Advertisement

ವಿದ್ಯಾರ್ಥಿಗಳ ಹೆಚ್ಚಳಕ್ಕೆ ತಕ್ಕಂತೆ ಹಾಸ್ಟೆಲ್‌

03:21 PM Jul 05, 2022 | Team Udayavani |

ಹುಬ್ಬಳ್ಳಿ: ಅವಳಿನಗರ ಶೈಕ್ಷಣಿಕ ಕೇಂದ್ರವಾಗಿ ಬೆಳೆಯುತ್ತಿದ್ದು, ಬೇರೆ ಜಿಲ್ಲೆಯ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ಹಾಸ್ಟೆಲ್‌ ನಿರ್ಮಾಣಕ್ಕೆ ಸರಕಾರ ಮುಂದಾಗಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳ ಸಚಿವರಿಗೆ ಮನವಿ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.

Advertisement

ಸೋಮವಾರ ಶಿರಡಿ ನಗರದಲ್ಲಿ ಮೆಟ್ರಿಕ್‌ ನಂತರದ ವೃತ್ತಿಪರ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನೂತನ ಊಟದ ಕೋಣೆ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚೆಗೆ ನನ್ನ ಕ್ಷೇತ್ರದಲ್ಲಿ ಮೂರು ಹಾಸ್ಟೆಲ್‌ ಉದ್ಘಾಟಿಸಲಾಗಿದೆ. ಇದರಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಿದೆ. ಇದೀಗ ಅಡುಗೆ ಕೋಣೆ ಹಾಗೂ ಊಟದ ಕೋಣೆ ಲೋಕಾರ್ಪಣೆಗೊಂಡ ಕಾರಣ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಸರಕಾರ ನೀಡಿದ ಸೌಲಭ್ಯಗಳ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಸ್ವಂತ ಆಸ್ತಿಯಂತೆ ರಕ್ಷಿಸಿ ಮುಂಬರುವ ವಿದ್ಯಾರ್ಥಿಗಳ ಬಳಕೆಗೆ ಯೋಗ್ಯವಾಗಿ ಉಳಿಸಬೇಕು ಎಂದರು. ಬಡ ಹಾಗೂ ಮಧ್ಯಮ ವಿದ್ಯಾರ್ಥಿಗಳಿಗೆ ಇಲ್ಲಿಯೇ ಉಳಿದು ಶಿಕ್ಷಣ ಪಡೆಯುವುದು ಕಷ್ಟವಾಗುತ್ತಿದೆ. ಇದಕ್ಕಾಗಿ ಮಹಾನಗರ ವ್ಯಾಪ್ತಿಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳ ಜೊತೆಗೆ ಹೊರ ಜಿಲ್ಲೆಯಿಂದ ಬರುವ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಹಾಸ್ಟೇಲ್‌ಗ‌ಳನ್ನು ನಿರ್ಮಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಸಚಿವರಿಗೆ ಮನವಿ ಮಾಡಲಾಗುವುದು. ಈ ಹಿಂದೆ ಹಾಸ್ಟೆಲ್‌ ನಿರ್ಮಾಣಕ್ಕೆ ಜಾಗದ ವಿಚಾರ ಬಂದಾಗ ನಗರಾಭಿವೃದ್ಧಿ ಪ್ರಾಧಿಕಾರ ಸಿಎ ನಿವೇಶನಗಳನ್ನು ನೀಡಿದೆ. ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೇಕಾದ ಅಗತ್ಯ ಅನುದಾನಗಳನ್ನು ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಕೊಡಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ| ಎನ್‌.ಆರ್‌. ಪುರುಷೋತ್ತಮ ಮಾತನಾಡಿ, ಜಿಲ್ಲೆಯ ಎಲ್ಲಾ ವಸತಿ ನಿಲಯಗಳನ್ನು ಅಭಿವೃದ್ಧಿಪಡಿಸುವ ಕಾರಣಕ್ಕೆ ಸರಕಾರಕ್ಕೆ 12 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕೆಲ ವಸತಿ ನಿಲಯದಲ್ಲಿ ಸೋಲಾರ್‌ ದೀಪ ಅಳವಡಿಸಲಾಗಿದೆ. ಅಭ್ಯಾಸ ಕೊಠಡಿ, ಜಿಮ್‌ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಗ್ರಂಥಾಲಯಗಳಿಗೆ ಹೆಚ್ಚಿನ ಪುಸ್ತಕಗಳನ್ನು ಒದಗಿಸಲಾಗುವುದು. ಶಿರಡಿ ವಸತಿ ನಿಲಯವು ಮಾದರಿ ನಿಲಯವಾಗಿದ್ದು, ಇದನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಾಗೇಶ ಕಲಬುರ್ಗಿ, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ, ಸೀಮಾ ಮೊಗಲಿಶೆಟ್ಟರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಚೌಡಮ್ಮ ಅಂಬಿಗೇರ, ಸಹಾಯಕ ನಿರ್ದೇಶಕಿ ಎಂ.ಬಿ.ಸಣ್ಣೇರ, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಶಿವಕುಮಾರ ಪಾಟೀಲ, ನಿಲಯ ಪಾಲಕ ಪ್ರಹ್ಲಾದ ಗೆಜ್ಜಿ, ಮಲ್ಲಿಕಾರ್ಜುನ ಸಾವಕಾರ, ಹನುಮಂತಪ್ಪ ಮಾನಪಲ್ಲಿ, ರೇಣುಕಪ್ಪ ಕೆಲೂರು, ವಿದ್ಯಾ ನರಸಪ್ಪನವರ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next