ಔರಾದ: ವಡಗಾಂವ ಗ್ರಾಮದಲ್ಲಿ ನನೆಗುದಿಗೆ ಬಿದ್ದಿದ್ದ ಸರ್ಕಾರಿ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಈ ಭಾಗದ ಜನರ ಹಲವು ವರ್ಷದ ಬೇಡಿಕೆ ಈಡೇರಿಕೆಯಾದಂತಾಗಿದೆ. ಆಸ್ಪತ್ರೆ ಕಟ್ಟಡಕ್ಕೆ ಸ್ಥಳಾವಕಾಶ ಇಲ್ಲದ ಕಾರಣ ಅನುದಾನ ಬಂದು ಮೂರು ಬಾರಿ ಹಿಂದೆ ಹೋಗಿತ್ತು. ಇದನ್ನು ಅರಿತ ಜಿಲ್ಲಾಧಿಕಾರಿಗಳು ಗ್ರಾಮದ ಸರ್ಕಾರಿ ಭೂಮಿಯಲ್ಲಿ ಆಸ್ಪತ್ರೆಯ ಕಟ್ಟಡ ನಿರ್ಮಿಸಲು ಲಿಖೀತ ಆದೇಶ ನೀಡಿದ್ದರೂ, ಈ ಭಾಗದ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಏಪ್ರಿಲ್ 8ರಂದು ಉದಯವಾಣಿಯಲ್ಲಿ ಪ್ರಕಟವಾದ “ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಅಡಗಡಿ ಸಲ್ಲ’ ಎನ್ನುವ ವಿಶೇಷ ವರದಿಗೆ ಸ್ಪಂದನೆ ಸಿಕ್ಕಿದೆ. ಜಿಪಂ ಸಿಇಒ, ಜಿಲ್ಲಾಧಿಕಾರಿ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳು ವಡಗಾಂವ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ. ಹಾಗೂ ಆಸ್ಪತ್ರೆಯ ಕಟ್ಟಡಕ್ಕೆ ಭೂಮಿ ಪೂಜೆಯನ್ನೂ ನೆರವೇರಿಸಿರುವುದರಿಂದ ಕಟ್ಟಡದ ಕಾಮಗಾರಿ ಆರಂಭವಾಗಿದೆ. ವಡಗಾಂವ ಗ್ರಾಮದಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಿಸಲು ಕರ್ನಾಟಕ ಆರೋಗ್ಯ ಸುಧಾರಣೆ ಇಲಾಖೆಯಿಂದ 1.40 ಕೋಟಿ ರೂ. ಅನುದಾನ ಮಂಜೂರಾಗಿದೆ. ಉತ್ತಮ ಕಟ್ಟಡದೊಂದಿಗೆ ಈ ಭಾಗದ ಜನರ ಹಲವು ದಿನಗಳ ಬಯಕೆ ಈಡೇರಿದಂತಾಗಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ| ಮಹೇಶ ಬಿರಾದರ ತಿಳಿಸಿದ್ದಾರೆ. ಗ್ರಾಮದಲ್ಲಿ ಈಗಿರುವ ಆಸ್ಪತ್ರೆಯ ಕಟ್ಟಡ ಹಳೆಯದಾಗಿದ್ದು, ಇದರಿಂದ ರೋಗಿಗಳಿಗೆ ಹಾಗೂ ವೈದ್ಯರಿಗೆ ಅನಾನುಕೂಲವಾಗುತ್ತಿದೆ. ಈಗ ಗ್ರಾಮದಲ್ಲಿ ನೂತನ ಕಟ್ಟಡ ನಿರ್ಮಾಣವಾಗುತ್ತಿರುವುದರಿಂದ ಒಳ್ಳೆಯದಾಗಿದೆ ಎಂದು ತಿಳಿಸಿದ್ದಾರೆ. ಆಸ್ಪತ್ರೆಯ ನೂತನ ಕಟ್ಟಡ ಗ್ರಾಮದಿಂದ 1ಕಿ.ಮೀ ಅಂತರದಲ್ಲಿದೆ. ಅಲ್ಲಿಗೆ ಹೋಗಿ ಬರಲು ಉತ್ತಮ ರಸ್ತೆ ನಿರ್ಮಿಸಲಾಗಿದೆ. ಇದು ಉತ್ತಮ ಕೆಲಸವಾಗಿದೆ. ಈಗ ಕಟ್ಟಡ ಕೆಲಸ ಆರಂಭವಾಗಿರುವುದರಿಂದ ಸಂತೋಷವಾಗಿದೆ ಎಂದು ವಡಗಾಂವ ಗ್ರಾಮಸ್ಥರು ತಿಳಿಸಿದ್ದಾರೆ.