Advertisement

ನಡು ರಸ್ತೆಯಲ್ಲೇ ಹೋಟೆಲ್‌ ಸಿಬ್ಬಂದಿ ಕೊಲೆ

11:04 AM Oct 08, 2017 | |

ಬೆಂಗಳೂರು: ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಮೇಘಾಲಯ ಮೂಲದ ಹೋಟೆಲ್‌ ಸಿಬ್ಬಂದಿಯೊಬ್ಬನ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು, ಆತನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬಾಣಸವಾಡಿಯ ಕಾಚರಕನಹಳ್ಳಿಯ ನೆಹರು ರಸ್ತೆಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

Advertisement

ಮೇಘಾಲಯ ಮೂಲದ ಸಂಜಯ್‌ ತವಾಂಗ್‌ (35) ಮೃತ ಹೋಟೆಲ್‌ ಸಿಬ್ಬಂದಿ. ಶುಕ್ರವಾರ ತಡರಾತ್ರಿ 12.15ರ ಸುಮಾರಿಗೆ ಹೋಟೆಲ್‌ನಿಂದ ಮನೆಗೆ ನಡೆದುಕೊಂಡು ಹೋಗುವಾಗ ಸ್ಕೂಟರ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು, ಮಾರಕಾಸ್ತ್ರಗಳು ಹಾಗೂ ಕಲ್ಲುಗಳಿಂದ ಮನ ಬಂದಂತೆ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಜಯ್‌ಗೆ ವರ್ಷದ ಹಿಂದೆ ವಿವಾಹವಾಗಿದ್ದು, ಪತ್ನಿಗೆ ವಿಚ್ಛೇಧನ ನೀಡಿದ್ದಾರೆ. ಹೀಗಾಗಿ ನಾಲ್ಕು ತಿಂಗಳ ಹಿಂದೆ ಬೆಂಗಳೂರಿಗೆ ಬಂದು, ಕಾಚರಕನಹಳ್ಳಿಯ ಡೆಲಿಷಿಯಸ್‌ ಮೊಮೋಸ್‌ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇಲ್ಲಿನ ಚರ್ಚ್‌ ಹಿಂಭಾಗದಲ್ಲಿ ಬಾಡಿಗೆ ಮನೆಯಲ್ಲಿ ತನ್ನ ಇತರೆ 12 ಮಂದಿ ಸ್ನೇಹಿತರೊಂದಿಗೆ ನೆಲೆಸಿದ್ದರು.

ಶುಕ್ರವಾರ ತಡರಾತ್ರಿಯಾದರೂ ಸಂಜಯ್‌ ಕೋಣೆಗೆ ಬಂದಿರಲಿಲ್ಲ. ಇದರಿಂದ ಗಾಬರಿಗೊಂಡ ಸ್ನೇಹಿತರು, ಕರೆ ಮಾಡಿದಾಗ ಸಂಜಯ್‌ ಕರೆ ಸ್ವೀಕರಿಸಿಲ್ಲ. ನಂತರ ಡೆಲಿಷಿಯಸ್‌ ಮೊಮೋಸ್‌ ಹೋಟೆಲ್‌ನ ಮಾಲೀಕರಿಗೆ ಮಾಹಿತಿ ನೀಡಿದ್ದು, ಹೋಟೆಲ್‌ ಬಳಿ ಹೋಗಿ ಪರಿಶೀಲಿಸುವಂತೆ ಅವರು ಸಲಹೆ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಬಂದ ಸಂಜಯ್‌ ಸ್ನೇಹಿತ ಶ್ರೀಸಬಿನ್‌, ಹೋಟೆಲ್‌ನ ಅಕ್ಕ-ಪಕ್ಕ ಹುಡುಕಾಟ ನಡೆಸಿದ್ದಾನೆ.

ಎಲ್ಲಿಯೂ ಪತ್ತೆಯಾಗಿಲ್ಲ. ಬಳಿಕ ಹೋಟೆಲ್‌ನಿಂದ ಸ್ವಲ್ಪ ದೂರದಲ್ಲಿ ಹೋಗುವಾಗ ರಕ್ತದ ಮಡುವಿನಲ್ಲಿ ಸಂಜಯ್‌ ಬಿದಿರುವುದನ್ನು ಕಂಡಿದ್ದಾನೆ. ನಂತರ ಸ್ಥಳೀಯರ ನೆರವಿನಿಂದ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ, ಆಸ್ಪತ್ರೆಗೆ ಕರೆತರುವ ಮುನ್ನವೇ ಸಂಜಯ್‌ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು “ಉದಯವಾಣಿ’ಗೆ ವಿವರಿಸಿದರು.

Advertisement

ಪ್ರತ್ಯಕ್ಷದರ್ಶಿ ಶ್ರೀಕೌಶಿಕ್‌ ಎಂಬಾತ ಹೇಳುವ ಪ್ರಕಾರ, ದ್ವಿಚಕ್ರ ವಾಹನದಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು ಚಾಕುವಿನಿಂದ ಸಂಜಯ್‌ನ ಎದೆ, ತಲೆ ಮತ್ತು ಹೊಟ್ಟೆಯ ಭಾಗಕ್ಕೆ ಇರಿದಿದ್ದಾರೆ. ಬಳಿಕ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿ ಸ್ವಲ್ಪ ದೂರ ಹೋದ ದುಷ್ಕರ್ಮಿಗಳು ಮತ್ತೆ ವಾಪಸ್‌ ಬಂದು ಸಂಜಯ್‌ ಮೇಲೆ ಹಲ್ಲೆ ನಡೆಸಿದರು.

ಇದರಿಂದ ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದ ಸಂಜಯ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ದುಷ್ಕರ್ಮಿಗಳು ಯಾರು, ಯಾವ ಕಾರಣಕ್ಕೆ ಕೃತ್ಯವೆಸಗಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಹೇಳಿದ್ದಾರೆ. ಯಾವ ವಿಚಾರಕ್ಕಾಗಿ ಕೊಲೆ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಈ ಘಟನೆಗೂ ಮೊದಲು ಕಾಚರಕನಹಳ್ಳಿಯಲ್ಲಿ ಕೆಲ ಯುವಕರ ಗುಂಪು ಗಲಾಟೆ ಮಾಡಿದೆ.

ಹೀಗಾಗಿ ಅನುಮಾನದ ಮೇಲೆ ನಾಲ್ಕೈದು ಮಂದಿಯನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಜತೆಗೆ ಘಟನೆ ಸಂಬಂಧ ಈಗಾಗಲೇ ಸಂಜಯ್‌ ತವಾಂಗ್‌ನ ಸ್ನೇಹಿತರು ಹಾಗೂ ಹೋಟೆಲ್‌ನ ಕೆಲ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಬಾಣಸವಾಡಿ ಠಾಣೆಯಲ್ಲಿ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next