Advertisement

ಸ್ತ್ರೀವಾದ ಬಿಟ್ಟು ಚರಿತ್ರೆ ಅರ್ಥೈಸಲು ಸಾಧ್ಯವಿಲ್ಲ

06:31 PM Feb 24, 2020 | Naveen |

ಹೊಸಪೇಟೆ: ಸ್ತ್ರೀವಾದ ತತ್ವವನ್ನು ಬಿಟ್ಟು ಚರಿತ್ರೆಯನ್ನು ಅರ್ಥೈಸಲು ಸಾಧ್ಯವಿಲ್ಲ ಎಂದು ಕ್ರೈಸ್ಟ್‌ ಕಾಲೇಜಿನ ಇತಿಹಾಸ ಪ್ರಾಧ್ಯಾಪಕಿ ಡಾ| ವಾಗೀಶ್ವರಿ ಎಸ್‌.ಪಿ. ಹೇಳಿದರು.

Advertisement

ಕನ್ನಡ ವಿಶ್ವವಿದ್ಯಾಲಯದ ಒನಕೆ ಓಬವ್ವ ಅಧ್ಯಯನ ಪೀಠ ಹಾಗೂ ಯುಜಿಸಿಯ ಪ್ರಾಯೋಜಿತ ಮಹಿಳಾ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ತ್ರೀವಾದಿ ಅನುಸಂಧಾನ ನೆಲೆಗಳು ಎಂಬ ಸಂಶೋಧನಾ ಕಮ್ಮಟಕ್ಕೆ ಚಾಲನೆ ನೀಡಿ ಮಾತನಾಡಿದರು.

ವಸ್ತುನಿಷ್ಟತೆಯೂ ಚರಿತ್ರೆ ಬುನಾದಿ. ವಸ್ತುನಿಷ್ಠತೆ ಇಲ್ಲದ ಚರಿತ್ರೆ ಸಿನಿಕವೆನಿಸುತ್ತದೆ. 20 ಮತ್ತು 21ನೇ ಶತಮಾನದಲ್ಲಿ ಚರಿತ್ರೆ ಬಗ್ಗೆ ಇರುವ ಪರಿಕಲ್ಪನೆಗಳು ಹೇಗೆ ಬದಲಾಗಿವೆ ಮತ್ತು ಯಾವ ನೆಲೆ ಹಾಗೂ ಹಿನ್ನೆಲೆಯಲ್ಲಿ ಚರಿತ್ರೆ ನೋಡಬೇಕು ಎನ್ನುವುದರ ಆಧಾರದ ಮೇಲೆ ಸ್ತ್ರೀವಾದ ಚರಿತ್ರೆ ರಚನಾ ಕ್ರಮವನ್ನು ತಿಳಿಯಬಹುದು ಎಂದು ಹೇಳಿದರು.

ಮಹಿಳೆ ಪುರುಷನ ಮಹಾನ್‌ ಶಕ್ತಿ. ಇಂತಹ ಶಕ್ತಿ ಕೇಂದ್ರವನ್ನು ನಾವು ನಿರ್ಲಕ್ಷಿಸುತ್ತಿದ್ದೇವೆ. ರಾಮ ಪುರುಷೋತ್ತಮನಾಗಿದ್ದು, ಗೊಲ್ಲ ಕೃಷ್ಣನಾಗಿದ್ದು, ಗಾಂಧಿಧೀಜಿಯವರು ಮಹಾತ್ಮರಾಗಿದ್ದು ಹಾಗೂ ನರೇಂದ್ರರು ಸ್ವಾಮಿ ವಿವೇಕಾನಂದರಾಗಿದ್ದು ಮಹಿಳೆಯೆನ್ನುವ ಮಹಾಶಕ್ತಿಯಿಂದ ಎಂದು ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಅಭಿಪ್ರಾಯಪಟ್ಟರು.

ಕುಲಪತಿ ಡಾ| ಸ.ಚಿ. ರಮೇಶ ಅಧ್ಯಕ್ಷತೆ ವಹಿಸಿ ಮಾತನಾಡಿ, ಪುರುಷರ ಯಜಮಾನಿಕೆಯಿಂದ ಹಾಗೂ ಸ್ತ್ರೀಯರ ಅಸಹಾಯಕತೆಯಿಂದ ಚರಿತ್ರೆಯಲ್ಲಿ ಮಹಿಳೆಯರು ಕಣ್ಮರೆಯಾಗಿದ್ದಾರೆ. ಪುರುಷ ಪ್ರಧಾನ ಚರಿತ್ರೆಯು ಯುದ್ಧವನ್ನು ಪ್ರತಿಬಿಂಬಿಸಿದರೆ, ಮಹಿಳಾ ಚರಿತ್ರೆಯು ತ್ಯಾಗ ಮತ್ತು ಸೇವೆಯನ್ನು ಪ್ರತಿಬಿಂಬಿಸುವುದು. ಪುರುಷನಿಂದ ರಚಿತವಾದ ಚರಿತ್ರೆಯಲ್ಲಿ ಮಹಿಳಾ ಚರಿತ್ರೆಯನ್ನು ಗೌಣವಾಗಿಸಲಾಗಿದೆ.

Advertisement

ಇತಿಹಾಸದಲ್ಲಿ ಒನಕೆ ಓಬವ್ವ, ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ಕೆಲವು ಮಹಿಳೆಯರನ್ನು ಮಾತ್ರ ಗುರುತಿಸಲಾಗಿದ್ದು, ಇನ್ನು ಹಲವಾರು ಮಹಿಳೆಯರು ಚರಿತ್ರೆ ಪುಟಗಳಲ್ಲಿ ದಾಖಲಾಗಿಲ್ಲ. ವರ್ತಮಾನದಲ್ಲೂ ಕೂಡ ಮಹಿಳೆಯರ ಸಾಧನೆಯನ್ನು ಚರಿತ್ರೆಯಲ್ಲಿ ದಾಖಲಿಸಲು ಮನಸ್ಸು ಮಾಡುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಒನಕೆ ಒಬವ್ವ ಅಧ್ಯಯನ ಪೀಠದ ಸಂಚಾಲಕಿ ಡಾ| ಶೈಲಜಾ ಇಂ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಶೋಧನ ವಿಧಾನಗಳಿಗೂ ಸಾಮಾಜಿಕ, ಆರ್ಥಿಕ ಜ್ಞಾನವಲಯದ ಅಧಿಕಾರಕ್ಕೂ ನೇರವಾದ ಸಂಬಂಧ ಇದೆ. ಸ್ತ್ರೀವಾದ ಚಳವಳಿ ಆರಂಭವಾದಾಗಿನಿಂದ ಇಲ್ಲಿಯವರೆಗೂ ಅನೇಕರು ಮಹಿಳಾ ಕೇಂದ್ರೀಕೃತವಾದಂತಹ ಅನೇಕ ಸಿದ್ಧಾಂತಗಳನ್ನು ಅಭಿವೃದ್ಧಿಪಡಿಸುತ್ತ ಬಂದಿದ್ದಾರೆ ಎಂದರು.

ಕುಲಸಚಿವ ಡಾ| ಎ. ಸುಬ್ಬಣ್ಣ ರೈ, ಪ್ರಾಧ್ಯಾಪಕ ಡಾ| ವೀರೇಶ ಬಡಿಗೇರ, ವಿವಿಧ ವಿಶ್ವವಿದ್ಯಾಲಯಗಳ ಪ್ರಬಂಧಕಾರರು, ವಿವಿಧ ನಿಕಾಯಗಳ ಡೀನರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next