ಹೊಸದಿಲ್ಲಿ: ಬಿಲ್ ಪಾವತಿ ಮಾಡದೇ ಇರುವ ಕಾರಣಕ್ಕಾಗಿ ರೋಗಿಯನ್ನು ಡಿಸ್ಚಾರ್ಜ್ ಮಾಡದೇ ಇರುವುದು ಅಥವಾ ಅಸುನೀಗಿದರೆ ಮೃತದೇಹವನ್ನು ಕುಟುಂಬ ಸದಸ್ಯರಿಗೆ ನೀಡದೇ ಇರುವುದನ್ನು ಇನ್ನು ಮುಂದೆ ಮಾಡುವಂತಿಲ್ಲ. ಆಸ್ಪತ್ರೆಗಳಲ್ಲಿ ಈ ರೀತಿಯ ಘಟನೆಗಳು ನಡೆದರೆ ಅದು ಶಿಕ್ಷಾರ್ಹ ಅಪರಾಧವಾಗಲಿದೆ. ಕೇಂದ್ರ ಸರಕಾರ ಹೊರಡಿಸಿರುವ ರೋಗಿ ರಕ್ಷಣಾ ಮಾರ್ಗಸೂಚಿಯಲ್ಲಿ ಈ ವಿಚಾರವನ್ನು ಉಲ್ಲೇಖೀಸಲಾಗಿದೆ.
ರಾಜ್ಯ ಸರಕಾರಗಳ ಮೂಲಕ ಈ ಮಾರ್ಗಸೂಚಿಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಖಾತೆ ಜಂಟಿ ಕಾರ್ಯದರ್ಶಿ ಸುಧೀರ್ ಕುಮಾರ್ ಸುತ್ತೋಲೆಯಲ್ಲಿ ವಿವರಿಸಿದ್ದಾರೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸಿದ್ಧಪಡಿಸಿರುವ ಈ ಮಾರ್ಗ ಸೂಚಿಯನ್ನು ಕೇಂದ್ರ ಆರೋಗ್ಯ ಖಾತೆ ಸಚಿವಾಲಯದ ವೆಬ್‌ಸೈಟ್‌ನಲ್ಲಿ (https:// mohfw.gov.in/news-highlights/ draft-patient-charter-preparednational-human-rights-commission) ಅಪ್‌ಲೋಡ್ ಮಾಡಲಾಗಿದೆ. ಸಾರ್ವಜನಿಕರಿಂದ ಸಲಹೆಯನ್ನೂ ಆಹ್ವಾನಿಸಲಾಗಿದೆ.
ಮಾರ್ಗಸೂಚಿಯಲ್ಲೇನಿದೆ?: ಕರಡು ಮಾರ್ಗಸೂಚಿ ಪ್ರಕಾರ ರೋಗಿಯ ಪಾಲಕರು ಅಥವಾ ಕುಟುಂಬ ಸದಸ್ಯರು ಆಸ್ಪತ್ರೆಯಲ್ಲಿ ಉಂಟಾದ ಸಮಸ್ಯೆ ಬಗ್ಗೆ ನೀಡಿದ ದೂರನ್ನು ಸ್ವೀಕರಿಸಿದ 15 ದಿನಗಳಲ್ಲಿ ಪರಿಹಾರ ಸಿಗುವಂತಾಗಬೇಕು. ಈ ಬಗ್ಗೆ ಲಿಖೀತ ವಾಗ್ಧಾನ ಮಾಡಬೇಕು. ಆಸ್ಪತ್ರೆ ಅಥವಾ ಕ್ಲಿನಿಕ್‌ಗಳು ಆಂತರಿಕವಾಗಿ ಸಮಿತಿ ರಚಿಸಬೇಕು ಎಂದು ಕರಡು ಪ್ರತಿಯಲ್ಲಿದೆ. ಜತೆಗೆ ದೂರಿನ ತನಿಖೆ ವೇಳೆ ಸಹಕಾರ ನೀಡಬೇಕು. ಅಲ್ಲದೆ, ಆಯಾ ರಾಜ್ಯಗಳಲ್ಲಿರುವ ಕಾನೂನು ಅಥವಾ ರೋಗಿಗಳ ರಕ್ಷಣಾ ಮಾರ್ಗಸೂಚಿಯಲ್ಲಿ ಉಲ್ಲೇಖವಾಗಿರುವ ನಿಯಮಗಳ ಅನ್ವಯ ನಡೆದುಕೊಳ್ಳಬೇಕು. ಜತೆಗೆ ಅಗತ್ಯ ಬಿದ್ದ ಮಾಹಿತಿ ನೀಡಬೇಕು.
ಆಸ್ಪತ್ರೆಯಿಂದ ಸಮಸ್ಯೆ ಉಂಟಾದಲ್ಲಿ ಸರಕಾರ ರಚಿಸಿದ ರೋಗಿ ಹಕ್ಕು ರಕ್ಷಣಾ ಪ್ರಾಧಿಕಾರ ಅಥವಾ ಕ್ಲಿನಿಕ್‌ಗಳ ನಿಯಂತ್ರಣಾ ಪ್ರಾಧಿಕಾರಕ್ಕೆ ದೂರು ನೀಡಲು ರೋಗಿಗಳ ಕುಟುಂಬಕ್ಕೆ ಅವಕಾಶ ಕಲ್ಪಿಸಲಾಗಿದೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿರುವ ಬಗೆಗಿನ ದಾಖಲೆಗಳನ್ನು ರೋಗಿ ಡಿಸ್ಚಾರ್ಜ್ ಆದ 24 ಗಂಟೆಯೊಳಗೆ ಅಥವಾ 72 ಗಂಟೆಯ ಒಳಗೆ ನೀಡವಂತೆಯೂ ಸೂಚಿಸಲಾಗಿದೆ.
ಅತ್ಯಂತ ತುರ್ತು ಪರಿಸ್ಥಿತಿಯ ಚಿಕಿತ್ಸೆ ವೇಳೆ ರೋಗಿಯ ಪಾಲಕರು ಮತ್ತೂಬ್ಬ ವೈದ್ಯರ ಅಭಿಪ್ರಾಯ ಕೇಳುವುದಕ್ಕೆ ಆಸ್ಪತ್ರೆಗೆ ಅಡ್ಡಿಪಡಿಸಬಾರದು. ಅದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನೂ ಹೆಚ್ಚಿನ ವೆಚ್ಚ ಹೇರದೆ ನೀಡುವಂತೆಯೂ ಕರಡು ಪ್ರತಿಯಲ್ಲಿ ಉಲ್ಲೇಖೀಸಲಾಗಿದೆ. ಜತೆಗೆ ಆಸ್ಪತ್ರೆಗಳಲ್ಲಿ ವಿವಿಧ ಕಾಯಿಲೆಗಳ ತಪಾಸಣೆ ಮತ್ತು ಇತರರ ಪರೀಕ್ಷೆಗಳ ಬಗೆಗಿನ ಶುಲ್ಕದ ವಿವರಗಳನ್ನು ಪ್ರಕಟಿಸಬೇಕು.