Advertisement

ಹೊಸಪೇಟೆ: ವಿಜಯನಗರದ ಕಾಲದ ಅಪರೂಪದ ಮಾಸ್ತಿಕಲ್ಲು ಪತ್ತೆ

06:06 PM Oct 15, 2024 | Team Udayavani |

ಉದಯವಾಣಿ ಸಮಾಚಾರ
ಹೊಸಪೇಟೆ: ನಗರದ ಮುದ್ದಾಪುರದ ಆಂಜನೇಯ ದೇವಾಲಯದ ಬಳಿ ಅಪರೂಪದ ಮಾಸ್ತಿಗಲ್ಲು ಮತ್ತು ಅಪೂರ್ಣ ಶಾಸನದ ಕಲ್ಲನ್ನು ವಿಜಯನಗರ ತಿರುಗಾಟ ಸಂಶೋಧನಾ ತಂಡ ಇತ್ತೀಚಿಗೆ ಪತ್ತೆ ಮಾಡಿದೆ. ಮಾಸ್ತಿಕಲ್ಲುಗಳು ಬಹುತೇಕವಾಗಿ ಮಹಿಳೆಯೊಬ್ಬರು ಕೈಯಲ್ಲಿ ನಿಂಬೆಹಣ್ಣು ಹಿಡಿದಿರುವ, ಇಲ್ಲವೇ ಕೈಯನ್ನು ಮೇಲೆ ಎತ್ತಿರುವ ಚಿತ್ರಣ ಕಂಡುಬರುವುದು
ಸಹಜ. ಆದರೆ ಚಿತ್ರದಲ್ಲಿ ಕೆತ್ತಿರುವ ಮಹಿಳೆಯು ನಿಂತಿರುವ ಭಂಗಿಯಲ್ಲಿರುವುದು ತುಂಬಾ ವಿಶೇಷವಾಗಿದೆ.

Advertisement

ತಲೆಗೆ ಕಿರೀಟ, ನಡುವಿಗೆ ನಡುಪಟ್ಟಿ ಧರಿಸಿದ್ದಾಳೆ. ಕಿವಿಯ ಓಲೆಯೂ ಕಾಣಿಸುತ್ತಿದ್ದು, ಪಟ್ಟಿಯಾಕರದ ಸೀರೆ ಧರಿಸಿದ್ದಾಳೆ. ಶೈವಧರ್ಮದ ಪ್ರತೀಕವಾದ ಈ ಮಾಸ್ತಿಕಲ್ಲು ಎರಡು ಹಂತದಲ್ಲಿ ಕೆತ್ತಲಾಗಿದೆ. ರಾಜ ಅಥವಾ ಪಾಳೆಯಗಾರನ ಪತ್ನಿ ಮರಣ ಹೊಂದಿದ ಹಿನ್ನೆಲೆ ಆಕೆಯ ಸ್ಮರಣಾರ್ಥ ಈ ಮಾಸ್ತಿಕಲ್ಲುನ್ನು ಕೆತ್ತಿರಬಹುದು ಎಂದು ಕನ್ನಡ ವಿಶ್ವವಿದ್ಯಾಲಯದ ಸಹಾಯಕ
ಪ್ರಾಧ್ಯಾಪಕ ಡಾ| ಗೋವಿಂದ ತಿಳಿಸಿದ್ದಾರೆ.

ಪುರಗಳ ನಾಮಕರಣ: ವಿಜಯನಗರ ಸಾಮ್ರಾಜ್ಯದಲ್ಲಿ ನಗರದ ಸಣ್ಣಕ್ಕಿ ವೀರಭದ್ರೇಶ್ವರ ಪ್ರದೇಶವನ್ನು ವರದ ರಾಜಮ್ಮನ ಪಟ್ಟಣ ಎಂದು ಕರೆಯುತ್ತಿದ್ದರು. ಚಿನ್ನಾಂಭಿಕೆಯ ನೆನಪಿಗಾಗಿ ಇಂದಿನ ಚಿತ್ತವಾಡ್ಗಿ ಪ್ರದೇಶವನ್ನು ಚಿನ್ನಾಪುರ ಎಂತಲೂ, ಕೃಷ್ಣದೇವರಾಯನ ತಾಯಿ ನಾಗಲಾದೇವಿ ಸ್ಮರಣಾರ್ಥ ಈಗಿನ ನಾಗೇನಹಳ್ಳಿಯನ್ನು ನಾಗಲಾಪುರ ಎಂತಲೂ ಈಗ ದೊರಕಿರುವ ಶಾಸನಗಳಿಂದ ತಿಳಿದು ಬರುತ್ತದೆ.

ಈಗ ದೊರಕಿರುವ ಅಪ್ರಕಟಿತ ಶಾಸನ ಸಹ ಮದ್ದಲಾಪುರ ಪ್ರದೇಶದಲ್ಲಿ ದೊರೆತಿರುವ ಶಾಸನವಾಗಿದೆ. ಇದು ವಿಜಯನರ ಸಾಮ್ರಾಜ್ಯದ ಶೈಲಿಯನ್ನು ಹೋಲುತ್ತದೆ. ಸತಿ ಸಹಗಮನ ವಾದ ಆಗಿರುವುದನ್ನು ಸೂಚಿಸುತ್ತದೆ. ಮಹಿಳೆಯ ಪಕ್ಕದಲ್ಲಿ ಪದ್ಮಾಸನದ ಭಂಗಿಯಲ್ಲಿ ಕುಳಿತಿರುವ ಮಹಿಳೆಯ ಎಡ ಕೈಯಲ್ಲಿ ನಿಂಬೆಹಣ್ಣು ಇಟ್ಟುಕೊಂಡಿರುವಂತಿದೆ. ಮೇಲ್ಭಾಗದಲ್ಲಿ ಶಿವನಲಿಂಗಾಕಾರದ ಚಿತ್ರವಿದೆ. ಇದರಿಂದ ಈ ಮಾಸ್ತಿಕಲ್ಲು ಶೈವ ಧರ್ಮವನ್ನು ಪ್ರತಿನಿಧಿಸುತ್ತದೆ ಎಂದು ತಂಡದ ಮತ್ತೋರ್ವ ಸದಸ್ಯ ಪ್ರೊ|ಎಚ್‌. ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ಅಪೂರ್ಣ ಶಾಸನ ಕಲ್ಲು ಪತ್ತೆ: ಇದೇ ಜಾಗದಲ್ಲಿ ಬೃಹದಾಕಾರದ ಅಪೂರ್ಣ ಶಿವಲಿಂಗ ಚಿತ್ರವುಳ್ಳ ಶಾಸನ ಕಲ್ಲು ಪತ್ತೆಯಾಯಿತು. 6 ಅಡಿ ಎತ್ತರ ಮತ್ತು 2 ಅಡಿ ಅಗಲವುಳ್ಳ ಶಾಸನಕಲ್ಲಿಗೆ ಯಾವುದೇ ಕೆತ್ತನೆ ಕಾಣಸಿಕ್ಕಿಲ್ಲ. ಆದರೂ ಈ ಕಲ್ಲಿನ ಮೇಲ್ಭಾಗದ ಎಡಕ್ಕೆ ಸೂರ್ಯನ, ಬಲಕ್ಕೆ ಚಂದ್ರನ ಚಿತ್ರವಿದೆ. ಇದರ ಕೆಳ ಭಾಗದಲ್ಲಿ ಸುಂದರವಾದ ಶಿವಲಿಂಗ ಚಿತ್ರ ಕೆತ್ತಲಾಗಿದೆ.

Advertisement

ಸಂಶೋಧನಾರ್ಥಿ ಚಿದಾನಂದ ಅವರ ಸಹಕಾರದಿಂದ ಕನ್ನಡ ವಿವಿ ಸಹಾಯಕ ಪ್ರಾಧ್ಯಾಪಕ ಡಾ| ಗೋವಿಂದ, ದೃಶ್ಯಕಲಾ ವಿಭಾಗದ ಡಾ|ಕೃಷ್ಣೇಗೌಡ, ಅಭಿವೃದ್ಧಿ ಅಧ್ಯಯನ ವಿಭಾಗದ ಡಾ| ಗೋವರ್ಧನ, ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ ಚರಿತ್ರೆ ವಿಭಾಗದ ಪ್ರಾಧ್ಯಾಪಕ ಡಾ|ಎಚ್‌. ತಿಪ್ಪೇಸ್ವಾಮಿ, ಸಂಶೋಧಕರಾದ ಡಾ| ವೀರಾಂಜನೇಯ, ಎಚ್‌. ರವಿ ಶೋಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next