ಬೆಂಗಳೂರು: ಮೆಟ್ರೋ ಟ್ರಾವೆಲ್ ಕಾರ್ಡ್ ಹೊಂದಿರುವ ಗ್ರಾಹಕರು ಮೆಟ್ರೋ ರೈಲುಗಳಲ್ಲಿ ಪ್ರಯಾಣಿಸಲು, ಕಾರ್ಡ್‌ನಲ್ಲಿ ಕನಿಷ್ಠ 50 ರೂ. ಠೇವಣಿ ಹೊಂದಿರಬೇಕು ಎಂಬ ನಿಯಮವನ್ನು ಕಡ್ಡಾಯಗೊಳಿಸಿರುವ ಬಿಎಂಆರ್‌ಸಿಎಲ್, ಬುಧವಾರ ಈ ನಿಯಮವನ್ನು ಏಕಾಏಕಿ ಜಾರಿಗೆ ತಂದಿದೆ.
ಯಾವುದೇ ಪ್ರಕಟಣೆ, ಮುನ್ಸೂಚನೆ ಇಲ್ಲದೆ ನಿಯಮ ಜಾರಿಗೊಳಿಸಿರುವುದರಿಂದ ನಗರದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರು ಗೊಂದಲಕ್ಕೀಡಾಗಿ ಪರದಾಡಿದರು. ಕಾರ್ಡ್ ಹೊಂದಿರುವ ಪ್ರಯಾಣಿಕರು, ಎಂದಿ ನಂತೆ ಬುಧವಾರ ಸಂಜೆ ಮೆಟ್ರೋ ಫ್ಲಾಟ್ ಪಾರಂಗೆ ತೆರಳುವಾಗ, ದ್ವಾರದಲ್ಲಿ ಕಾರ್ಡ್ ತೋರಿಸಿ, ಒಳಗೆ ಪ್ರವೇಶಿಸಲು ಮುಂದಾದರು.
ಆದರೆ, ಬಾಗಿಲು ತೆರೆಯಲೇ ಇಲ್ಲ. ಆ ನಂತರ ನಿಲ್ದಾಣದ ಸಿಬ್ಬಂದಿಯನ್ನು ಕೇಳಿದಾಗ ಕನಿಷ್ಠ ಠೇವಣಿ ನಿಯಮ ವಿಧಿಸಿರುವುದು, ಅಲ್ಲದೇ ಈ ನಿಯಮ ಇಂದು ಸಂಜೆಯಿಂದಲೇ ಜಾರಿಯಾಗಿರುವುದು ಗ್ರಾಹಕರಿಗೆ ತಿಳಿಯಿತು. ಹೀಗೆ, ಏಕಾಏಕಿ ಠೇವಣಿ ನಿಯಮ ಜಾರಿ ಮಾಡಿದ್ದರಿಂದ ಸಾವಿರಾರು ಮಂದಿ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಯಿತು. ಕೆಲವು ನಿಲ್ದಾಣದಲ್ಲಿ ಬಿಎಂಆರ್‌ಸಿಲ್ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡೆಸಿದರು.
ಮೆಟ್ರೋ ರೈಲಿನಲ್ಲಿ ನಿತ್ಯ ಪ್ರಯಾಣಿಸುವವರ ಸಂಖ್ಯೆ 3.5 ಲಕ್ಷ. ಅದರಲ್ಲಿ ಟ್ರಾವೆಲ್ ಕಾರ್ಡ್ ಬಳಸಿ ಸಂಚರಿಸುವವರ ಸಂಖ್ಯೆ ಸರಿ ಸುಮಾರು 2.5 ಲಕ್ಷ ಇದೆ. ಇದರಲ್ಲಿ ಬಹುತೇಕರು ಕಡಿಮೆ ಅಂತರದಲ್ಲಿ ಪ್ರಯಾಣಿಸುವವರೇ ಇದ್ದು, 50 ರೂ.ಗಿಂತಲೂ ಕಡಿಮೆ ಠೇವಣಿ ಹೊಂದಿರುತ್ತಾರೆ. ಅಂತವರಿಗೆ ಈ ನಿಯಮದಿಂದ ಏಕಾಏಕಿ ಪ್ರವೇಶ ನಿರ್ಬಂಧವಾಗಿ ಸಮಸ್ಯೆಯಾಯಿತು. ಇನ್ನು ತಿಂಗಳ ಅಂತ್ಯದದಲ್ಲಿ ಈ ನಿಯಮ ಜಾರಿಗೊಳಿಸಿರುವುದು ಸಾಮಾನ್ಯ ಮಧ್ಯಮ ವರ್ಗಕ್ಕೆ ಇನ್ನಷ್ಟು ಬೇಸರವಾಯಿತು.
ಇದಲ್ಲದೇ ಕೆಲವೆಡೆ ಮೆಟ್ರೋ ನಿಲ್ದಾಣದಲ್ಲಿ 50 ರೂ. ನೀಡಿದರೆ ಕಾರ್ಡ್ ರೀಚಾರ್ಜ್ ಮಾಡುವುಲ್ಲ. ಕನಿಷ್ಠ 100 ರೂ. ನೀಡಬೇಕು. ಜತೆಗೆ ನ್ಯಾಷನಲ್ ಕಾಲೇಜು, ಶ್ರೀರಾಂಪುರ, ನಾಗಸಂದ್ರ ಸೇರಿದಂತೆ ಬಹುತೇಕ ಮೆಟ್ರೋ ನಿಲ್ದಾಣದಲ್ಲಿ ಸ್ಪೈಪಿಂಗ್ ಯಂತ್ರಗಳು ಕೆಟ್ಟಿವೆ. ಇಂತಹ ಲೋಪಗಳ ನಡುವೆಯೇ ಮನಬಂದಂತೆ ನಿಯಮಗಳನ್ನು ಬದಲಿಸುವ ಪ್ರಕ್ರಿಯೆ ನಿರಂತರವಾಗಿ ನಡೆದಿರುತ್ತದೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.
ಸರ್ವಾಧಿಕಾರಿ ಧೋರಣೆ: ಜಾಲತಾಣಗಳಲ್ಲಿ ಆಕ್ರೋಶ ಏಕಾಏಕಿ ಕನಿಷ್ಠ ಠೇವಣಿ ನಿಯಮ ಜಾರಿಗೆ ತಂದು ನಿತ್ಯ ಬಳಕೆದಾರರಿಗೆ ಅಡಚಣೆ ಉಂಟಾದ ಹಿನ್ನೆಲೆ ಅನೇಕ ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವಿಟರ್‌ಗಳಲ್ಲಿ ಬಿಎಂಆರ್‌ಸಿಎಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಲ್ದಾಣದಿಂದ ನೇರವಾಗಿ ಫೇಸ್‌ಬುಕ್ ಲೈವ್ ಹೋದ ಕೆಲ ಪ್ರಯಾಣಿಕರು ಈ ನಿಯಮದಿಂದ ಯಾವ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಬಂದಿದೆ. ಕನಿಷ್ಠ ಠೇವಣಿ ನಿಯಮ ಮಾಡಿ ಬಿಎಂಆರ್‌ಸಿಎಲ್ ಹಗಲು ದರೋಡೆ ಮಾಡುತ್ತಿದೆ.
ಈ ಕುರಿತು ಪ್ರಯಾಣಿಕರಿಗೆ ಯಾವುದೇ ಮಾಹಿತಿ ನೀಡದೇ ಒಮ್ಮೆಗೆ ನಿಯಮ ಜಾರಿ ಮಾಡಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಕೆಲ ಪ್ರಯಾಣಿಕರು ಮಂತ್ರಿಸ್ಕ್ವೇ ರ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿರುವ ಕುರಿತು ವರದಿಯಾಗಿದೆ. ಇಷ್ಟೇಲ್ಲ ಗೊಂದಲದ ಉಂಟಾಗಿ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ ನಂತರ ಎಚ್ಚೆತ್ತುಕೊಂಡ ಬಿಎಂಆರ್‌ಸಿಎಲ್, ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ನಿಯಮ ತಿದ್ದುಪಡಿ ಕುರಿತ ಪತ್ರಿಕಾ ಪ್ರಕಟಣೆ ಹೊರಡಿಸಿದೆ.