Advertisement

ಒತ್ತಡ ನಿವಾರಣೆಗೆ ಯೋಗ ರಾಮಬಾಣ

11:18 AM Jun 22, 2019 | Naveen |

ಹೊಸಪೇಟೆ: ಒತ್ತಡದ ಬದುಕಿಗೆ ಯೋಗ ವರದಾನವಾಗಿದ್ದು, ಆರೋಗ್ಯ ಹಾಗೂ ಸದಾ ಚಟುವಟಿಕೆಯಿಂದ ಇಡುವ ಸಾಧನವೇ ಯೋಗವಾಗಿದೆ ಎಂದು ಕುಲಪತಿ ಡಾ.ಸ.ಚಿ. ರಮೇಶ ಹೇಳಿದರು.

Advertisement

ಕನ್ನಡ ವಿಶ್ವವಿದ್ಯಾಲಯದ ಯೋಗ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಿದ್ದ 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯೋಗವನ್ನು ವಿಜ್ಞಾನವನ್ನಾಗಿ ನೋಡಬೇಕು. ಯೋಗದಿಂದಾಗುವ ಅನುಕೂಲಗಳನ್ನು ತಿಳಿದುಕೊಳ್ಳಬೇಕು. ಹಿಂದಿನ ಕಾಲದಲ್ಲಿ ಉತ್ತಮ ಜೀವನ ಶೈಲಿಯಿಂದ ಹಿರಿಯರು ಬಹಳಷ್ಟು ವರ್ಷಗಳ ಕಾಲ ಜೀವಿಸುತ್ತಿದ್ದರು. ಇಂದಿನ ಆಧುನಿಕ ಜೀವನ ಶೈಲಿ ಒತ್ತಡ ಜೀವನದಿಂದಾಗಿ ಮನುಷ್ಯ ಬಹುಬೇಗನೆ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾನೆ. ಇಂದಿನ ಜೀವನ ಶೈಲಿಯಲ್ಲಿ ಮನುಷ್ಯ ಆರೋಗ್ಯವಂತನಾಗಿ ಬದುಕಲು ಯೋಗವನ್ನು ಅನ್ಯಥಾ ಭಾವಿಸದೇ ಅದರಲ್ಲಿ ಉತ್ತಮ ಅಂಶಗಳನ್ನು, ಯೋಗಾಭ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಹುಬ್ಬಳ್ಳಿಯ ಆರೂಢ ಯೋಗ ಅಧ್ಯಯನ ಕೇಂದ್ರದ ಸಂಸ್ಥಾಪಕ ಪಂಚಲಿಂಗಪ್ಪ ಕವಲೂರು ವಿಶೇಷ ಉಪನ್ಯಾಸ ನೀಡಿ, ಯೋಗ ಮತ್ತು ಅಧ್ಯಾತ್ಮ ಭಾರತ ವಿಶ್ವಕ್ಕೆ ನೀಡಿರುವ ಎರಡು ಪ್ರಮುಖ ಕೊಡುಗೆಗಳಾಗಿವೆ. ಸಾಸಿವೆ ಕಾಳಿನ ಎರಡಕ್ಷರದಷ್ಟಿರುವ ಯೋಗ ಎನ್ನುವ ಪದದಲ್ಲಿ ಸಾಗರದಷ್ಟು ವಿದ್ಯೆಯಿದೆ. ಯೋಗದಿಂದ ವಿಜ್ಞಾನ ಹುಟ್ಟಿದೇ ಹೊರತು ವಿಜ್ಞಾನದಿಂದ ಯೋಗ ಅಲ್ಲ ಎಂದರು.

ಯೋಗದಲ್ಲಿ ಪ್ರಮುಖವಾಗಿ ಯಮ, ನಿಯಮ, ಆಸನ, ಪ್ರಾಣಾಯಾಮ ಪ್ರತ್ಯಾಹಾರ, ಧ್ಯಾನ, ಸಮಾಧಿಗಳಂತಹ ವಿಧಾನಗಳಿವೆ. ಈ ವಿಧಾನಗಳ ಮೂಲಕ ಮನುಷ್ಯ ದೇಹದಲ್ಲಿನ ವಾತ, ಪಿತ್ತ, ಕಫ‌ಗಳನ್ನು ನಿಯಂತ್ರಿಸಬಹುದು. ಜತೆಗೆ ರಕ್ತವನ್ನು ಶುದ್ಧೀಕರಿಸಿಕೊಳ್ಳಬಹುದು. ಯೋಗ ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಂಡು ಗುರಿ ಸಾಧಿಸಲು ಸಹಕಾರಿ ಎಂದರು. ಕುಲಸಚಿವರಾದ ಡಾ. ಸುಬ್ಬಣ್ಣ ರೈ ಯೋಗದ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು. ಯೋಗ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಎಫ್.ಟಿ ಹಳ್ಳಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು. ಸಂಶೋಧನಾ ವಿದ್ಯಾರ್ಥಿ ಶ್ವೇತಾ ನಿರೂಪಿಸಿದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಂಶೋಧಕ ಡಾ.ಕೇಶವಮೂರ್ತಿ ವಂದಿಸಿದರು.

•ನಗರದ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ನಾಗರಿಕರು ಯೋಗಾಭ್ಯಾಸ ಮಾಡುವ ಮೂಲಕ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಿದರು.

ಯೋಗ ದಿನಾಚರಣೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಸ.ಚಿ.ರಮೇಶ ಚಾಲನೆ ನೀಡಿದರು. ಯೋಗಪಟು ಬಸವರಾಜ ನಲತ್ವಾಡ, ಯೋಗಾಭ್ಯಾಸ ಮಾಡಿಸಿದರು. ಯುವಕರು, ಯುವತಿಯರು, ಮಹಿಳೆಯರು, ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಯೋಗ ಮಾಡಿದರು.

ಇದೇ ಸಂದರ್ಭದಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆ ಕಸಾಟಿ ಉಮಾಪತಿ ಅವರು ಸಸಿ ವಿತರಿಸಿದರು. ಪತಂಜಲಿ ಯೋಗ ಸಮಿತಿ ಹಾಗೂ 5ನೇ ವಿಶ್ವ ಯೋಗ ದಿನಾಚರಣಾ ಸಮಿತಿ ಜಂಟಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾರದಾಂಬ ಆಶ್ರಮದ ಪ್ರಮೋದಾಮಯಿ ಸಾನ್ನಿಧ್ಯ ವಹಿಸಿದ್ದರು. ಕೊಟ್ಟೂರು ಸ್ವಾಮಿ ಮಠದ ಡಾ.ಸಂಗನಬಸವ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಪತಂಜಲಿ ಜಿಲ್ಲಾ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ಎಫ್.ಡಿ.ಹಳ್ಳಿಕೇರಿ, ಮಹಿಳಾ ಪತಂಜಲಿ ರಾಜ್ಯ ಸಹ ಪ್ರಭಾರಿ ದಾಕ್ಷಾಯಣಿ ಶಿವುಕುಮಾರ, ಪತಂಜಲಿ ಕಿಸಾನ್‌ ಸೇವಾ ಸಮಿತಿ ಜಿಲ್ಲಾ ಪ್ರಭಾರಿ ಕೃಷ್ಣ ನಾಯಕ್‌, ಪಿಡಿಐಟಿ ಕಾಲೇಜಿನ ಪ್ರಾಚಾರ್ಯ ಡಾ.ಎಸ್‌.ಎಂ.ಶಶಿಧರ್‌, ಉದ್ಯಮಿ ಶ್ರೀನಿವಾಸರಾವ್‌, ಮುಖಂಡರಾದ ಸಾಲಿ ಸಿದ್ದಯ್ಯಸ್ವಾಮಿ, ರೇವಣಸಿದ್ದಪ್ಪ, ಭೂಪಾಲ ರಾಘಣ್ಣ, ಕಟ್ಟಾ ನಂಜಪ್ಪ, ದಿನೇಶ್‌ ಪಟೇಲ್, ಅನಿಲ್ ಜೋಷಿ, ಅನಂತಪದ್ಮನಾಭ, ಅಶೋಕ ಜೀರೆ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next