ಚಿಂಚೋಳಿ: ರಾಜ್ಯ ಸರಕಾರ 2022-23ನೇ ಶೈಕ್ಷಣಿಕ ವರ್ಷದಲ್ಲಿ ಮೇ16ರಿಂದ ಶಾಲೆ ಪ್ರಾರಂಭಿಸಿವೆ. ಆದರೆ ತಾಲೂಕಿನ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಒಳಪಟ್ಟಿರುವ ವಸತಿ ನಿಲಯಗಳನ್ನು ಇನ್ನು ಪ್ರಾರಂಭಿಸದೇ ಇರುವುದರಿಂದ ವಸತಿನಿಲಯಗಳು ಮಕ್ಕಳಿಲ್ಲದೇ ಬಣಗುಡುತ್ತಿವೆ.
ಸಮಾಜ ಕಲ್ಯಾಣ ಇಲಾಖೆಗೆ ಸೇರಿದ 12 ವಸತಿ ನಿಲಯಗಳು, ಹಿಂದುಳಿದ ವರ್ಗಗಳ ಇಲಾಖೆಯ 9 ವಸತಿ ನಿಲಯಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸೇರಿದ 5ವಸತಿ ನಿಲಯ ಮತ್ತು ವಸತಿ ಶಾಲೆಗಳಿವೆ. ಪಟ್ಟಣದ ಚಂದಾಪುರ ನಗರದಲ್ಲಿಯೇ 12 ವಸತಿ ನಿಲಯಗಳಿವೆ. ಮೇ 16ರಿಂದ ಶಾಲೆ ಪ್ರಾರಂಭದಿಂದಲೂ ಇಲ್ಲಿಯ ವರೆಗೆ ವಸತಿ ನಿಲಯಗಳು ಪ್ರಾರಂಭವಾಗದೇ ಇರುವುದರಿಂದ ಹಳೆ ವಿದ್ಯಾರ್ಥಿಗಳು ವಸತಿ ನಿಲಯಕ್ಕೆ ದಿನನಿತ್ಯ ಬಂದು ಹೋಗುತ್ತಿದ್ದಾರೆ. ಆದರೆ ವಸತಿ ನಿಲಯದಲ್ಲಿ ಊಟ ಮತ್ತು ಉಪಹಾರ ಇಲ್ಲದೇ ಇರುವುದರಿಂದ ಮತ್ತೆ ಮರಳಿ ಮನೆಗೆ ಹೋಗುತ್ತಿದ್ದಾರೆ. ಶಾಲೆ-ಕಾಲೇಜುಗಳು ಪ್ರಾರಂಭವಾಗಿದ್ದು, ಪಾಠಗಳು ನಡೆಯುತ್ತಿದ್ದರೂ ವಿದ್ಯಾರ್ಥಿ ನಿಲಯಗಳ ಬಾಗಿಲು ಮಾತ್ರ ಮುಚ್ಚಿಕೊಂಡಿವೆ.
ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಚಿಂಚೋಳಿ, ಕುಂಚಾವರಂ, ಸುಲೇಪೇಠ, ಐನಾಪುರ, ಚಿಂಚೋಳಿ, ಗಡಿಕೇಶ್ವಾರ, ಚಂದನಕೇರಾ, ಚಿಂಚೋಳಿ, ವೃತ್ತಿಪರ ಕಾಲೇಜು ವಸತಿ ನಿಲಯ ಚಿಂಚೋಳಿ, ವಂಟಿಚಿಂತಾ, ಪಾಲತ್ಯಾ ತಾಂಡಾ, ವಸತಿ ಶಾಲೆ ಚಿಂಚೋಳಿ,ಹಿಂದುಳಿದ ವರ್ಗಗಳ ಇಲಾಖೆಗೆ ಸೇರಿದ ವಸತಿ ನಿಲಯಗಳು ಚಂದಾಪುರ, ಚಿಮ್ಮನಚೋಡ, ಚಂದಾಪುರ, ಕೋಡ್ಲಿ, ರಾಯಕೋಡ, ಸಾಲೇಬೀರನಳ್ಳಿ, ಚಂದಾಪುರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸುಲೇಪೇಟ ಗ್ರಾಮದಲ್ಲಿ 2 ವಸತಿ ನಿಲಯಗಳು ಮತ್ತು ಚಿಂಚೋಳಿ ಪಟ್ಟಣದಲ್ಲಿ 3 ವಸತಿ ನಿಲಯಗಳಿವೆ. ಆದರೆ ವಸತಿ ನಿಲಯಗಳಿಗೆ ಇನ್ನು ಸಿಬ್ಬಂದಿಗಳೇ ಹಾಜರಾಗಿಲ್ಲ. ವಸತಿ ನಿಲಯಗಳಲ್ಲಿ ಸ್ವಚ್ಛತೆಯನ್ನು ಮಾಡಿಲ್ಲ. ವಿದ್ಯುತ್ ದೀಪ, ಕುಡಿಯುವ ನೀರು, ಬಿಸಿ ನೀರು, ಫ್ಯಾನ್, ಶೌಚಾಲಯ, ಮೂತ್ರಾಲಯಗಳನ್ನು ಇನ್ನು ಶುಚಿತ್ವಗೊಳಿಸಿಲ್ಲ. ವಿದ್ಯಾರ್ಥಿಗಳಿಗೆ ಹೊಸದಾಗಿ ಹಾಸಿಗೆ ಹೊದಿಕೆ ಮತ್ತು ಊಟದ ತಟ್ಟೆ, ಕುಡಿಯಲು ನೀರಿನ ಲೋಟಗಳನ್ನು ಕೂಡಾ ಶುಚಿಗೊಳಿಸಿಲ್ಲ. ಕೂಡಲೇ ವಸತಿನಿಲಯಗಳನ್ನು ಆರಂಭಿಸಬೇಕು ಎಂದು ಮಕ್ಕಳ ಪಾಲಕರು ಆಗ್ರಹಿಸಿದ್ದಾರೆ.
ಚಿಂಚೋಳಿ ತಾಲೂಕಿನಲ್ಲಿ ವಸತಿ ನಿಲಯಗಳು ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಊಟ ಉಪಹಾರ ನೀಡುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಆದರೆ ಅನೇಕ ಗ್ರಾಮಗಳಲ್ಲಿ ವಸತಿನಿಲಯಗಳ ಬಾಗಿಲು ಬಂದ್ ಇರುವ ಬಗ್ಗೆ ಗ್ರಾಮಸ್ಥರು ಗಮನಕ್ಕೆ ತಂದಿದ್ದಾರೆ. ಎಲ್ಲ ವಸತಿ ನಿಲಯಗಳಿಗೆ ಭೇಟಿ (ಬುಧವಾರ)ನೀಡಿ ಪರಿಶೀಲಿಸುತ್ತೇನೆ.
-ಅನಿಲಕುಮಾರ ರಾಠೊಡ, ತಾಪಂ ಇಒ
ತಾಲೂಕಿನಲ್ಲಿ ಶಾಲೆ ಕಾಲೇಜು ಪ್ರಾರಂಭವಾಗಿವೆ. ಆದರೆ ವಸತಿ ನಿಲಯಗಳಲ್ಲಿ ಹಳೆ ವಿದ್ಯಾರ್ಥಿಗಳಿಗೆ ಊಟ ಉಪಹಾರ ಕೊಡುತ್ತಿಲ್ಲವೆಂದು ತಿಳಿದು ಬಂದಿದೆ. ಬುಧವಾರ ಎಲ್ಲ ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು.
-ಅಂಜುಮ ತಬಸುಮ, ತಹಶೀಲ್ದಾರ
-ಶಾಮರಾವ ಚಿಂಚೋಳಿ