Advertisement

ಗರಿಗರಿ ತುಪ್ಪದ ದೋಸೆಗೆ ಗುಣವಂತೆ ಭಟ್ಟರ ಹೋಟೆಲ್‌ 

04:36 PM Jun 18, 2018 | Harsha Rao |

ಭಟ್ಟರ ಹೋಟೆಲ್‌ನಲ್ಲಿ ವಿಶೇಷವಾಗಿ ಅವಲಕ್ಕಿ ಮೊಸರು, ಇಡ್ಲಿ ಮೊಸರು, ಮಿಸಾಳ್‌, ಬೋಂಡಾ, ಇಡ್ಲಿ ವಡೆ ತಯಾರಿಸುತ್ತಾರೆ.  ಇದರ ಜೊತೆಗೆ ರಾಗಿಪಾನಕ, ನಿಂಬೆ ಪಾನಕ, ಕಷಾಯ… ಹೀಗೆ ಮಲೆನಾಡಿನ ಇನ್ನೂ ಹಲವಾರು ತಿಂಡಿಗಳು ದೊರೆಯುತ್ತವೆ. 

Advertisement

ರುಚಿಯಾದ ಆಹಾರ ಯಾರಿಗೆ ಬೇಡ ಹೇಳಿ? ಶುಚಿ ರುಚಿಯಾದ ತಿಂಡಿ ಸಿಗುತ್ತದೆ ಎಂದರೆ ಹುಡುಕಿಕೊಂಡು ಹೋಗಿ ಹೊಟ್ಟೆತುಂಬ ತಿಂದು ಬರ ಬೇಕೆಂದು ಅನಿಸದೇ ಇರುವುದಿಲ್ಲ. ಹೀಗೆಯೇ ಎಲ್ಲರ ಅಚ್ಚು ಮೆಚ್ಚಿಗೆ ಪಾತ್ರವಾಗಿರುವ ಹೋಟೆಲ್‌ ಉತ್ತರಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಗುಣವಂತೆಯಲ್ಲಿದೆ. ಹೆಸರು ಗುರುಕೃಪ ಭಟ್ಟರ ಹೋಟೆಲ್‌.  ಇದು ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊಂಡಿದೆ. ಇಲ್ಲಿನ ಉಪಹಾರ ಎಲ್ಲರಿಗೂ ಪರಿಚಿತ. ಇಲ್ಲಿ ಸಿಗುವ ಬಿಸಿ ಬಿಸಿ ತುಪ್ಪದ ದೋಸೆಯಿಂದಾಗಿ ಆ ರೀತಿಯ ಘಮ್ಮತ್ತು ಹರಡಿದೆ.  ಈ ಉಪಹಾರ ಗೃಹದ ಮುಂದೆ ರಸ್ತೆಯಲ್ಲಿ ಲಾರಿಗಳು, ಕಾರುಗಳು, ಆಟೋಗಳು, ದ್ವಿಚಕ್ರವಾಹನಗಳು ಸಾಲು ಸಾಲಾಗಿ ನಿಂತಿರುತ್ತವೆ. ಎಲ್ಲರೂ ತುಪ್ಪದ ದೋಸೆಯ ಆಸೆಯಲ್ಲಿ ಬಂದವರೇ ಆಗಿರುತ್ತಾರೆ.  ಅಂಥ ರುಚಿ, ಘಮಲು.

ಮಂಗಳೂರಿನಿಂದ ಕಾರವಾರ ಮಾರ್ಗವಾಗಿ ಸಂಚರಿಸುವವರು ಮತ್ತು ಗೋವಾದಿಂದ ಮಂಗಳೂರಿಗೆ ಸಂಚರಿಸುವವರು ಸಾಮಾನ್ಯವಾಗಿ ಗುಣವಂತೆಯಲ್ಲಿ ನಿಲ್ಲಿಸಿ, ಇಲ್ಲಿಯ ತುಪ್ಪದ ದೋಸೆ ತಿಂದೇ ಪ್ರಯಾಣ ಮುಂದುವರಿಸುತ್ತಾರೆ. 

ಗುರುಕೃಪ ಭಟ್ಟರ ಹೋಟೆಲ್‌ ಸ್ಥಾಪನೆಯಾಗಿ ಸುಮಾರು 50 ವರ್ಷಗಳು ಕಳೆದಿವೆ. ಇಲ್ಲಿನ ವಿಶೇಷತೆ ಏನೆಂದರೆ ಇಲ್ಲಿ ಬಳಸುವ ಶುದ್ಧವಾದ ದೇಸಿತುಪ್ಪ. ದೇಸಿ ಹಾಲನ್ನು ಮಡಿಕೆಯಲ್ಲಿ ಹೆಪ್ಪು ಹಾಕುತ್ತಾರೆ.  ಕಟ್ಟಿಗೆಯನ್ನೇ ಉರುವಲನ್ನಾಗಿ ಬಳಸುತ್ತಾರೆ. ಆದ್ದರಿಂದ ಇಲ್ಲಿ ಸಿಗುವ ಎಲ್ಲಾ ತಿಂಡಿಗಳು ಹೆಚ್ಚು ರುಚಿಯಿಂದ ಕೂಡಿರುತ್ತವೆ. ಹಸುವಿನ ತುಪ್ಪ ಬಳಸಿ ಇಲ್ಲಿ ದೋಸೆಯನ್ನು ಮಾಡುತ್ತಾರೆ.  ಅದರ ಜೊತೆಗೆ ಕಾಯಿ ಚಟ್ನಿಯಿಂದಾಗಿ ರುಚಿಯೋ ರುಚಿ.

ವಿಶೇಷವಾಗಿ ಅವಲಕ್ಕಿ ಮೊಸರು, ಇಡ್ಲಿ ಮೊಸರು, ಮಿಸಾಳ್‌, ಬೋಂಡಾ, ಇಡ್ಲಿ ವಡೆ ತಯಾರಿಸುತ್ತಾರೆ.  ಇದರ ಜೊತೆಗೆ ರಾಗಿಪಾನಕ, ನಿಂಬೆ ಪಾನಕ, ಕಷಾಯ… ಹೀಗೆ ಮಲೆನಾಡಿನ ಇನ್ನೂ ಹಲವಾರು ತಿಂಡಿಗಳು ದೊರೆಯುತ್ತವೆ. 

Advertisement

“ಜನ ಸೇವೆಗೆ ಮೊದಲ ಆಧ್ಯತೆ ರುಚಿ, ಶುಚಿಯ ಜೊತೆಗೆ ಗುಣಮಟ್ಟವನ್ನು ಕಾಪಾಡಿಕೊಂಡು ಬಂದಿದ್ದೇವೆ. ನಮ್ಮಲ್ಲಿ ಸಿಗುವ ಎಲ್ಲಾ ಆಹಾರಗಳು ಜನರ ಇಷ್ಟಪಡುತ್ತಾರೆ ಇದಕ್ಕಿಂತ ಹೆಚ್ಚಿನ ಸಂತೋಷ ಏನು ಬೇಕು ಹೇಳಿ? ಜನರ ಬೇಡಿಕೆಗೆ ಅನುಗುಣವಾಗಿ ಇನ್ನೂ ಒಳ್ಳೆಯ ರೀತಿಯಲ್ಲಿ ಆಹಾರವನ್ನು ನೀಡಲು ಪ್ರಯತ್ನಿಸುತ್ತೇವೆ’ ಎನ್ನುತ್ತಾರೆ ಹೋಟೆಲ್‌ ಮಾಲೀಕ ಗಣೇಶ್‌.

ಭಟ್ಟರ ಹೋಟೆಲ್‌ಗೆ ಸಿನಿಮಾ ನಟರ ದಂಡು ಬಂದಿದೆ.  ವರನಟ ಡಾ.ರಾಜ್‌ಕುಮಾರ್‌, ವಿ.ಮನೋಹರ್‌, ಪಂಡರಿಭಾಯಿ, ನೀರ್ನಳ್ಳಿ ರಾಮಕೃಷ್ಣ , ಬಂಗಾರಪ್ಪ, ರಾಮಕೃಷ್ಣಹೆಗಡೆ ಹೀಗೆ ಹಲವರು ಇಲ್ಲಿಯ ತುಪ್ಪದ ದೋಸೆಯನ್ನು ಸದಿದ್ದಾರೆ. ಈ ಹೋಟೆಲ್‌ ಇರುವುದು ಹೊನ್ನಾವರದಿಂದ 9 ಕಿ.ಮೀ ದೂರ ಭಟ್ಕಳದಿಂದ 20 ಕಿ.ಮೀ ದೂರ.  ವಾರದ ಎಲ್ಲ ದಿನವೂ, ಬೆಳಿಗ್ಗೆ 6.30ರಿಂದ ಸಂಜೆ 8.30ರವರೆಗೆ ತೆರೆದಿರುತ್ತದೆ.

ಮಾಹಿತಿಗೆ: 9481806684

– ಬಳಕೂರು .ಎಸ್‌ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next