Advertisement

ನರಕ ಸೃಷ್ಟಿಸಿದ ಒಳಚರಂಡಿ ನೀರು!

11:49 AM Aug 28, 2019 | Naveen |

ಪಿ.ಸತ್ಯನಾರಾಯಣ
ಹೊಸಪೇಟೆ:
ಇಲ್ಲಿನ 11ನೇ ವಾರ್ಡು ತಿರುಮಲ ನಗರದಲ್ಲಿ ಒಳಚರಂಡಿ ಗಲೀಜು ನೀರು ರಸ್ತೆಯಲ್ಲಿ ಹರಿದಾಡಿ ದುರ್ನಾತ ಬೀರುತ್ತಿದ್ದು ಇಲ್ಲಿನ ವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ.

Advertisement

ನಗರದ ಹೃದಯ ಭಾಗದಲ್ಲಿರುವ ಈ ಪ್ರದೇಶದಲ್ಲಿ ಒಳ ಚರಂಡಿ (ಯುಜಿಡಿ) ಹೊಲಸು ನೀರು ಮನೆಯಂಗಳದಲ್ಲಿ ಹರಿದಾಡಿ, ಕಳೆದ ಆರೇಳು ತಿಂಗಳಿಂದ ಜನರು ಮೂಕ ವೇದನೆ ಅನುಭವಿಸುತ್ತಿದ್ದಾರೆ. ಇಲ್ಲಿನ ವಾಸಿಗಳು ಒಳ ಚರಂಡಿ ಮಲಮೂತ್ರ ಮಿಶ್ರಿತ ಹೊಲಸು ನೀರಿನಲ್ಲಿ ಕಾಲ ಕಳೆಯುವಂತಾಗಿದೆ.

ಓಣಿಯಲ್ಲಿ ಸದಾ ಗಬ್ಬುನಾತ ಒಂದಡೆಯಾದರೆ, ಸಂಜೆಯಲ್ಲಿ ಸೊಳ್ಳೆಗಳ ಕಾಟ ಮಿತಿ ಮೀರಿದ್ದು, ಹಲವು ಸಂಕ್ರಾಮಿಕ ರೋಗ-ರುಜಿನಗಳಿಗೆ ಆಹ್ವಾನ ನೀಡಿದೆ. ನಗರಸಭೆ ಅಧಿಕಾರಿಗಳು ಮಾತ್ರ ಇತ್ತ ತಿರಿಗಿಯೂ ನೋಡಿಲ್ಲ. ಅನೇಕ ಬಾರಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಗರಸಭೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಾರೆ.

250ಕ್ಕೂ ಹೆಚ್ಚು ಜನರು ವಾಸ ಮಾಡುವ ಈ ಪ್ರದೇಶದಲ್ಲಿ ಹೆಚ್ಚಾಗಿ ದಲಿತ ಕುಟುಂಬಗಳು ವಾಸವಾಗಿವೆ. ಮನೆಯಂಗಳದ ಗಲೀಜು ನೀರನ್ನು ನಿತ್ಯ ಸ್ವಚ್ಛ ಮಾಡುವುದೇ ಇವರಿಗೆ ನಿತ್ಯದ ಕಾಯಕವಾಗಿದೆ. ನಗರದಲ್ಲಿ ಇತ್ತೀಚಿಗೆ ಸುರಿದ ಮಳೆಯಿಂದಾಗಿ ಚರಂಡಿ ತ್ಯಾಜ್ಯದೊಂದಿಗೆ ಮಳೆ ನೀರು ಮನೆ ಹೊಕ್ಕು ಅವಾಂತರವೇ ಸೃಷ್ಟಿಯಾಗಿತ್ತು. ಮನೆ ಮಂದಿಯೆಲ್ಲ ಮಳೆ ನೀರನ್ನು ಹೊರ ಹಾಕಿ ರಾತ್ರಿ ಇಡೀ ಜಾಗರಣೆ ಮಾಡಿದರು. ನಗರದಲ್ಲಿ ಈಗಾಗಲೇ ಅಮೃತ್‌ ಸಿಟಿ ಯೋಜನೆಯಡಿಯಲ್ಲಿ ರಸ್ತೆ, ಚರಂಡಿ ಕಾಮಗಾರಿ ಕೈಗೆತ್ತಿಕೊಂಡಿರುವ ನಗರಸಭೆ, ತಿರುಮಲ ನಗರದ ಒಳ ಚರಂಡಿ ದುರಸ್ತಿಗೆ ಕಾರ್ಯ ನಡೆಸಲು ಏಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದರು. ದಲಿತರ ಕಾಲೋನಿಗಳ ಮೇಲೆ ಅಧಿಕಾರಿಗಳು ಅಸಡ್ಡೆ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. ಇತ್ತೀಚಿಗೆ ವರ್ಗಾವಣೆಯಾದ ಪೌರಾಯಕ್ತ ರಮೇಶ್‌ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ. ನೂತನವಾಗಿ ಅಧಿಕಾರ ವಹಿಸಿಕೊಂಡ ಪೌರಾಯುಕ್ತರಾಗಲಿ ಇತ್ತ ಗಮನ ಹರಿಸಬೇಕು. ಪ್ರಸ್ತುತ ಜಿಲ್ಲಾಧಿಕಾರಿ ನಕುಲ ಅವರೇ ನಗರಸಭೆಗೆ ಅಧ್ಯಕ್ಷರಾಗಿದ್ದು, ಅವರಾದರೂ ತಿರುಮಲ ನಗರದ ಜನರ ಗೋಳು ಕೇಳಬೇಕು ಎಂದು ಮನವಿ ಮಾಡಿದ್ದಾರೆ. ಇಲ್ಲವಾದಲ್ಲಿ ನಗರಸಭೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

11ನೇ ವಾರ್ಡ್‌ ತಿರುಮಲ ನಗರದಲ್ಲಿ ಒಳ ಚರಂಡಿ (ಯುಜಿಡಿ)ಯಬ ಹೊಲಸು ನೀರು ಮನೆಯಂಗಳದಲ್ಲಿ ಹರಿದಾಡುತ್ತಿರುವ ಬಗ್ಗೆ ವಾರ್ಡು ನಿವಾಸಿಗಳು ಗಮನಕ್ಕೆ ತಂದಿದ್ದಾರೆ. ಈಗಾಗಲೇ ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಲಾಗಿದೆ. ನಾಳೆ (ಆ.28)ಒಳ ಚರಂಡಿ ದುರಸ್ತಿ ಕೆಲಸ ನಡೆಸಿ, ಇಲ್ಲಿಯ ಸಮಸ್ಯೆಯನ್ನು ಪರಿಹರಿಸಲಾಗುವುದು.
ಸಯೈದ್‌ ಮನ್ಸೂರ್‌ ಅಹಮ್ಮದ್‌,
 ಎಇಇ, ನಗರಸಭೆ, ಹೊಸಪೇಟೆ

Advertisement

11ನೇ ವಾರ್ಡಿನಲ್ಲಿ 250ಕ್ಕೂ ಹೆಚ್ಚು ಜನರು ವಾಸ ಮಾಡುತ್ತಿದ್ದು, ಇಲ್ಲಿ ಹೆಚ್ಚಾಗಿ ದಲಿತ ಕುಟುಂಬಗಳು ವಾಸವಾಗಿವೆ. ಒಳ ಚರಂಡಿ ಒಡೆದು ಅದರಿಂದ ಗಲೀಜು ನೀರು ಮನೆಯಂಗಳದಲ್ಲಿ ಬಂದು ಸೇರುತ್ತದೆ. ಗಲೀಜು ನೀರನ್ನು ನಿತ್ಯ ಸ್ವಚ್ಛ ಮಾಡುವುದೇ ಇಲ್ಲಿನ ಜನರಿಗೆ ಕಾಯಕವಾಗಿದೆ. ಜನಪ್ರತಿನಿಧಿ ಹಾಗೂ ನಗರಸಭೆ ಅಧಿಕಾರಿಗಳು ಕಂಡು ಕಾಣದಂತೆ ಜಾಣ ಕುರಡುತನ ಪ್ರದರ್ಶನ ಮಾಡುತ್ತಿದ್ದಾರೆ. ಅನೇಕ ಬಾರಿ ಗಮನಕ್ಕೆ ತಂದರೂ ಇತ್ತ ತಿರುಗಿ ನೋಡಿಲ್ಲ.
ಸಿ. ಸೋಮಶೇಖರ ಬಣ್ಣದ ಮನೆ,
ಸಹ ಸಂಚಾಲಕ, ಪ್ರಗತಿಪರ ಸಂಘಟನೆಗಳ ಒಕ್ಕೂಟ, ಹೊಸಪೇಟೆ

Advertisement

Udayavani is now on Telegram. Click here to join our channel and stay updated with the latest news.

Next