ದೇವದುರ್ಗ: ಸರ್ವೋತ್ಛ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಬರಪೀಡಿತ ತಾಲೂಕು ಕೇಂದ್ರಗಳಲ್ಲಿನ
ಅನುದಾನಿತ ಮತ್ತು ಸರಕಾರಿ ಶಾಲೆಗಳಲ್ಲಿ ಬೇಸಿಗೆ ರಜೆಯಲ್ಲೂ ಮಕ್ಕಳಿಗೆ ಬಿಸಿಯೂಟ ಯೋಜನೆ ಜಾರಿಗೊಳಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ರಾಜ್ಯದ 30 ಜಿಲ್ಲೆಗಳ 156 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಬೇಸಿಗೆ ರಜೆಯಲ್ಲಿ ಸರಕಾರಿ
ಮತ್ತು ಅನುದಾನಿತ ಶಾಲೆಗಳ 1ರಿಂದ 9ನೇ ತರಗತಿ ಮಕ್ಕಳಿಗೆ ಬಿಸಿಯೂಟ ಯೋಜನೆ ಮುಂದುವರಿಸುವಂತೆ ಮತ್ತು ಇದಕ್ಕಾಗಿ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಆದೇಶ ಹೊರಡಿಸಿದೆ.
ಏನಿದು ಯೋಜನೆ: ಬೇಸಿಗೆ ರಜೆಯಲ್ಲಿ ಸರಕಾರಿ ಶಾಲೆಯಲ್ಲಿ ಬಿಸಿಯೂಟ ಯೋಜನೆಗೆ ಮಕ್ಕಳ ಪಾಲಕರಿಂದ ಒಪ್ಪಿಗೆ ಪತ್ರ
ನೀಡಿದ ಮಕ್ಕಳಿಗೆ ಬಿಸಿಯೂಟ ಉಪಹಾರ ಒದಗಿಸಲಾಗುತ್ತದೆ. ಯೋಜನೆ ಕುರಿತು ಮಾಹಿತಿ ಒದಗಿಸಿ ಎಲ್ಲ ಮಕ್ಕಳ ಒಪ್ಪಿಗೆ ಪತ್ರಕ್ಕೆ ಸಹಿ ಪಡೆಯಬೇಕು. ಮುಖ್ಯಶಿಕ್ಷಕರು ಮಕ್ಕಳ ಪಟ್ಟಿ ತಯಾರಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ನೀಡಬೇಕು. ಒಂದೇ ಗ್ರಾಮದಲ್ಲಿ ಎರಡೂಮೂರು ಶಾಲೆಗಳಿದ್ದಲ್ಲಿ ಕೇಂದ್ರ ಶಾಲೆಯೆಂದು ಗುರುತಿಸಿ ಉಳಿದ ಶಾಲಾ ಮಕ್ಕಳ ಪಟ್ಟಿಯನ್ನು ಕೇಂದ್ರ ಶಾಲೆಯ ಮುಖ್ಯಶಿಕ್ಷಕರಿಗೆ ನೀಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಎಸ್‌ಎಂಎಸ್ ಕಡ್ಡಾಯ: ಬೇಸಿಗೆ ರಜೆಯಲ್ಲಿ ಬಿಸಿಯೂಟ ಯೋಜನೆ ಕರ್ತವ್ಯಕ್ಕೆ ನಿಯೋಜನೆಗೊಂಡ ಶಿಕ್ಷಕರಿಗೆ ಗಳಿಕೆ ರಜೆ ಸೌಲಭ್ಯವಿದೆ. ಶಿಕ್ಷಕರ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನೀಡಬೇಕು. ನಿತ್ಯ ಬಿಸಿಯೂಟ ಸೇವಿಸಲು ಆಗಮಿಸುವ ಮಕ್ಕಳ ಸಂಖ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಎಸ್ ಎಂಎಸ್ ಮೂಲಕ ಮಾಹಿತಿ ನೀಡಬೇಕು.
ನೋಡಲ್ ಅಧಿಕಾರಿಗಳು: ಪಟ್ಟಣ ಸೇರಿ ತಾಲೂಕಿನಾದ್ಯಂತ ಸರಕಾರಿ ಶಾಲೆಯಲ್ಲಿ ಜಾರಿ ಮಾಡಿದ ಬೇಸಿಗೆ ಬಿಸಿಯೂಟ ಉಪಹಾರ ಯೋಜನೆಗೆ ತಾಲೂಕು ಹಂತದಲ್ಲಿ ಬಿಆರ್‌ಸಿ ಮತ್ತು ಕ್ಲಸ್ಟರ್ ಹಂತದಲ್ಲಿ ಸಿಆರ್‌ಪಿಗಳನ್ನು ನೋಡಲ್ ಅಧಿಕಾರಿಗಳ ಎಂದು ನೇಮಿಸಬೇಕು. ನಿಯೋಜಿತ ಅಧಿಕಾರಿಗಳು ಬಿಸಿಯೂಟದ ನಿತ್ಯ ವರದಿಯನ್ನು ಮೇಲಧಿಕಾರಿಗಳಿಗೆ ನೀಡಬೇಕು. ಕ್ಲಸ್ಟರ್ ಹಂತದಲ್ಲಿ ಸಿಆರ್ ಪಿಗಳು ಲಭ್ಯವಿಲ್ಲದಿದ್ದಲ್ಲಿ ಶಿಕ್ಷಣ ಸಂಯೋಜಕ ಅಥವಾ ಪ್ರೌಢಶಾಲಾ ಸಹ ಶಿಕ್ಷಕರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲು ಆದೇಶಿಸಲಾಗಿದೆ.
ಕೇಂದ್ರಗಳಿಗೆ ಆಹಾರ: ಕೇಂದ್ರ ಶಾಲೆಯೆಂದು ಗುರುತಿಸಿರುವ ಶಾಲಾ ಮುಖ್ಯಶಿಕ್ಷಕರು ಆಹಾರ ಧಾನ್ಯಗಳ ಬೇಡಿಕೆ ಸಲ್ಲಿಸುವ ಮುನ್ನ ಈ ಕೇಂದ್ರ ಶಾಲೆಗೆ ಜೋಡಿಸಲ್ಪಟ್ಟ ಶಾಲೆಗಳ ಮುಖ್ಯಶಿಕ್ಷಕರು ಬಿಸಿಯುಟ ಪಡೆಯಲು ಇಚ್ಚಿಸುವ ಮಕ್ಕಳ ಪಟ್ಟಿ ಕ್ರೋಢೀಕರಿಸಿ ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ ಅಧಿಕಾರಿಗಳಿಗೆ ಮಾಹಿತಿ ಸಲ್ಲಿಸಬೇಕು.
ಸಾದಿಲ್ವಾರು ಅನುದಾನ ಮತ್ತು ಅಡುಗೆ ಸಿಬ್ಬಂದಿ ಗೌರವಧನವನ್ನು ಮುಂಗಡವಾಗಿ ಶಾಲೆಗಳ ಖಾತೆಗೆ ಜಮಾ
ಮಾಡುವುದು ತಾಲೂಕು ಪಂಚಾಯತಿ ಅಧಿಕಾರಿ, ಅಕ್ಷರ ದಾಸೋಹ ಅಧಿಕಾರಿಗಳ ಹೊಣೆಯಾಗಿದೆ.
ನೀರಿನ ಕೊರತೆ: ಬೇಸಿಗೆ ರಜೆಯಲ್ಲಿ ಬಿಸಿಯೂಟಕ್ಕೆ ನೀರಿನ ತೊಂದರೆ ಆಗದಂತೆ ಶಾಲೆಗೆ ನೀರು ಒದಗಿಸುವುದು ಗ್ರಾಪಂ
ಅಭಿವೃದ್ಧಿ ಅಧಿಕಾರಿಗಳ ಹೊಣೆಯಾಗಿದ್ದು, ಈ ಕುರಿತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ನಿಗಾ ವಹಿಸಬೇಕೆಂದು
ಸೂಚನೆ ನೀಡಲಾಗಿದೆ. ಬೇಸಿಗೆ ರಜೆಯಲ್ಲಿ ಬರಪೀಡಿತ ತಾಲೂಕುಗಳ ಶಾಲಾ ಮಕ್ಕಳಿಗೆ ಬಿಸಿಯೂಟ ಒದಗಿಸುವ
ಯೋಜನೆ ಯಶಸ್ಸಿಗೆ ಈಗಾಗಲೇ ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಬರ ಪೀಡಿತ ತಾಲೂಕುಗಳ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಯೋಜನೆ ಜಾರಿ ಮಾಡಲಾಗಿದೆ. ಈಗಾಗಲೇ ಶಾಲಾ ಮುಖ್ಯಶಿಕ್ಷಕರಿಂದ ಬಿಸಿಯೂಟ ಸೇವಿಸುವ ಮಕ್ಕಳ ಸಂಖ್ಯೆ ಪಡೆಯಲಾಗಿದೆ. ಕಾರ್ಯಕ್ರಮ ಯಶಸ್ಸಿಗೆ ಸಿದ್ದತೆ ಮಾಡಲಾಗಿದೆ.
ಬಂದೋಲಿಸಾಬ, ಅಕ್ಷರ ದಾಸೋಹ ಅಧಿಕಾರಿ, ದೇವದುರ್ಗ
ನಾಗರಾಜ ತೇಲ್ಕರ್