಸೆಳೆಯುತ್ತಿದ್ದರು. 
 
ಚುನಾವಣೆಗೆ ಸ್ಪರ್ಧಿಸುವುದು ಬಿಟ್ಟ ನಂತರ ಕೆಲಕಾಲ ಆರ್‌ಟಿಐ ಅರ್ಜಿ ಹಾಕಿ ಪ್ರಭಾವಿಗಳ ಆಸ್ತಿ, ಅವ್ಯವಹಾರ, ಅಕ್ರಮಗಳ ಬಗ್ಗೆ ಮಾಹಿತಿ ಪಡೆದು ಹೋರಾಟ ಮಾಡುತ್ತಿದ್ದರು.1967 ರಲ್ಲಿ  ಮೊದಲ ಬಾರಿಗೆ ಆಗಿನ ರೈಲ್ವೆ ಸಚಿವರೂ ಆಗಿದ್ದ ಕೆಂಗಲ್‌ ಹನುಮಂತಯ್ಯ ವಿರುದ್ಧ ಲೋಕಸಭೆ ಚುನಾವಣೆಗೆ ಮೊದಲ ಬಾರಿಗೆ ಸ್ಪರ್ಧಿಸಿದ್ದ ರಂಗಸ್ವಾಮಿ ನಂತರ ಪ್ರತಿ ಚುನಾವಣೆಯಲ್ಲೂ ಸ್ಪರ್ಧಿಸುತ್ತಿದ್ದರು. 

2006ರಲ್ಲಿ ಅಯೋಧ್ಯೆಯ ಕಿಷ್ಕಿಂದ ಆಶ್ರಮ ಸೇರಿ ಸ್ವಾಮಿ ರಂಗನಾಥಪುರಿ ಆಗಿದ್ದರು. 74ನೇ ವಯಸ್ಸಿನಲ್ಲಿ 2007 ರಲ್ಲಿ ಕೇರಳದಲ್ಲಿ ನಿಧನರಾದರು. 

ರಂಗಸ್ವಾಮಿಯವರಿಗೆ ಮೂವರು ಮಕ್ಕಳು. ಆಪೈಕಿ  ಅವರ ಪುತ್ರ ರಾಜೇಂದ್ರ ಪ್ರಸಾದ್‌ ಸಹ ತಂದೆಯ ಹಾದಿಯಲ್ಲೇ ಸಾಗಲು ಪ್ರಯತ್ನಿಸಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ವಿರುದ್ಧ ಕನಕಪುರ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ 17,250 ಮತ ಪಡೆದಿದ್ದರು. ನಂತರ ಕೊಪ್ಪಳ, ಹೊಸಪೇಟೆ, ಬೆಂಗಳೂರು ಹೀಗೆ ನಾಲ್ಕು ಬಾರಿ ಚುನಾವಣೆಗೆ ಸ್ಪರ್ಧಿಸಿ ಸುಸ್ತಾದರು. ಈಗಲೂ ತಮ್ಮ ತಂದೆಯ ಸಾಹಸದ ಬಗ್ಗೆ ಹೆಮ್ಮೆ ಪಡುವ ರಾಜೇಂದ್ರಪ್ರಸಾದ್‌ ತಂದೆಯ ಜತೆ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದ ಬಗ್ಗೆ ಸ್ಮರಿಸುತ್ತಾರೆ. 

ಆಯ್ತು ಹೋಗಿ ಬನ್ನಿ ಮಹಾಸ್ವಾಮಿ…
ಹಲವಾರು ಮುಖ್ಯಮಂತ್ರಿಗಳಿಗೂ ರಂಗಸ್ವಾಮಿ ಪರಿಚಯ. ನೇರವಾಗಿ ವಿಧಾನಸೌಧಕ್ಕೆ ಬಂದು ಮುಖ್ಯಮಂತ್ರಿಗಳ ಕಚೇರಿಗೆ ಹೋಗಿ ಮನವಿ ಕೊಡುತ್ತಿದ್ದರು. ಜೆ.ಎಚ್‌.ಪಟೇಲ್‌ ಅವರು ಮುಖ್ಯಮಂತ್ರಿಯಾಗಿದ್ದಾಗ ಒಮ್ಮೆ ತ್ರಿಶೂಲದೊಂದಿಗೆ ರಂಗಸ್ವಾಮಿ ಪ್ರತ್ಯಕ್ಷರಾಗಿ ಜನರ ಸಮಸ್ಯೆಗಳ ಬಗ್ಗೆ ಮನವಿ ನೀಡಿದರು. ಮುಗುಳ್ನಕ್ಕು ಆಯ್ತು ಹೋಗಿ ಬನ್ನಿ ಮಹಾಸ್ವಾಮಿ ಎಂದು ಜೆ.ಎಚ್‌.ಪಟೇಲ್‌ ಹೇಳಿದ್ದರು.

– ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next