Advertisement

26 ರಿಂದ ಬಿಸಿಯೂಟ ಬಂದ್‌

09:58 PM Dec 20, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಬಿಸಿಯೂಟ ಯೋಜನೆ ಖಾಸಗೀಕರಣಗೊಳಿಸಲು ಹೊರಟಿರುವ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ ಹಾಗೂ ಬಿಸಿಯೂಟ ನೌಕರರಿಗೆ ಕನಿಷ್ಟ ವೇತನ ಜಾರಿಗೊಳಿಸುವಂತೆ ಒತ್ತಾಯಿಸಿ ಜಿಲ್ಲಾದ್ಯಂತ ಡಿ.26 ರಿಂದ ಬಿಸಿಯೂಟ ಬಂದ್‌ಗೊಳಿಸಿ ನೌಕರರು, ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಮುನಿಲಕ್ಷ್ಮೀ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಆರ್‌.ಮಂಜುಳಾ ತಿಳಿಸಿದರು.

Advertisement

ನಗರದ ವಾಪಸಂದ್ರದ ಸಿಐಟಿಯು ಕಚೇರಿಯಲ್ಲಿ ಶುಕ್ರವಾರ ಈ ಕುರಿತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಸಿಯೂಟ ನೌಕರರನ್ನು ರಾಜ್ಯ ಸರ್ಕಾರ ಕೂಡಲೇ ಡಿ ಗ್ರೂಪ್‌ ನೌಕರರೆಂದು ಪರಿಗಣಿಸಬೇಕೆಂದು ಆಗ್ರಹಿಸಿದರು.

ಕೆಲಸದಿಂದ ತೆಗೆಯಬಾರದು: ಬಿಸಿಯೂಟ ನೌಕರರಿಗೆ ಎಲ್‌ಐಸಿ ಆಧಾರಿತ ನಿವೃತ್ತ ವೇತನ ಸೌಲಭ್ಯ ಜಾರಿಗೆ ತರಬೇಕು, ಬಿಸಿಯೂಟ ನೌಕರರಿಗೆ ಹೆರಿಗೆ ರಜೆ ಹಾಗೂ ಹೆರಿಗೆ ಭತ್ಯೆ ನೀಡಬೇಕು, 12ನೇ ತರಗತಿವರೆಗೂ ಬಿಸಿಯೂಟ ಯೋಜನೆ ವಿಸ್ತರಿಸಬೇಕು, ಬರಗಾಲ ಹಾಗೂ ವಿಶೇಷ ದಿನಗಳಲ್ಲಿ ನೌಕರರಿಗೆ ವೇತನ ನೀಡಬೇಕು, ದಲಿತ ಮಹಿಳೆಯರಿಂದ ಅಡುಗೆ ಮಾಡಿಸಬೇಕು, ಅಡುಗೆ ಸಿಬ್ಬಂದಿ ಮೇಲೆ ಪದೇ ಪದೆ ಇಲ್ಲಸಲ್ಲದ ಆರೋಪ ಹೊರೆಸಿ ಕೆಲಸದಿಂದ ತೆಗೆಯುವ ಪ್ರವೃತ್ತಿ ನಿಲ್ಲಿಸಬೇಕೆಂದು ಆಗ್ರಹಿಸಿದರು.

ಆರೋಗ್ಯ ಕಾರ್ಡ್‌ ವಿತರಿಸಲಿ: ಬಿಸಿಯೂಟ ನೌಕರರನ್ನು ನೇರವಾಗಿ ಶಿಕ್ಷಣ ಇಲಾಖೆಯಡಿಯಲ್ಲಿ ಮೇಲ್ವಿಚಾರಣೆ ಮಾಡಬೇಕು, ಹಾಜರಾತಿ ಆಧಾರದಲ್ಲಿ ಕೆಲಸದಿಂದ ಕೈ ಬಿಡುವ ಕ್ರಮ ನಿಲ್ಲಬೇಕೆಂದ ಮುಖಂಡರು, ನೌಕರರಿಗೆ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ ಹಾಗೂ ಯೂನಿರ್ವಸಲ್‌ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಬೇಕೆಂದರು.

ಮಾರ್ಗದರ್ಶನ ನೀಡಬೇಕು: ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಿಗೆ ಹಾಗೂ ಇತರೆ ಸಿಬ್ಬಂದಿಗೆ ಸಿಗುವ ಹಾಗೆ ಬೇಸಿಗೆ ಮತ್ತು ದಸರಾ ರಜಾ ದಿನಗಳ ಸೌಲಭ್ಯ ಭತ್ಯೆ ನೀಡಬೇಕೆಂದರು. ಕಾಲಕಾಲಕ್ಕೆ ಮುಖ್ಯ ಅಡುಗೆ ಸಿಬ್ಬಂದಿಯೊಂದಿಗೆ ಸಭೆಗಳನ್ನು ನಡೆಸಿ ಸೂಕ್ತ ಮಾರ್ಗದರ್ಶನ ನೀಡಬೇಕೆಂದರು.

Advertisement

ಅನಿರ್ದಿಷ್ಟಾವಧಿ ಹೋರಾಟ: ರಾಜ್ಯದಲ್ಲಿ 1.18 ಲಕ್ಷ ಬಿಸಿಯೂಟ ನೌಕರರು ಕೆಲಸ ಮಾಡುತ್ತಿದ್ದು ಅಲ್ಪ ವೇತನಕ್ಕೆ ದುಡಿಯಲಾಗುತ್ತಿದೆ. ಬಿಸಿಯೂಟ ನೌಕರರಿಗೆ ಕನಿಷ್ಠ 21 ಸಾವಿರ ರೂ. ವೇತನ ನೀಡಬೇಕೆಂದು ಕೋರಿ ಹಲವು ಬಾರಿ ಪ್ರತಿಭಟನೆ, ಧರಣಿ ನಡೆಸಿದರೂ ಪ್ರಯೋಜನವಾಗಿಲ್ಲ. ಆ ಕಾರಣಕ್ಕಾಗಿ ಬಿಸಿಯೂಟ ನೌಕರರಿಗೆ ಕೆಲಸದ ಭದ್ರತೆ, ಕನಿಷ್ಠ ವೇತನ ಹಾಗೂ ಸೇವಾ ನಿಯಮಾವಳಿ ಹಾಗೂ ನಿವೃತ್ತ ವೇತನಕ್ಕಾಗಿ ಆಗ್ರಹಿಸಿ

ಡಿ.26 ರಿಂದ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಕರೆ ಮೇರೆಗೆ ಜಿಲ್ಲಾದ್ಯಂತ ಬಿಸಿಯೂಟ ಯೋಜನೆಯನ್ನು ರದ್ದುಗೊಳಿಸಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷ ಬಿ.ಎನ್‌.ಮುನಿಕೃಷ್ಣಪ್ಪ, ಉಪಾಧ್ಯಕ್ಷ ಬಾಗೇಪಲ್ಲಿ ಮುಸ್ತಾಫ‌, ಖಜಾಂಚಿ ರಾಜಮ್ಮ, ಮುಖಂಡರಾದ ಉಮಾ, ಗೌರಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯ ಸರ್ಕಾರ ಬಿಸಿಯೂಟ ನೌಕರರ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸುವವರೆಗೂ ಪ್ರಮುಖವಾಗಿ ಯೋಜನೆ ಖಾಸಗೀಕರಣ ಕೈ ಬಿಡಬೇಕು. ಕನಿಷ್ಠ ವೇತನ ನೌಕರರಿಗೆ ಕೊಡಬೇಕು. ಪಿಂಚಣಿ ಸೌಲಭ್ಯ ನೀಡಬೇಕೆಂದು ಅನಿರ್ದಿಷ್ಟಾವಧಿ ಹೋರಾಟವನ್ನು ಡಿ.26 ರಿಂದ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ.
-ಬಿ.ಎನ್‌.ಮುನಿಕೃಷ್ಣಪ್ಪ, ಜಿಲ್ಲಾ ಗೌರವಾಧ್ಯಕ್ಷ, ಬಿಸಿಯೂಟ ನೌಕರರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next