Advertisement

Hot temperature: ಬಿಸಿಲು ಹೆಚ್ಚಳಕ್ಕೆ ತತ್ತರಿಸಿದ ಮಲೆನಾಡಿಗರು

04:44 PM Apr 05, 2024 | Team Udayavani |

ಸಕಲೇಶಪುರ: ತಾಲೂಕಿನಲ್ಲಿ ಹಿಂದೆಂದೂ ಕಾಣದ ಬಿಸಿಲಿನ ವಾತಾವರಣ ಈ ಬಾರಿ ಉಂಟಾಗಿದೆ. ಇದರಿಂದ ಮಲೆನಾಡಿಗರು ತತ್ತರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಹೌದು, ಮಾರ್ಚ್‌ ಮೊದಲ ವಾರದ ವೇಳೆಗೆ ತಾಲೂಕಿನಲ್ಲಿ 32 ಡಿಗ್ರಿ ಉಷ್ಣಾಂಶವಿದ್ದರೆ, ಮಾರ್ಚ್‌ ಅಂತ್ಯದಲ್ಲಿ ಉಷ್ಣಾಂಶದ ಪ್ರಮಾಣ 35 ಡಿಗ್ರಿಗೆ ತಲುಪಿದೆ.

ಮಲೆನಾಡಿನಲ್ಲಿ ಇದರಿಂದ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಮಲೆನಾಡಿನಲ್ಲಿ ಸಾಮಾನ್ಯವಾಗಿ ಮಾರ್ಚ್‌ ಮೊದಲೇ ಅಥವಾ ಎರಡನೇ ವಾರದಲ್ಲಿ ಮಳೆಯಾಗುತ್ತಿತ್ತು. ಆದರೆ, ಈ ಬಾರಿ ಮಾರ್ಚ್‌ ಮಾಹೆ ಮುಗಿದರೂ ಸಹ ಮಳೆ ಬೀಳದ ಪರಿಣಾಮ ಉಷ್ಣಾಂಶ ಹೆಚ್ಚಾಗಿದೆ.

ಕಾಫಿ ಗಿಡಗಳಿಗೆ ನೀರು ಸಿಂಪಡಣೆ: ಅತಿಯಾದ ಉಷ್ಣಾಂಶದಿಂದ ಕಾಫಿ ಬೆಳೆಗಾರರು ಬರುವ ಹಂಗಾಮಿಗೆ ಬೆಳೆಯನ್ನು ಉಳಿಸಿಕೊಳ್ಳಲು ಕೃತಕವಾಗಿ ಕಾಫಿ, ಮೆಣಸು ಬೆಳೆಗಳಿಗೆ ನೀರು ಸಿಂಪಡಿಸಬೇಕಾದ ಅನಿವಾರ್ಯವಿದೆ. ಈಗಾಗಲೇ ಒಂದು ಸುತ್ತು ಕೃತಕವಾಗಿ ನೀರು ಸಿಂಪಡಿಸಿರುವ ಬೆಳೆಗಾರರು, ಮಳೆ ಬರುವ ಆಸೆಯನ್ನು ಹೊಂದಿದ್ದರು. ಆದರೆ, ಇದೀಗ ಮಳೆ ಬೀಳದಿರುವುದರಿಂದ ಕಾಫಿ ಬೆಳೆಗಾರರು ಮತ್ತೂಂದು ಸುತ್ತು ಕೃತಕವಾಗಿ ನೀರು ಸಿಂಪಡಿಸಬೇಕಾಗಿದೆ. ಮಳೆ ಏಪ್ರಿಲ್‌ ಮೊದಲ ಹಾಗೂ ಎರಡನೇ ವಾರದಲ್ಲೂ ಬೀಳದಿದ್ದರೆ ಕಾಫಿ ಬೆಳೆಗಾರರು ಮತ್ತೂಂದು ಸುತ್ತು ಕೃತಕವಾಗಿ ನೀರು ಸಿಂಪಡಿಸಬೇಕಾಗುತ್ತದೆ. ಇದರಿಂದ ಬೆಳೆಗಾರರು ಡೀಸೆಲ್‌ ಹಾಗೂ ಕಾರ್ಮಿಕರ ಮೇಲೆ ಮತ್ತಷ್ಟು ಹಣ ವಿನಿಯೋಗಿಸಬೇಕಾಗುತ್ತದೆ. ಒಂದು ವೇಳೆ ಮಳೆ ಬಂದಲ್ಲಿ ಮಾತ್ರ ಲಕ್ಷಾಂತರ ಹಣ ಉಳಿಯುತ್ತದೆ.

ಅನುಮತಿ ನೀಡದ ತಾಲೂಕು ಆಡಳಿತ: ನೀರಿನ ಸಮಸ್ಯೆ ತಾಲೂಕಿನಲ್ಲಿ ಆರಂಭವಾಗಿದೆ. ಈ ಹಿನ್ನೆಲೆ ಯಲ್ಲಿ ಮುಂಜಾಗ್ರತಾ ಕ್ರಮವಾಗಿ ತಾಲೂಕು ಆಡಳಿತ ಹೊಳೆ ಹಾಗೂ ಸರ್ಕಾರಿ ಕೆರೆಗಳಲ್ಲಿ ಬೆಳೆಗಾರರು ಮೋಟಾರ್‌ ಇಟ್ಟು ಕಾಫಿ ಗಿಡಗಳಿಗೆ ಕೃತಕವಾಗಿ ನೀರು ಸಿಂಪಡಿಸಬಾರದೆಂಬ ಆದೇಶವನ್ನು ತಾಲೂಕು ಆಡ ಳಿತ ಹೊರಡಿಸಿದೆ. ಇದರಿಂದ ಹಲವು ಬೆಳೆಗಾರರು ಹೊಳೆಗಳಲ್ಲಿ ಇಟ್ಟಿದ್ದ ಮೋಟಾರ್‌ಗಳನ್ನು ತೆರವು ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಇದರಿಂದ ಹಲವು ಬೆಳೆಗಾರರು ಕೃತಕವಾಗಿ ಕಾಫಿ ಗಿಡಗಳಿಗೆ ನೀರು ಸಿಂಪಡಿಸುವುದು ಕಷ್ಟಕರವಾಗಿದೆ.

Advertisement

ಮಳೆ ಕೊರತೆಯಿಂದ ಅಂರ್ತಜಲ ಕುಸಿತ: ಮಳೆಯಾಗದ ಕಾರಣ ವಾತಾವರಣದಲ್ಲಿನ ಉಷ್ಣಾಂಶ ಏರುತ್ತಿದೆ. ಇದಲ್ಲದೆ, ಮಳೆ ಕೈಕೊಟ್ಟಿರುವುದರಿಂದ ಹೊಳೆ, ಕೆರೆ, ಹಳ್ಳಗಳಲ್ಲಿ ಹರಿಯುತ್ತಿರುವ ನೀರಿನ ಪ್ರಮಾಣ ಸಂಪೂರ್ಣವಾಗಿ ಕಡಿಮೆಯಾಗಿದೆ. ಅಲ್ಲದೆ, ಹೇಮಾವತಿ ನದಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ಹಲವು ಬೋರ್‌ವೆಲ್‌ಗ‌ಳು, ಬಾವಿಗಳು ಬತ್ತಿ ಹೋಗುತ್ತಿದ್ದು, ಇದರಿಂದ ಕುಡಿಯುವ ನೀರಿನ ಸಮಸ್ಯೆ ಹಲವು ಪ್ರದೇಶಗಳಲ್ಲಿ ಉಂಟಾಗಿದೆ.

ಕೂಲಿ ಕಾರ್ಮಿಕರ ಪರದಾಟ: ಕಾಫಿ ತೋಟ, ಹೊಲಗದ್ದೆಗಳಲ್ಲಿ ಹಾಗೂ ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಸುಡುವ ಬಿಸಿಲಿನಲ್ಲೇ ಕೆಲಸ ಮಾಡಬೇಕಾಗಿದೆ. ಇದರಿಂದಾಗಿ ಕೂಲಿ ಕಾರ್ಮಿಕರು ಸುಡುವ ಬಿಸಿಲಿನಿಂದಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹಲವು ಕಾರ್ಮಿಕರು ಬಿಸಿಲಿನ ಝಳಕ್ಕೆ ಹೆದರಿ ಕೂಲಿ ಕೆಲಸಕ್ಕೆ ಸರಿಯಾಗಿ ಹೋಗದಿರುವುದರಿಂದ ಕಾಫಿ ತೋಟಗಳಲ್ಲಿ ಕೆಲಸಗಳು ಮುಂದಕ್ಕೆ ಹೋಗುವಂತಾಗಿದೆ.

ಆರೋಗ್ಯ ಸಮಸ್ಯೆ: ಬಿಸಿಲಿನ ಝಳದಿಂದ ಸಾರ್ವಜನಿಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಬಿಸಿಲ ಹಿನ್ನೆಲೆಯಲ್ಲಿ ಜನ ತಂಪು ಪಾನೀಯಗಳ ಮೊರೆಗೆ ಹೋಗುತ್ತಿರುವುದರಿಂದ ಅತಿಯಾದ ತಂಪು ಪಾನೀಯಗಳ ಸೇವನೆಯಿಂದ ನೆಗಡಿ ಹಾಗೂ ಜ್ವರಕ್ಕೆ ತುತ್ತಾಗುತ್ತಿದ್ದಾರೆ. ಇದಲ್ಲದೆ ಚರ್ಮರೋಗಗಳಿಗೂ ಅನೇಕರು ತುತ್ತಾಗುತ್ತಿದ್ದಾರೆ.

ತಂಪು ಪಾನೀಯಕ್ಕೆ ಬೇಡಿಕೆ: ಅತಿಯಾದ ಬಿಸಿಲಿನಿಂದ ಮಲೆನಾಡಿನಲ್ಲಿ ತಂಪು ಪಾನೀಯಗಳಿಗೆ ಬೇಡಿಕೆ ಹೆಚ್ಚಾಗಿದೆ. ಪೆಪ್ಸಿ, ಕೋಕ್‌ ಸೇರಿದಂತೆ ಇತರ ಕಂಪನಿಗಳ ತಂಪುಪಾನೀಯವನ್ನು ಯುವ ಜನತೆ ಹೆಚ್ಚು ಸೇವಿಸಿದರೆ, ಮಧ್ಯ ವಯಸ್ಕರು ಹಾಗೂ ಹಿರಿಯರು ಎಳ ನೀರು, ಮಜ್ಜಿಗೆ, ಹಣ್ಣುಗಳ ಜ್ಯೂಸ್‌ ಗಳ ಸೇವನೆಗೆ ಮೊರೆ ಹೋಗುತ್ತಿದ್ದಾರೆ. ಕಲ್ಲಂಗಡಿ ಹಾಗೂ ಐಸ್‌ಕ್ರೀಂಗಳ ಮಾರಾಟ ಮಲೆನಾಡಿನಲ್ಲಿ ಭರ್ಜರಿಯಾಗಿ ನಡೆಯುತ್ತಿದೆ.

ಕಳೆದ ಫೆಬ್ರವರಿಯಲ್ಲಿ 30 ರೂ.ಗೆ ಸಿಗುತ್ತಿದ್ದ ಎಳನೀರಿಗೆ ಇದೀಗ 40 ರೂ. ಬೆಲೆ ನಿಗದಿಪಡಿಸಲಾಗಿದೆ. ಕಾಡ್ಗಿಚ್ಚು ಹೆಚ್ಚಳ ವಾತವಾರಣದಲ್ಲಿನ ಅತಿಯಾದ ಉಷ್ಣಾಂಶದಿಂದಾಗಿ ಅರಣ್ಯದಲ್ಲಿನ ಪ್ರತಿಯೊಂದು ಸಸ್ಯಪ್ರಬೇಧವು ಒಣಗಿನಿಂತಿದೆ. ಅಲ್ಲದೆ, ಮಳೆ ಬಾರದಿರುವುದರಿಂದ ಉಷ್ಣಾಂಷ ಹೆಚ್ಚಾಗಿ ಕಾಡ್ಗಿಚ್ಚಿನ ವರದಿಗಳು ತಾಲೂಕಿನಲ್ಲಿ ಹೆಚ್ಚುತ್ತಿದೆ. ಮಿತಿ ಮೀರಿದ ಉಷ್ಣಾಂಷದಿಂದ ಕಾಡ್ಗಿಚ್ಚು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. 54 ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ತಾಲೂಕಿನಲ್ಲಿ ಸುಮಾರು 54 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ.

ಅಲ್ಲದೆ, ಪಟ್ಟಣದ ವ್ಯಾಪ್ತಿಯ ಕೆಲವು ಬಡಾವಣೆಗಳಲ್ಲಿ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಹಲವು ಬಡಾವಣೆಗಳಲ್ಲಿ ನಿತ್ಯ ನೀರಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಕಾಡುಗಳಲ್ಲೂ ನೀರಿಲ್ಲದೆ ಕಾಡು ಪ್ರಾಣಿಗಳು, ಜೀವ ಸಂಕುಲಗಳು, ಗ್ರಾಮೀಣ ಪ್ರದೇಶಗಳಲ್ಲು ಜಾನುವಾರುಗಳು ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸುಧೀರ್‌.ಎಸ್‌.ಎಲ್‌

Advertisement

Udayavani is now on Telegram. Click here to join our channel and stay updated with the latest news.

Next