Advertisement

ವಿದೇಶಿಗರ ಬಂಧನ ಕೇಂದ್ರವಾದ ಹಾಸ್ಟೆಲ್‌

11:09 PM Dec 17, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನು ಗಡಿಪಾರು ಮಾಡುವವರೆಗೆ ಬಂಧನದಲ್ಲಿರಿಸಲು ಆರಂಭಿಸಲಿರುವ “ವಿದೇಶಿಗರ ಬಂಧನ ಕೇಂದ್ರ’ (ಫಾರಿನರ್ ಡಿಟೆನ್ಶನ್‌ ಸೆಂಟರ್‌)ದ ನಿರ್ವಹಣೆಯನ್ನು ಸಮಾಜ ಕಲ್ಯಾಣ ಇಲಾಖೆಗೆ ವಹಿಸಿರುವುದು ವಿವಾದಕ್ಕೆ ಕಾರಣವಾಗಿದೆ.

Advertisement

ಕೇಂದ್ರದ ನಿರ್ವಹಣೆಯನ್ನು ಸಮಾಜಕಲ್ಯಾಣ ಇಲಾಖೆಗೆ ವಹಿಸಿರುವುದು ತಾತ್ಕಾಲಿಕ ಎನ್ನಲಾಗುತ್ತಿದ್ದರೂ, ಮುಂದೆ ಇದೇ ವ್ಯವಸ್ಥೆ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಈ ಹಿಂದೆ ಈ ಕೇಂದ್ರವನ್ನು ನೆಲಮಂಗಲ ಬಳಿ ಸ್ಥಾಪಿಸುವ ಘೋಷಣೆ ಮಾಡಿರುವುದನ್ನು ಇಲ್ಲಿ ಉಲ್ಲೇಖೀಸಬಹುದು.

“ವಿದೇಶಿಗರ ಬಂಧನ ಕೇಂದ್ರ’ಕ್ಕೂ ಸಮಾಜ ಕಲ್ಯಾಣ ಇಲಾಖೆಗೂ ಯಾವುದೇ ರೀತಿಯ ಸಂಬಂಧವಿಲ್ಲದಿದ್ದರೂ ಸರ್ಕಾರದ ಸೂಚನೆಯಂತೆ ಇಲಾಖೆ 2 ಕೋಟಿ ರೂ.ವೆಚ್ಚದಲ್ಲಿ ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳಿಗಾಗಿ ನಿರ್ಮಿಸಿದ್ದ ವಿದ್ಯಾರ್ಥಿ ನಿಲಯವನ್ನು ವಿದೇಶಿಗರ ಬಂಧನ ಕೇಂದ್ರವಾಗಿ ಬಳಸಲು ಮುಂದಾಗಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.

ದೆಹಲಿ ಮಾದರಿ ಪಾಲನೆಯೇ ಈ ವಿವಾದಕ್ಕೆ ಕಾರಣವಾಗಿದೆ. ದೆಹಲಿ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪಂಗಡದ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಜವಾಬ್ದಾರಿ ಹೊಂದಿಲ್ಲ. ಬದಲಿಗೆ ಆಯ್ದ ಕಾಯಿದೆಗಳ ಜಾರಿ ಹೊಣೆಗಾರಿಕೆ ಮಾತ್ರ ನಿರ್ವಹಿಸುತ್ತದೆ. ಆದರೆ, ಅದೇ ಮಾದರಿಯನ್ನು ಕರ್ನಾಟಕದಲ್ಲೂ ಜಾರಿಗೊಳಿಸುವುದು ಸಾಧ್ಯವಿಲ್ಲ.

ಏಕೆಂದರೆ, ಇಲ್ಲಿನ ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿ/ ಪಂಗಡದ ಕಲ್ಯಾಣ ಕಾರ್ಯಕ್ರಮವನ್ನೇ ಮೂಲ ಆಶಯವಾಗಿ ಹೊಂದಿದೆ. ಇದರಿಂದಾಗಿ ವಿವಾದ ತಲೆತೋರಿದೆ. ಮಹಾರಾಷ್ಟ್ರದಲ್ಲಿ ಈ ಕೇಂದ್ರವನ್ನು ಗೃಹ ಇಲಾಖೆಯೇ ನಿರ್ವಹಣೆ ಮಾಡುತ್ತಿದೆ. ಅದರಂತೆ ರಾಜ್ಯದಲ್ಲೂ ಗೃಹ ಇಲಾಖೆಯೇ ಬಂಧನ ಕೇಂದ್ರವನ್ನು ನಿರ್ವಹಿಸುವುದು ಸೂಕ್ತ ಎಂದು ಗೃಹ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

Advertisement

ರಾಜ್ಯದಲ್ಲಿ ಅಕ್ರಮವಾಗಿ ವಾಸ್ತವ್ಯ ಮುಂದುವರಿಸಿರುವ ವಿದೇಶಿಗರು ಕಾನೂನು ಪ್ರಕ್ರಿಯೆ ಮೂಲಕ ತಮ್ಮ ದೇಶಕ್ಕೆ ಹಿಂದಿರುಗುವವರೆಗೆ ಅವರನ್ನು ಬಂಧನದಲ್ಲಿರಿಸಲು “ವಿದೇಶಿಗರ ಬಂಧನ ಕೇಂದ್ರ’ ಆರಂಭಿಸಲು ಸರ್ಕಾರ ಮುಂದಾಗಿದೆ. ಅದರಂತೆ ನೆಲಮಂಗಲ ಬಳಿಯ ಸೊಂಡೇಕೊಪ್ಪದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯವನ್ನು ಕೇಂದ್ರವನ್ನಾಗಿ ಪರಿವರ್ತಿಸುವ ಕಾರ್ಯ ನಡೆದಿದ್ದು, ಜನವರಿಯಿಂದ ಕೇಂದ್ರ ಆರಂಭವಾಗುವ ನಿರೀಕ್ಷೆ ಇದೆ.

ಹಾಸ್ಟೆಲ್‌ ಕಟ್ಟಡ ಬಳಕೆ: “ವಿದೇಶಿಗರ ಬಂಧನ ಕೇಂದ್ರ’ಕ್ಕಾಗಿ ಸೂಕ್ತ ಸ್ಥಳ ಶೋಧಿಸುವಾಗ ಗೃಹ ಇಲಾಖೆಗೆ ಕಂಡಿದ್ದು, ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯ. ಆ ಭಾಗದ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯವನ್ನು ಇಲಾಖೆ 2 ಕೋಟಿ ರೂ.ವೆಚ್ಚದಲ್ಲಿ ಮೂರು ವರ್ಷದ ಹಿಂದೆ ನಿರ್ಮಿಸಿತ್ತು.

50 ವಿದ್ಯಾರ್ಥಿಗಳು ವಾಸ್ತವ್ಯ ಹೂಡಲು ಅನುಕೂಲವಾ ಗುವಂತೆ ಡಾರ್ಮೆಟರಿ, ಅಡುಗೆ ಕೋಣೆ ಒಳಗೊಂಡಂತೆ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿತ್ತು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯಾರ್ಥಿಗಳಿಲ್ಲದ ಕಾರಣ ನೋಂದಣಿಯಾಗಿದ್ದ ವಿದ್ಯಾರ್ಥಿಗಳನ್ನು ಸಮೀಪದ ಇಲಾಖೆಯ ವಿದ್ಯಾರ್ಥಿ ನಿಲಯಕ್ಕೆ ಸ್ಥಳಾಂತರಿಸಿ ಈ ಕಟ್ಟಡವನ್ನು ಹಾಗೆಯೇ ಉಳಿಸಿಕೊಳ್ಳಲಾಗಿತ್ತು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಹೆಚ್ಚು ವಿದ್ಯಾರ್ಥಿಗಳು ನೋಂದಣಿಯಾದರೆ ಇಲಾಖೆಗೆ ವಸತಿ ಸಮಸ್ಯೆ ಎದರಾಗಬಹುದು.

ಮುಖ್ಯಮಂತ್ರಿಗಳಿಗೆ ಪತ್ರ: ವಿದೇಶಿಗರ ಬಂಧನ ಕೇಂದ್ರದ ನಿರ್ವಹಣೆಯನ್ನು ಸಮಾಜ ಕಲ್ಯಾಣ ಇಲಾಖೆಗೆ ವಹಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ, ಇತ್ತೀಚೆಗೆ ಮುಖ್ಯಮಂತ್ರಿಗಳಿಗೆ ಈ ಸಂಬಂಧ ಪತ್ರ ಬರೆದಿದ್ದಾರೆ.

ಗೃಹ ಇಲಾಖೆಗೆ ವಹಿಸಲು ಮನವಿ: ಬಜೆಟ್‌ ಅನುದಾನವನ್ನು ಎಸ್‌ಸಿಪಿ- ಟಿಎಸ್‌ಪಿ ಕಾಯ್ದೆ ಯಂತೆಯೇ ವೆಚ್ಚ ಮಾಡಬೇಕಿರುವುದರಿಂದ ವಿದೇಶಿ ಗರ ಬಂಧನ ಕೇಂದ್ರದ ನಿರ್ವಹಣೆ ಕಾಯ್ದೆಯ ಲೆಕ್ಕ ಶೀರ್ಷಿಕೆ ಚೌಕಟ್ಟಿಗೆ ಬರುವುದಿಲ್ಲ. ಅಲ್ಲದೇ ಇಲಾಖೆ ಯಲ್ಲಿ ಅಧಿಕಾರಿಗಳ ಸಂಖ್ಯೆ ಕಡಿಮೆ ಇದ್ದು, ನಿರ್ವಹ ಣೆಯೂ ಕಷ್ಟವಾಗಿದೆ. ಈ ಕೇಂದ್ರದ ನಿರ್ವಹಣೆ ಗೃಹ ಇಲಾಖೆಗೆ ಸೇರಿದ್ದೇ ಹೊರತು ಸಮಾಜ ಕಲ್ಯಾಣ ಇಲಾಖೆ ಜವಾಬ್ದಾರಿ ಯಾಗದು. ಹಾಗಾಗಿ, ಕೂಡಲೇ ಸಮಾಜ ಕಲ್ಯಾಣ ಇಲಾಖೆಗೆ ವಹಿಸಿರುವ ಕೇಂದ್ರದ ನಿರ್ವಹಣೆ ಗೃಹ ಇಲಾಖೆಗೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ವಿದೇಶಿಗರ ಬಂಧನ ಕೇಂದ್ರದ ನಿರ್ವಹಣೆಯನ್ನು ಗೃಹ ಇಲಾಖೆಗೆ ವಹಿಸಬೇಕಿತ್ತು. ಆದರೆ, ಸರ್ಕಾರ ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ವಹಿಸುವಂತೆ ಸೂಚಿಸಿದೆ. ಕೇಂದ್ರದ ನಿರ್ವಹಣೆಗೆ ಇಲಾಖೆಯ ಅನುದಾನ ಬಳಸುವುದಿಲ್ಲ. ಪ್ರತ್ಯೇಕ ಅನುದಾನ ಸೃಷ್ಟಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಇಲಾಖೆಯ ಸಿಬ್ಬಂದಿಯನ್ನೂ ನಿಯೋಜಿಸದೆ ಪ್ರತ್ಯೇಕವಾಗಿ ನೇಮಿಸಿಕೊಳ್ಳುವಂತೆ ಸೂಚಿಸಲಾಗಿದೆ. ಇದು ತಾತ್ಕಾಲಿಕ ವ್ಯವಸ್ಥೆಯಾಗಿರಲಿದೆ.
-ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ

ವಿದೇಶಿಗರ ಬಂಧನ ಕೇಂದ್ರಕ್ಕೆ ಸಮಾಜ ಕಲ್ಯಾಣ ಇಲಾಖೆಯ ಕಟ್ಟಡ ನೀಡಿ, ನಿರ್ವಹಣೆ ಮಾಡುವ ಪ್ರಸ್ತಾವವನ್ನು ಈ ಹಿಂದೆ ಸಚಿವನಾಗಿದ್ದಾಗ ತಿರಸ್ಕರಿಸಿದ್ದೆ. ಎಸ್‌ಸಿಪಿ-ಟಿಎಸ್‌ಪಿ ಕಾಯ್ದೆಯಡಿ ಅನುದಾನವನ್ನು ಬೇರೆ ಉದ್ದೇಶಕ್ಕೆ ಬಳಸಲು ಅವಕಾಶವೇ ಇಲ್ಲ. ಇಲಾಖೆಯಲ್ಲೇ ಹಾಸ್ಟೆಲ್‌ಗ‌ಳ ಕೊರತೆಯಿದ್ದು, ಕೆಲವೆಡೆ ಬಾಡಿಗೆ ಕಟ್ಟಡದಲ್ಲಿವೆ. ಹೀಗಿರುವಾಗ ಹಾಸ್ಟೆಲ್‌ ಕಟ್ಟಡವನ್ನು ಬೇರೆ ಉದ್ದೇಶಕ್ಕೆ ನೀಡಿರುವುದು ಸರಿಯಲ್ಲ.
-ಪ್ರಿಯಾಂಕ್‌ ಖರ್ಗೆ, ಮಾಜಿ ಸಚಿವ

* ಎಂ.ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next