Advertisement

ಬಸಪ್ಪ ಖಾನಾವಳಿಗೆ ಬನ್ರಪ್ಪಾ

12:50 PM Feb 26, 2018 | Harsha Rao |

ಉತ್ತರ ಕರ್ನಾಟಕ ಭಾಗದ ಜನರ ಪ್ರಧಾನ ಆಹಾರವೇ ರೊಟ್ಟಿ. ಅದರಲ್ಲೂ ಜವಾರಿ ಜೋಳದ ರೊಟ್ಟಿ ಕೊಡುವ ಖಾನಾವಳಿ (ಹೊಟೇಲ್‌)ಗಳೇ ಈಗಲೂ ಇಲ್ಲಿನ ಪ್ರಮುಖ ನಗರಗಳಲ್ಲಿನ ಜನರ ಹಸಿವು ತಣಿಸುತ್ತವೆ.

Advertisement

ಧಾರವಾಡ ನಗರದಲ್ಲೂ ಅಷ್ಟೇ. ಈಗಲೂ ನೂರಾರು ಜೋಳದ ರೊಟ್ಟಿ ಊಟ ಕೊಡುವ ಖಾನಾವಳಿಗಳಿವೆ. ಇವುಗಳ ಪೈಕಿ ಅತ್ಯಂತ ಹಳೆಯದಾದ ಮತ್ತು ಇಂದಿಗೂ ತನ್ನದೇ ಸ್ವಾದಿಷ್ಟ, ರುಚಿಯನ್ನು ಉಳಿಸಿಕೊಂಡಿರುವ ಖಾನಾವಳಿ ಎಂದರೆ ಕೋರ್ಟ್‌ ಸರ್ಕಲ್‌ನಲ್ಲಿರುವ ಬಸಪ್ಪ ಖಾನಾವಳಿ.

1930 ರಲ್ಲಿ ಆರಂಭಗೊಂಡ ಈ ಖಾನಾವಳಿಯಲ್ಲಿ ಮೊದಲಿಗೆ ಹೊಟ್ಟೆತುಂಬಾ ಉಣ್ಣುವಷ್ಟು ಊಟ ನೀಡುವ ಪದ್ಧತಿ ಇತ್ತು. ಆಗ ಒಂದು ಊಟಕ್ಕೆ ಇದ್ದ ದರ ಐದು ಪೈಸೆ.  ಇಂದು ಒಂದು ಊಟದ ಬೆಲೆ ಇಲ್ಲಿ 80 ರೂ.ಗಳಾಗಿದೆ. ಆದರೂ ಇಂದಿಗೂ ಸರತಿ ಸಾಲಿನಲ್ಲಿ ನಿಂತಾದರೂ ಸರಿ ಈ ಖಾನಾವಳಿಯಲ್ಲಿ ಜನರು ಊಟ ಮಾಡುತ್ತಾರೆ.

ಮೂಲತಃ ವಿಜಯಪುರ ಜಿಲ್ಲೆಯ ಬಬಲೇಶ್ವರದವರಾದ ಬಸಪ್ಪ ಮಾಳಗೊಂಡ ಅವರು 1926 ರಲ್ಲಿಯೇ  ಸಣ್ಣ ಗುಡಿಸಲಿನಲ್ಲಿ  ಖಾನಾವಳಿ ಆರಂಭಿಸಿದರು. ಅದೇ ಮುಂದೆ 1930ರಲ್ಲಿ ಅಧಿಕೃತವಾಗಿ ಗೌರಿ ಶಂಕರ ಖಾನಾವಳಿಯಾಯಿತು. ಬಸಪ್ಪ ಅವರ ಉತ್ತಮ ಸೇವೆ ಮತ್ತು ರುಚಿಯಾದ ಊಟದಿಂದಾಗಿ ಈ ಖಾನಾವಳಿ ಬಸಪ್ಪ ಖಾನಾವಳಿ ಎಂದೇ ಪ್ರಸಿದ್ಧಿಯಾಯಿತು.

ಧಾರವಾಡಕ್ಕೆ ಓದಲು ಬರುತ್ತಿದ್ದ ವಿದ್ಯಾರ್ಥಿಗಳಿಗೆ ಊಟ ಪೂರೈಸುತ್ತಿದ್ದ ಬಸಪ್ಪ ಅವರು ಶರಣ ಜೀವಿ. ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಊಟಕ್ಕೆ ಹಣ ಇಲ್ಲವಾದಾಗ ಊಟ ಊಚಿತ. 10 ರೂ.ಗಳಿಗೆ ಒಂದು ತಿಂಗಳವಿಡಿ ಊಟ ನೀಡುತ್ತಿದ್ದರು. ಅಂದು ಈ ಖಾನಾವಳಿಯಲ್ಲಿ ಉಚಿತವಾಗಿ ಊಟ ಮಾಡಿದ ಎಷ್ಟೋ ವಿದ್ಯಾರ್ಥಿಗಳು ಇಂದು ಐಎಎಸ್‌,ಕೆಎಎಸ್‌, ಇಂಜಿನಿಯರ್‌ಗಳು, ಎಂ.ಎಲ್‌.ಎ.ಗಳು ಆಗಿದ್ದಾರೆ. ಕೆಲವರು ಈಗಲೂ ಖಾನಾವಳಿಗೆ ಬಂದು ಹಳೆಯ ನೆನಪು ತೆಗೆದು ಬಸಪ್ಪ ಅವರನ್ನು ಸ್ಮರಿಸುತ್ತಾರೆ.  ಸದ್ಯಕ್ಕೆ ಬಸಪ್ಪ ಅವರ ಸೊಸೆ ಸುಧಾ ಮಾಳಗೊಂಡ ಮತ್ತು ಬಸಪ್ಪ ಅವರ ಮೊಮ್ಮಗ ಮಹೇಶ ಗುರುಪಾದಪ್ಪ ಮಾಳಗೊಂಡ ಅವರು ಖಾನಾವಳಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

Advertisement

ಊಟದ ಮೆನು ಹೀಗಿರತ್ತೆ
ಎರಡು ಬಿಸಿ ಬಿಸಿಯಾದ ಜೋಳದ ರೊಟ್ಟಿ, ಎರಡು ತರದ ಪಲ್ಯ. ಶೇಂಗಾ ಹಿಂಡಿ, ಗುರೆಯಳ್ಳು ಚಟ್ನಿ ಅಗಸಿ ಹಿಂಡಿ, ಮೊಸರು, ಖಾರಾ, ಉಪ್ಪಿನ ಕಾಯಿ, ಅನ್ನ, ಸಾರು.  ಹಸಿ ತರಕಾರಿ ಸೊಪ್ಪು ಸೌತೆಕಾಯಿ, ಉಳ್ಳಾಗಡ್ಡಿ, ಟೊಮೇಟೊ, ಮೆಂತೆ ಸೊಪ್ಪು ಮತ್ತು ಹಸಿ ಮೆಣಸಿನಕಾಯಿ ಕೂಡ ಇರುತ್ತದೆ.

ಶಂಕರನಾಗ್‌ಗೆ ಅಚ್ಚುಮೆಚ್ಚು
ರಾಷ್ಟ್ರ ನಾಯಕ ಎಸ್‌.ನಿಜಲಿಂಗಪ್ಪ, ಮಾಜಿ ಮುಖ್ಯಮಂತ್ರಿಗಳಾದ ಎಸ್‌.ಆರ್‌.ಕಂಠಿ,ಬಿ.ಡಿ.ಜತ್ತಿ, ಯಡಿಯೂರಪ್ಪ, ಜಗದೀಶ ಶೆಟ್ಟರ್‌, ಕೇಂದ್ರ ಸಚಿವ ಅನಂತಕಮಾರ್‌ ಆದಿಯಾಗಿ ಅನೇಕ ಗಣ್ಯರು ಬಸಪ್ಪ ಖಾನಾವಳಿ ರೊಟ್ಟಿ ಊಟವನ್ನು ಸವಿದಿದ್ದಾರೆ.
ಚಿತ್ರ ನಟ ಶಂಕರನಾಗ್‌ ಮತ್ತು ಅನಂತನಾಗ್‌, ಪ್ರಭಾಕರ್‌, ಜಯಮಾಲಾ, ಗಿರೀಶ ಕಾರ್ನಾಡ್‌, ಜಯಂತ್‌ ಕಾಯ್ಕಿಣಿ  ಹಿಡಿದು ಇಂದಿನ ಯುವನಟಿ ಶುಭಾ ಪುಂಜ ವರೆಗೆ ಎಲ್ಲರಿಗೂ ಬಸಪ್ಪ ಖಾನಾವಳಿ ಊಟ ಇಷ್ಟ.

ಬಸಪ್ಪ ಅವರನ್ನು ಒಳಗೊಂಡು ಖಾನಾವಳಿ ನಡೆಸುತ್ತಿರುವ 3ನೇ ತಲೆಮಾರು ನಾನು. ಅಡುಗೆಯನ್ನ ವ್ಯವಹಾರದ ದೃಷ್ಟಿಯಿಂದ ಊಟ ಎನ್ನುತ್ತೇವೆ ಹೊರತು ಅದು ನಮಗೆ ಪ್ರಸಾದವಿದ್ದಂತೆ. ನಮ್ಮ ಕೈಲಾದಷ್ಟು ಕಡಿಮೆ ದರದಲ್ಲಿ ಉತ್ತಮ ಊಟ ಕೊಡುವ ಪ್ರಯತ್ನ ಮಾಡಿದ್ದೇವೆ. ನಮ್ಮ ಖಾನಾವಳಿ ರೊಟ್ಟಿ ಇದೀಗ ದುಬೈ,ಕತಾರ್‌,ಅಬುದಾಬಿ,ಅಮೆರಿಕಾ, ಆಸ್ಟ್ರೇಲಿಯಾ,ಇಂಗ್ಲೆಂಡ್‌ ಸೇರಿದಂತೆ ವಿಶ್ವದ ಎಲ್ಲಾ ಭಾಗಕ್ಕೂ ಹೋಗುತ್ತಿವೆ. ಅದೇ ನಾವು ಉಳಿಸಿಕೊಂಡ ವಿಶ್ವಾಸಕ್ಕೆ ಸಾಕ್ಷಿ.
-ಮಹೇಶ ಮಾಳಗೊಂಡ,ಬಸಪ್ಪ ಖಾನಾವಳಿ ಮಾಲೀಕರು.

ಲಿಂಗಾಯತ ಖಾನಾವಳಿ ಅಂದ್ರೇನು ?
ಹಳೆ ಮೈಸೂರು ಪ್ರಾಂತ್ಯದಲ್ಲಿ ಹೊಟೇಲ್‌ ಎನ್ನುವ ಶಬ್ದ ಪ್ರಚಲಿತವಿದ್ದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಖಾನಾವಳಿ ಎನ್ನುವ ಪದ ಪ್ರಚಲಿತದಲ್ಲಿದೆ. ಇದು ಉರ್ದು ಭಾಷೆ ಪ್ರಭಾವದ ಪರಿಣಾಮ. ಖಾನಾ ಅಂದ್ರೆ ಊಟ, ವಳಿ ಅಂದರೆ ಮನೆ. ಖಾನಾವಳಿ ಅಂದರೆ ಊಟದ ಮನೆ ಎಂದರ್ಥ. ಖಾನಾವಳಿಗಳು ನೂರಕ್ಕೆ ನೂರು ಸಸ್ಯಾಹಾರಿ ಆಹಾರ ಪೂರೈಸುತ್ತವೆ. ಕರಾವಳಿ ಮತ್ತು ಹಳೆ ಮೈಸೂರಿನಲ್ಲಿ ಬ್ರಾಹ್ಮಣರ ಫಲಹಾರ ಮಂದಿರ ಎನ್ನುವ ಫಲಕವಿದ್ದಂತೆ, ಈ ಭಾಗದ ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಖಾನಾವಳಿ ಎನ್ನುವ ಫಲಕ ಕಾಣಸಿಗುತ್ತದೆ.

– ಬಸವರಾಜ್‌ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next