ಶಿಡ್ಲಘಟ್ಟ: ಸರ್ಕಾರಿ ಶಾಲಾ ಮಕ್ಕಳ ದಾಖಲಾತಿ ಮತ್ತು ಪೌಷ್ಟಿಕಾಂಶ ವೃದ್ಧಿಸುವ ಉದ್ದೇಶದಿಂದ ಅಕ್ಷರದಾಸೋಹ ಬಿಸಿಯೂಟ ಯೋಜನೆಯಡಿ ಮಧ್ಯಾಹ್ನದ ಬಿಸಿಯೂಟದ ಕಿಟ್ (ಆಹಾರ ಧಾನ್ಯಗಳು) ಯೋಜನೆಯಿಂದ ಜಿಲ್ಲೆಯ 96,434 ವಿದ್ಯಾರ್ಥಿಗಳು ಈ ಭಾಗ್ಯದಿಂದ ವಂಚಿತಗೊಂಡಿದ್ದಾರೆ.
ಆಹಾರಧಾನ್ಯ ಸ್ಥಗಿತ ಕೋವಿಡ್ ಕಾರಣದಿಂದ ಶಾಲೆಯಿಂದ ದೂರ ಉಳಿದಿದ್ದ ವಿದ್ಯಾರ್ಥಿಗಳ ಮನೆಗಳಿಗೆ ತಲುಪುತ್ತಿದ್ದ ಆಹಾರ ಸಾಮಗ್ರಿಗಳು ಕಳೆದ ಮೂರು ತಿಂಗಳಿಂದ ಸ್ಥಗಿತಗೊಂಡಿದ್ದು, ಮಕ್ಕಳ ಪೌಷ್ಟಿಕಾಂಶ ಹೆಚ್ಚಿಸುವ ಸಲುವಾಗಿ ಜಾರಿಗೊಳಿಸಿದ ಯೋಜನೆ ಹಳ್ಳ ಹಿಡಿಯುಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಕೋವಿಡ್-19 ಸಂಕಷ್ಟದ ಪರಿಸ್ಥಿತಿ ನಿವಾರಿಸಲು ಮತ್ತು ಬರಪೀಡಿತ ಮತ್ತು ಬರಪೀಡಿತರಹಿತ ತಾಲೂಕುಗಳಲ್ಲಿ ಇರುವ 1,636 ಸರ್ಕಾರಿ ಶಾಲೆ, ಅನುದಾನಿತ ಶಾಲೆಗಳ 96,434 ವಿದ್ಯಾರ್ಥಿಗಳಿಗೆ ಮಾರ್ಚ್, ಏಪ್ರೀಲ್, ಮೇ ಅಂತ್ಯದವರೆಗೆ ಆಹಾರ ಧಾನ್ಯಗಳ (ಕಿಟ್)ನ್ನು ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಶಾಲಾ ಶಿಕ್ಷಕರಿಂದ ನಡೆಸಲಾಯಿತು. ಆದರೆ ಕಳೆದ ಮೂರು ತಿಂಗಳಿಂದ ಶಾಲಾ ವಿದ್ಯಾರ್ಥಿಗಳಿಗೆ ಆಹಾರ ಧಾನ್ಯಗಳ ಭಾಗ್ಯ ಇಲ್ಲದಂತಾಗಿದೆ.
ನೌಕರರ ಅತಂತ್ರ ಪರಿಸ್ಥಿತಿ: ಕೋವಿಡ್‌ನಿಂದ ಮಕ್ಕಳು ಶಾಲೆಗೆ ಬರದಿದ್ದರೆ ಅವರಲ್ಲಿ ಪೌಷ್ಟಿಕಾಂಶದ ಕೊರತೆಯಾಗಬಾರದು ಎಂದು 1636 ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳ 96,434 ಮಕ್ಕಳು ಈ ಯೋಜನೆಯಿಂದ ಲಾಭ ಪಡೆಯುತ್ತಿದ್ದರು. ಆದರೇ ಮೇ ಅಂತ್ಯಕ್ಕೆ ಯೋಜನೆ ಸ್ಥಗಿತಗೊಂಡಿದ್ದು, ಜೂನ್-ಜುಲೈ ಮತ್ತು ಆಗಸ್ಟ್ ತಿಂಗಳ ಆಹಾರ ಧಾನ್ಯಗಳು ಸರ್ಕಾರದಿಂದ ಪೂರೈಕೆಯಾಗಬೇಕಾಗಿದೆ.ಮತ್ತೂಂದೆಡೆ ಶಾಲೆಗಳಲ್ಲಿ ಬಿಸಿಯೂಟ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ನೌಕರರು ಸಹ ಅತಂತ್ರ ಪರಿಸ್ಥಿತಿ ಎದುರಿಸುತ್ತಿದ್ದಾರೆ.
21 ದಿನ ಸರಬರಾಜು: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 21 ದಿನಗಳ ಕಾಲ (ಮಾರ್ಚ್ 13 ರಿಂದ ಏಪ್ರಿಲ್ 10 ವರೆಗೆ) 1 ರಿಂದ 5ನೇ ತರಗತಿಯ ಮಕ್ಕಳಿಗೆ ಪ್ರತಿನಿತ್ಯ 100 ಗ್ರಾಂ ಅಕ್ಕಿ (ಗೋಧಿ), 50 ಗ್ರಾಂ ಬೇಳೆ, ಒಟ್ಟು ತಲಾ ಒಂದು ಮಗುವಿಗೆ 21 ದಿನಗಳ ಅವಧಿಯಲ್ಲಿ 2 ಕೆ.ಜಿ. 100 ಗ್ರಾಂ ಅಕ್ಕಿ (ಗೋಧಿ), 1 ಕೆ.ಜಿ.50 ಗ್ರಾಂ ಬೇಳೆ ಪೂರೈಕೆ ಮಾಡಲಾಗಿತ್ತು. ಅದೇ ರೀತಿ 6 ರಿಂದ 10 ನೇ ತರಗತಿಯ ಮಕ್ಕಳಿಗೆ ಪ್ರತಿನಿತ್ಯ 150 ಗ್ರಾಂ ಅಕ್ಕಿ (ಗೋಧಿ), 75 ಗ್ರಾಂ ಬೇಳೆ ಸಹಿತ 21 ದಿನಗಳ ಅವಧಿಗೆ 1.5 ಕೆ.ಜಿ. ಬೇಳೆ, 7 ಕೆ.ಜಿ. 750 ಗ್ರಾಂ ಅಕ್ಕಿ ವಿದ್ಯಾರ್ಥಿಗಳಿಗೆ ಸರಬರಾಜು ಮಾಡಲಾಗಿತ್ತು. 37 ದಿನ ಸರಬರಾಜು: ಏಪ್ರಿಲ್ 11ರಿಂದ ಮೇ 30 ವರೆಗೆ ಬರಪೀಡಿತ ಮತ್ತು ಬರಪಪೀಡಿತವಲ್ಲದ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ 37 ದಿನಗಳ ಕಾಲ ಆಹಾರ ಧಾನ್ಯಗಳನ್ನು ಪೂರೈಕೆ ಮಾಡಲಾಗಿತ್ತು. ಈ ಅವಧಿಯಲ್ಲಿ ಪ್ರಾಥಮಿಕ ಶಾಲೆಗಳ ಮಗುವಿಗೆ ಪ್ರತಿನಿತ್ಯ 100 ಗ್ರಾಂ ಅಕ್ಕಿ, 50 ಗ್ರಾಂ ಬೇಳೆ (3 ಕೆ.ಜಿ.700 ಗ್ರಾಂ ಅಕ್ಕಿ) (2 ಕೆ.ಜಿ. 250 ಗ್ರಾಂ ಬೇಳೆ) ಸರಬರಾಜು ಮಾಡಲಾಗಿತ್ತು. ಇದೇ ಮಾದರಿಯಲ್ಲಿ 6 ರಿಂದ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗೆ ಪ್ರತಿನಿತ್ಯ 150 ಗ್ರಾಂ ಅಕ್ಕಿ (ಗೋಧಿ), 75 ಗ್ರಾಂ ಬೇಳೆಯಂತೆ 37 ದಿನಗಳ ಅವಧಿಯಲ್ಲಿ 3 ಕೆ.ಜಿ.500 ಗ್ರಾಂ ಬೇಳೆ ಹಾಗೂ 5 ಕೆ.ಜಿ. 500 ಗ್ರಾಂ ಅಕ್ಕಿ ಸರಬರಾಜು ಮಾಡಲಾಗಿತ್ತು.
ಆಹಾರ ಧಾನ್ಯ ಪೂರೈಕೆ ಮಾಡಲಿ: ಕೋವಿಡ್-19 ಸಂದರ್ಭದಲ್ಲಿ ಯಾರೂ ಸಹ ಹಸಿವಿನಿಂದ ಅಸುನೀಗಬಾರದೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳುಪಡಿತರ ಚೀಟಿ ಹೊಂದಿರುವ ಬಡವರಿಗೆ ಉಚಿತವಾಗಿ ಮತ್ತು ಕ್ರಮಬದ್ಧವಾಗಿ ಆಹಾರ ಸಾಮಗ್ರಿಗಳನ್ನು ಪೂರೈಕೆ ಮಾಡುತ್ತಿದೆ. ಆದರೆ ದೇಶದ ಭವಿಷ್ಯ ಎಂದು ಪ್ರತಿಬಿಂಬಿ ಸುವ ವಿದ್ಯಾರ್ಥಿಗಳು ಪೌಷ್ಟಿಕ ಆಹಾರಕ್ಕಾಗಿ ಕಳೆದ 3 ತಿಂಗಳಿಂದ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಲಾದರೂ ಸಂಬಂಧಿ ಸಿದ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಆಹಾರ ಧಾನ್ಯಗಳನ್ನು ಪೂರೈಕೆ ಮಾಡಲು ಮುಂದಾಗಬೇಕಾಗಿದೆ.
ಮೂರು ತಿಂಗಳಿಗೆ ಸೀಮಿತವೇ? : ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 909 ಪ್ರಾಥಮಿಕ ಶಾಲೆಗಳ 44,150 ಮಕ್ಕಳು, 572 ಹಿರಿಯ ಪ್ರಾಥಮಿಕ ಶಾಲೆಗಳ 30,712 ಹಾಗೂ 150 ಪ್ರೌಢ ಶಾಲೆಗಳ 21,572 ಮಕ್ಕಳು ಆಹಾರ ಧಾನ್ಯ ಭಾಗ್ಯದಿಂದ ವಂಚಿತಗೊಂಡಿದ್ದು, ಅಕ್ಷರ ದಾಸೋಹ ಯೋಜನೆಯ ಇಲಾಖಾ ಅಧಿಖಾರಿಗಳು ಸರ್ಕಾರದಿಂದ ಆಹಾರ ಧಾನ್ಯಗಳು ಸರಬರಾಜು ಆಗುವ ನಿರೀಕ್ಷೆಯಲ್ಲಿದ್ದಾರೆ. ಇದರಿಂದ ಪೌಷ್ಟಿಕಾಂಶ ಹೆಚ್ಚಿಸುವ ಯೋಜನೆ ಕೇವಲ ಮೂರು ತಿಂಗಳಿಗೆ ಸೀಮಿತವೇ ಎಂದು ಪೋಷಕರು ಪ್ರಶ್ನಿಸುವಂತಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜೂನ್-ಜುಲೈ ಮತ್ತು ಆಗಸ್ಟ್ ತಿಂಗಳಿನ ಅಕ್ಷರದಾಸೋಹ ಬಿಸಿಯೂಟ ಯೋಜನೆಯ ಆಹಾರಧಾನ್ಯಗಳನ್ನು ಬಿಡುಗಡೆ ಮಾಡಲು ಇಲಾಖೆಯ ಜಂಟಿ ನಿರ್ದೇಶಕರಿಂದಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಆಹಾರ ಧಾನ್ಯಗಳನ್ನು ಪೂರೈಕೆ ಮಾಡಿದರೆ ಮಕ್ಕಳಿಗೆ ವಿತರಿಸಲು ಕ್ರಮ ಕೈಗೊಳ್ಳುತ್ತೇವೆ.
– ಜಿ.ರಘುನಾಥ್‌ರೆಡ್ಡಿ, ಜಿಲ್ಲಾ ಅಕ್ಷರದಾಸೋಹ ಯೋಜನೆಯ ಶಿಕ್ಷಣಾಕಾರಿ
–ಎಂ.ಎ.ತಮೀಮ್ ಪಾಷ