ಹುಬ್ಬಳ್ಳಿ: ರಾಯಚೂರಿನಲ್ಲಿ ಏಮ್ಸ್ (ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ) ಸ್ಥಾಪಿಸುವುದು ಕಾಂಗ್ರೆಸ್ ಪಕ್ಷದ ಚುನಾವಣಾ ಭರವಸೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ ಮನವಿ ನೀಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹುಬ್ಬಳ್ಳಿಯಲ್ಲಿರುವ ಕೆಎಂಸಿಆರ್‌ಐ ಏಮ್ಸ್‌ಗಿಂತ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲ. ಇಲ್ಲಿ ಎಲ್ಲಾ ರೀತಿಯ ವೈದ್ಯಕೀಯ ಸೌಲಭ್ಯಗಳಿವೆ. ಜೊತೆಗೆ ಪಕ್ಕದಲ್ಲೇ ಡಿಮಾನ್ಸ್ ಕೂಡ ಇದೆ ಎಂದರು. ಕೆಎಂಸಿಆರ್‌ಐನಲ್ಲಿ ವ್ಯಾಸ್ಕೂಲರ್ ಸರ್ಜರಿ ವಿಭಾಗ ಪ್ರಾರಂಭಿಸಲು ಅವಶ್ಯವಾದ ಎಲ್ಲಾ ಅಗತ್ಯ ಕ್ರಮಗಳ ಕೈಗೊಳ್ಳುವಂತೆ ನಿರ್ದೇಶಕರಿಗೆ ಸೂಚಿಸಿದರು.
ಕೆಎಂಸಿಆರ್‌ಐನಲ್ಲಿ ಮೂತ್ರಪಿಂಡ ರೋಗಗಳಿಂದ ಬಳಲುತ್ತಿರುವವರಿಗೆ ಪಿಸ್ತೂಲಾ ಸಂಬಂಧ ತೊಂದರೆ ಆಗುತ್ತಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸಚಿವರು ಪ್ರತಿಕ್ರಿಯಿಸಿದರು. ಈ ಬಗ್ಗೆ ನಿರ್ದೇಶಕರಿಗೆ ಪಿಸ್ತೂಲಾ ಅಳವಡಿಕೆಗೆ ಏಕೆ ಸಮಸ್ಯೆ ಆಗುತ್ತಿದೆ ಎಂದು ಕೇಳಿದರು. ಅದಕ್ಕೆ ಅವರು ಕೇವಲ ಸಿವಿಟಿಎಸ್ ( ಕಾರ್ಡಿಯೋ ವ್ಯಾಸ್ಕೂಲರ್ ಥೊರಾಸಿಕ್ಸ್ ಸರ್ಜನ್) ಇರುವುದರಿಂದ ಈ ಸಮಸ್ಯೆ ಉಂಟಾಗುತ್ತದೆ ಎಂದರು. ಇದಕ್ಕೆ ಸಚಿವರು ಏಕೆ ಇಲ್ಲಿ ವಾಸ್ಕೂಲರ್ ವಿಭಾಗ ಇಲ್ಲವೇ ಎಂದು ಕೇಳಿದರು. ಅದಕ್ಕೆ ಆದಷ್ಟು ಬೇಗ ಇಲ್ಲಿ ವಿಭಾಗ ಸ್ಥಾಪಿಸುವಂತೆ ಸೂಚಿಸಿದರು.
ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಬೆಳಗಾವಿಯಲ್ಲಿ ಸ್ಥಾಪನೆಗೆ ಈಗಾಗಲೇ ನಿರ್ಧರಿಸಲಾಗಿದೆ. ಅಲ್ಲೂ ಇನ್ನು ಅದು ಆರಂಭವಾಗಿಲ್ಲ. ಕೆಎಂಸಿಆರ್‌ಐನಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿ ಬಹುತೇಕ ಎಲ್ಲಾ ಸೌಲಭ್ಯ ಇದೆ. ಹೀಗಾಗಿ ಹುಬ್ಬಳ್ಳಿಯಲ್ಲಿ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರದ ಅವಶ್ಯಕತೆ ಇಲ್ಲ ಅನ್ನಿಸುತ್ತದೆ ಎಂದು ಹೇಳಿದರು.
ಕೆಎಂಸಿಆರ್‌ಐನಲ್ಲಿ ಪೆಟ್ ಸ್ಕ್ಯಾನ್ ಇಲ್ಲದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಹಳಷ್ಟು ಸಂಸ್ಥೆಗಳಲ್ಲಿ ಈ ಸೌಲಭ್ಯ ಇಲ್ಲ. ಈಗ ಕೆಎಂಸಿಆರ್‌ಐನಲ್ಲಿ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್ ಮೂಲಕ ರೋಗ ಪತ್ತೆ ಮಾಡಲಾಗುತ್ತಿದೆ. ಪೆಟ್ ಸ್ಕ್ಯಾನ್ ಗೆ ಕಿದ್ವಾಯ್ (ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ)ಗೆ ಕಳುಹಿಸಲಾಗುತ್ತಿದೆ. ಕೆಎಂಸಿಆರ್‌ಐ ಗೆ ಸೌಲಭ್ಯಗಳಲ್ಲಿ ಏನಾದರೂ ಕೊರತೆ ಇದ್ದರೆ ಮತ್ತು ಈ ಬಗ್ಗೆ ಗಮನಕ್ಕೆ ತಂದರೆ ಅದನ್ನು ಪೂರೈಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.