Advertisement

ಆಸ್ಪತ್ರೆ ದಾರಿ ಏಕಾಏಕಿ ಬಂದ್‌!

02:10 PM Jul 16, 2019 | Suhan S |

ಧಾರವಾಡ: ದಡ್ಡಿ ಕಮಲಾಪುರ ಬಳಿ ಇರುವ ಯೋಗ ಮತ್ತು ನಿಸರ್ಗ ಚಿಕಿತ್ಸಾ ಕೇಂದ್ರಕ್ಕೆ ಇರುವ ಏಕೈಕ ದಾರಿಯನ್ನು ಅಧಿಕಾರಿಗಳು ಸೋಮವಾರ ದಿಢೀರ್‌ ಬಂದ್‌ ಮಾಡಿದ್ದಾರೆ.

Advertisement

ಬೆಳ್ಳಂಬೆಳಗ್ಗೆ ಜೆಸಿಬಿ ಯಂತ್ರಗಳನ್ನು ಬಳಸಿದ ತಹಶೀಲ್ದಾರ್‌ ನೇತೃತ್ವದ ತಂಡ ಈ ಆಸ್ಪತ್ರೆಗೆ ಇರುವ ಮಾರ್ಗದ ಮೂರು ಕಡೆಗಳಲ್ಲಿ ತೆಗ್ಗು ತೋಡಿ ಹಾಕಿದ್ದು, ಆಸ್ಪತ್ರೆಗೆ ಬರುವವರು ಮತ್ತು ಹೋಗುವವರು ಪರದಾಡುವಂತಾಗಿದೆ. ಯಾವುದೇ ಮುನ್ನೆಚ್ಚರಿಕೆ ನೋಟಿಸ್‌ ನೀಡದೇ ಅಧಿಕಾರಿಗಳು ಈ ರೀತಿ ಮಾಡಿದ್ದಾರೆ ಎಂದು ಯೋಗ ಚಿಕಿತ್ಸಾ ಕೇಂದ್ರದ ಹಿರಿಯ ವೈದ್ಯರು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶ ಮಾಡಿ ಅಗತ್ಯ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಏನಿದರ ಹಿನ್ನೆಲೆ?: ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಧಾರವಾಡ-ಅಳ್ನಾವರ ಹೆದ್ದಾರಿಯಿಂದ ದಾರಿ ಇರಲಿಲ್ಲ. 2003ರಲ್ಲಿ ಅಂದಿನ ಜಿಲ್ಲಾಧಿಕಾರಿಗಳು ಇಲ್ಲಿನ ಸರ್ಕಾರಿ ಜಾಗೆಯಲ್ಲಿ ದಾಟಿಕೊಂಡು ಹೋಗುವುದಕ್ಕೆ ಅನುಮತಿ ನೀಡಿದ್ದರು. ಇದನ್ನು ಕಾಯಂ ಆಗಿ ಬಳಸಿಕೊಳ್ಳುವಂತೆ ಅಧಿಕೃತವಾಗಿ ಪತ್ರವೊಂದನ್ನು ಯೋಗ ಚಿಕಿತ್ಸಾ ಕೇಂದ್ರಕ್ಕೆ ನೀಡಿದ್ದರು. ಈವರೆಗೂ ಅದೇ ರೀತಿಯಾಗಿ ಮಾರ್ಗವಿತ್ತು. ಆದರೆ, ಇದ್ದಕ್ಕಿದ್ದಂತೆ ಇದೀಗ ಇದು ಸರ್ಕಾರದ ಜಾಗೆ. ಇಲ್ಲಿ ನಿಮ್ಮ ಹಕ್ಕಿನ ಯಾವ ಪತ್ರವೂ ನಮ್ಮ ಬಳಿ ಇಲ್ಲ. ಕೂಡಲೇ ಇದನ್ನು ತೆರವುಗೊಳಿಸಿ ಎಂದು ಸ್ಥಳದಲ್ಲಿಯೇ ಎಚ್ಚರಿಕೆ ನೀಡಿದ್ದಾರೆ. ಆದರೆ ಯಾವುದೇ ಸಮಯವನ್ನು ನೀಡದೆ, ನೋಟಿಸ್‌ ಕೂಡ ಕೊಡದೆ ಸೋಮವಾರ ಬೆಳಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ರಸ್ತೆಯನ್ನು ಅಗೆದು ಹಾಕಿದ್ದಾರೆ. ಇದರಿಂದ ಆಸ್ಪತ್ರೆ ವೈದ್ಯರು ಮತ್ತು ರೋಗಿಗಳು ಪರದಾಡುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next