Advertisement
ಉದ್ಧವ ಗೀತೆಯೊಳಗೊಂದು ಉಪಗೀತೆ ಬರುತ್ತದೆ. ಅದು ಅವಧೂತ ಗೀತೆ. ಯದು ವಂಶದ ಮೂಲಪುರುಷ ಯಯಾತಿ ಮಹಾರಾಜನ ಮಗ ಯದು ಅವಧೂತನೊಬ್ಬನಿಂದ ಕಂಡುಕೊಂಡ ಗೀತೆ ಇದು. ಆ ಅವಧೂತ ಬಹಳ ಆನಂದದಿಂದ ಇರುವುದನ್ನು ಕಂಡು ಯದು “ನಮಗೆ ಇಷ್ಟೆಲ್ಲ ಅಧಿಕಾರವಿದ್ದರೂ ಆನಂದವಿಲ್ಲ. ನಿನಗೆ ಹೇಗೆ ಆನಂದಮಯ ಬದುಕು ಸಾಧ್ಯವಾಯಿತು’ ಎಂದು ಪ್ರಶ್ನಿಸಿದ. “ನಾನು ಯಾರ್ಯಾರೋ ಗುರುಗಳಿಂದ ಕಲಿತವನಲ್ಲ. ಗಾಳಿ, ಬೆಳಕು, ಸೂರ್ಯ, ಚಂದ್ರ, ಹಕ್ಕಿ, ಹುಳು ಹೀಗೆ ಪ್ರಕೃತಿಯ 24 ಗುರುಗಳಿಂದ ನಾನು ಆನಂದವಾಗಿರಲು ಕಲಿತೆ. ಆನಂದವಾಗಿರಲು ಪ್ರಕೃತಿಯಿಂದಲೇ ಪಾಠ ಕಲಿತೆ. ಇದು ಜೀವನಪಾಠ’ ಎಂದ ಅವಧೂತ.
Related Articles
ಅವಧೂತ ಗೀತೆ ಬಗ್ಗೆ ಉಪನ್ಯಾಸ ನೀಡುತ್ತಿದ್ದ ಹಿರಿಯ ವಿದ್ವಾಂಸ ಡಾ| ಬನ್ನಂಜೆ ಗೋವಿಂದಾಚಾರ್ಯ, ಹೊಟೇಲ್ ಸಾಹುಕಾರರು ತನ್ನ ಕಣ್ಣು ತೆರೆಸಿದ ಉದಾಹರಣೆಗಳನ್ನು ಸಾಂದರ್ಭಿಕವಾಗಿ ವಿವರಿ ಸಿದ್ದಾರೆ. “ವೇದಾಂತದ ಗಂಧಗಾಳಿ ಇಲ್ಲದ ಇಂತ ಹವರಿಂದ ನಾನು ಸಾಕಷ್ಟು ತಿಳಿದು ಬೆಳೆದೆ. ಪ್ರಾಮಾಣಿಕತೆ ಇಲ್ಲದಿದ್ದರೆ ಎಂಥ ವೇದಾಂತ? ಈ ಹೊಟೇಲ್ ಸಾಹುಕಾರರನ್ನು ಕಂಡಾಗ ನನಗೆ ಗಾಂಧೀಜಿಯವರನ್ನು ಕಂಡಷ್ಟು ಸಂತೋಷವಾಯಿತು. ಸಾರ್ವ ಜನಿಕರಿಂದ ಸಂಗ್ರಹವಾದ ದೇಣಿಗೆಯಲ್ಲಿ ಎಂಟಾಣೆ (50 ಪೈಸೆ) ವ್ಯತ್ಯಾಸವಾದದ್ದಕ್ಕೆ ಗಾಂಧೀಜಿ 50 ಪೈಸೆ ಲೆಕ್ಕ ಸರಿಪಡಿಸದ ಹೊರತು ಮನೆಗೆ ಬರಬೇಡ ಎಂದು ಮಗನಿಗೆ ಹೇಳಿದ್ದರು’ ಎಂದು ಬನ್ನಂಜೆಯವರು ಬೆಟ್ಟು ಮಾಡಿದ್ದರು.
Advertisement
ಆ ಹೊಟೇಲ್ ಸಾಹುಕಾರ ಮಹಾನುಭಾವ ಕೆ.ನಾರಾಯಣ ರಾವ್. 1911ರ ಸೆ. 3ರಂದು ದ.ಕ. ಜಿಲ್ಲೆಯ ಪುತ್ತೂರು ತಾಲೂಕು ಕೊçಲದಲ್ಲಿ ಜನಿಸಿದ ರಾವ್ ಬಂಟ್ವಾಳದಲ್ಲಿ 4ನೆಯ ಫಾರ್ಮ್ ಓದುವಾಗಲೇ ಬಡತನದಿಂದ ಊರು ಬಿಟ್ಟವರು. 1930ರಲ್ಲಿ 250 ರೂ. ಬಂಡವಾಳದೊಂದಿಗೆ ಸಣ್ಣ ಹೊಟೇಲ್ ಆರಂಭಿಸಿದ ರಾವ್ 1948ರಲ್ಲಿ ದುರ್ಗಾ ಲಾಡ್ಜ್ ಪ್ರಾರಂಭಿಸಿದರು. ಹೊಟೇಲ್‌ಗೆ ಬೆಂಕಿ ಬಿದ್ದ ಘಟನೆ 1971ರಲ್ಲಿ ಸಂಭವಿಸಿತು. 1977ರ ಡಿ. 18ರಂದು ಇಹಲೋಕ ತ್ಯಜಿಸಿದರು.
ಸುಮಾರು 750 ವರ್ಷಗಳ ಹಿಂದಿನ ವಿಶ್ವದ ಅತೀ ಪ್ರಾಚೀನ ಹಸ್ತಪ್ರತಿ ಎನ್ನಲಾದ ಉಡುಪಿ ಪಲಿಮಾರು ಮಠದಲ್ಲಿದ್ದ ಶ್ರೀ ಹೃಷೀಕೇಶತೀರ್ಥರು ಬರೆದಿಟ್ಟ ಮಧ್ವಾಚಾರ್ಯರ ಸರ್ವಮೂಲಗ್ರಂಥವನ್ನು ಬನ್ನಂಜೆ ಗೋವಿಂದಾಚಾರ್ಯರು ಎಡಿಟ್ ಮಾಡಿದಾಗ ಅದರ ಪ್ರಕಟನೆಯ ಸಂಪೂರ್ಣ ವೆಚ್ಚ ಭರಿಸಿದವರು ನಾರಾಯಣ ರಾವ್. ಇವರಿಂದಾಗಿ ಭಂಡಾರಕೇರಿ, ಪೇಜಾವರ ಶ್ರೀಗಳ ಚಟುವಟಿಕೆಗಳ ಕೇಂದ್ರ ಕಾರ್ಯಾಲಯವಿದ್ದದ್ದು ಆಗ ಗದುಗಿನಲ್ಲಿ.
“ನೋಟಿನ ಬಂಡಲ್‌ಗಳು ಕರಕಲಾದುದನ್ನು ಬ್ಯಾಂಕ್‌ನವರಿಗೆ ದಾಖಲೆಗಾಗಿ ಕೊಟ್ಟಿದ್ದರು. ಆದರೆ ಬ್ಯಾಂಕ್‌ನವರು ನಿರಾಕರಿಸಿದರು’ ಎಂದು ಈಗ ಹೊಟೇಲ್‌ನ್ನು ನೋಡಿಕೊಳ್ಳುತ್ತಿರುವ ನಾರಾಯಣ ರಾಯರ ಅಳಿಯ ನಿಟ್ಟೆ ಕೆಮ್ಮಣ್ಣು ಮೂಲದ ಸುಧಾಕರ ರಾವ್ ಹೇಳುತ್ತಾರೆ.
ನಾರಾಯಣ ರಾಯರಿಗೆ 60 ವರ್ಷ ತುಂಬಿದಾಗ ಕುಮಾರವ್ಯಾಸನ ಆರಾಧ್ಯದೇವನಾದ ವೀರನಾರಾಯಣನ ಸನ್ನಿಧಿಯಲ್ಲಿ ಪೇಜಾವರ ಶ್ರೀಗಳ ಸಮ್ಮುಖದಲ್ಲಿ ಗೌರವಿಸಿದಾಗ ಜಾತಿಮತಭೇದವಿಲ್ಲದೆ ಇಡೀ ಗದುಗಿನ ನಗರವೇ ಅಭಿನಂದಿಸಿದ ಹಾಗೆ ಅನಿಸಿತ್ತು.
ಸುಮಾರು 60-70 ವರ್ಷಗಳ ಹಿಂದೆ ಬ್ರಹ್ಮಾವರದ ಚಾಂತಾರಿ ನಲ್ಲಿ ಕೋಳಿ ಅಂಕದ ನಿಪುಣ ಲಿಂಗಯ್ಯ ಪೂಜಾರಿ ಇದ್ದರು. ಇವರು ಬಹು ಸಮಯ ಕೋಳಿ ಜೂಜಿನಲ್ಲಿ ನಿರತರಾದರೂ ಚಾಂತಾರಿನ ಗರೋಡಿಯಲ್ಲಿ ಶಿವರಾಯನ ಪಾತ್ರಿಗಳಾಗಿ ದರ್ಶನಕ್ಕೆ ನಿಂತಾಗ ಅಟ್ಟಹಾಸದ ಸಿರಿವಂತರಿಗೆ ಸಿಂಹಸ್ವಪ್ನ. ಬಬ್ಬುಸ್ವಾಮಿ ದರ್ಶನದ ಬೆಳ್ಳೆಯ ಸೂರ್ಯಪಾತ್ರಿಯವರದೂ ಇಂತಹ ಶೈಲಿ. ಕೌಶಿಕನೆಂಬ ಋಷಿ, ಓರ್ವ ಗೃಹಿಣಿ, ಮಾಂಸ ಮಾರುವ ವ್ಯಾಧ ಈ ಮೂವರಲ್ಲಿ ಸಾಧನೆಯ ತುಲನೆ ಮಾಡುವ ಪ್ರಸಂಗ ಮಹಾಭಾರತದಲ್ಲಿ ಬರುತ್ತದೆ. ವ್ಯಾಧ “ಧರ್ಮವ್ಯಾಧ’ ಎನಿಸುತ್ತಾನೆ. ವೃತ್ತಿ ಯಾವುದೇ ಇದ್ದರೂ ಕರ್ತವ್ಯಪ್ರಜ್ಞೆ, ನಿರಹಂಕಾರ, ಅಂತರಂಗದ ಶುದ್ಧಿಯ ಮಹತ್ವ ಈ ಕಥಾನಕದಲ್ಲಿ ತಿಳಿಯುತ್ತದೆ.
ಬದುಕಿನ ಸಾರ್ಥಕ್ಯಕ್ಕೆ ನೈತಿಕ ಬಲ ಬಹಳ ಅಗತ್ಯ. ಹಣ, ಅಧಿಕಾರದಿಂದ ನೆಮ್ಮದಿ ಬರಲೂಬಹುದು- ಕೆಡಲೂಬಹುದು. ಹಣ, ಅಧಿಕಾರವಿಲ್ಲದಿದ್ದರೂ ನೆಮ್ಮದಿ ಗಳಿಸಲೂಬಹುದು- ಕಳೆದುಕೊಳ್ಳಲೂಬಹುದು. ವೃತ್ತಿ, ಹಣ, ಅಧಿಕಾರ, ಜಾತಿ, ಓದಿನ “ಅಂಟು’, “ಅಹಂ’ ದುಃಖ ತರಿಸಬಹುದು, ಅಂಟು, ಅಹಮಿಕೆ ಇಲ್ಲದಿದ್ದರೆ ಅಂತರಂಗದ ಶುದ್ಧಿಯಿಂದ ನೆಮ್ಮದಿ ಬರಬಹುದು. ಅವಧೂತ ಗೀತೆಯಂತೆ ಬಡವನಾಗಿಯೂ ಸುಖಿಸಬಹುದು. ಸಿರಿವಂತ ನಾರಾಯಣರಾಯರಂತೆ ತಾನಲ್ಲದೆ ಸುತ್ತಮುತ್ತಲ ಜಗತ್ತನ್ನೂ ಸುಖದಲ್ಲಿರಿಸಬಹುದು.
-ಮಟಪಾಡಿ ಕುಮಾರಸ್ವಾಮಿ