ಹೊಸಪೇಟೆ: ಹೊಸಪೇಟೆ-ಕೊಟ್ಟೂರು ಪ್ರಯಾಣಿಕರ ರೈಲು ಓಡಾಟವನ್ನು ಬಳ್ಳಾರಿ ವಿಸ್ತರಣೆ ಮಾಡುವ ಮೂಲಕ ಬಳ್ಳಾರಿ ಮತ್ತು ಹರಿಹರದಿಂದ ಬೆಳಗ್ಗೆ ಏಳು ಗಂಟೆಗೆ ಏಕಕಾಲದಲ್ಲಿ ಸಂಚಾರ ಮಾಡು ವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ವಿಜಯನಗರ ರೈಲ್ವೇ ಅಭಿವೃದ್ಧಿ ಕ್ರಿಯಾಸಮಿತಿ ಪದಾಧಿಕಾರಿಗಳು, ರೈಲ್ವೇ ನಿಲ್ದಾಣ ಅಧೀಕ್ಷಕ ಉಮೇಶ್, ಅವರ ಮೂಲಕ ರಾಜ್ಯ ರೈಲ್ವೆ ಸಚಿವ ಸುರೇಶ್ ಅಂಗಡಿ ಹಾಗೂ ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದರು.
ಹೊಸಪೇಟೆ-ಕೊಟ್ಟೂರು, ಹರಿಹರ ಮಾರ್ಗದಲ್ಲಿ ನಿತ್ಯ ಸಂಚಾರ ಮಾಡುವ ರೈಲು ಪ್ರತಿದಿನ ಬೆಳಗ್ಗೆ 6.30ಕ್ಕೆ ಹರಿಹರದಿಂದ ನಿರ್ಗಮಿಸಿ ತಡವಾಗಿ 1 ಗಂಟೆಗೆ ಹೊಸಪೇಟೆಗೆ ತಲುಪುತ್ತದೆ. ಕೇವಲ 130 ಕಿಮೀ ಅಂತರವನ್ನು ಕ್ರಮಿಸಲು 6 ತಾಸುಗಳಷ್ಟು ವಿಳಂಬವಾಗುವುದರಿಂದ ಈ ರೈಲಿನಲ್ಲಿ ಸಂಚರಿಸಲು ಪ್ರಯಾಣಿಕರು ಇಚ್ಚಿಸುವುದಿಲ್ಲ. ಈ ರೈಲು ಜನರಿಗೆ ಅನುಪಯುಕ್ತವಾಗಿದ್ದು ಇಲಾಖೆಗೆ ನಷ್ಟವಾಗುತ್ತಿದೆ. ಆದುದರಿಂದ ಈ ರೈಲನ್ನು ಬಳ್ಳಾರಿವರೆಗೆ ವಿಸ್ತರಿಸಿ ಅಲ್ಲಿಂದ ಪ್ರತಿದಿನ ಬೆಳಗ್ಗೆ ಬಳ್ಳಾರಿ ಹಾಗೂ ಹರಿಹರದಿಂದ ಏಕಕಾಲಕ್ಕೆ ಬೆಳಗ್ಗೆ 7.00 ಗಂಟೆಗೆ ಸಂಚಾರ ಆರಂಭಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿದಿನ ಸಾವಿರಾರು ಜನರು ಕಾರ್ಯನಿಮಿತ್ತ ಜಿಲ್ಲಾ ಕೇಂದ್ರ ಬಳ್ಳಾರಿಗೆ ತೆರಳುತ್ತಾರೆ. ಕಾಲೇಜು, ಆಸ್ಪತ್ರೆ, ಸರ್ಕಾರಿ ಕಚೇರಿಗಳಿಗೆ ಸಕಾಲದಲ್ಲಿ ಹೋಗಲು ರೈಲಿನ ವ್ಯವಸ್ಥೆ ಇರುವುದಿಲ್ಲ. ಆದುದರಿಂದ ಪ್ರತಿದಿನ 8 ಗಂಟೆ ಒಳಗಾಗಿ ಹೊಸಪೇಟೆಯಿಂದ ನಿರ್ಗಮಿಸಿ 9.30 ಗಂಟೆ ಒಳಗಾಗಿ ಬಳ್ಳಾರಿ ತಲಪುವಂತೆ ನೂತನ ಪ್ರಯಾಣಿಕರ ರೈಲನ್ನು ಆರಂಭಿಸಬೇಕು. ಅದೇ ರೀತಿ ಸಂಜೆ 7 ಗಂಟೆಗೆ ಬಳ್ಳಾರಿಯಿಂದ ನಿರ್ಗಮಿಸಿ ಹೊಸಪೇಟೆಗೆ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಸ್ತುತ ವಿಜಯಪುರ-ಯಶವಂತಪುರ ನಡುವೆ ಸಂಚರಿಸುವ ಗಾಡಿ ಸಂಖ್ಯೆ:06542 ವೇಳಾಪಟ್ಟಿಯನ್ನು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಪರಿಷ್ಕರಿಸಬೇಕು. ಈ ರೈಲು ಪ್ರತಿದಿನ ರಾತ್ರಿ 10ಗಂಟೆ ಒಳಗಾಗಿ ಹೊಸಪೇಟೆಗೆ ಆಗಮಿಸಿ ಬೆಳಗ್ಗೆ 7 ಗಂಟೆ ಒಳಗಾಗಿ ಯಶವಂತಪುರ ತಲುಪುವಂತೆ ಕ್ರಮ ಕೈಗೊಳ್ಳಬೇಕು. ಶೀಘ್ರ ವೇ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳದಿದ್ದರೆ, ಬೆಳಗಾವಿಯಲ್ಲಿ ರೈಲ್ವೆ ಸಚಿವರ ಕಛೇರಿಯ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪ್ರಹ್ಲಾದ್ ಸ್ವಾಮೀಜಿ, ಎಂ. ಶಾಮಪ್ಪಅಗೋಲಿ, ಕೆ. ಮಹೇಶ್, ಹನುಮಂತಪ್ಪ ಪೂಜಾರ್, ಯು. ಅಶ್ವತಪ್ಪ, ಎ. ಮಲ್ಲಿಕಾರ್ಜುನ, ಜಿ. ಸೋಮಣ್ಣ, ಎಚ್. ಮಹೇಶ್, ಶರಣಗೌಡ, ಜಗದೀಶ್, ಪೀರಾನ್ ಸಾಬ್, ಎಲ್. ರಮೇಶ್, ಗೌಡಣ್ಣನವರ್, ಬಿ. ಜಹಂಗೀರ್, ಶೇಖರ್, ಪ್ರಭಾಕರ್, ನಾಗೇಶ್, ಮರಿಯಪ್ಪ, ಆರ್.ರಮೇಶ್ ಗೌಡ, ಲೋಗನಾಥನ್, ಏಕನಾಥ್, ಕೃಷ್ಣಮುರ್ತಿ, ಶಿವಾನಂದ, ವಿಶ್ವನಾಥ ಕೌತಾಳ್, ಯೇಸು ಇನ್ನಿತರರಿದ್ದರು.