ಹೊಸಪೇಟೆ: ತಾಯಿ ಹಾಲಿನಷ್ಟೆ ಅಗಾಧ ಶಕ್ತಿ ಹೊಂದಿರುವ ಮಾತೃಭಾಷೆ ಕನ್ನಡದ ಕುರಿತು ಇಂದಿನ ಯುವಜನರಲ್ಲಿ ಜಾಗೃತಿ ಮೂಡಬೇಕಾಗಿದೆ ಎಂದು ಹಿರಿಯ ಗಮಕಿ, ಸಮ್ಮೇಳನಾಧ್ಯಕ್ಷ ರಂಗೋಪಂತ ನಾಗರಾಜರಾಯರು ಅಭಿಪ್ರಾಯ ಪಟ್ಟರು.
ಸ್ಥಳೀಯ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಶನಿವಾರ ಹಮ್ಮಿಕೊಂಡಿದ್ದ 3ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಎಲ್ಲರೂ ಸಾಹಿತಿ, ಕವಿ, ಸಂಗೀತವಾದಿ, ಕಲಾವಿದರಾಗಲು ಸಾಧ್ಯವಿಲ್ಲ. ಕಲೆಯನ್ನು ತಪ್ಪಸ್ಸು ಮಾಡುವಂತ ಇಚ್ಛಾಶಕ್ತಿ ಬೇಕು. ಕಠಿಣ ಪರಿಶ್ರಮ, ತ್ಯಾಗ, ತುಡಿತ ಮನುಷ್ಯನಲ್ಲಿರಬೇಕು. ಸದ್ಗುರುವಿನ ಕೃಪೆಯೊಂದಿಗೆ ಮುರಾರಿಯ ಕಾರುಣ್ಯಬೇಕು. ಇಲ್ಲದಿದ್ದರೇ ಉತ್ತಮ ಕೃತಿ ರಚನೆ, ಸಾಹಿತ್ಯದ ಸೊಗಡಿನ ರಸಧಾರೆ ಚಿಮ್ಮುವುದಿಲ್ಲ ಎಂದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸ.ಚಿ.ರಮೇಶ ಸಮ್ಮೇಳ ಉದ್ಘಾಟಿಸಿ ಮಾತನಾಡಿ, ಜನರು ಬದುಕೇ ಸಾಹಿತ್ಯವಾಗಿದೆ. ಜಾನಪದ ಅಲಿಖೀತ ಸಂವಿಧಾನವಾಗಿದೆ. ಕುಂಬಾರಿಕೆ, ಕಂಬಾರಿಕೆ, ವೈದ್ಯ ಪದ್ಧತಿಗೆ ಕಡಿಮೆ ಆಗಿದೆ. ಸಮ್ಮೇಳನದಲ್ಲಿ ರೈತರ ಸಂಕಷ್ಟಗಳ ಕುರಿತು ಚರ್ಚೆಯಾಗಬೇಕಾಗಿದೆ. ಅಲ್ಲದೇ, ಸಮ ಸಮಾಜಕ್ಕೆ ಯಾವ ಮೌಲ್ಯಬೇಕುತ್ತದೆ ಎಂಬದ ಕುರಿತು ಚರ್ಚೆ ನಡೆಯಬೇಕಾಗಿದೆ ಎಂದರು.
ಹೊಸಪೇಟೆಯಲ್ಲಿ 100 ವರ್ಷಗಳ ಹಿಂದೆಯೇ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು. ಸಮ್ಮೇಳನ ನಡೆಯಲು ಕಾರಣೀಭೂತರಾದ ಚಿತ್ತವಾಡ್ಗಿ ಹನುಮಂತ ಗೌಡರನ್ನು ನೆನಪಿಸಿಕೊಂಡರು. ಇದೇ ವೇಳೆಯಲ್ಲಿ ಡಾ| ದಯಾನಂದ ಕಿನ್ನಾಳ್ ಬಾಳಬುತ್ತಿ (ಚುಟುಗಳು) ಪುಸ್ತಕವನ್ನು ಗಣ್ಯರು ಬಿಡುಗಡೆಗೊಳಿಸಿದರು.
ವಿಜಯನಗರ ಕಾಲೇಜಿನ ಪ್ರಾಧ್ಯಾಪಕ ಡಾ| ಮೃತ್ಯುಂಜಯ ರುಮಾಲೆ, ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಮ ಕಲ್ಮಠ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯೆ ಮಂಜಮ್ಮ ಜೋಗತಿ, ಪರಿಷತ್ತಿನ ತಾಲೂಕು ಅಧ್ಯಕ್ಷ ಡಾ| ಎತ್ನಳ್ಳಿ ಮಲ್ಲಯ್ಯ, ಹೋಬಳಿ ಘಟಕದ ಅಧ್ಯಕ್ಷ ಕೆ. ನಾಗರಾಜ, ಚಂದ್ರಶೇಖರಗೌಡ, ಮುಖಂಡರಾದ ಕೆ.ಎಂ. ಹಾಲಪ್ಪ, ಗೊಗ್ಗ ಬಸವರಾಜ, ತಾಪಂ ಅಧ್ಯಕ್ಷೆ ಜೋಗದ ನೀಲಮ್ಮ, ಪಿಎಲ್ಡಿ ಬ್ಯಾಂಕಿನ ಅಧ್ಯಕ್ಷ ಅಮಾಜಿ ಹೇಮಣ್ಣ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಮಲ್ಲಿಕಾರ್ಜುನಗೌಡ, ಪತ್ರಕರ್ತ ಹುಡೇಂ ಕೃಷ್ಣಮೂರ್ತಿ ಇದ್ದರು.