Advertisement

ವಿದ್ವಾನ್ ಗಣಪತಿ ಭಟ್ಟರಿಗೆ ಹೊಸ್ತೋಟ, ಪಾದೇಕಲ್ಲರಿಗೆ ದಂಟ್ಕಲ್ ಪ್ರಶಸ್ತಿ

04:44 PM Aug 23, 2022 | Team Udayavani |

ಶಿರಸಿ: ಯಕ್ಷಗಾನದ ಪ್ರಸಿದ್ದ ಭಾಗವತ ವಿದ್ವಾನ್ ಗಣಪತಿ ಭಟ್ಟ ಮೊಟ್ಟೆಗದ್ದೆ ಅವರಿಗೆ ಯಕ್ಷ ಋಷಿ ಎಂದೇ ಹೆಸರಾಗಿದ್ದ ಹೊಸ್ತೋಟ ಮಂಜುನಾಥ ಭಾಗವತರ ಹೆಸರಿನ ಪ್ರಶಸ್ತಿ ಹಾಗೂ ಯಕ್ಷಗಾನದ ವಿದ್ವಾಂಸ ಪಾದೇಕಲ್ಲು ವಿಷ್ಣು ಭಟ್ಟ ಅವರಿಗೆ ಯಕ್ಷಗಾನ, ಸಂಸ್ಕೃತ, ಕನ್ನಡದ ವಿದ್ವಾಂಸರಾಗಿದ್ದ ಪ್ರೊ.ಎಂ.ಎ.ಹೆಗಡೆ‌ ದಂಟ್ಕಲ್ ಅವರ ಹೆಸರಿನ ಪ್ರಶಸ್ತಿ ಪ್ರಕಟವಾಗಿದೆ.

Advertisement

ಸೋಂದಾ ಸ್ವರ್ಣವಲ್ಲೀ‌ ಮಹಾಸಂಸ್ಥಾನವು ಯಕ್ಷ ಶಾಲ್ಮಲಾ‌ ಅಂಗ ಸಂಸ್ಥೆಯ‌ ಮೂಲಕ ಸ್ಥಾಪಿಸಿದ ಈ ಪ್ರಶಸ್ತಿಗಳನ್ನು ಆಗಸ್ಟ್ ಕೊನೆಯಲ್ಲಿ ಸ್ವರ್ಣವಲ್ಲೀ‌ ಮಠದಲ್ಲಿ ನಡೆಯುವ ಎರಡು‌‌ ದಿನಗಳ ಯಕ್ಷೋತ್ಸವದಲ್ಲಿ ಪ್ರದಾನ ಮಾಡಲಾಗುತ್ತಿದೆ ಎಂದು‌ ಯಕ್ಷ ಶಾಲ್ಮಲಾದ ಕಾರ್ಯದರ್ಶಿ ನಾಗರಾಜ‌ ಜೋಶಿ ಸೋಂದಾ ತಿಳಿಸಿದ್ದಾರೆ.

ಯಲಾಪುರ ತಾಲೂಕಿನ ಮೊಟ್ಟೆಗದ್ದೆಯ ವೈದಿಕ ಮನೆತನದ ವಿದ್ವಾನ್ ಗಣಪತಿ ಭಟ್ಟರವರು ವೈದಿಕ ಮತ್ತು ಬಡಗುತಿಟ್ಟಿನ ಪ್ರಸಿದ್ಧ ಭಾಗವತರಲ್ಲಿ ಒಬ್ಬರು. ಸಂಸ್ಕೃತ, ವೇದ, ಕರ್ನಾಟಕೀ ಸಂಗೀತದಲ್ಲಿ ಹೆಚ್ಚಿನ ಪ್ರಭುತ್ವ ಹೊಂದಿದ ಇವರು ತಮ್ಮ ನಿರಂತರ ಅಧ್ಯಯನ ಮತ್ತು ಅಭ್ಯಾಸಗಳಿಂದ ಬಡಗುತಿಟ್ಟಿನ ಭಾಗವತಿಕೆಯ ಬಗ್ಗೆ ಅಧೀಕೃತವಾಗಿ ಮಾತಾಡಬಲ್ಲ ಭಾಗವತರುಗಳಲ್ಲಿ ಒಬ್ಬರು. ಇವರು ರಚಿಸಿದ ಯಕ್ಷಗಾನ ಗಾನ ಸಂಹಿತೆ ಅದಕ್ಕೊಂದು ಉದಾಹರಣೆಯಾಗಿದೆ.

ದೇಶ ವಿದೇಶಗಳಲ್ಲಿ ತಮ್ಮ ವಿದ್ವತ್ಪೂರ್ಣ ಭಾಗವತಿಕೆಯಿಂದ ಜನಪ್ರೀಯತೆಯನ್ನು ಪಡೆದವರು. ಅನೇಕ ಪ್ರಶಸ್ತಿಗಳ ಪುರಸ್ಕೃತರಾದ ಮೊಟ್ಟೆಗದ್ದೆಯವರಿಗೆ ಈಗ ಹೊಸ್ತೋಟ ಅವರ ಹೆಸರಿನ ಪ್ರಶಸ್ತಿ ಪ್ರಕಟವಾಗಿದೆ.

ಮೂಲತಃ ಪುತ್ತೂರು ಸಮೀಪದ ಪಾದೇಕಲ್ಲ ಊರಿನ ಡಾ. ವಿಷ್ಣು ಭಟ್ಟ ಅವರು ಯಕ್ಷಲೋಕದ ಅಗ್ರಮಾನ್ಯ ಸಂಶೋಧಕರು. ”ಭಾಗವತದ ಯಕ್ಷಗಾನ ಪ್ರಸಂಗಗಳು” ಎಂಬ ವಿಷಯದಲ್ಲಿ ಅಧ್ಯಯನ ನಡೆಸಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿ ಎಚ್ ಡಿ ಪದವಿ ಪಡೆದವರು. ಕನ್ನಡ ಸಾಹಿತ್ಯ ಅಧ್ಯಯನದಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದು, ಹಲವು ಪುಸ್ತಕಗಳನ್ನು ಟಿಪ್ಪಣಿಗಳೊಂದಿಗೆ ಸಂಪಾದಿಸಿದವರು. ವಿಚಾರ ಪ್ರಪಂಚ, ಸೇಡಿಯಾಪು ಛಂದಸ್ಸಂಪುಟ, ಶಬ್ಧಾರ್ಥಕೋಶ ಮುಂತಾದ ಮೌಲ್ಯಯುತ ಕೃತಿಗಳನ್ನು ರಚಿಸಿದವರು.

Advertisement

ಮಹಾಜನಪದ, ಭಾನುಮತಿಯ ನೆತ್ತ, ಪುರಾಣ ಲೋಕ, ಸಾಹಿತ್ಯಾಧ್ಯಯನ, ಯಕ್ಷಗಾನಾಧ್ಯಯನ ಹೀಗೆ ಹಲವಾರು ಕೃತಿ ರಚಿಸಿದ್ದಲ್ಲದೇ ಹಲವಾರು ಪ್ರಶಸ್ತಿಗಳ ಪುರಸ್ಕೃತರು. ತಾಳಮದ್ದಲೆ ಅರ್ಥದಾರಿಗಳಾದ ಇವರಿಗೆ ಪ್ರಸಂಗಕರ್ತರೂ, ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರೂ ಆಗಿದ್ದ ದಿ. ಎಂ ಎ ಹೆಗಡೆ ದಂಟಕಲ್ ಅವರ ನೆನಪಿಗೆ ಪ್ರಪ್ರಥಮವಾಗಿ ನೀಡುತ್ತಿರುವ ಪ್ರಶಸ್ತಿ ಪ್ರಕಟಿಸಲಾಗಿದೆ.

ಉಭಯ ಪ್ರಶಸ್ತಿಗಳನ್ನು ಸ್ವತಃ ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾಸ್ವಾಮೀಜಿಗಳು ಪ್ರದಾನ ಮಾಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next