Advertisement

ಆಸ್ಪತ್ರೆ ಸುತ್ತ ಕಾಮಗಾರಿ ಸದ್ದು

08:49 PM Aug 04, 2021 | Team Udayavani |

ಬೆಂಗಳೂರು: ಕಣ್ಣಾಡಿಸಿದ ಕಡೆಗಳಲ್ಲೆಲ್ಲಾ ಕಾಮಗಾರಿ,ಧೂಳು, ರಸ್ತೆ ಮಧ್ಯದಲ್ಲಿಯೇ ಬಿದ್ದಿರುವ ದೊಡ್ಡ ಗಾತ್ರದ ಪೈಪುಗಳು, ಮರಳು, ಜಲ್ಲಿಕಲ್ಲು,
ಮಣ್ಣಿನ ರಾಶಿಗಳು, ಅವುಗಳ ಮೇಲೆ ಕುಳಿತಿರುವ ರೋಗಿಗಳು, ಹತ್ತಾರು ಅನಧಿಕೃತ ವಾಹನ ನಿಲುಗಡೆ ತಾಣಗಳು,ಆ್ಯಂಬುಲೆನ್ಸ್‌ಓಡಾಟಕ್ಕೂ ಹರ ಸಾಹಸ…

Advertisement

– ಇದು ನಗರದ ವಿಕ್ಟೋರಿಯಾ ಆಸ್ಪತ್ರೆ ಸಮುಚ್ಚಯದಲ್ಲಿ ಕಳೆದ ಒಂದು ತಿಂಗಳಿಂದ ಕಂಡು ಬರುತ್ತಿರುವ ದೃಶ್ಯ. ಶತಮಾನದ ಇತಿಹಾಸ ಹೊಂದಿರುವ ನಗರದ ವಿಕ್ಟೋರಿಯಾ ಆಸ್ಪತ್ರೆ ಮತ್ತು ಸಮುಚ್ಚಯದಲ್ಲಿರುವ ಟ್ರಾಮಾ ಕೇರ್‌, ವಾಣಿವಿಲಾಸ್‌, ಪಿಎಂಎಸ್‌ಎಸ್‌ವೈ, ಮಿಂಟೋ ಆಸ್ಪತ್ರೆಗಳಿಗೆ ನಿತ್ಯ ಮೂರರಿಂದ ನಾಲ್ಕು ಸಾವಿರ ಮಂದಿ ಭೇಟಿ ನೀಡುತ್ತಾರೆ. ಸದ್ಯಇದೇ ಆವರಣದಲ್ಲಿ ಏಳುಅಂತಸ್ತಿನ ನೂತನ ಹೊರರೋಗಿಗಳ ಕಟ್ಟಡ, ಶ್ವಾಸಕೋಶ ರೋಗಗಳ ಘಟಕ, ಶಮಾನೋತ್ಸವ ಕಟ್ಟಡ ನಿರ್ಮಾಣ ಹಾಗೂ ಸ್ಮಾರ್ಟ್‌ಸಿಟಿ ಯೋಜನೆ ವಿವಿಧ ಕಾಮಗಾರಿಗಳು ನಡೆಯುತ್ತಿದೆ. ಇದರಿಂದಾಗಿ ಆಸ್ಪತ್ರೆಯ ಪೂರ್ಣ ಆವರಣವು ಕಾಮಗಾರಿ ಸಲಕರಣೆಗಳು, ಸದ್ದು ಮತ್ತು ಧೂಳಿನಿಂದಲೇ ತುಂಬಿದೆ.ರೋಗಿಗಳು,ಆ್ಯಂಬುಲೆನ್ಸ್‌ ಗಳು, ಆಸ್ಪತ್ರೆಯಿಂದ ಆಸ್ಪತ್ರೆಗಳ ನಡುವೆ ರೋಗಿಗಳ ಸಾಗಿಸುವ ಸ್ಟ್ರೆಚರ್‌ಗಳ ಓಡಾಟಕ್ಕೂ ಸಾಕಷ್ಟು
ಸಮಸ್ಯೆಯಾಗುತ್ತಿದೆ.

ಒಂದೇ ಆವರಣದಲ್ಲಿ ವಿವಿಧಆಸ್ಪತ್ರೆಗಳು ಇರುವುದರಿಂದ ಜನದಟ್ಟಣೆಯು ಸಾಕಷ್ಟು ಹೆಚ್ಚಿರುತ್ತದೆ. ಆದರೆ, ಕಾಮಗಾರಿ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಪಾಲನೆಯಾಗುತ್ತಿಲ್ಲ. ಹೀಗಾಗಿ, ರೋಗಿಗಳು ಮತ್ತವರ ಸಂಬಂಧಿಗಳು ಧೂಳಿನಿಂದ ಮೂಗು ಹಿಡಿದು ಓಡಾಡುತ್ತಿದ್ದಾರೆ. ಕಾಮಗಾರಿ ಸಲಕರ ಣೆಗಳು ಮೈಮೇಲೆ ಬಿದ್ದು ಹಾನಿ ಮಾಡುತ್ತವೆ. ಗುಂಡಿಗಳಿಂದ ಓಡುವಾಗ ಆಯತಪ್ಪಿ ಬೀಳುವ ಭಯದಲ್ಲಿ ಸಂಚಾರ ನಡೆಸಬೇಕಾಗಿದೆ.

ಅನಧಿಕೃತ ವಾಹನ ನಿಲುಗಡೆ:ಮೊದಲೇ ಕಾಮಗಾರಿ ನಡೆಯುತ್ತಿರುವುದರಿಂದ ಜನರ ಓಡಾಟಕ್ಕೂ ಸಮಸ್ಯೆ ಇದೆ. ಇಂತಹವುಗಳ ನಡುವೆ ಅನಧಿಕೃತ ಖಾಸಗಿ ವಾಹನಗಳು ನಿಲುಗಡೆಯಾಗುತ್ತಿವೆ. ಆಸ್ಪತ್ರೆಯಿಂದಲೇ ವಾಹನ ನಿಲುಗಡೆ ತಾಣವಿದ್ದರೂ ಅವುಗಳತ್ತ ಸಾರ್ವಜನಿಕರು ಮುಖಮಾಡುತ್ತಿಲ್ಲ. ಆವರಣದಲ್ಲಿ ಎಲ್ಲಾದರೂ ಒಂದಿಷ್ಟು ಜಾಗ ಸಿಕ್ಕರೆ ಅಲ್ಲಿಯೇ ನಾಲ್ಕೈದು ವಾಹನಗಳು ನಿಲುಗಡೆಯಾಗುತ್ತಿವೆ. ಇನ್ನು
ಪಕ್ಕದಲ್ಲಿಯೇ ಕೃಷ್ಣರಾಜ ಮಾರುಕಟ್ಟೆ ಇದ್ದು, ಅಲ್ಲಿಗೆ ಆಗಮಿಸುವವರೂ ಹಣ ಉಳಿತಾಯ ಮಾಡಲು ಆಸ್ಪತ್ರೆ ಆವರಣದಲ್ಲೇ ವಾಹನ ನಿಲ್ಲಿಸುತ್ತಿದ್ದಾರೆ.

ಆ್ಯಂಬುಲೆನ್ಸ್‌ ಹರಸಾಹಸ: ಆಸ್ಪತ್ರೆ ಆವರಣ ಪ್ರವೇಶಿಸುವ ಆ್ಯಂಬುಲೆನ್ಸ್‌ಗಳು ಆಸ್ಪತ್ರೆಯ ಬಾಗಿಲು ಮುಟ್ಟಲು ಕನಿಷ್ಠ 5-10 ನಿಮಿಷ ಹಿಡಿಯುತ್ತಿದೆ. ಅನಗತ್ಯ ವಾಹನ ನಿಲುಗಡೆ,ಕಾಮಗಾರಿ, ಪಾದಚಾರಿ ಮಾರ್ಗವಿಲ್ಲದೆ ರಸ್ತೆಗಳಲ್ಲಿಯೇ ಜನ ಓಡಾಟದಿಂದ ಆ್ಯಂಬುಲೆನ್ಸ್‌ ಚಾಲಕರು ಪರದಾಟ ನಡೆಸುತ್ತಿದ್ದಾರೆ. ಇನ್ನು ಆಸ್ಪತ್ರೆ ಹೊಸ ಭಾಗದಲ್ಲಿ ಪರಿಸ್ಥಿತಿ ಇನ್ನಷ್ಟು ಹೀನಾಯವಾಗಿದ್ದು, ರಸ್ತೆ, ಪಾದಾಚಾರಿ ಮಾರ್ಗದ
ಕಾಮಗಾರಿಯಿಂದ ದಿನದ ಬಹುತೇಕ ಸಮಸ್ಯೆ ವಾಹನ ದಟ್ಟಣೆಯಿಂದಲೇ ತುಂಬಿರುತ್ತದೆ.

Advertisement

ಕಾಮಗಾರಿ ಸಲಕರಣೆಗಳ ಮೇಲೆ ರೋಗಿಗಳು ವಿಶ್ರಾಂತಿ: ಆಸ್ಪತ್ರೆ ಆವರಣದ ಬಹುತೇಕ ಕಡೆಯಲ್ಲಿ ದೊಡ್ಡ ಪೈಪ್‌ಗಳು, ಜಲ್ಲಿ ಕಲ್ಲುಗಳು, ಮಣ್ಣಿನ ರಾಶಿ ಇರುವುದರಿಂದ ಆಸ್ಪತ್ರೆ ದಾಖಲಾಗಲು ಬಂದಿರುವವರು, ಹೊರ ರೋಗಿಗಗಳು ನೋಂದಣಿಯಾಗುವವರೆಗೂ ಈ ಕಾಮಗಾರಿ ಸಲಕರಣೆಗಳ ಮೇಲೆಯೇ ಕುಳಿತು ವಿಶ್ರಾಂತಿ ಪಡೆಯುವ ದೃಶ್ಯಗಳು ಸಾಮಾನ್ಯವಾಗಿದ್ದವು.

ಇದನ್ನೂ ಓದಿ:ಉಡುಪಿ : ಮೊಬೈಲ್ ಗೆ ಬಂದ ಲಿಂಕ್ ಕ್ಲಿಕ್ ಮಾಡಿ ದುಡ್ಡು ಕಳೆದುಕೊಂಡ ಪ್ರೊಫೆಸರ್

ಕಾರ್ಮಿಕರ ಕೊರತೆಯಿಂದ ಕಾಮಗಾರಿ ವಿಳಂಬ
ಹೊಸ ರಸ್ತೆಗಳ ಕಾಮಗಾರಿ ಇನ್ನು ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸುಸಜ್ಜಿತ ರಸ್ತೆಗಳನ್ನು ಅಭಿವೃದ್ಧಿಪಡಿಸಲು, ಪಾರ್ಕಿಂಗ್‌ಗೆ ವ್ಯವಸ್ಥೆ, ಫ‌ುಟ್‌ಪಾತ್‌ ಅಭಿವೃದ್ಧಿ, ಪ್ರವೇಶ ದ್ವಾರ ಮತ್ತು ಟ್ರಸ್ಟ್‌ ನಿರ್ಮಾಣ ಸೇರಿದಂತೆ ಬೀದಿದೀಪ ಅಳವಡಿಸಲು ಬೆಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ ಕಾಮಗಾರಿಯನ್ನು 10.65ಕೋಟಿ ರೂ. ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಫೆ.10 ರಂದು ಆರೋಗ್ಯ ಸಚಿವರು ಇದ್ದಕ್ಕೆ ಚಾಲನೆ ನೀಡಿದ್ದರು. ಎರಡರಿಂದ ಮೂರು ತಿಂಗಳೊಳಗೆ ಈ ಕಾಮಗಾರಿ ಮುಕ್ತಾಯವಾಗಬೇಕಿತ್ತು. “ಕೊರೊನಾ ಹಿನ್ನೆಲೆ ಕಾರ್ಮಿಕರು ಸಕಾಲಕ್ಕೆ ಸಿಗದೇ ಕಾಮಗಾರಿಯು ತಡವಾಗುತ್ತಿದೆ’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಶೀಘ್ರ ಕಾಮಗಾರಿ ಮುಗಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಪತ್ರಬರೆಯುವ ಮೂಲಕ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ.ಕಾರ್ಮಿಕರ
ಸಮಸ್ಯೆಯಿಂದ ತಡವಾಗುತ್ತಿದೆ ಎಂದುಹೇಳುತ್ತಿದ್ದಾರೆ. ಆಸ್ಪತ್ರೆಗೆ ರೋಗಿಗಳ ಸಂಖ್ಯೆಹೆಚ್ಚಾಗಿದ್ದು, ಅಗತ್ಯ ಮುಂಜಾಗ್ರತಾ ಕ್ರಮಕ್ಕೆ ಸೂಚಿಸಲಾಗುವುದು.
– ಡಾ.ಸಿ.ಆರ್‌. ಜಯಂತಿ, ಡೀನ್‌, ಬೆಂಗಳೂರು
ವೈದ್ಯಕೀಯ ಕಾಲೇಜು

ಆಸ್ಪತ್ರೆಯಲ್ಲಿ ಕಾಮಗಾರಿ ನಡೆಯುತ್ತಿರುತ್ತದೆ. ಆ್ಯಂಬುಲೆನ್ಸ್‌ ಓಡಾಟಕ್ಕೂ ಜಾಗವಿಲ್ಲ. ರೋಗಿ ಜೀವ ಉಳಿಸಲೆಂದು ವೇಗವಾಗಿ ಚಾಲನೆ ಮಾಡಿದರೆ ಅಪಘಾತಕ್ಕೆ ಕಾರಣವಾಗುತ್ತದೆ.ಈ ಬಗ್ಗೆ ಶೀಘ್ರ ಕ್ರಮಕೈಗೊಳ್ಳಬೇಕು.
-ಮಹೇಶ್‌, ಆ್ಯಂಬುಲೆನ್ಸ್‌ ಚಾಲಕ

ಕಾಮಗಾರಿ ನಡೆಯುತ್ತಿದ್ದು, ವಿಶ್ರಾಂತಿ ಮಾಡುವುದಕ್ಕೂ ಜಾಗ ಇಲ್ಲ. ರೋಗಿಗಳ ಭೇಟಿಗೆ ಬಂದರೆಕಲ್ಲು ಮಣ್ಣಿನ ರಾಶಿ ಮೇಲೆ ಕುಳಿತಕೊಳ್ಳಬೇಕಿದೆ. ರೋಗಿಗಳನ್ನು ಒಂದುಕಡೆಯಿಂದ ಮತ್ತೊಂದೆಡೆ ಸಾಗಿಸುವಾಗ ಭಯವಾಗುತ್ತದೆ.
-ಸಂಜೀವ, ರೋಗಿಯ ಸಂಬಂಧಿ

– ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next