ದೇವನಹಳ್ಳಿಯ ಜನರ ನಾಲಿಗೆಗೆ ಬೋಂಡದ ರುಚಿ ಹತ್ತಿಸಿದ ಕೀರ್ತಿಯಲ್ಲಿ ಇವರ ಪಾಲೂ ಇದೆ. ಚಳಿಗಾಲ, ಮಳೆಗಾಲದಲ್ಲಂತೂ ರವೆ ವಡೆ ಮತ್ತು ಈರುಳ್ಳಿ ಬೋಂಡ ಸವಿಯಲು ಜನ ಈ ಹೋಟೆಲನ್ನು ಹುಡುಕಿಕೊಂಡು ಹೋಗುತ್ತಾರೆ. ಅಲ್ಲಿಯೇ ಕಾದು ಕುಳಿತು, ಬೋಂಡ ರುಚಿಯನ್ನು ಸವಿಯುವುದೂ ಉಂಟು.
ಬಿಸಿ ಬಿಸಿಯಾದ ರವೆ ವಡೆ, ಈರುಳ್ಳಿ ಬೋಂಡ, ಹೆಸರುಕಾಳು ಉಸಲಿ. ಇದನ್ನೆಲ್ಲ ನೆನಪಿಸಿಕೊಂಡರೇ ಬಾಯಲ್ಲಿ ನೀರು ಬರುತ್ತದೆ. ಅದರಲ್ಲೂ ರವೆ ವಡೆ ತಿನ್ನುವಾಗ, ಸುಡುವ ವಡೆಯ ಮಧ್ಯೆ ಮಧ್ಯೆ ಕೊಬ್ಬರಿ ಚೂರು ಬಾಯಿಗೆ ಸಿಕ್ಕಾಗ ರುಚಿಯೋ ರುಚಿ. ಇನ್ನು ಸುಡುವ ಈರುಳ್ಳಿ ಬೋಂಡದ ರುಚಿ ಕೇಳಬೇಕೆ? ಮಳೆ ಬಂದಾಗಲಂತೂ ಹೆಸರಕಾಳು ಉಸಲಿ ಈ ದೇವನಹಳ್ಳಿ ಜನಕ್ಕೆ ನೆನಪಾಗದೇ ಇರುವುದಿಲ್ಲ.
ಹೌದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಗೆ ಬಂದವರು, ಅಲ್ಲಿನ ಕೋಟೆ ರಸ್ತೆಯ ಗ್ರಂಥಾಲಯದ ಬಳಿ ನೀವು ಸುಳಿದಾಡಿದರೆ, ಬೋಂಡದ ಪರಿಮಳ ಘಮ್ಮೆಂದು ಅಡರುತ್ತದೆ. ನಗರದ ಕೋಟೆ ನಿವಾಸಿಗಳಾದ ವಾಸುದೇವಭಟ್ ಮತ್ತು ಅನಂತಭಟ್ ಎಂಬ ಅಣ್ಣತಮ್ಮಂದಿರಿಬ್ಬರು ಕಳೆದ 42 ವರ್ಷಗಳಿಂದ ವಡೆ, ಬೋಂಡ ಹೋಟೆಲ್ ನಡೆಸುತ್ತಿದ್ದಾರೆ. ಸಂಜೆ 4 ಗಂಟೆಯಿಂದ ರಾತ್ರಿ 9ರವರೆಗೆ ತೆರೆದಿರುತ್ತದೆ.
ದೇವನಹಳ್ಳಿಯ ಜನರ ನಾಲಿಗೆಗೆ ಬೋಂಡದ ರುಚಿ ಹತ್ತಿಸಿದ ಕೀರ್ತಿಯಲ್ಲಿ ಇವರ ಪಾಲೂ ಇದೆ. ಚಳಿಗಾಲ, ಮಳೆಗಾಲದಲ್ಲಂತೂ ರವೆ ವಡೆ ಮತ್ತು ಈರುಳ್ಳಿ ಬೋಂಡ ಸವಿಯಲು ಜನ ಈ ಹೋಟೆಲನ್ನು ಹುಡುಕಿಕೊಂಡು ಹೋಗುತ್ತಾರೆ. ಅಲ್ಲಿಯೇ ಕಾದು ಕುಳಿತು, ಬೋಂಡ ರುಚಿಯನ್ನು ಸವಿಯುವುದೂ ಉಂಟು. ದೇವನಹಳ್ಳಿಯಲ್ಲಿ ಇದು- ಭಟ್ಟರ ಹೋಟೆಲ್ ಎಂದೇ ಹೆಸರಾಗಿದೆ.
1976ರಲ್ಲಿ ಆರಂಭವಾದ ಹೋಟೆಲ್, ಈಗಲೂ ಜನಪ್ರಿಯತೆಯನ್ನೂ ತನ್ನೊಂದಿಗೇ ಉಳಿಸಿಕೊಂಡಿದೆ. ವರ್ಷಗಳು ಉರುಳುತ್ತಾ ಹೋದಂತೆಲ್ಲಾ ದೇವನಹಳ್ಳಿಯೂ ಬೆಳೆದಿದೆ. ಈಗ ದೇವನಹಳ್ಳಿ ಕೂಡ “ಸಿಟಿ’ ಆಗಿದೆ. ಎಲ್ಲ ಉದ್ಯಮದಲ್ಲೂ ಇದ್ದಂತೆ ಇಲ್ಲೂ ನಾನಾ ಸ್ಪರ್ಧೆಗಳು ಎದುರಾದವು. ಇಷ್ಟಾದರೂ ಇವರು ಬೋಂಡ ಅಂಗಡಿಯನ್ನು ಬಿಟ್ಟಿಲ್ಲ. ರುಚಿಗೆ ಪ್ರಾಮುಖ್ಯತೆ. ಲಾಭ ಕಡಿಮೆ ಆದರೂ ಪರವಾಗಿಲ್ಲ.
ರುಚಿ ಕೆಡಬಾರದು ಎನ್ನುವ ಧ್ಯೇಯವನ್ನು ಮುಂದುರಿಸಿಕೊಂಡು ಬರುತ್ತಿದ್ದಾರೆ. “ನಮ್ಮ ತಂದೆ ಕಾಲದಿಂದಲೂ ಸಹ ಬೋಂಡಾ ಅಂಗಡಿ ವ್ಯಾಪಾರ ಮಾಡಿಕೊಂಡು ಬರುತ್ತಿದ್ದೇವೆ. ಅದನ್ನು ನಿಲ್ಲಿಸಬಾರದು ಎಂಬ ಕಾರಣದಿಂದ ಎಷ್ಟೇ ಕಷ್ಟವಾದರೂ ಸಹ ಕೈಬಿಡದೆ ಮಾಡುತ್ತಿದ್ದೇವೆ. ಎಣ್ಣೆ, ಕಡ್ಲೆ ಹಿಟ್ಟು, ರವೆಗಳ ಬೆಲೆ ಏರಿಕೆಯಾಗಿರುವುದರಿಂದ ಬೋಂಡಾ ಅಂಗಡಿ ನಡೆಸುವುದೇ ಕಷ್ಟ ‘ ಎನ್ನುತ್ತಾರೆ ವಾಸುದೇವ್ ಭಟ್ ಮತ್ತು ಅನಂತ ಭಟ್.
* ಎಸ್.ಮಹೇಶ್